ಗಂಡುಗಲಿ ಕುಮಾರ ಬೆಳ್ಳಿತೆರೆಯಲ್ಲಿ ಅಮರ

By Staff


ಬಹಳ ದಿನಗಳ ನಂತರ ಕನ್ನಡದಲ್ಲಿ ಐತಿಹಾಸಿಕ ಚಿತ್ರವೊಂದು ಬಂದಿದೆ. ನಿರೀಕ್ಷೆಗೆ ತಕ್ಕಂತೆಯೇ ಚಿತ್ರ ಮೂಡಿಬಂದಿದೆ. ಜನಪ್ರಿಯತೆಯಲ್ಲಿ ಈ ಚಿತ್ರವನ್ನು ಮತ್ತಷ್ಟು ಐತಿಹಾಸಿಕ ಮಾಡುವ ಜವಾಬ್ದಾರಿ ಕನ್ನಡಿಗರ ಮೇಲಿದೆ.

  • ನಾಡಿಗೇರ್‌ ಚೇತನ್‌
ಇಂಥ ಚಿತ್ರ ಇಂದು ಅಗತ್ಯವಿತ್ತು. ರಾಜ್‌ ನಿಧನದ ನಂತರ ಮತ್ತೆ ಐತಿಹಾಸಿಕ ಕತೆಗಳನ್ನು ನೋಡುವ ಭಾಗ್ಯ ಇಲ್ಲವೇನೋ ಎನ್ನುವ ಸಮಯದಲ್ಲಿ ಎಲ್ಲರ ನಿರೀಕ್ಷೆ ಮತ್ತು ಕನಸನ್ನು ನಿಜ ಮಾಡಿದೆ ‘ಗಂಡುಗಲಿ ಕುಮಾರರಾಮ’.

ಡಾ.ರಾಜ್‌ ನಿಧನರಾಗುವ ಕೆಲವು ನಿಮಿಷಗಳ ಮುಂಚೆ ಹಿರಿಯ ನಟ ಶ್ರೀನಿವಾಸಮೂರ್ತಿ ಹಂಪಿಯಲ್ಲಿ ಹೇಳಿದ್ದರು. ‘ಡಾ.ರಾಜ್‌ ನಂತರ ಅವರ ಸ್ಥಾನ ತುಂಬುವ ಏಕೈಕ ನಟ ಶಿವಣ್ಣ...’! ಆ ಮಾತು ನಿಜವಾಗಿದೆ. ಈಗ ವಿಷಯಕ್ಕೆ ಬರೋಣ. ಮೊದಲು ಕತೆ ಕೇಳಿ ಬಿಡಿ.

ಕಂಪಿಲ ಮಹಾರಾಜನ ಮಗ ಕುಮಾರರಾಮ. ಹುಟ್ಟು ಪರಾಕ್ರಮಿ. ತನ್ನ ರಾಜ್ಯದ ಮೇಲೆ ಆಗುವ ದಾಳಿಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತಿರುತ್ತಾನೆ. ಜೀವನದಲ್ಲಿ ಸೋಲು ಎಂದರೇನೆಂದೇ ಗೊತ್ತಿರದ ಆತ ಮೊದಲ ಬಾರಿಗೆ ಬುಡಕಟ್ಟು ಜನಾಂಗದ ರತ್ನಳ ಚೆಲುವಿಗೆ ಸೋಲುತ್ತಾನೆ. ಸೋತವನು ಪ್ರೇಮಕ್ಕೆ ಶರಣಾಗುತ್ತಾನೆ. ಇನ್ನೇನು ಎನ್ನುವಷ್ಟರಲ್ಲೇ ಕಂಪಿಲ ಮಹಾರಾಜ ಅದೇ ರತ್ನಳ ಚೆಲುವಿಗೆ ಮನಸೋತು ಮದುವೆಯಾಗುತ್ತಾನೆ.

ಹೆಂಡತಿಯಾಗಬೇಕಾದವಳು ರಾತ್ರೋರಾತ್ರಿ ತನಗೆ ಚಿಕ್ಕತಾಯಿಯಾಗಿದ್ದಾಳೆ ಎಂದು ಗೊತ್ತಾದಾಗ ಕುಮಾರರಾಮ ಆಘಾತ ಗೊಳ್ಳುತ್ತಾನೆ. ಆದರೆ, ಅವನು ಕುಮಾರರಾಮ. ಪರನಾರಿ ಸಹೋದರ ಎಂಬುದೇ ಅವನ ಅಡ್ಡನಾಮ. ಹಾಗಾಗಿ ಪ್ರೇಯಸಿಯನ್ನು ಚಿಕ್ಕತಾಯಿಯನ್ನಾಗಿಯೇ ನೋಡುತ್ತಾನೆ. ರತ್ನಳಿಗೆ ಇದನ್ನು ಸಹಿಸಲಾಗುವುದಿಲ್ಲ. ಅವನ ಮೇಲೆ ಒತ್ತಡ ತರುತ್ತಾಳೆ. ಅಷ್ಟರಲ್ಲಿ ಇಡೀ ಭಾರತವನ್ನು ಆವರಿಸಿಕೊಳ್ಳುವ ತುಘಲಕ್‌, ಕುಮಾರರಾಮನ ರಾಜ್ಯವನ್ನು ವಶಪಡಿಸಿಕೊಳ್ಳಲು ಸಮರ ಸಾರುತ್ತಾನೆ. ಒಂದು ಕಡೆ ಆಂತರಿಕ ಯುದ್ಧ. ಇನ್ನೊಂದು ಕಡೆ ಬಹಿರಂಗ ಯುದ್ಧ. ಮುಂದೇನು? -ಅದನ್ನೆಲ್ಲ ಹೇಳಿ ಬಿಟ್ಟರೆ ಚಿತ್ರ ನೋಡುವಾಗ ಏನು ಮಜಾ ಇರುತ್ತದೆ ಹೇಳಿ? ಅದನ್ನು ತೆರೆಯ ಮೇಲೆ ನೋಡಿ. ನೀವು ಚಿತ್ರ ನೋಡಿ ಬಂದ ಮೇಲೆ ಈ ಚಿತ್ರದಲ್ಲಿ ಏನಿಲ್ಲ ಎಂಬ ಪ್ರಶ್ನೆ ಕಾಡುವುದಂತೂ ದಿಟ.

ಒಂದು ಕಮರ್ಷಿಯಲ್‌ ಚಿತ್ರಕ್ಕೆ ಬೇಕಾಗುವ ನಾಟಕೀಯತೆ, ರೋಚಕತೆ, ಮನರಂಜನೆ, ಕುತೂಹಲ, ನೋವು-ನಲಿವುಗಳು ಎಲ್ಲವೂ ಇಲ್ಲಿ ಹದವಾಗಿ ಬೆರೆತಿವೆ. ಇದೆಲ್ಲಕ್ಕೂ ಕಳಶವಿಟ್ಟಂತೆ ದೇಶಭಕ್ತಿಯೂ ಸೇರಿಬಿಟ್ಟಿರುವುದರಿಂದ ಚಿತ್ರ ಆರಂಭ ದಿಂದ ಅಂತ್ಯದವರೆಗೂ ನೋಡಿಸಿಕೊಂಡು ಹೋಗುತ್ತದೆ. ಹಾಗೆ ಮಾಡುವಲ್ಲಿ ನಿರ್ದೇಶಕ ಭಾರ್ಗವ ಅವರ ಶ್ರಮ ಎದ್ದುಕಾಣುತ್ತದೆ.

ಇನ್ನು ಶಿವಣ್ಣನ ಬಗ್ಗೆ ಏನು ಹೇಳುವುದು? ಒಂದೊಂದು ಮಾತು, ಒಂದೊಂದು ಹೆಜ್ಜೆ, ಒಂದೊಂದು ಭಾವವನ್ನು ಇಂಚಿಂಚಾಗಿ ದೇಹದಲ್ಲಿ ತುಂಬಿಕೊಂಡು ತೆರೆ ಮೇಲೆ ಬರುತ್ತಾರೆ. ಅದರಲ್ಲೂ ಆಕ್ರೋಶ ಹಾಗೂ ಸೆಂಟಿಮೆಂಟ್‌ ದೃಶ್ಯಗಳ ನೋಡಿಯೇ ಸವಿಯಬೇಕು. ಕಂಪಿಲ ಮಹಾರಾಜನಾಗಿ ಶ್ರೀನಿವಾಸಮೂರ್ತಿ ಎಷ್ಟು ಸೊಗಸಾಗಿ ಅಭಿನಯಿಸಿದ್ದಾ ರೆಂದರೆ ಐತಿಹಾಸಿಕ ಚಿತ್ರಗಳಲ್ಲಿ ಅವರಿದ್ದರೇ ಮಾತ್ರ ಕಳೆ ಎನ್ನುವಂತಿದೆ. ಆದರೆ ಅವರಿಗೆ ಮತ್ತಷ್ಟು ದೃಶ್ಯ, ಅವಕಾಶ ನೀಡಿದ್ದರೆ ಕತೆ ಇನ್ನಷ್ಟು ರಂಗೇರುತ್ತಿತ್ತು. ಇನ್ನುಳಿದಂತೆ ಅಸಂಖ್ಯಾತ ಪಾತ್ರಗಳಿವೆ. ಅವುಗಳಲ್ಲಿ ಎದ್ದು ಕಾಣುವವರು ರಮೇಶ್‌ ಭಟ್‌, ಅವಿನಾಶ್‌, ಸಿ.ಆರ್‌.ಸಿಂಹ, ಕಿಶೋರ್‌ ಹಾಗೂ ಸುಮಿತ್ರಾ. ಸೀತಾ ಅಭಿನಯ ಕೂಡ ಪರವಾಗಿಲ್ಲ.

ಮೂವರು ನಾಯಕಿಯರ ಅಭಿನಯದಲ್ಲಿ ಅನಿತಾ ಬೇಸರಪಡಿಸುವುದಿಲ್ಲ, ಲಯ ಖುಷಿ ಕೊಡುವುದಿಲ್ಲ, ರಂಭಾ ಆಟಕ್ಕುಂಟು ಲೆಕ್ಕಕ್ಕಿಲ್ಲ. ಐತಿಹಾಸಿಕ ಚಿತ್ರಗಳೆಂದರೆ ಅದ್ಧೂರಿಯಾಗಿರಬೇಕು ಎಂಬ ಅಲಿಖಿತ ನಿಯಮ ಇಲ್ಲೂ ಮುಂದುವರಿದಿದೆ. ಆರಂಭದಿಂದ ಅಂತ್ಯದವರೆಗೂ ಎಲ್ಲವೂ ಫಳಫಳ.

ಛಾಯಾಗ್ರಾಹಕ ಸುಂದರನಾಥ ಸುವರ್ಣ, ಉಡುಗೆ ತೊಡುಗೆಗಳ ಜವಾಬ್ದಾರಿ ಹೊತ್ತಿರುವ ಮೈಸೂರು ರಾಮಚಂದ್ರ ಹಾಗೂ ಕಲಾ ನಿರ್ದೇಶಕ ದಿನೇಶ್‌ ಮಂಗ್ಳೂರ್‌ ಅವರ ಶ್ರಮ ಎದ್ದು ಕಾಣುತ್ತದೆ. ಗುರುಕಿರಣ್‌ ಮೊದಲ ಬಾರಿಗೆ ಐತಿಹಾಸಿಕ ಚಿತ್ರವೊಂದಕ್ಕೆ ಹಾಕಿದ ಸಂಗೀತದ ಮಟ್ಟು ಮೆಲುಕು ಹಾಕುವಂತಿವೆ. ‘ಸರಸಕೆ ಬಾರೋ ...’, ‘ಗಿಣಿ ರಾಮ ...’, ‘ಈ ಜೀವ ಜೀವ ನಿನಗಾಗಿ ...’ ಹಾಡುಗಳು ಇಷ್ಟವಾಗುತ್ತದೆ.

ಒಟ್ಟಾರೆ ಬಹಳ ದಿನಗಳ ನಂತರ ಕನ್ನಡದಲ್ಲಿ ಐತಿಹಾಸಿಕ ಚಿತ್ರವೊಂದು ಬಂದಿದೆ. ಜನಪ್ರಿಯತೆಯಲ್ಲಿ ಅದನ್ನು ಮತ್ತಷ್ಟು ಐತಿಹಾಸಿಕ ಮಾಡುವ ಜವಾಬ್ದಾರಿ ಕನ್ನಡಿಗರ ಮೇಲಿದೆ.

Post your views

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X