twitter
    For Quick Alerts
    ALLOW NOTIFICATIONS  
    For Daily Alerts

    ಸಾಗರದಲ್ಲಿ’ಮುಖಪುಟ’ದ ಒಳಪುಟ ಅನಾವರಣ

    By * ಚಿನ್ಮಯ ಎಂ.ರಾವ್, ಹೊನಗೋಡು
    |

    Director Roopa Iyer
    ಕನ್ನಡ ಚಿತ್ರರಂಗ ಇಂದು ತನ್ನ ತನವನ್ನು ಉಳಿಸಿಕೊಳ್ಳುತ್ತಿದೆಯಾ ಎಂಬ ನಿತ್ಯ ಕಾಡುತ್ತಿರುವ ಪ್ರಶ್ನೆಗೆ ಉತ್ತರ ನಿರುತ್ತರವಾಗಿ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. 90ರ ದಶಕದ ವರೆಗೂ ಮೌಲ್ಯಯುತ (ಕಲಾತ್ಮಕ ಮತ್ತು ವ್ಯಾಪಾರಾತ್ಮಕ ಎರಡೂ ಆಗಿರುವ) ಚಿತ್ರಗಳು ನಮ್ಮಲ್ಲಿ ನಿರ್ಮಾಣವಾಗಿದ್ದವು ಎಂಬುದು ನಮಗೆಲ್ಲಾ ಹೆಮ್ಮೆಯ ವಿಷಯ.

    ಆದರೆ ನಂತರದ ಈ ಎರಡು ದಶಕಗಳಲ್ಲಿ ಪರಭಾಷಾ ಚಿತ್ರಗಳಿಗೆ ಹೋಲಿಸಿದರೆ ನಮ್ಮ ಚಿತ್ರಗಳ ಗುಣಮಟ್ಟ ಆ ವೇಗದಲ್ಲಿ ಬೆಳವಣಿಗೆಯಾಗದೇ ಆವೇಗ ಉಂಟಾಗಿದೆ ಎಂಬ ನಗ್ನ ಸತ್ಯವನ್ನು ನಾವು ಅನಿವಾರ್ಯವಾಗಿ ಜೀರ್ಣಿಸಿಕೊಳ್ಳಬೇಕಾಗಿದೆ. ಅಪರೂಪಕ್ಕೊಮ್ಮೆ ಬರುವ ಸದಭಿರುಚಿಯ ಚಿತ್ರಗಳು ಲೋಕದಾದ್ಯಂತ ತಲುಪಿ ಕನ್ನಡಿಗರು ಲೋಕದೆದರು ತಲೆ ಎತ್ತುವಂತೆ ಮಾಡುತ್ತಿವೆ ಎಂಬುದೇ ಸಮಾಧಾನಕರ ಸಂಗತಿ. ಅಂತಹ ಒಂದು ಸಂತಸದ ಸಂಗತಿಯೇ ನಾನು ಇತ್ತೀಚೆಗೆ ನೋಡಿದ ವಿಭಿನ್ನ ಚಲನಚಿತ್ರ "ಮುಖಪುಟ - ದಿ ಕವರ್ ಪೇಜ್".

    ಏಡ್ಸ್ ಸಮಸ್ಯೆಗೆ ಪರಿಹಾರದಂತೆ ತೋರುವ ಈ ಚಿತ್ರ ಪ್ರಥಮ ಹಂತದ ಕ್ಯಾನ್ಸರ್ ಬಂದು ಬಳಲಿ ಬೆಂಡಾಗಿ ಮರಣೋನ್ಮುಖವಾಗಿ ಪಯಣ ಬೆಳೆಸಿದಂತ್ತಿರುವ ಕನ್ನಡ ಚಿತ್ರರಂಗವನ್ನು ಜೀವನ್ಮುಖವಾಗಿಸಿದೆ ಎಂದರೆ ಅದು ಅತಿಶಯೋಕ್ತಿಯೇನಲ್ಲ.

    ಹೊಸ ಪ್ರತಿಭೆಗಳೆಲ್ಲಾ ಚಿತ್ರರಂಗಕ್ಕೆ ಭರದಿಂದ ಮುನ್ನುಗ್ಗುತ್ತಿರುವ ಈ ಸಂಕ್ರಮಣ ಕಾಲದಲ್ಲಿ ನಿರುದ್ಯೋಗಿ ನಿರುದ್ಧೇಶಕರೂ ನುಸುಳಿ ಕಲಬೆರಕೆಯಾಗುತ್ತಿದೆ ಎಂಬುದು ವಿಷಾದನೀಯ. ಈ ನಡುವೆ ನಿರ್ದೇಶಕರೊಬ್ಬರು ಸ್ಪಷ್ಟ ಉದ್ದೇಶವನ್ನಿರಿಸಿಕೊಂಡು ತಮ್ಮ ಖಾಸಗಿ ಜೀವನದಲ್ಲೂ ಅದನ್ನು ವ್ಯವಸ್ಥಿತವಾಗಿ ಅಳವಡಿಸಿಕೊಂಡು ಪ್ರೇಕ್ಷಕರ ಮನದಲ್ಲೊಂದು ಸಣ್ಣ ಕ್ರಾಂತಿಯ ಕಿಡಿಯನ್ನೆಬ್ಬಿಸುವ ಪ್ರಯತ್ನದಲ್ಲಿ ಖಂಡಿತಾ ಮುಂಚೂಣಿಯಲ್ಲಿದ್ದಾರೆ ಹೊಸ ನಿರ್ದೇಶಕಿ "ರೂಪಾ ಅಯ್ಯರ್".

    ಮೂಲತಃ ಭರತನಾಟ್ಯ ಕಲಾವಿದೆಯಾದ ಈಕೆ ಮಾಡಲಿಂಗ್ ಕ್ಷೇತ್ರದಲ್ಲೂ ಸುತ್ತಿಬಂದು ಈಗ ಸದ್ದಿಲ್ಲದೇ ಸಮಾಜ ಸೇವೆಯನ್ನು ಮಾಡುತ್ತಾ ಸುದ್ದಿಮಾಡಿ ಬುದ್ಧಿವಂತರೆನಿಸಿಕೊಂಡ ಸ್ವಾರ್ಥಿಗಳ ಮಧ್ಯೆ ಕೊಂಚ ಭಿನ್ನವೆನಿಸುತ್ತಾರೆ. ಇನ್ನೂ ಸ್ವಲ್ಪ ಅವರ ಅಂತರಾಳವನ್ನು ಪ್ರವೇಶಿಸಿದರೆ ಸಂಪೂರ್ಣ ವಿಭಿನ್ನವೆನಿಸುತ್ತಾರೆ. ಏಡ್ಸ್ ಪೀಡಿತರ, ಅಬಲೆಯರ, ಅನಾಥೆಯರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರೂಪಾ ತಾನು ತನ್ನ ನಿತ್ಯ ಜೀವನದಲ್ಲಿ ಸಮಾಜದಲ್ಲಿ ಎದುರಿಸುತ್ತಿರುವ ಕಷ್ಟಗಳು ಹಾಗೂ ಅವಕ್ಕೆಲ್ಲಾ ಪರಿಹಾರಗಳನ್ನು "ಮುಖಪುಟ" ಚಿತ್ರದಲ್ಲಿ ನಿರೂಪಿಸಿ ಸಮಾಜಕ್ಕೂ, ಸಮಾಜ ಸೇವಕರಿಗೂ ಸ್ಪಷ್ಟವಾದ ಸಂದೇಶವನ್ನು ನೀಡಿದ್ದಾರೆ.

    "ಜೀವನವೆಂದರೆ ಇಷ್ಟೇ.." ಎಂಬ ಸತ್ಯವಾಕ್ಯಕ್ಕೆ ಕನ್ನಡಿ ಹಿಡಿದು ಅನುಮಾನಗಳನ್ನು ಬಡಿದು ಆಚೆ ಬಿಸಾಕಿ ಆಧ್ಯಾತ್ಮದ ನಿಜರೂಪಕ್ಕೆ ಮುನ್ನುಡಿ ಬರೆದಿದ್ದಾರೆ. "ಮುಖಪುಟ" ಕನ್ನಡದ ಜೊತೆಗೆ ಇಂಗ್ಲಿಷ್, ಹಿಂದಿ, ಚೈನಾ, ಕೋರಿಯಾ, ಸ್ಪೇನಿಷ್, ಅರೇಬಿಕ್, ಜರ್ಮನ್ ಹಾಗೂ ಇನ್ನಿತರ ಒಟ್ಟು ಹತ್ತು ಭಾಷೆಗಳಲ್ಲಿ ತಯಾರಾಗಿ ವಿಶ್ವದಾದ್ಯಂತ ಓಡಾಡಿ ಪ್ರದರ್ಶನ ಕಂಡು ಪ್ರೇಕ್ಷಕರ ಮನ ಮಿಡಿಯುತ್ತಿರುವ ಕನ್ನಡದ ಏಕೈಕ ಚಿತ್ರ. ಚಿತ್ರರಂಗದ ಹಳೆಬೇರು "ಹಂಸಲೇಖ" ಅವರ ಮಾಧುರ್ಯಪೂರ್ಣ ಸಂಗೀತಕ್ಕೆ ಹೊಸಚಿಗುರು "ರೂಪಾ ಅಯ್ಯರ್" ಅವರ ನಿರ್ದೇಶನ..... ಇದೇ "ಮುಖಪುಟ" ಚಿತ್ರದ ವೈವಿಧ್ಯತೆಗೊಂದು ನಿದರ್ಶನ.

