»   » ಪಲ್ಲಕ್ಕಿ : ಕೊಂಚ ಗಟ್ಟಿ ಅವಲಕ್ಕಿ!

ಪಲ್ಲಕ್ಕಿ : ಕೊಂಚ ಗಟ್ಟಿ ಅವಲಕ್ಕಿ!

Subscribe to Filmibeat Kannada


ಮುಂದಾಗುವುದು ಗೊತ್ತಾಗುತ್ತದೆ, ಹಿಂದಾಗಿದ್ದು ಮರೆತು ಹೋಗುತ್ತದೆ, ಸದ್ಯಕ್ಕೆ ನಡೆಯುವುದು ಸುಮ್ಮನೆ ನಡೆಯುತ್ತದೆ...ಒಗಟು ಬಿಡಿಸಿ ಅಂದರೆ ಉತ್ತರ ‘ಪಲ್ಲಕಿ’್ಕ.

  • ದೇವಶೆಟ್ಟಿ ಮಹೇಶ್‌
ಚಿತ್ರ : ಪಲ್ಲಕ್ಕಿ
ನಿರ್ಮಾಣ : ಪ್ರೇಮ್‌ ಕುಮಾರ್‌
ನಿರ್ದೇಶನ : ನರೇಂದ್ರ ಬಾಬು
ಸಂಗೀತ : ಗುರುಕಿರಣ್‌
ತಾರಾಗಣ : ಪ್ರೇಮ್‌, ರಮಣೀತು ಚೌಧರಿ, ರಮೇಶ್‌ ಭಟ್‌, ದೊಡ್ಡಣ್ಣ, ಶರಣ್‌ ಮತ್ತಿತರರು.

ಆಕೆಯನ್ನು ಆತ ನೋಡುತ್ತಾನೆ. ಹಿಂದೆ ಬೀಳುತ್ತಾನೆ. ಪ್ರೀತಿಸುತ್ತೇನೆ ಅಂತಾನೆ. ನಿನ್ನ ಪ್ಯಾಂಟು ನಿನ್ನದಲ್ಲ, ನೀ ಓಡಿಸೋ ಗಾಡಿ ನಿನ್ನದಲ್ಲ, ಮೊದಲು ನಿನ್ನ ಕಾಲ ಮೇಲೆ ನಿಂತುಕೊ ಅಂತಾಳೆ.

ಆತ ಅದನ್ನೇ ಸಂವಿಧಾನದ ನಿಯಮ ಅಂದುಕೊಂಡು ಬಿಸಿನೆಸ್‌ ಮಾಡುತ್ತಾನೆ. ಬೈಕ್‌ನಲ್ಲಿ ಬರುವಾತ ಕಾರಿನಲ್ಲಿ ಬರುತ್ತಾನೆ. ಅವಳನ್ನು ಮದುವೆಯಾಗುತ್ತಾನೆ. ಕತೆ ಇಷ್ಟು. ಅದಕ್ಕೆ ಚಿತ್ರಕತೆ ಅಷ್ಟು!

ಸಾಮಾನ್ಯ ಕತೆ ಇಟ್ಟುಕೊಂಡು ಸಿನಿಮಾ ಮಾಡುವುದು ಹೊಸತಲ್ಲ. ಆದರೆ ಅದಕ್ಕೆ ತಕ್ಕ ಬಿಗಿಯಾದ ನಿರೂಪಣೆ, ಗಟ್ಟಿ ಚಿತ್ರಕತೆ, ಹದವಾದ ಸಂಭಾಷಣೆ... ಹೀಗೆ ಎಲ್ಲದರಲ್ಲೂ ಹೊಸತನ ಬೇಕಾಗುತ್ತದೆ. ಅದೆಲ್ಲಾ ಇಲ್ಲಿ ಇಲ್ಲವೆಂದಲ್ಲ... ಇದೆ. ಆದರೆ ಎಷ್ಟಿರಬೇಕೊ ಅಷ್ಟಿಲ್ಲ. ಹೀಗಾಗಿ ಜೀವಂತಿಕೆ ಕೊಂಚ ಕಡಿಮೆ. ಅಲ್ಲಲ್ಲಿ ಬೋರಾದರೂ ಸುಮ್ಮನೆ ನೋಡಿಸಿಕೊಂಡು ಹೋಗುತ್ತದೆ.

ಪ್ರೇಮ್‌ ತಮ್ಮ ಪಾತ್ರವನ್ನು ನೀಟಾಗಿ ನಿಭಾಯಿಸಿದ್ದಾರೆ. ಅವರ ರೋಮ್ಯಾಂಟಿಕ್‌ ಸನ್ನಿವೇಶಗಳ ಉತ್ಸಾಹ, ಭಾವನಾತ್ಮಕ ದೃಶ್ಯಗಳಲ್ಲಿ ನೆಲ ಕಚ್ಚುತ್ತದೆ. ಅವರು ಅಳುವಾಗ, ಜನ ನಕ್ಕರೆ ಅದು ಅವರದೇ ತಪ್ಪು!

ನಾಯಕಿ ರಮಣೀತು ಚೌಧರಿ ಒಳ್ಳೆ ಅಮುಲ್‌ ಬೆಣ್ಣೆಯಷ್ಟೇ ಮುದ್ದಾಗಿದ್ದಾಳೆ. ಕೊಟ್ಟ ಕಾಸಿಗೆ ಮೋಸ ಮಾಡದಂತೆ ನಟಿಸಿದ್ದಾಳೆ. ಶರಣ್‌, ದೊಡ್ಡಣ್ಣ, ಬುಲೆಟ್‌ ಪ್ರಕಾಶ್‌ ತಮ್ಮ ಕೆಲಸ ಮಾಡಿದ್ದಾರೆ. ಗುರುಕಿರಣ್‌ ಸಂಗೀತದಲ್ಲಿ ಮೂರು ಹಾಡುಗಳು ಕೇಳುವಂತಿವೆ. ಅದರಲ್ಲಿ ಎರಡು ಬೇರೆ ಭಾಷೆಯಲ್ಲಿ ಕೇಳಿದಂತಿವೆ. ಸಂಭಾಷಣೆ ಪರವಾಗಿಲ್ಲ. ಮಹೇಶ್‌ ತಲಕಾಡು ಕ್ಯಾಮೆರಾ ಚೆನ್ನಾಗಿದೆ.

ಒಂದು ಪ್ರೇಮ ಕತೆಯನ್ನು ತುಂಬಾ ಸರಳವಾಗಿ, ಸಂಗೀತಮಯವಾಗಿ, ಸುಂದರವಾಗಿ ನಿರ್ದೇಶಕ ನರೇಂದ್ರಬಾಬು ಹೇಳಿದ್ದಾರೆ. ಅದಕ್ಕಾದರೂ ನೀವೊಮ್ಮೆ ನೋಡಬೇಕು...

‘ಪಲ್ಲಕ್ಕಿ’ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada