twitter
    For Quick Alerts
    ALLOW NOTIFICATIONS  
    For Daily Alerts

    ಸೆಂಟ್‌ ಪರ್ಸೆಂಟ್‌ ಅಸಂಬದ್ಧ ಚಿತ್ರ

    By Staff
    |

    *ಮಹೇಶ್‌ ದೇವಶೆಟ್ಟಿ

    ಒಂದು ಕಮರ್ಷಿಯಲ್‌ ಚಿತ್ರಕ್ಕೆ ಯಾವ್ಯಾವ ಗುಣಗಳಿರಬೇಕು ?

    ಕಾಮಿಡಿ ಚಿತ್ರವಾದರೆ ನಗಿಸಬೇಕು. ಗೋಳಾದರೆ ಅಳಿಸಬೇಕು. ಹಾರರ್‌ ಭಯ ಹುಟ್ಟಿಸಬೇಕು. ಸಸ್ಪೆನ್ಸ್‌ ಕುತೂಹಲ ಉಳಿಸಿಕೊಳ್ಳಬೇಕು. ಕನಿಷ್ಠ ಒಂದೆರಡು ಹಾಡಾದರೂ ಕೇಳುವಂತಿರಬೇಕು. ಐದಾರು ದೃಶ್ಯಗಳಾದರೂ ಖುಷಿ ಕೊಡಬೇಕು. ಅದೇನು ಇರದಿದ್ದರೂ ಚೆಂದದ ಹುಡುಗಿಯಿಂದ ಮನಸ್ಸು ಮಾಯಾಬಜಾರ್‌ ಆದರೂ ನಡೆದೀತು. ಆದರೆ ಇಂತಹ ಯಾವುದೇ ಗುಣವಿಲ್ಲದ ಚಿತ್ರ ಬಂದರೆ ಏನು ಮಾಡಬೇಕು ?

    ಮುಲಾಜಿಲ್ಲದೆ ಕಾವೇರಿಯಲ್ಲಿ ಎಸೆಯಬೇಕು. ಕನ್ನಡ ಪ್ರೇಕ್ಷಕರು ನಿರ್ದಾಕ್ಷಿಣ್ಯವಾಗಿ ಅದನ್ನು ಮಾಡುತ್ತಾ ಬಂದಿದ್ದಾರೆ. ಈ ಚಿತ್ರ ಯಾವುದೆಂಬುದು ಸಹೃದಯಿ ಓದುಗರಿಗೆ ಈಗಾಗಲೇ ಗೊತ್ತಾಗಿರಬೇಕು.

    ಐವರು ಹುಡುಗರು ಜೀಪ್‌ನಲ್ಲಿ ಹೊರಟಿದ್ದಾರೆ. ಒಬ್ಬ ಹುಡುಗಿ ಲಿಫ್ಟ್‌ ಕೇಳುತ್ತಾಳೆ. ಸ್ವಲ್ಪ ದೂರ ಬಂದು ಕಣ್ತಪ್ಪಿಸಿ ಓಡುತ್ತಾಳೆ. ಮತ್ತೆ ಅವಳು ಸಿಕ್ಕರೆ ಕೊಂದು ಬಿಡುತ್ತೇನೆ. ಹಾಗಂತ ಅವರಲ್ಲೊಬ್ಬ ಕೀರಲುತ್ತಾನೆ.

    ಅವಳು ಮತ್ತೆ ಸಿಗುತ್ತಾಳೆ. ಅವನು ಬೆನ್ನು ಹತ್ತುತ್ತಾನೆ. ಆಮೇಲೆ ಅವಳ ಹೆಣ ಸಿಗುತ್ತದೆ. ಆತನೇ ಕೊಂದನಾ ಎನ್ನುವ ಗೊಂದಲ ಇರುವಾಗಲೇ ಅವನ ಹೆಣವೂ ಹೊಂಡದಲ್ಲಿ ತೇಲಿಂಗು. ಪೊಲೀಸರು ಅವರನ್ನು ಹಿಡಿದು ತದುಕುತ್ತಾರೆ. ಬಾಯಿ ಬಿಡಿಸುತ್ತಾರೆ. ಹೆಣ ಹೂತ ಜಾಗ ಅಗೆದಾಗ ಅಲ್ಲಿ ಬೇರೊಬ್ಬಳ ಶವ ಸಿಗುತ್ತದೆ. ಅವರನ್ನು ಅರೆಸ್ಟ್‌ ಮಾಡಿಕೊಂಡು ಬರುವಾಗ ಅವರು ತಪ್ಪಿಸಿಕೊಳ್ಳುತ್ತಾರೆ. ಅಷ್ಟರಲ್ಲಿ ಫಿಫ್ಟಿ ಪರ್ಸೆಂಟ್‌ ಪ್ರೇಕ್ಷಕರು ತಪ್ಪಿಸಿಕೊಳ್ಳಲು ರೆಡಿಯಾಗುತ್ತಾರೆ.

    ಮರ್ಡರ್‌ ಮಿಸ್ಟರಿ ಕತೆಯನ್ನು ಹೇಗೆ ನಿರೂಪಿಸಬೇಕು, ಕುತೂಹಲವನ್ನು ಹೇಗೆ ಉಳಿಸಿಕೊಳ್ಳುವುದು ಅನ್ನುವುದು ನಿರ್ದೇಶಕ ಸೂರ್ಯ ಅವರಿಗೆ ಗೊತ್ತಿಲ್ಲ. ಕನ್‌ಫ್ಯೂಸ್‌ ಮಾಡುವುದನ್ನು ಸಸ್ಪೆನ್ಸ್‌ ಎಂದು ತಿಳಿದುಕೊಂಡಿದ್ದಾರೆ. ಪಾತ್ರಗಳು ಯಾಕೆ ಬರುತ್ತವೆ ? ಯಾಕೆ ಸಾಯುತ್ತವೆ ? ಸಾಯಿಸುವವರು ಯಾರು ಇಂತಹ ಹಲವಾರು ಪ್ರಶ್ನೆಗಳಿಗೆ ಕೊನೆಯಲ್ಲಿ ಉತ್ತರ ಸಿಕ್ಕರೂ ಅದುವರೆಗೆ ಕಾಯುವ ತಾಳ್ಮೆ ಯಾರಿಗೂ ಇರುವುದಿಲ್ಲ.

    ಮಿಮಿಕ್ರಿ ಮಾಡುವ ಹುಡುಗ, ಒಂದು ರೂಪಾಯಿ ಕಂಡರೆ ರಸ್ತೆಯಲ್ಲೇ ಉರುಳುವ ದ್ವಾರಕೀಶ್‌, ಮಾತಿಗೊಮ್ಮೆ ಪಂಚೆ ಬಿಚ್ಚಿ ಬ್ಯಾಟರಿ ಡೌನ್‌ ಎಂದು ಊಳಿಡುವ ಬ್ಯಾಂಕ್‌ ಜನಾರ್ಧನ್‌- ಇವರನ್ನು ಜೋಕರ್‌ಗಳೆಂದು, ಅವರ ಬಾಯಿಯಿಂದ ಬಂದದ್ದು ಜೋಕ್‌ಗಳೆಂದು ತಿಳಿಯಬೇಕಂತೆ. ಇದ್ದುದರಲ್ಲಿ ಮೈಕೆಲ್‌ ಮಧು ವಿಲಕ್ಷಣ ಪಾತ್ರದಲ್ಲಿ ವಿಶಿಷ್ಟವಾಗಿ ಕಾಣಿಸಿಕೊಂಡಿದ್ದಾರೆ.

    ಇದರ ಜೊತೆಗೆ ಯಾವ್ಯಾವುದೋ ಹೊಸ ಮುಖಗಳು ನಟಿಸಿವೆ. ಪಾಪ, ಅವರಿಗೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡಿದ್ದೇ ಪುಣ್ಯ. ಮಿಡಿ ತೊಟ್ಟ ಹುಡುಗಿಯರು ಸಾಧ್ಯವಾದಷ್ಟು ಕ್ಯಾಮರಾದ ಹಸಿವನ್ನು ತೀರಿಸಿದ್ದಾರೆ. ಸ್ವಂತ ಟ್ಯೂನ್‌ಗಳನ್ನು ಬಳಸಿದರೆ ಯಾವ ಲೆವೆಲ್ಲಿನ ಸಂಗೀತ ನೀಡಬಲ್ಲೆನೆಂದು ರಾಜೇಶ್‌ ರಾಮನಾಥ್‌ ಆಧಾರ ಸಮೇತ ತೋರಿಸಿದ್ದಾರೆ. ಹಿನ್ನೆಲೆ ಸಂಗೀತ ಕೇಳಿದರೆ ಅಣ್ಣಮ್ಮ ದೇವಿ ಮೆರವಣಿಗೆಯ ಗುತ್ತಿಗೆ ಹಿಡಿಯುವುದು ವಾಸಿ ಅನಿಸುತ್ತದೆ.

    ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ಮಾಡುವವರನ್ನು ನೋಡಿರುತ್ತೀರಿ. ಫಾರ್‌ ಎ ಛೇಂಜ್‌ ನಿರ್ಮಾಪಕ ನರಸಯ್ಯ ತಮ್ಮದೇ ದುಡ್ಡಿನಲ್ಲಿ ಜಾತ್ರೆ ಮಾಡಿದ್ದಾರೆ. ಅಂದರೆ ಇಡೀ ಚಿತ್ರ ಇವರ ಸಂಕಲನದ ಪ್ರತಾಪಕ್ಕೆ ಸಿಕ್ಕು ಬಾಳೆಕಾಯಿ ಬಜ್ಜಿಯಾಗಿದೆ. ಮೂವರು ಮೇಧಾವಿಗಳು ಸೇರಿ ಬರೆದ ಮಾತುಗಳಲ್ಲಿ ದ್ವಂದ್ವಾರ್ಥ, ಅಪದ್ಧ ಮತ್ತು ಅರ್ಥ ಹೀನತೆಯದ್ದೇ ಕಾರುಬಾರು. ಅಂದಹಾಗೆ, ಕೊನೆಯ ಇಪ್ಪತ್ತು ನಿಮಿಷ ಕತೆ ಹಳಿ ಮೇಲೆ ಬರುತ್ತದೆ. ಕೊಂಚವಾದರೂ ಅರ್ಥವಾಗುತ್ತದೆ. ಅದಕ್ಕಾಗಿ ಎರಡು ಗಂಟೆ ಹತ್ತು ನಿಮಿಷ ಸಹಿಸಿಕೊಳ್ಳುವುದಿದೆಯಲ್ಲಾ ಅದು ಫಿಫ್ಟಿ : ಫಿಫ್ಟಿ ಅಲ್ಲ , ನೇರವಾಗಿ ಟಿಕ್‌ಟ್ವೆಂಟಿ !

    (ವಿಜಯ ಕರ್ನಾಟಕ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Wednesday, April 24, 2024, 22:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X