ಅಂಗೋಪಾಂಗದ ಚೇಂಜೋಪಾಖ್ಯಾನ

By Staff
  • ವಿಕಾಸ ನೇಗಿಲೋಣಿ
ಪ್ರಶ್ನೆ: ಅಂಗ ಕಸಿ ಅತಿರೇಕಕ್ಕೆ ಹೋದರೆ ಏನಾಗುತ್ತದೆ?

ಉತ್ತರ: ಪತಿ, ಪತ್ನಿ, ಅವಳು... ಚಿತ್ರವಾಗುತ್ತದೆ!

ಹೌದು, ಕೇವಲ ದೇಹದ ಅಂಗವನ್ನು ಪರರಿಗೆ ಜೋಡಿಸುವ ವಿಷಯವನ್ನಿಟ್ಟುಕೊಂಡು ಎರಡು ಗಂಟೆಗೂ ದೀರ್ಘವಾಗಿ ಚಿತ್ರವೊಂದನ್ನು ಹೆಣೆಯುವ ಧೈರ್ಯವನ್ನು ಕನ್ನಡ ಚಿತ್ರರಂಗದಲ್ಲಿ ಮಾಡಲಾಗಿದೆ. ಇದಕ್ಕೆ ಪತಿ ಪತ್ನಿ ಅವಳು... ಎಂಬ ಹೆಸರಿಡಲಾಗಿದೆ. ಚಿತ್ರದ ಹೀರೋ ಆಕ್ಸಿಡೆಂಟ್‌ ಮಾಡಿಕೊಂಡು ತನ್ನ ಒಂದೊಂದು ಅಂಗ ಕಳೆದುಕೊಂಡಷ್ಟೂ ಕತೆಗೆ ಬಲ ಬರುತ್ತದೆ.

ನಾಯಕ ಉಲ್ಲಾಸ್‌ (ಆದರ್ಶ) ಸುಖಾಸುಮ್ಮನೆ ಮೋಟಾರ್‌ ರೇಸ್‌ಗೆ ಹೋಗಿ ಕೈಕಾಲು ಕಳೆದುಕೊಂಡಾಗ ಅವನ ಜೋಡಿ ಬಂದ ಅಣ್ಣ ತೀರಿಕೊಳ್ಳುತ್ತಾನೆ. ಆಗ ಡಾಕ್ಟರ್‌ ಹೇಳುತ್ತಾರೆ, ಈಗ ಉಳಿದಿರುವುದು ಒಂದೇ ದಾರಿ, ಅಣ್ಣ ವಿಶ್ವಾಸ್‌(ಚಂದ್ರ ಮಯೂರ್‌) ನ ಕೈಕಾಲುಗಳನ್ನು ತಮ್ಮನಿಗೆ ಜೋಡಿಸುವುದು. ಇದಕ್ಕೆ ಅತ್ತಿಗೆ (ರೂಪಾ)ಯನ್ನು ಒಪ್ಪಿಸಲು ನಾದಿನಿ ಮಧು(ಅಮೃತಾ) ಹೈರಾಣ. ನಂತರ ಮತ್ತೆ ಮಾಮೂಲು. ಆದರೆ ಮೈದುನನಲ್ಲಿ, ಅರ್ಥಾತ್‌ ಉಲ್ಲಾಸನಲ್ಲಿ ಅತ್ತಿಗೆ ಪ್ರೀತಿಯಿಂದ ಮಾತಾಡಿದಷ್ಟೂ ನಾದಿನಿ ಕಾಳಸರ್ಪಿಣಿ. ಕೊನೆಗೆ ನಾದಿನಿಯಿಂದ ಸೀತೆ, ಸಾವಿತ್ರಿ ಆಗಲು ಎಲ್ಲರಿಗೂ ಸಾಧ್ಯವಿಲ್ಲ. ಅವರಲ್ಲಿರುವ ನೈತಿಕತೆಯ ಕಿಡಿ ಇವರಲ್ಲೂ ಇರಬೇಕು ಎಂಬ ವ್ಯಾಖ್ಯೆ ಹಾಗೂ ಅತ್ತಿಗೆ ಮೇಲೆ ಶೀಲ ಶಂಕೆ.

ಅಷ್ಟೇ ಕತೆ ಎಂದುಕೊಂಡರೆ ನಿಮ್ಮದು ತಪ್ಪು ಕಲ್ಪನೆ. ಹಾಗಾಗಿದ್ದರೆ ಒಂದು ಗಂಟೆಗೇ ಸಿನಿಮಾ ಮಂಗಳ ಪದ್ಯ ಹಾಡಬೇಕಿತ್ತು. ಆದರಷ್ಟೇ ಸಾಲದೆಂದು ಮಧ್ಯಂತರ ಬರುವಾಗ ನಾಯಕನಿಗೆ ಮತ್ತೊಂದು ತೀವ್ರ ಅಪಘಾತ. ಆಗ ಅವನು ಕಳಕೊಳ್ಳುವುದು ಎರಡು ಅಮೂಲ್ಯ ಅಂಗಗಳು- ಹೃದಯ ಮತ್ತು ಕಣ್ಣು. ಅದನ್ನು ದೆಹಲಿಯಲ್ಲಿ ಆಗ ತಾನೇ ಸತ್ತ ವ್ಯಕ್ತಿಯ ದೇಹದಿಂದ ಕಿತ್ತು ನಾಯಕನಲ್ಲಿ ಕಸಿ ಮಾಡಲಾಗುತ್ತದೆ. ಇದರಿಂದ ಬುದ್ಧಿ ಕಲಿತ ಅತ್ತಿಗೆ-ನಾದಿನಿಯರು ಗುಸುಗುಸು, ಬುಸುಬುಸು ಬಿಟ್ಟು ಅನ್ಯೋನ್ಯರಾಗುತ್ತಾರೆ. ಆಗ ನೋಡಿ ಬರುತ್ತಾಳೆ, ರುಚಿತಾ ಪ್ರಸಾದ್‌ ಎಂಬ ಅವಳು. ಆಕೆ ಬೇರೆ ಯಾರೂ ಅಲ್ಲ. ಕಣ್ಣು, ಹೃದಯ ಕೊಟ್ಟ ಪುಣ್ಯಾತ್ಮನ ಹೆಂಡತಿ. ಗಂಡನ ಚಂದದ ಕಣ್ಣು ಹೊಂದಿರುವ ನಾಯಕ ತನಗೇ ದಕ್ಕಬೇಕು ಎಂಬುದವಳ ಅಹವಾಲು. ಅಂತ್ಯಕ್ಕೆ ಪತಿ ಎಂಬ ಸ್ವತ್ತು ಪತ್ನಿಗೋ, ಅವಳಿಗೋ? ನೀವೇ ನೋಡಿ ಧನ್ಯರಾಗಿ!

ಅಂದ ಹಾಗೆ ಇದು ಈಗ ಬರುತ್ತಿರುವ ಧಾರಾವಾಹಿಗಳಿಗೆ ಲಾಯಕ್ಕಾದ ಲಾಜಿಕ್ಕು. ಆದರೆ ಪತಿ, ಪತ್ನಿ ನಡುವೆ ಅವಳು ಬರುವುದು ಎಲ್ಲಾ ಕಡೆ ಕಾಮನ್‌ ಅಲ್ಲವೇ? ಜನ ಈಗ ಚೇಂಜ್‌ ಕೇಳುತ್ತಾರೆಂದು ಕತೆಗಾರರು ಇಲ್ಲಿ ಅಂಗೋಪಾಂಗವನ್ನೇ ಚೇಂಜ್‌ ಮಾಡಿದ್ದಾರೆ. ಚಿತ್ರದ್ದು ಓಟ ಅಲ್ಲ, ಆಮೆ ನಡಿಗೆ. ಪಾತ್ರಗಳದ್ದು ಮುಖಾರವಿಂದ ಅಲ್ಲ, ಹ್ಯಾಪು ಮೋರೆ. ನಟರ ಮುಖದಲ್ಲಿರುವ ಭಾವನೆಗಳಿಗೂ ಚಿತ್ರದಲ್ಲಿ ನಡೆಯುವ ಘಟನೆಗಳಿಗೂ ಸಂಬಂಧ ಕಲ್ಪಿಸುವುದು ಭ್ರಮನಿರಸನದ ವಿಷಯ. ಮಹಾನಗರ ಪಾಲಿಕೆಯಲ್ಲಿ ಕೆಲಸಕ್ಕಿದ್ದು, ಲಂಚ ತಿಂದು, ಲೋಕಾಯುಕ್ತರ ಕೈಲಿ ಸಿಕ್ಕಿ ಬೀಳಲು ಈ ಚಿತ್ರದಲ್ಲಿ ನಟಿಸಲು ಬಂದಿರುವ ರಮೇಶ್‌ ಭಟ್‌ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ. ಆದರೆ ರಮೇಶ್‌ ಭಟ್‌ ಅವರನ್ನು ಚಿತ್ರದ ಒಂದು ಪಾತ್ರವೆಂದು ನೋಡುಗರನ್ನು ಕನ್ವಿನ್ಸ್‌ ಮಾಡುವ ಶಂಕರ ಭಟ್‌ ಅವರ ಶ್ರಮವನ್ನು ಇಲ್ಲಿ ಸರ್ವಥಾ ಸ್ತುತಿಸಬೇಕು. ಲೆಕ್ಕಕ್ಕೆ ಸಿಗಲು ಚಿತ್ರದಲ್ಲಿ ಐದು ಹಾಡುಗಳಿದ್ದರೂ ಒಂದೆರಡು ಹಾಡುಗಳನ್ನು ಸುಶ್ರಾವ್ಯವಾಗಿ ಕೊಟ್ಟಿರುವ ಶ್ಯಾಮಸುಂದರ್‌ಗೆ ಅಭಿನಂದನೆ. ರೂಪಾ ಎಂಬ ಸುಂದರ ಮುಖ ಕನ್ನಡ ಚಿತ್ರರಂಗಕ್ಕೆ ಹೊಸ ಸೇರ್ಪಡೆ.

ಚಿತ್ರದ ಸಂಭಾಷಣೆ ಕೆಲವು ಕಡೆ ಚೆನ್ನಾಗಿದೆ. ಈಗ ತಾನೇ ಈ ಚಿತ್ರದ ಮೂಲಕ ನಿರ್ಮಾಪಕರೂ ನಿರ್ದೇಶಕರೂ ಆಗಿ ಎಂಟ್ರಿ ಪಡೆದಿರುವ ಎನ್‌. ಶಿವಕುಮಾರ್‌ ಒಳ್ಳೆ ಚಿತ್ರ ತೆಗೆಯಲು ಯತ್ನಿಸಲಿ. ಹಾಗೆ ತೆಗೆಯುವ ಚಿತ್ರದಲ್ಲಿ ಸದಭಿರುಚಿ ಇರಲಿ. ಏಕೆಂದರೆ ಈ ಚಿತ್ರದ ಕೊನೆಯಲ್ಲಿ ಒಂದು ಸಂಭಾಷಣೆ ಇದೆ:

ಇನ್ನೊಮ್ಮೆ ಆಕ್ಸಿಡೆಂಟ್‌ ಆದ್ರೆ ಯಾವ ಅಂಗ ಜೋಡಿಸಬಹುದು?

ನಾವು ಹೇಳಬಾರದು ನೀವು ಕೇಳಬಾರದು!

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X