twitter
    For Quick Alerts
    ALLOW NOTIFICATIONS  
    For Daily Alerts

    ಗೆಲುವಿನ ಹಾದಿಗೆ ಪ್ರೀತಿಯದೊಂದು ‘ಆದಿ’

    By Staff
    |
    • ಮಹಾಂತೇಶ ಬಹಾದುಲೆ
    ಕತ್ತೆಗೂ ಒಂದು ಕಾಲ ಇರುತ್ತೆ ಅಂದ್ಮೇಲೆ ನಿರುದ್ಯೋಗಿಗಳಿಗೆ ಇರದೇ ಇರತ್ಯೆ? ಇಂಥದೊಂದು ಸರಳ ಸಂದೇಶ ಇಟ್ಟುಕೊಂಡು ಆರಂಭವಾಗುವ ಆದಿ ಚಿತ್ರ ಕೊನೆಯವರೆಗೂ ಎಲೆಕ್ಟ್ರಾನಿಕ್‌ ರೈಲಿನಂತೆ ಸರಾಗವಾಗೇ ಮುಂದುವರಿಯುತ್ತೆ. ಕೆಲವು ಸನ್ನಿವೇಶಗಳು ‘ದಂಡಪಿಂಡಗಳು ಇವರು ದಂಡಪಿಂಡಗಳು’ ಎನ್ನುವ ಧಾರವಾಹಿಯಾಂದರ ಟೈಟಲ್‌ ಸಾಂಗ್‌ ಅನ್ನು ನೆನಪಿಸುತ್ತದೆ.

    ಚಿತ್ರದಲ್ಲಿ ಬರುವ ಪಾತ್ರಗಳು ಹಾಗೂ ಸನ್ನಿವೇಶಗಳು ಕಾಲ್ಪನಿಕವಾದರೂ, ಇಲ್ಲಿಯ ಬಹುತೇಕ ಸಂದರ್ಭಗಳು ಎಲ್ಲರ ಬದುಕಿನಲ್ಲಿ ಇರುವಂಥವೆ ಎಂಬುದು ವಾಸ್ತವ. ಒಳ್ಳೆಯ ಸಂದೇಶ ಇಟ್ಟುಕೊಂಡೇ ಹೆಣೆಯಲಾದ ಸದಭಿರುಚಿಯ ಚಿತ್ರ ಇದು ಎಂದು ಅಳುಕಿಲ್ಲದೇ ಹೇಳಬಹುದು.

    ತುಂಬಿದ ಕುಟುಂಬದಲ್ಲೊಬ್ಬ ದಂಡ ಪಿಂಡ(ಆದಿತ್ಯ). ನೌಕರಿಗಾಗಿ ಅವನ ಗಿರಕಿ. ಚಿತ್ರದ ಕಥೆ ಸುತ್ತುವುದು ಸೋಮಾರಿಯಲ್ಲದ ಇಂಥ ಅಲೆಮಾರಿಯ ಸುತ್ತ. ಬದುಕಿನ ಇಂಥ ಹುಡುಕಾಟದಲ್ಲೇ ಇವನಿಗೆ ಹುಡುಗಾಟದ ಹುಡುಗಿ(ರಮ್ಯ)ಯಾಬ್ಬಳ ತೊಡಕು. ಇವರಿಬ್ಬರ ಪ್ರೇಮಾಂಕುರಕ್ಕೆ ನೆರವಾಗಲು ಬಂದೊದಗುವ ಸನ್ನಿವೇಶಗಳು. ಈ ಪ್ರೇಮ ಪರೀಕ್ಷೆಗೆ ಕೆಲವು ವಿಘ್ನಗಳು. ಕೊನೆಗೆ ನಿಜವಾದ ಪ್ರೇಮ ಗೆಲ್ಲುತ್ತೊ, ಇಲ್ಲವೋ ಎಂಬುದು ಕ್ಲೈಮ್ಯಾಕ್ಸ್‌.

    ಇಂಥ ಹುಡುಗನ ತಂದೆ(ಶ್ರೀನಿವಾಸ ಮೂರ್ತಿ) ಮಗನ ಬಗ್ಗೆ ಅಂತರಂಗದಲ್ಲಿ ಪ್ರೀತಿ ಇಟ್ಟುಕೊಂಡು ಅವನನ್ನು ಬೈಯ್ದು, ಹೀಯಾಳಿಸಿ ದಾರಿಗೆ ತರುವ ಸನ್ನಿವೇಶಗಳು ಅನೇಕರ ಮನೆಯಲ್ಲಿ ನಡೆಯುವ ಘಟನೆಗಳಷ್ಟು ಸಹಜವಾಗಿ ಮೂಡಿಬಂದಿವೆ. ‘ಗಂಡನಾದವನು ಕೇವಲ ಗಳಿಸುವ ತಾಕತ್ತಿದ್ದರೆ ಸಾಲದು, ಹೆಂಡತಿಯನ್ನು ರಕ್ಷಿಸುವ ಗುಂಡಿಗೆಯೂ ಬೇಕು’ ಎಂಬಂಥ ಮಾತುಗಳು ಸಂಭಾಷಣೆಯ ತೂಕ ಹೆಚ್ಚಿಸಿವೆ. ನಾಯಕನ ಹುಡುಗಾಟ, ನಾಯಕಿಯ ಕೊಬ್ಬು ಸಹನೀಯ. ಒಂದೆರಡು ನವಿರು ಹಾಸ್ಯಗಳು ಸೊಗಸು ಎನಿಸುತ್ತವೆ. ಖಳನಾಯಕನ ಪಾತ್ರಕ್ಕೆ ಶೋಭರಾಜ್‌ ಶೋಭೆ ತಂದಿದ್ದಾರೆ. ಅಭಿನಯ ಹಾಗೂ ನೋಟದಲ್ಲೂ ಮಿಂಚುತ್ತಾರೆ.

