»   » ಮನೆಮಂದಿ ಒಟ್ಟಿಗೆ ಕೂತು ನೋಡೊ ಗಣೇಶನ ಚಿತ್ರ

ಮನೆಮಂದಿ ಒಟ್ಟಿಗೆ ಕೂತು ನೋಡೊ ಗಣೇಶನ ಚಿತ್ರ

Subscribe to Filmibeat Kannada

ವಿಮರ್ಶೆಗೂ ಮುನ್ನ ನಿಮಗೊಂದು ಪ್ರಶ್ನೆ: ಇತ್ತೀಚಿನ ದಿನಗಳಲ್ಲಿ ಹೊಟ್ಟೆ ತುಂಬಾ ನಕ್ಕು, ಎಂಜಾಯ್ ಮಾಡಿದ ಸಿನಿಮಾ ಒಂದಾದರೂ ಇದೆಯಾ...? ಯೋಚಿಸುವ ಅಗತ್ಯವೇ ಬೇಡ. ಸುಮ್ಮನೇ ಆಕಡೆ ಈಕಡೆ ತಲೆ ಅಲ್ಲಾಡಿಸಿಬಿಡಿ ಸಾಕು. ಹೌದು, ಅದೇ ಕಾಲೇಜು ಸ್ಟೋರಿ, ಅದೇ ವಾಕರಿಕೆ ಬರುವ ರೌಡಿಸಂ ಸ್ಟೋರಿ... ಹಾಗಂತ ಅದರಲ್ಲಿ ಬಹುತೇಕ ಹಿಟ್ ಆಗಿಲ್ಲವಾ ಅಂತ ಕೇಳಬೇಡಿ. ಆದರೆ ಮನೆಮಂದಿ ಒಟ್ಟೊಟ್ಟಿಗೇ ಕುಳಿತು ನೋಡಿದ ಸಿನಿಮಾ ಯಾವುದಿದೆ ? ಉತ್ತರ : ....'

* ವಿನಾಯಕ ರಾಮ್ ಕಲಗಾರು

ಆದರೆ ಈ ಪ್ರಶ್ನೆಗೆ ತಕ್ಕಮಟ್ಟಿಗೆ ಹೊಂದಾಣಿಕೆಯಾಗಬಲ್ಲ ಉತ್ತರವೊಂದು ಲಭ್ಯವಾಗಿದೆ. ಅದೇ ಗಣೇಶ ಮತ್ತೆ ಬಂದ'. ಒಂದು ಫ್ಯಾಮಿಲಿ ಸಿನಿಮಾ ಹೇಗಿರಬೇಕು? ಅದು ಹೀಗೇ ಇರಬೇಕು ಎಂದು ನಿರೂಪಿಸಿದ್ದಾರೆ ನಿರ್ದೇಶಕ ಫಣಿ ರಾಮಚಂದ್ರ. ಹಲವು ವರ್ಷಗಳ ನಂತರ ಹಿರಿತೆರೆಗೆ ಬಂದಿರುವ ಫಣಿ ಅಂದಿನ ಗಣೇಶೋತ್ಸವದ ಗಮ್ಮತ್ತನ್ನು ಮಾತ್ರ ಮರೆತಿಲ್ಲ. ಕಾಕತಾಳೀಯ ಎಂಬಂತೆ ನಟ ಅನಂತನಾಗ್ ಅವರನ್ನೂ ಬಿಟ್ಟಿಲ್ಲ. ಅನಂತನ ಅವಾಂತರ ಎಷ್ಟು ಅಚ್ಚುಕಟ್ಟಾಗಿದೆ ಎಂದರೆ ಅದನ್ನು ನೀವು ನೋಡಿಯೇ ಅನುಭವಿಸಬೇಕು. ಅವರ ಬೆನ್ನ ಹಿಂದೆ ನಿಂತು ಅದೇ ಬಿರುಸಿನಿಂದ ಕೈ ಬೀಸಿದ್ದಾರೆ ನಟಿ ವಿನಯಾಪ್ರಸಾದ್. ಫಾರ್ ಎ ಚೇಂಜ್ ಇಲ್ಲಿ ಅನಂತನಾಗ್ ವಠಾರದ ಯಜಮಾನನ ಪಾತ್ರ ಮಾಡಿದ್ದಾರೆ.

ಗಣೇಶ ಬಂದ... ಪದ್ಮನಾಭ ಆಚಾರ್‍ಯರಿಗೆ ಮೂರು ಹೆಣ್ಣುಮಕ್ಕಳು. ಹಿರಿಯಕ್ಕ ಗಾಯತ್ರಿ: ಮನೇಲಿ ಸುಪ್ನ್ನಾತಿ, ಬೀದೀಲಿ ಗ್ಲಾಮರ್ ಬೊಂಬೆ. ಇನ್ನೊಬ್ಬಾಕೆ ಕಂತೆಗೆ ತಕ್ಕ ಬೊಂತೆ. ಯಥಾ ಅಪ್ಪ ತಥಾ ಮಗಳು. ಆಚಾರ ವಿಚಾರ, ಹಳೇ ಕಾಲದ ಶಿಷ್ಟಾಚಾರ... ಎಲ್ಲವೂ ಸೇರಿ ಸಾವಿತ್ರಿ. ಇನ್ನೊಬ್ಬಾಕೆ ಧರಿತ್ರಿ. ಆಚಾರ್ಯರು ವಠಾರವೊಂದರ ಮಾಲೀಕರಾಗಿರುತ್ತಾರೆ.

ಹೀಗಿರುವಾಗ ಗಣೇಶ ಎಂಬ ಐನಾತಿ ಗಿರಾಕಿ ಆ ವಠಾರ ಸೇರಿಕೊಳ್ಳುತ್ತಾನೆ. ಒಂದಿಷ್ಟು ಆಟ ಆಡುತ್ತಾನೆ. ಆಚಾರ್‍ಯನ ಮಗಳನ್ನು ಪಟಾಯಿಸಲು ಸ್ಕೆಚ್ ಹಾಕುತ್ತಾನೆ. ಹಿರಿಯಕ್ಕ ಶಂಕರ್ ಎಂಬವನನ್ನು, ಪ್ರೀತಿಸಿ ಮದುವೆ ಆಗುತ್ತಾಳೆ. ಗಣೇಶ ಎರಡನೆಯವಳನ್ನು ಅರೆಂಜ್ ಮ್ಯಾರೇಜ್ ಆಗುತ್ತಾನೆ... ಹೀಗೆ ಕತೆ ಸಾಗುತ್ತದೆ.
ನಿರ್ದೇಶಕರು ಕಾಮಿಡಿಯ ಜತೆ ಸಮಾಜಕ್ಕೆ ಮದುವೆ ವಿಚಾರಕ್ಕೆ ಸಂಬಂಸಿದಂತೆ ಲವ್ ಅಥವಾ ಅರೇಂಜ್ಡ್‌ನಲ್ಲಿ ಯಾವ ಮ್ಯಾರೇಜ್ ಸರಿ? ಎಂಬ ಪ್ರಶ್ನೆ ಮುಂದಿಡುತ್ತಾರೆ.

ದಾಂಪತ್ಯ ಜೀವನ ಹೇಗಿರಬೇಕು ಎಂಬುದನ್ನೂ ತೋರಿಸುತ್ತಾರೆ! ಆದರೆ ಇವೆಲ್ಲವನ್ನೂ ಬ್ಯಾಲೆನ್ಸ್ ಮಾಡಿ, ಚಿತ್ರಕತೆ ಹೆಣೆಯುವಲ್ಲಿ ಫಣಿ ಎಡವಿದ್ದಾರೆ. ಕೆಲವು ಕಾಮಿಡಿ ದೃಶ್ಯಗಳು ಡಿ' ಗ್ರೇಡ್‌ನಂತಿವೆ. ಮನೆಮಂದಿಯೆಲ್ಲಾ ಸೀಮೆಎಣ್ಣೆ ಸುರಿದುಕೊಳ್ಳುವ ದೃಶ್ಯದಲ್ಲಿ ಹ್ಯೂಮರ್ ಇದೆ. ಆದರೆ ಕೆಲವು ಬೆಡ್‌ರೂಂ ದೃಶ್ಯಗಳು ಕಾಶಿನಾಥ್ ಚಿತ್ರಗಳನ್ನು ನೆನಪಿಸುತ್ತವೆ.

