For Quick Alerts
  ALLOW NOTIFICATIONS  
  For Daily Alerts

  ಯಶವಂತ್‌: ಮೋಜು, ಮಸ್ತಿ , ಕುಸ್ತಿ

  By Staff
  |
  • ಮಹಾಂತೇಶ ಬಹಾದುಲೆ
  ಒನ್ಸ್‌ ಅಗೇನ್‌ ಇದು ಪಕ್ಕಾ ಎಂಟರ್‌ಟೇನ್‌ಮೆಂಟ್‌, ಕಮರ್ಷಿಯಲ್‌ ಸಿನಿಮಾ. ಕಥೆಯಲ್ಲಿ ಎಲ್ಲಿಯೂ ತಿರುವು ಮುರುವು ಇಲ್ಲ , ಏರಿಳಿತವಿಲ್ಲ. ಸಡನ್‌ ಚೇಂಜ್‌ ? ನೋ. ಪ್ರೇಕ್ಷಕರನ್ನು ದಿಗಿಲುಗೊಳಿಸುವ ಟರ್ನಿಂಗ್‌ ಪಾಯಿಂಟ್‌ ? ನೋ, ನೋ. ಎಲ್ಲವೂ ರೈಲ್ವೆ ಹಳಿಯಂತೆ ಸರಳ ಸರಳ. ಆದರೆ ಚಿತ್ರದ್ದಕ್ಕೂ ಮನರಂಜನೆ ಮಾತ್ರ ಧಾರಾಳ.

  ‘ಯಶವಂತ್‌’ ಚಿತ್ರಕ್ಕೆ ಇಷ್ಟು ಪೀಠಿಕೆ ಸಾಕು. ಇದು ವರ್ಷಾನುಗಟ್ಟಲೇ ನಡೆಯುವ ಕಥಾವಸ್ತುವೂ ಅಲ್ಲ. ಕೇವಲ ನಾಲ್ಕೇ ದಿನಗಳಲ್ಲಿ ನಡೆಯುವ ಘಟನೆಯನ್ನು ನಿರ್ದೇಶಕ ದಯಾಳ್‌, ಎರಡೂವರೆ ಗಂಟೆಯ ಸಿನಿಮಾ ಮಾಡಿ ತೋರಿಸಿದ್ದು ಅವರ ಚಾಣಾಕ್ಷತನ. ಇದರೊಂದಿಗೆ ತಮ್ಮ ಮೂರನೆಯ ಚಿತ್ರದಲ್ಲೇ ಕನ್ನಡಕ್ಕೊಬ್ಬ ಉತ್ತಮ ನಿರ್ದೇಶಕ ದೊರೆಯುವ ಭರವಸೆ ಮೂಡಿಸಿದ್ದಾರೆ.

  ಈ ಸರಳ ಕಥೆಯಲ್ಲೇ ಎರಡು ಎಳೆ. ಬೇಜಾವಾಬ್ದಾರಿ ಯುವಕ ಯಶ್‌ವಂತ್‌ (ಮುರಳಿ ) ಮಜಾ ಮಾಡಲು ಹೋಗಿ ಫಜೀತಿಗೀಡಾಗಿ, ಕೊನೆಗೆ ಬಾಳ ಸಂಗಾತಿಯನ್ನು ಪಡೆಯುವುದೊಂದಾದರೆ, ತಂದೆಯನ್ನು ಹುಡುಕುತ್ತ ಬಂದು ಈತನ ತೆಕ್ಕೆಗೆ ಬೀಳುವ ಚಿತ್ರಾ(ರಕ್ಷಿತಾ) ಳದು ಮತ್ತೊಂದು ಎಳೆ.

  ಈತನೇನೊ ತಂದೆ-ತಾಯಿಯ ಮುದ್ದಿನ ಮಗ. ಹೀಗಾಗಿ ಬೇಜವಾಬ್ದಾರಿ ಅವನ ಜನ್ಮಸಿದ್ಧ ಹಕ್ಕಿನಂತೇ ಇರುತ್ತದೆ. ಸದಾ ಮೋಜು ಮಸ್ತಿಯಲ್ಲೇ ಕಾಲಹರಣ. ಮುರಳಿ ಈ ಪಾತ್ರದಲ್ಲಿ ಪ್ರಬುದ್ಧರಾಗೇ ಕಾಣಿಸಿಕೊಂಡಿದ್ದಾರೆ. ಯಾವತ್ತೂ ಎಂಜಾಯ್‌ ಮಾಡ್ಕೊಂಡಿರೊ ಹುಡುಗನಾದರೂ ಪರೋಪಕಾರಿಯ ಇಮೇಜ್‌ ಅದಕ್ಕೆ ನೀಡಲಾಗಿದೆ.

  ಚಿತ್ರಾ ಮಾತ್ರ ವಿಚ್ಛೇದಿತ ಅಪ್ಪ- ಅಮ್ಮನ ಪುತ್ರಿ. ಅಪ್ಪ ದೂರದಲ್ಲೆಲ್ಲೊ ಮಿಲಿಟರಿ ಸೇವೆಯಲ್ಲಿದ್ದರೆ, ಅಮ್ಮ (ವನಿತಾ ವಾಸು) ಮನೆಯಲ್ಲಿದ್ದರೂ ಮಿಲಿಟರಿ ಅಧಿಕಾರಿಣಿಯಂಥವಳು. ತನ್ನ ಸೋದರ ಮಾವನೊಂದಿಗಿನ ಮದುವೆಯನ್ನು ಇಷ್ಟಪಡದ ಚಿತ್ರಾ ಬೇರೊಬ್ಬಳ ನೆರವಿನಿಂದ ಯಶ್‌ವಂತ್‌ನ ಮನೆ ಸೇರುತ್ತಾಳೆ. ನಂತರದ್ದೆಲ್ಲವೂ ‘ಪ್ರೇಮಲೋಕ ’.

  ರಕ್ಷಿತಾಗೆ ಅಭಿನಯಕ್ಕೆ ಅಷ್ಟೊಂದು ಅವಕಾಶ ಇಲ್ಲದಿದ್ದರೂ, ಇದ್ದುದರಲ್ಲೇ ಮಿಂಚಿದ್ದಾರೆ. ಆ ಸೇಡನ್ನು ಕುಣಿದು ತೀರಿಸಿಕೊಂಡಂತಿದೆ. ನೃತ್ಯಗಳ ಪ್ರತಿದೃಶ್ಯವನ್ನೂ ನಾಯಕ ಎಂಜಾಯ್‌ ಮಾಡಿದ್ದಾರೆ. ಫೈಟ್‌ಗಳಲ್ಲಿ ಸಂಪೂರ್ಣ ಮಗ್ನ. ಹಾಡು, ಕುಣಿತ, ಫೈಟ್‌ಗಳನ್ನು ಆರಂಭದಿಂದಲೇ ಕಥೆಗೆ ತಕ್ಕಂತೆ ಬಳಸಿಕೊಂಡಿದ್ದು, ಕೊನೆಯವರೆಗೂ ಅವುಗಳೊಂದಿಗೆ ಟಚ್‌ ಇಟ್ಟುಕೊಂಡೇ ಬರಲಾಗಿದೆ.

  ಎರಡು ಹಾಡುಗಳು ಸಂಗೀತದ ಖುಷಿ ನೀಡುವಂತಿದ್ದು, ಅವುಗಳನ್ನು ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಛಾಯಾಗ್ರಹಕ ಸತ್ಯ ಹೆಗಡೆ ಇದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರಿಗಿದು ಎರಡನೇ ಚಿತ್ರವಾದರೂ ವಿನಾಯಿತಿ ಬಯಸಿಲ್ಲ. ಮಣಿಶರ್ಮ ಅವರ ಸಂಗೀತ ಸುಮಧುರ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ, ನಿರ್ದೇಶಕ ದಯಾಳ್‌ ಅವರದೇ. ಬಿಗಿಯಾದ ನಿರೂಪಣೆ ಪ್ಲಸ್‌ ಪಾಯಿಂಟ್‌.

  ಕುಟುಂಬ ಸಮೇತ ವೀಕ್ಷಿಸಬಹುದಾದ ಚಿತ್ರ ಕೊಟ್ಟಿರುವ ಕೆ.ಮಂಜು ತಾವು ಸದಭಿರುಚಿಯ ನಿರ್ಮಾಪಕ ಎಂದು ಸಾಬೀತುಪಡಿಸಿದ್ದಾರೆ. ಯಶ್‌ವಂತ್‌ ಯಶಸ್ಸು ಕಾಣುವ ನಿರೀಕ್ಷೆ ಹುಟ್ಟಿಸಿದೆ.

  (ಸ್ನೇಹಸೇತು: ವಿಜಯಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X