    ಸಿನಿಮಾ ಚಿತ್ರೀಕರಣ ಬೆಂಗಳೂರು ಹಾಗೂ ಮೈಸೂರಿಗೇ ಸೀಮಿತವಾಗಿದ್ದರೂ, ಇದರ ಹಾಡುಗಳೆಲ್ಲ ಶೂಟ್‌ ಮಾಡಿದ್ದು ದೂರದ ಮಲೇಶಿಯಾದಲ್ಲಿ. ಕಣ್ಣುಗಳು ತಂಪಾಗುವಂತೆ ಸುಂದರ ತಾಣಗಳನ್ನು ಸೆರೆ ಹಿಡಿಯಲಾಗಿದೆ. ಒಂದೆರಡು ಹಾಡುಗಳಲ್ಲಿ ಸಂಗೀತ ಮಧುರವಾಗಿದೆ. ಸಂಭಾಷಣೆಗಳು ಹಿತಮಿತವಾಗಿವೆ.

    ಆದರೆ ಕಥೆಯಲ್ಲಿ ಅಂಥ ಯಾವ ಏರಿಳಿತಗಳಿಲ್ಲವೋ ಅಥವಾ ಅದು ನಿರೂಪಣೆಯಲ್ಲಿರುವ ಲೋಪವೋ ಎಂಬುದನ್ನು ಪ್ರೇಕ್ಷಕರೇ ನಿರ್ಧರಿಸಲಿ. ನೋಡುಗರನ್ನು ನಿಬ್ಬೆರಗಾಗಿಸುವಂಥ ದೃಶ್ಯಗಳು ಇಲ್ಲದೇ ಹೋದರೂ, ಕೊನೆಗೆ ಕಾತರ ಕಾಯ್ದುಕೊಂಡು ಹೋಗುವ ಶೈಲಿಯನ್ನಾದರೂ ಅನುಸರಿಸಬಹುದಿತ್ತು.

    ನಾಯಕ ಆದಿತ್ಯನಿಗೆ ಇದು ಎರಡನೇ ಚಿತ್ರ. ಅವರ ಪ್ರತಿಭೆಯನ್ನು ಹೊರತರಲು ನಿರ್ದೇಶಕ ಎಂ.ಎಸ್‌.ರಮೇಶ್‌ ಪ್ರಯತ್ನಿಸಿದ್ದಾರೆ. ಸೆಣಸಾಟದ ದೃಶ್ಯಗಳಲ್ಲಿ ಆದಿ ಸೈ ಎನಿಸಿಕೊಳ್ಳುತ್ತಾರೆ. ನಾಯಕಿ ರಮ್ಯಳ ಅಭಿನಯಕ್ಕೆ ಇನ್ನೂ ಪ್ರಬುದ್ಧತೆ ಬರಬೇಕಿದೆ. ಶ್ರೀನಿವಾಸ ಮೂರ್ತಿ ಅವರ ಜತೆ ಸುಂದರ್‌ರಾಜ್‌, ರಂಗಾಯಣ ರಘು, ಸತ್ಯಜಿತ್‌, ಅವಿನಾಶ್‌ ಸೇರಿದಂತೆ ಅನೇಕ ಫೋಷಕ ಕಲಾವಿದರನ್ನು ಒಟ್ಟಿಗೆ ನೋಡಬಹುದು.

    ಪ್ರೀತಿಯಲ್ಲಿ ಕೇವಲ ಪ್ರೇಮದ ಹುಡುಗಾಟವಷ್ಟೇ ಅಲ್ಲ. ಬದುಕಿನ ಹುಡುಕಾಟವೂ ಇದೆ ಎಂಬುದನ್ನು ನಿರೂಪಿಸಲು ನಿರ್ಮಾಪಕರಾದ ಜೈ ಜಗದೀಶ್‌ ಹಾಗೂ ವಿಜಯಲಕ್ಷ್ಮಿ ಸಿಂಗ್‌ ಸಫಲ ಯತ್ನ ಮಾಡಿದ್ದಾರೆ.

    (ಸ್ನೇಹ ಸೇತು : ವಿಜಯ ಕರ್ನಾಟಕ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Friday, April 19, 2024, 19:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X