ವಿಮರ್ಶೆ: ಬಿಂದಾಸ್ ಹುಡುಗಿ ಅಕ್ಷರಶಃ ಬಿಂದಾಸ್
ಈ ಹುಡುಗಿ ಏನು ಮಾಡ್ತಾಳೆ ಬಿಡುಅಂದವರಿಗೆ ಶಾಕ್ ಕೊಟ್ಟಿದ್ದಾಳೆ ಬಿಂದಾಸ್ ಹುಡುಗಿ. ತನ್ನದೇ ಬ್ಯಾನರ್ರು, ತಾನೇ ಹೀರೋಯಿನ್, ತಾನೇ ನಿರ್ದೇಶಕಿ, ತಾನೇ ಕತೆಗಾರ್ತಿ...ಕೊನೆಗೆ ತಾನೇ ಪ್ರೇಕ್ಷಕಿ ಎಂದು ಗೇಲಿ ಮಾಡಿದವರಿಗೆ ಚಿಕ್ಕದೊಂದು ಅಚ್ಚರಿ ಕೊಟ್ಟಿದ್ದಾಳೆ ಪ್ರಿಯಾ ಹಾಸನ್.
ಒಂಥರಾ ಅಪ್‌ಡೇಟ್ ಮಾಲಾಶ್ರೀ ಗೆಟಪ್‌ನಲ್ಲಿ ಕಾಣಿಸಿಕೊಳ್ಳುವ ಪ್ರಿಯಾ ಇಡೀ ಚಿತ್ರ ತಂಡದಿಂದನೀಟಾಗಿ ಕೆಲಸ ತೆಗೆಸಿದ್ದಾಳೆ. ಸ್ವತಃ ತಾನೇ ಸ್ಟಂಟ್ ದೃಶ್ಯಗಳಲ್ಲಿ ಪಾಲ್ಗೊಂಡು ನಿಜಕ್ಕೂ ಹೀರೊ ಆಗಿದ್ದಾಳೆ. ಅದು ಇಡೀ ಚಿತ್ರದ ಪ್ಲಸ್ ಪಾಯಿಂಟ್. ಒಂದುಮಸಾಲಾ ಚಿತ್ರದಲ್ಲಿ ಏನೇನು ಇರಬೇಕೊ ಎಲ್ಲವೂ ಇದರಲ್ಲಿ ಇದೆ.
ಫೈಟು, ಕಾಮಿಡಿ, ಸೆಂಟಿಮೆಂಟು...ಕೊನೆಗೊಂದು ಸಾಮಾಜಿಕ ಸಂದೇಶ. ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ ಎನ್ನುವಂತೆ ಇದ್ದರೂ ಎಲ್ಲ ಮುಗಿದ ಮೇಲೆ ಇಷ್ಟೇನಾ ಎಂದು ಅನ್ನಿಸದೆ ಇರುವುದಿಲ್ಲ. ಇದಕ್ಕಿಂತ ಹೆಚ್ಚಿಗೇನು ಬೇಕು ಎಂದು ಪ್ರಿಯಾ ಕೇಳಿದರೆ ಉತ್ತರವನ್ನು ಆಕೆಯೇ ಹುಡುಕಿಕೊಳ್ಳಲಿ. ಯಾಕೆಂದರೆ ಅದು ಬೆಳೆಯುವುದಕ್ಕೆ ಸಿಕ್ಕ ಅವಕಾಶ.
ಜನ ಸಾಮಾನ್ಯರ ಬದುಕನ್ನು ರಕ್ಷಿಸುವ ಹೊಣೆ ಹೊತ್ತ ನಾಯಕಿ ಮತ್ತು ರಾಜಕೀಯ ರಂಗಿನಾಟ. ಇದರ ನಡುವೆ ಕತೆ ಸುತ್ತುತ್ತದೆ. ಶರಣ್ ಮತ್ತು ಮಿತ್ರ ಸ್ಕೋರ್ ಮಾಡಿದ್ದಾರೆ. ಇದಕ್ಕಿಂತ ಹೆಚ್ಚಿಗೆ ಹೇಳುವುದರಲ್ಲಿ ಅರ್ಥ ಇಲ್ಲ. ಉಳಿದದ್ದನ್ನು ನೋಡುವ ಆಸೆ, ಆಕಾಂಕ್ಷೆ ಇದ್ದರೆ ಹೋಗಿ ಬನ್ನಿ...(ಸ್ನೇಹಸೇತು: ವಿಜಯ ಕರ್ನಾಟಕ)


Click it and Unblock the Notifications











