»   » ಅದೇ ಬಂಧು ಅದೇ ಬಳಗ

ಅದೇ ಬಂಧು ಅದೇ ಬಳಗ

Subscribe to Filmibeat Kannada

ಇದು ಅನಾದಿಕಾಲದಿಂದಲೂ ಇದ್ದದ್ದೇ. ರಾಮಾಯಣದಲ್ಲಿ ವಾಲಿ-ಸುಗ್ರೀವ, ಮಹಾಭಾರತದಲ್ಲಿ ಕೌರವ-ಪಾಂಡವರು ಎಲ್ಲರೂ ಹುಟ್ಟುತ್ತ ಭಾಯಿ ಭಾಯಿ. ಬೆಳೆಯುತ್ತಾ ಬೈಯಿ ಬೈಯಿ . ಅಷ್ಟೇ ಏಕೆ, ಕಲಿಯುಗದ ಸೌಂಡ್ ಪಾರ್ಟಿ'ಗಳಾದ ಮುಖೇಶ್- ಅನಿಲ್ (ಧೀರೂಭಾಯಿ ಅಂಬಾನಿ), ಕುಮಾರ್- ಮಧು (ಬಂಗಾರಪ್ಪ)... ಹೀಗೆ ಎಷ್ಟೆಷ್ಟೋ ಉದಾಹರಣೆಗಳಿವೆ.

ಇದೇ ವಿಷಯ ಆಧರಿಸಿ ನಿರ್ದೇಶಕ ನಾಗಣ್ಣ ಬಂಧು ಬಳಗ' ಸಿನಿಮಾ ಮಾಡಿದ್ದಾರೆ. ಇದು ಒಂದು ಅವಿಭಕ್ತ ಕುಟುಂಬದ ಕತೆ. ಜತೆಗೆ ಅಣ್ಣ-ತಂಗಿ, ಅಪ್ಪ- ಮಗ, ತಾಯಿ-ಮಗ, ಮಲತಾಯಿ- ಮಕ್ಕಳು, ಅತ್ತಿಗೆ-ಮೈದುನ... ಮುಂತಾದ ಸೆಂಟಿಮೆಂಟ್ ಎಳೆ ಇಟ್ಟುಕೊಂಡು ಒಂದು ಫ್ಯಾಮಿಲಿ ಸ್ಟೋರಿ ಬೆಸೆದಿದ್ದಾರೆ ನಾಗಣ್ಣ. ಅವರ ಸಿನಿಮಾಗಳೇ ಹಾಗೆ. ಅದು ಕುಟುಂಬ, ಗೌರಮ್ಮ ಯಾವುದೇ ಆಗಿರಬಹುದು ಅಲ್ಲಿ ಸೆಂಟಿಮೆಂಟ್ ಈಸ್ ದ ಬೇಸ್‌ಮೆಂಟ್.