    ಚಿತ್ರ ನೋಡುತ್ತಾ ಹೋದಂತೆ ನಮ್ಮ ಭಾವಾಂತರಂಗವನ್ನು ವ್ಯಾಪಿಸಿಕೊಳ್ಳುತ್ತಾ ಹೋಗುತ್ತದೆ. "ಪಾಪ ಎಷ್ಟೋ ಜನ ಮಕ್ಳು ನೋವು ‌ಅನಭವಿಸ್ತಿದಾರೆ, ಎಷ್ಟು ವಿಚಿತ್ರ ನೋಡಿ, ನಮ್ಮನೇ ಮಕ್ಳಿಗೆ ಕಾಯಿಲೆ ಬಂದಾಗ್ಮಾತ್ರ ನಮ್ಗೆ ನೋವಿನ ಅರಿವಾಗತ್ತೆ" ಎಂಬ ಸಂಭಾಷಣೆ ನಿಜಕ್ಕೂ ಮನ ಕಲಕುತ್ತದೆ. ಸ್ವತಃ ರೂಪಾ ರವರ ಮನೋಜ್ಞ ಅಭಿನಯ ಚಿತ್ರಕ್ಕೆ ಪ್ಲೆಸ್ ಪಾಯಿಂಟ್. ನಿರ್ದೇಶಕಿಯಾಗಿ ತಾನು ಹೇಳಬೇಕಾದ್ದನ್ನು ತಾನೇ ತನ್ನ ನಟನೆಯಲ್ಲಿ ಹೇಳುವ ಸದವಕಾಶವನ್ನು ಸದುಗಪಯೋಗಪಡಿಸಿಕೊಂಡಿದ್ದಾರೆ. ಎಲ್ಲಾ ಕಲಾವಿದರೂ ಸಹಜವಾಗಿ ಸುಂದರವಾಗಿ ಅಭಿನಯಿಸಿ, ರೂಪಾ ಅವರ ಆಶಯವನ್ನು ಕಟ್ಟಿಕೊಟ್ಟಿದ್ದಾರೆ.

    ಸಾಗರದಲ್ಲಿ ಸಂವಾದ:ಇತ್ತೀಚಿಗೆ ಈ ಚಿತ್ರದ ಪ್ರದರ್ಶನ ಮತ್ತು ಸಂವಾದ ಸಾಗರದ ಎಲ್.ಬಿ ಕಾಲೇಜಿನಲ್ಲಿ ನಡೆಯಿತು ಸ್ವತಃ ರೂಪ ಅಯ್ಯರ್ ಪಾಲ್ಗೊಂಡು ವಿದ್ಯಾರ್ಥಿಗಳೊಡನೆ ತಮ್ಮ ಅನುಭವವನ್ನು ಹಂಚಿಕೊಂಡರು.ಪ್ರಶ್ನೆಗಳಿಗೆ ಉತ್ತರ ನೀಡಿ ವಿಶೇಷವಾಗಿ ಏಡ್ಸ್ ಪೀಡಿತ ಮಕ್ಕಳ ದನಿಯಾದರು.ಮೊದಲು ಈ ಚಿತ್ರದ ಬಗ್ಗೆ ಅಸ್ಪೃಶ್ಯ ನಿಲುವು ತಾಳಿದ್ದ ಕನ್ನಡ ಚಿತ್ರೋದ್ಯಮಿಗಳೆನಿಸಿಕೊಂಡವರು,ಅಂತರಾಷ್ಟೀಯ ಮನ್ನಣೆಗಳನ್ನುಗಳಿಸಿದ ನಂತರ ತಾವಾಗೆ ಬಂದು ಈ ಚಿತ್ರ ತಮಗೆ ಬೇಕೆಂದು ಆಲಂಗಿಸಿಕೊಂಡ ಮುಖಪುಟ ನಗ್ನ ಸತ್ಯವನ್ನು ತೆರೆದಿಟ್ಟರು.

    ಚಿತ್ರದ ಪಾತ್ರಧಾರಿ ಗೌರಿ ಕೇವಲ ಸಿನಿಮಾಕ್ಕಾಗಿ ಕೃತಕವಾಗಿ ಸೃಷ್ಟಿಸಿದ ಪಾತ್ರವಲ್ಲ,ಅದು ತನ್ನದೇ ನೈಜ ಘಟನೆ,ಪ್ರೇಮ ಪ್ರಕರಣವೊಂದನ್ನು ಬಿಟ್ಟು ಎಂದಾಗ ವಿದ್ಯಾರ್ಥಿ ಸಮೋಹ ನಗೆಗಡಲಲ್ಲಿ ತೇಲಿಹೋಯಿತು. ವಿದ್ಯಾಥಿಗಳನ್ನು ಕುರಿತು ಮಾತನಾಡುವಾಗ ಕೊನೆಪಕ್ಷ ನಿಮ್ಮ ಜಿಲ್ಲೆಯಲ್ಲಿರುವ ಹೆಚ್ ಐ ವಿ ಎಡ್ಸ್ ಹೋಮ್ ಗೆ ಒಮ್ಮೆಯಾದರು ಭೇಟಿಕೊಡಿ.ಅಲ್ಲಿರುವ ಮಕ್ಕಲನ್ನು ಪ್ರೀತಿಯಿಂದ ಮಾತನಾಡಿಸಿ,ಕಥೆಗಳನ್ನು ಹೇಳಿ ಮೈಮರೆಸಿ ಸುಂದರ ಕನಸು ಗಳನ್ನು ಅವರಲ್ಲಿ ತುಂಬಿ ಅವರ ಬೇಸರವನ್ನು ನೀಗಿಸಿ ಎಂದು ರೂಪ ಅಯ್ಯರ್ ಹೇಳಿದರು.

    ಯಾರದೊ ತಪ್ಪಿಗೆ ಶಿಕ್ಷೆಯನ್ನನುಭವಿಸತ್ತಿರುವ,ಲೋಕವನ್ನು ಸರಿಯಾಗಿ ಅರಿಯುವ ಮೊದಲೆ ಗಣಪಡಿಸಲಾಗದ ಖಾಯಿಲೆಗೆ ತುತ್ತಾಗಿರುವ ಅವರಿಗೆ "ಜಾತಸ್ಯ ಮರಣಂ ಧ್ರುವಂ" ಎಂಬಂತೆ ಹುಟ್ಟು ಸಾವಿನ ಅನಿವಾರ‍್ಯತೆಯನ್ನು ಅವರಿಗೆ ತಿಳಿಹೇಳು.ಎಲ್ಲರೂ ಸಾಯಲೇ ಬೇಕು.ಸಾವು ಎಲ್ಲರಿಗೂ ಬಂದೇ ಬರತ್ತೆ,ನಿಮಗೆ ಸ್ವಲ್ಪ ಬೇಗ ಬರಬಹುದು,ನಮ್ ಗೆ ಸ್ವಲ್ಪ ಲೇಟಾಗಿ ಬರಬಹುದು ಅಷ್ಟೇ ವ್ಯತ್ಯಾಸ ಅನ್ನೊ ಸರಳ ಸತ್ಯ ವನ್ನು ಸರಳವಾಗಿ ವಿವರಿಸಿಬಿಡಿ ಅಷ್ಟೇ ಎಂದು ವಿದ್ಯಾರ್ಥಿಗಳಿಗೆ ಉಪಾಯವೊಂದನ್ನು ಹೇಳಿಕೊಟ್ಟರು.

    ಏಡ್ಸ್ ಪೀಡಿತ ಚಿಕ್ಕ ಮಕ್ಕಳಿಗೆ ಅವರ ಖಾಯಿಲೆ ಕಹಿ ಸತ್ಯವನ್ನು ಆಗಲೇ ಹೇಳಿಬಿಡುವುದು ಎಷ್ಟು ಸಮಂಜಸ ಎಂಬ ಒಂದು ಪ್ರಶ್ನೆಗೆ ಉತ್ತರಿಸಿದ ರೂಪ,ಮಕ್ಕಳು ದೊಡ್ಡವರಾದ ಮೇಲೆ ಒಮ್ಮೆಲೆ ಅವರಿಗೆ ಈ ವಿಚಾರವನ್ನು ತಿಳಿಸಿದರೆ ಅದು ಅನಾಹುತಕ್ಕೆ ನಾಂದಿ ಹಾಡಿದಂತೆ,ಅದು ಆಘಾತಕಾರಿ ಮತ್ತು ಅವರಿಗೆ ಸಮಾಜವನ್ನು ನೋಡಿ ದ್ವೇಶ ಹುಟ್ಟಿ ಮಾನಸಿಕ ಆರೋಗ್ಯವೂ ಕೆಡಬಹುದು. ಅಥವಾ ಅವರು ಇನ್ನಾರನ್ನೋ ಪ್ರೀತಿಸಿ ಮದುವೆಗೆ ಅಣಿಯಾದಾಗ ವಿಚಾರ ತಿಳಿಸಿದರೆ ಪರಸ್ಪರ ಪ್ರೇಮಿಗಳಿಗೆ ದಿಕ್ಕೇ ತೋಚದಂತಾಗಿ ಆಪ್ರೇಮ ಕಣ್ಣೆದುರೇ ಕೊಳತುನಾರುವ ಸನ್ನಿವೇಶ ಇನ್ನೊ ಕ್ರೂರ ಎಂಬ ಭಾವವನ್ನು ರೂಪ ವ್ಯಕ್ತಪಡಿಸಿದರು.

    ಕಾಲೇಜು ವಿದ್ಯಾರ್ಥಿಗಳು ಇನ್ನೂ ಭವಿಷ್ಯವನ್ನು ರೂಪಿಸಿಕೊಳ್ಳುವ ಆರಂಭದ ಘಟ್ಟದಲ್ಲಿರುವುದರಿಂದ ,ಏಡ್ಸ್ ಪೀಡಿತ ಮಕ್ಕಳಗೆ ಆಸರೆಯಾಗಬಲ್ಲರೆಂಬ ಕನಸು ನನ್ನದು.ಹಾಗಾಗಿ ನಾಡಿನಾದ್ಯಂತ ಎಲ್ಲಾ ಕಾಲೇಜಿನಲ್ಲೂ ಈ ಮೂಲಕ ಜಾಗೃತಿಯನ್ನುಂಟುಮಾಡುತ್ತಿದ್ದೇನೆ.ಬರಿ ಬಾಯಿ ಮಾತಿನಲ್ಲಿ ಹೇಳುವುದಕ್ಕಿಂತ ಚಲನಚಿತ್ರ ಮಾಧ್ಯಮ ಸೂಕ್ತವೆನಿಸಿ ಈಮುಖಪುಟದ ಮೂಲಕ ನನ್ನ ವಿಚಾರಧಾರೆಯನ್ನು ನಿಮ್ಮ ಮುಂದಿಟ್ಟಿದ್ದೇನೆ ಎಂದಾಗ ವಿದ್ಯಾಥಿಗಳೆಲ್ಲಾ ಕರತಾಡನ ಮಾಡಿ ಅವರ ಸಮಾಜಮುಖಿ ಚಿಂತನೆಯನ್ನು ಸ್ವಾಗತಿಸಿದರು.ತಾವು ಅಂತಹಾ ಒಂದು ಸಾಧನೆಯನ್ನು ಮಾಡಬೇಕೆಂದು ಕೊಂಡ ವಿದ್ಯಾಥಿ-ವಿದ್ಯಾಥಿನಿಯರು ಕಣ್ಗಳಲ್ಲಿ ರೂಪ ಅಯ್ಯರ್ ಪ್ರತಿಬಿಂಬ ಕಾಣುತ್ತಿತ್ತು."ಮುಖಪುಟ ಸಾರ್ಥಕ ವೆನಿಸಿತ್ತು".

    English summary
    Movie Mukhputa Review by Chinmay Rao, who attended Mukhaputa movie debate held at Lal Bahadur College, Sagara. Internationally accalaimed movie is on Aids awareness and it is directed by Roopa Iyer.
    Friday, March 11, 2011, 16:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X