ವಿಜಯರಾಘವೇಂದ್ರ ತಮ್ಮ ವೃತ್ತಿಗೆ ಮೋಸ ಮಾಡಿಲ್ಲ. ಹಾಗಂತ ಆಹಾ...ಎಂಬಂತೆಯೂ ಮಾಡಿಲ್ಲ. ವಿಶಾಲ್ ಹೆಗಡೆ ಆಕ್ಷನ್ ಹೀರೊ ಥರ ಕಾಣುತ್ತಾರೆ. ನಾಯಕಿ ಪ್ರಜ್ಞಾಳಿಂದ ನಿರ್ದೇಶಕರು ಸಾಕಷ್ಟು ಕೆಲಸ ತೆಗೆಸಿದ್ದಾರೆ. ಆಕೆಯ ಮ್ಯಾನರಿಸಂ ಪಾತ್ರಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ. ನೀತು ಪಾತ್ರ ಆ.. ಥೂ' ಎನ್ನುವಂತಿಲ್ಲ. ಹೇಳಿದ್ದನ್ನು ಶ್ರದ್ಧೆಯಿಟ್ಟು ಮಾಡಿದ್ದಾರೆ. ದೊಡ್ಡಣ್ಣ ಅಂಥ ದೊಡ್ಡ ದೇಹ ಇಟ್ಟುಕೊಂಡು ಲಕ್ವಾ ಹೊಡೆದವರ ಹಾಗೆ ಅಭಿನಯಿಸಿರುವುದು ಶ್ಲಾಘನೀಯ.

ಛಾಯಾಗ್ರಾಹಕ ರೇಣುಕುಮಾರ್ ಕೈಚಳಕ ಹೇಗಿದೆ ಎಂದು ಹಾಡಿನ ಚಿತ್ರೀಕರಣದಲ್ಲಿ ಗೊತ್ತಾಗುತ್ತದೆ. ವಿ. ಮನೋಹರ್ ಸಂಗೀತ ಫಣಿ ಚಿತ್ರಕ್ಕೆ ಕರೆಕ್ಟ್ ಆಗಿ ಹೊಂದಿಕೊಳ್ಳುತ್ತದೆ. ಮೈಕಲ್ ಜಾಕ್ಸನ್ ಮೈಮೇಲೆ... ಹಾಡಿನಲ್ಲಿ ಪಂಚ್ ಇದೆ. ಗೋಪಿಕೆ ನಿನ್ನ ಮಗ...ಹಾಡಿನಲ್ಲಿ ಧಮ್ ಇದೆ. ಆದರೆ ಫಣಿ ಮತ್ತೊಮ್ಮೆ ಸಿನಿಮಾ ರಂಗ ಪ್ರವೇಶಿಸುವ ಮುನ್ನ ಕೊಂಚ ಅಪ್‌ಡೇಟ್ ಆಗಬಹುದಿತ್ತು. ಏಕೆಂದರೆ ಪ್ರೇಕ್ಷಕರ ಅಭಿರುಚಿ ಹಾಗೂ ರುಚಿಯಲ್ಲಿ ತುಂಬಾ ಬದಲಾವಣೆ ಆಗಿದೆ. ಇದನ್ನು ಎಂಥಾ ಸಿನಿಮಾವಪ್ಪಾ, ಬರೀ ವೇದಾಂತ, ರಾದ್ಧಾಂತ ಅಂತ ಗಣಪತಿ ಬಪ್ಪ ಮೋರಯ' ಅಂದುಬಿಟ್ಟರೆ...

ಹಬ್ಬದ ಸಮಯಕ್ಕೆ,ಗಣೇಶ ಮತ್ತೆ ಬಂದ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada