ಸ್ಲಂ ಬಾಲ: ಖಂಡಿತ ನೋಡಲೇ ಬೇಕಾದ ಚಿತ್ರ
ಚಿತ್ರ: ಸ್ಲಂ ಬಾಲ
ನಿರ್ದೇಶನ: ಡಿ.ಸುಮನಾ ಕಿತ್ತೂರು
ಕಥೆ, ಚಿತ್ರಕಥೆ, ಸಂಭಾಷಣೆ: ಅಗ್ನಿ ಶ್ರೀಧರ್
ಛಾಯಾಗ್ರಹಣ: ಎ.ಸಿ.ಮಹೇಂದ್ರನ್
ಸಂಗೀತ: ಅರ್ಜುನ್
ಸಂಕಲನ: ದೀಪು ಕುಮಾರ್
ತಾರಾಗಣ: ವಿಜಯ್, ಶುಭ ಪುಂಜ,ಶಶಿಕುಮಾರ್, ಉಮಾಶ್ರೀ, ಗಿರಿಜಾ ಲೋಕೇಶ್,ನೀನಾಸಂ ಅಚ್ಯುತ, ಧರ್ಮ ಮುಂತಾದವರಿದ್ದಾರೆ.

*ರಾಜೇಂದ್ರ ಚಿಂತಾಮಣಿ
ಬೆಂಗಳೂರು ಭೂಗತ ಜಗತ್ತಿನ ಕುಖ್ಯಾತ ರೌಡಿಗಳನ್ನು ಗಡಿಪಾರು ಮಾಡುವ ದೃಶ್ಯದೊಂದಿಗೆ ಚಿತ್ರಕಥೆ ಆರಂಭವಾಗುತ್ತದೆ. ಗಡಿಪಾರಾಗುವ ರೌಡಿಗಳ ಪಟ್ಟಿಯಲ್ಲಿ ಸ್ಲಂ ಬಾಲ ಸಹ ಇರುತ್ತಾನೆ. ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿ ಬಿ.ಎನ್.ಶಾಂತಾರಾಮ್ ಪಾತ್ರದಲ್ಲಿ ನಟ ಶಶಿಕುಮಾರ್ ಕಾಣಿಸಿಕೊಳ್ಳುತ್ತಾರೆ. ಸ್ಲಂ ಬಾಲನನ್ನು ನಗರದ ಹೊರವಲಯಕ್ಕೆ ಕರೆತಂದು ನಿನ್ನ ಹೆಸರೇನು ಎಂದಾಗ 'ವಿನಾಯಕ ಬಾಲ' ಎನ್ನುತ್ತಾನೆ. ಅಷ್ಟಕ್ಕೆ ಸುಮ್ಮನಾಗದ ಅವರು ಅಡ್ಡ ಹೆಸರು ಹೇಳುವಂತೆ ಕಿಚಾಯಿಸುತ್ತಾರೆ. ಆಗ ಒಂದೊಂದಾಗಿ ಮೈಸೂರು ರೋಡ್ ಬಾಲ, ವಿನಾಯಕನಗರ ಬಾಲ...ಹೀಗೆ ಹೇಳುತ್ತಾ ಹೋಗುತ್ತಾನೆ. ಆಮೇಲೆ ಎಂದು ಬಾಲನ ಮುಖ ನೋಡಿದಾಗ, ಕೊನೆಯದಾಗಿ 'ಸ್ಲಂ ಬಾಲ' ಎನ್ನುತ್ತಾನೆ. ಹೀಗೆ ಸ್ಲಂ ಬಾಲನ ಪರಿಚಯವಾಗುತ್ತದೆ. ಎಲ್ಲಿಗೋಗಬೇಕು ಎಂದುಕೊಂಡಿದ್ದೀಯ ಎಂದು ಬಾಲನನ್ನು ಪೊಲೀಸ್ ಅಧಿಕಾರಿ ಪ್ರಶ್ನಿಸುತ್ತಾನೆ. ಬೆಂಗಳೂರು ಬಿಟ್ಟು ಮುಂಬೈಗೆ ಹೋಗುತ್ತ್ತಿರುವುದಾಗಿ ಹೇಳುತ್ತಾನೆ.
ಬೆಂಗಳೂರು ಬಿಟ್ಟ್ಟು ಹೋಗುತ್ತಿರಬೇಕಾದರೆ ಪ್ರೀತಿಯ ತಾಯಿ, ಸ್ಲಂ ಗೆಳೆಯರ ನೆನಪುಗಳು ಒಂದಾಗಿ ಬಾಲನ ಮನಃ ಪಟಲದಲ್ಲಿ ಗರಿ ಬಿಚ್ಚಿಕೊಳ್ಳುತ್ತವೆ. ಮುಂಬೈ ಗೆಳೆಯನೊಬ್ಬನ ಬಾರೊಂದರಲ್ಲಿ ಬಾಲ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅದೇ ಬಾರಿನಲ್ಲಿ ಕೆಲಸ ಮಾಡುತ್ತಿರುವ ಮಲ್ಲಿಕಾಳ ಪರಿಚಯವಾಗುತ್ತದೆ. ಪರಿಚಯ ಪ್ರೇಮವಾಗಿ ಬದಲಾಗುತ್ತದೆ. ಪೊಲೀಸ್ ಅಧಿಕಾರಿಯ ಆಜ್ಞೆ ಮೇರೆಗೆ ತನ್ನ ಪ್ರೇಯಸಿಯೊಂದಿಗೆ ಬಾಲ ಮತ್ತೆ ಬೆಂಗಳೂರಿಗೆ ವಾಪಸ್ಸಾಗುತ್ತಾನೆ. ಇಲ್ಲಿಂದ ಕಥೆ ಹೊಸ ತಿರುವು ಪಡೆಯುತ್ತದೆ. ರಾಜಕಾರಣಿಗಳು, ಪೊಲೀಸರು ಹೇಗೆ ಸ್ಲಂ ಬಾಲನನ್ನು ನೀರೆರೆದು ಪೋಷಿಸುತ್ತಾರೆ. ಕಡೆಗೆ ಹೇಗೆ ಸ್ಲಂಬಾಲ ಇವರ ರಕ್ತದಾಹಕ್ಕೆ ಬಲಿಯಾಗುತ್ತಾನೆ ಎಂಬುದನ್ನು ತೆರೆಯ ಮೇಲೇ ನೋಡಬೇಕು.
ಸ್ಲಂಬಾಲನ ಪಾತ್ರವನ್ನು ವಿಜಯ್ ಮೈಮೇಲೆ ಆವಾಹಿಸಿಕೊಂಡಿದ್ದಾರೆ.ಸ್ಲಂ ಬಾಲನ ತಾಯಿಯ ಪಾತ್ರದಲ್ಲಿ ನಟಿಸಿರುವ ಉಮಾಶ್ರೀ ಅಭಿನಯ ಪುಟ್ನಂಜಿ ಪಾತ್ರವನ್ನು ನೆನಪಿಸುವಂತಿದೆ. ಮಂಗಳೂರು ಬೆಡಗಿ ಶುಭಾ ಪುಂಜ ಮುಂಬೈನ ಬಾರ್ ಗರ್ಲ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಇಲ್ಲಿ ಮುಖ್ಯವಾಗಿ ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಶಶಿಕುಮಾರ್ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕು. ಹೆಸರಿಗೆ ಮಾತ್ರ ಅವರು ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿ. ಉಳಿದಂತೆ ಭೂಗತ ಜಗತ್ತಿನ ಎಲ್ಲ ವಹಿವಾಟುಗಳನ್ನು ನಿಯಂತ್ರಿಸುತ್ತಿರುತ್ತಾರೆ. ಪೊಲೀಸ್ ಮುಖವಾಡ ಹೊತ್ತ ಖಳ ನಟನಾಗಿ ಶಶಿಕುಮಾರ್ ಮಿಂಚಿದ್ದಾರೆ. ಚಿತ್ರದಲ್ಲಿ ಗಿರಿಜಾ ಲೋಕೇಶ್ ಹಾಗೆ ಬಂದು ಹೀಗೆ ಮರೆಯಾಗುತ್ತಾರೆ.