ಹೀಗಿದ್ದಾಗ ನಾಗಣ್ಣನವರ ಕಲ್ಪನೆಗೆ ಮೂರ್ತರೂಪ ನೀಡಲು ಶಿವಣ್ಣನಿಂದ ಮಾತ್ರ ಸಾಧ್ಯ. ಆದರೆ ಇಲ್ಲಿ ಶಿವಣ್ಣ ಎಂದಿನಂತೆ ಅಣ್ಣನ ಪಾತ್ರ ಮಾಡಿಲ್ಲ. ಫಾರ್ ಎ ಚೇಂಜ್ ತಮ್ಮನಾಗಿ ಬದಲಾಗಿದ್ದಾರೆ. ಸಂಬಂಧಗಳ ಸೌರಭ... ಸುಬ್ಬು, ಆನಂದರಾಯರ ಎರಡನೇ ಹೆಂಡತಿ ಮಗ. ಜತೆಗೊಬ್ಬಳು ತಂಗಿ. ರಾಯರು ಸಾಯುವ ಮುನ್ನ ಆಸ್ತಿಯಲ್ಲಿ ಹಿರಿಯ ಹೆಂಡತಿಯ ಮೂರು ಮಕ್ಕಳಿಗೆ ಬರುವ ಸಮಪಾಲು ಸುಬ್ಬುಗೂ ಸಿಗಬೇಕು ಎಂದು ವಿಲ್ ಮಾಡಿಟ್ಟಿರುತ್ತಾರೆ. ಆದರೆ ಮೂವರಿಗೂ ಸುಬ್ಬು ಆಸ್ತಿ ಮೇಲೆ ಕಣ್ಣು. ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲು ಮಲತಾಯಿ ಮಕ್ಕಳು ಸುಬ್ಬು ಊರಿಗೆ ಬರುತ್ತಾರೆ. ಹೆದರಿಸಲು ಹೋಗಿ ಲಾತ ತಿನ್ನುತ್ತಾರೆ. ಸುಬ್ಬು- ಸಹಿ ಬೇಕಾ? ಹಾಗಾದರೆ ತಂಗಿ ಮದುವೆ ಮುಗಿಯುವವರೆಗೂ ಇಲ್ಲೇ ಇರಬೇಕು' ಎಂದು ಕಂಡೀಷನ್ ಹಾಕುತ್ತಾನೆ. 200 ಕೋಟಿಗಾಗಿ ಅವರು ಸುಬ್ಬುವನ್ನು ತಮ್ಮ... ತಮ್ಮ...' ಎಂದು ಕರೆಯುತ್ತಾರೆ. ಕೊನೆಗೆ ಸೋತು ಸುಣ್ಣವಾಗಿ ತಂಗಿ ಮದುವೆ ನಿಲ್ಲಿಸಲು ಕುತಂತ್ರ ರೂಪಿಸುತ್ತಾರೆ... ಮುಂದೇನಾಗುತ್ತದೆ?

ಶಿವಣ್ಣ ಎಂದಿನಂತೆ ಪ್ರೀತಿಯಿಂದ ಅಭಿನಯಿಸಿದ್ದಾರೆ. ಸಂಬಂಧಗಳ ಬಗ್ಗೆ ನಿರರ್ಗಳವಾಗಿ ಮಾತನಾಡುವಾಗ, ಅಣ್ಣಂದಿರ ಪ್ರೀತಿ ಸಿಗದೆ ವಿಲವಿಲ ಎನ್ನುವಾಗ, ಮಲತಾಯಿಯನ್ನು ಬೆಂಕಿ ಅನಾಹುತದಿಂದ ತಪ್ಪಿಸುವಾಗ... ಅವರು ಶಿವಣ್ಣನೋ, ಸುಬ್ಬಣ್ಣನೋ ಎಂಬ ಗೊಂದಲ ಕಾಡದಿರದು.

ಲೊಚಲೊಚನೆ ಮಾತನಾಡುವ ಮೂಲಕ ನಾಯಕಿ ಪೂನಂ ಕೌಲ್ ಇಷ್ಟ ಆಗುತ್ತಾರೆ. ಆದರೆ ಶಿವಣ್ಣ ಆಗಾಗ ಇದು ಸ್ವಲ್ಪ ಅತಿಯಾಯ್ತು' ಎಂದು ಹೇಳೋದು ಸರಿ ಇದೆ ಎಂದೆನಿಸುತ್ತದೆ. ತಂಗಿಯಾಗಿ ತೇಜಸ್ವಿನಿ ರಾಧಿಕಾಗೇ ಸಡ್ಡು ಹೊಡೆದಿದ್ದಾರೆ. ದೊಡ್ಡಣ್ಣ ಬಹುದಿನಗಳ ನಂತರ ಬಹುದೊಡ್ಡ ಪಾತ್ರ ನಿರ್ವಹಿಸಿದ್ದಾರೆ/ಬಲು ಸೊಗಸಾಗಿ ಮಾಡಿದ್ದಾರೆ ಕೂಡ. ಶಶಿಕುಮಾರ್, ಧರ್ಮ, ಹರೀಶ್ ರಾಜ್, ಸುಮೇಶ್, ಹೇಮಾ ಚೌಧರಿ... ಪಾತ್ರಗಳು ಬಂಧು ಬಳಗ'ಕ್ಕೆ ಹೇಳಿಮಾಡಿಸಿದಂತಿವೆ.