ರೌಡಿಗಳಿಗೂ ಕನಸುಗಳಿರುತ್ತವೆ, ಭಾವನೆಗಳಿರುತ್ತದೆ. ಅವನ ಮನಸ್ಸೂ ಸ್ವಾತಂತ್ರ್ಯ ವನ್ನು ಬಯಸುತ್ತದೆ, ಪ್ರೇಯಸಿಯ ಬಿಸಿ ಅಪ್ಪುಗೆಗಾಗಿ ಕಾತರಿಸುತ್ತದೆ, ತಾಯಿಯ ಪ್ರೀತಿಗೆ ಮಿಡಿಯುತ್ತದೆ. ಸಿಟ್ಟಿಗೆದ್ದರೆ ಜ್ವಾಲಾಮುಖಿಯಾಗುತ್ತಾನೆ ಎಂಬ ಸ್ಲಂ ಬಾಲನ ಭಾವನೆಗಳನ್ನು ವಿಜಯ್ ಸ್ಪುರಿಸಿದ್ದಾರೆ. ಚಿತ್ರದಲ್ಲಿ ಪಾತ್ರಗಳ ವೇಗಕ್ಕೆ ತಕ್ಕಂತೆ ಅರ್ಜುನ್ ಸಂಗೀತ ಮಿಡಿದಿದೆ. ಚಿತ್ರದಲ್ಲಿರುವ ಎರಡು ಸಂದರ್ಭೋಚಿತ ಹಾಡುಗಳು ಕೇಳಲು ಇಂಪಾಗಿವೆ. ಮುಂಬೈನ ರಮಣೀಯ ದೃಶ್ಯಗಳು, ಅಪ್ಯಾಯಮಾನವಾದ ಸಮುದ್ರ ತೀರ, ಅಲ್ಲಿನ ಗಲ್ಲಿಗಳು, ರಾತ್ರಿಗಳನ್ನು ಸೆರೆಹಿಡಿಯುವಲ್ಲಿ ಎ.ಸಿ.ಮಹೇಂದ್ರನ್ ಛಾಯಾಗ್ರಹಣ ಕಣ್ಣುಕುಕ್ಕುತ್ತದೆ. ಚಿತ್ರದುದ್ದಕ್ಕೂ ಭೂಗತ ಜಗತ್ತನ್ನು ಬೆನ್ನತ್ತುವಲ್ಲಿ ಅವರ ಕ್ಯಾಮರಾ ಕಣ್ಣು ಪಳಗಿದೆ. ದೀಪು ಕುಮಾರ್ ಸಂಕಲನ ಪ್ರೇಕ್ಷಕರನ್ನು ಎರಡುವರೆ ಗಂಟೆಗಳ ಕಾಲ ಸೀಟುಗಳಿಗೆ ಬಂಧಿಸುತ್ತದೆ.
ಭೂಗತ ಜಗತ್ತಿನ ಕಥೆ ಎಂದರೆ ಪ್ರೇಕ್ಷಕರು ಸಹಜವಾಗಿ ಮಚ್ಚು, ಲಾಂಗುಗಳನ್ನು ನಿರೀಕ್ಷಿಸುತ್ತಾರೆ.ಅವುಗಳ ಸುಳಿವಿಲ್ಲದೆ ಚಿತ್ರವನ್ನು ಹೇಗೆ ಅದ್ಭುತವಾಗಿ ತೋರಿಸಬಹುದು ಎಂಬುದಕ್ಕೆ ಸ್ಲಂ ಬಾಲ ಉತ್ತಮ ಉದಾಹರಣೆ. ಉತ್ತಮ ಗುಣಮಟ್ಟದ ಚಿತ್ರಗಳು ಕನ್ನಡದಲ್ಲಿ ಮೂಡಿ ಬರುತ್ತಿಲ್ಲ ಎಂಬ ಅಪವಾದವನ್ನು ಸ್ಲಂ ಬಾಲ ಸಾರಾಸಗಟಾಗಿ ತಳ್ಳಿಹಾಕಿದೆ. ಎಲ್ಲ ವರ್ಗದ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸ್ಲಂ ಬಾಲ ಗೆದ್ದಿದ್ದಾನೆ. ಖಂಡಿತ ಎಲ್ಲರೂ ನೋಡಲೇ ಬೇಕಾದ ಚಿತ್ರ.


Click it and Unblock the Notifications