ಹಂಸಲೇಖ ಸಂಗೀತ ನೂರಕ್ಕೆ ನೂರು ಸ್ಕೋರ್ ಗಳಿಸುತ್ತದೆ ಎಂಬ ಮಾತು ಮಾತ್ರ ಸುಳ್ಳಾಗಿದೆ. ನೆನಪಿಟ್ಟುಕೊಳ್ಳುವ ಒಂದು ಹಾಡನ್ನೂ ಅವರು ಕೊಟ್ಟಿಲ್ಲ. ಛಾಯಾಗ್ರಹಣದಲ್ಲಿ ಹೇಳಿಕೊಳ್ಳುವ ಲವಲವಿಕೆ ಇಲ್ಲ. ಆದರೆ ಸಂಭಾಷಣೆ ಬರೆದ ಕೇಶವಾದಿತ್ಯ ಮಾತ್ರ ಅನೇಕ ದೃಶ್ಯಗಳಲ್ಲಿ ಮಿಂಚುತ್ತಾರೆ. ಭಾವಕ್ಕೆ ತಕ್ಕ ಅಕ್ಷರ ಜೋಡಿಸುವಲ್ಲಿ ಗೆದ್ದಿದ್ದಾರೆ. ನಿರ್ದೇಶಕ ನಾಗಣ್ಣ ಬಹಳ ಬುದ್ದಿವಂತರು ಎಂಬ ಬಗ್ಗೆ ಎರಡು ಮಾತಿಲ್ಲ. ಅವರಿಗೆ ಯಾರಿಂದ ಹೇಗೆ ಕೆಲಸ ತೆಗೆಯಬೇಕೆಂದು ಗೊತ್ತು. ಅದು ಮಕ್ಕಳುಮರಿ ಯಾರೇ ಆಗಿರಬಹುದು. ಆದರೂ ಕತೆಯ ಆಯ್ಕೆ ಬಗ್ಗೆ, ಸಿನಿಮಾ ಸನ್ನಿವೇಶಗಳ ಬಗ್ಗೆ ಒಂದು ಮಾತು ಹೇಳಲೇ ಬೇಕು. ಇಂಥ ನೂರಾರು ಸಿನಿಮಾಗಳು ಈಗಾಗಲೇ ಲೆಕ್ಕವಿಲ್ಲದಷ್ಟು ಬಂದಿವೆ. ಅಲ್ಲದೇ ಇದು 25 ವರ್ಷದ ಹಿಂದಿನ ಕತೆ. ಅಷ್ಟೇ ಅಲ್ಲ ಸೆಂಟಿಮೆಂಟ್‌ಗೆ ಹೆಚ್ಚು ಒತ್ತುಕೊಟ್ಟು ಸಿನಿಮಾ ಮಾಡುವಾಗ ಅಲ್ಲಿ ಮಾತು ಮುಖ್ಯವಾಗುವುದಿಲ್ಲ. ಇನ್ನು ಕೆಲವೆಡೆ ನಡೆದ ಸನ್ನಿವೇಶಗಳನ್ನು ಮತ್ತೆ ಮಾತಿನ ಮೂಲಕ ಹೇಳುವ ಅಗತ್ಯ ಇರಲಿಲ್ಲ.

ಇವೆಲ್ಲಕ್ಕೂ ಕತೆ, ಚಿತ್ರಕತೆ ಬರೆದ ಜನಾರ್ದನ್ ಮಹರ್ಷಿ ಕಾರಣವೋ ಏನೋ ಗೊತ್ತಿಲ್ಲ. ಕತೆಯಲ್ಲಿ ಹೊಸತನವಂತೂ ಖಂಡಿತ ಇಲ್ಲ. ಹಾಗೂ ಸವತಿ ಮಗನ ಮನೆಗೆ ಬೆಂಕಿಯಿಟ್ಟು ಸೇಡು ತೀರಿಸಿಕೊಳ್ಳಲು ಮಲತಾಯಿ ಮುಂದಾಗುತ್ತಾಳೆ ಎನ್ನುವುದು ಸಮಾಜಕ್ಕೆ ಕೊಡುವ ಯೋಗ್ಯ ಸಂದೇಶವಂತೂ ಅಲ್ಲ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada