ವಿಷ್ಣುವರ್ಧನ್ ಚಿತ್ರ ಚೆನ್ನಾಗಿದೆ, ನೀವೂ ನೋಡಬಹುದು
ದ್ವಾರಕೀಶ್ ಬಹುನಿರೀಕ್ಷೆಯ ಚಿತ್ರ 'ವಿಷ್ಣುವರ್ಧನ' ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಇದು ಸಂಪೂರ್ಣವಾಗಿ, ಸಾಹಸ ಸಿಂಹ, ನಟ ಡಾ. ವಿಷ್ಣುವರ್ಧನರ ಆಪ್ತಮಿತ್ರ 'ದ್ವಾರಕೀಶ್' ಶೈಲಿಯ ಚಿತ್ರ. ಈ ಚಿತ್ರದಲ್ಲಿ ಎಲ್ಲೂ ವಿಷ್ಣುವರ್ಧನರಿಗೆ ಅವಹೇಳನಕಾರಿ ಸಂಭಾಷಣೆ ಇಲ್ಲ. ವಿಷ್ಣುವರ್ಧನರ ಗುಣಗಾನವೂ ಇಲ್ಲ. ಆದರೆ ಆಗಾಗ ಡಾ. ವಿಷ್ಣು ಅವರ ಸ್ಮರಣೆ ಇದೆ. ಅದಕ್ಕಿಂತ ಹೆಚ್ಚಾಗಿ ಕೌಟುಂಬಿಕ, ಮನೋರಂಜನಾತ್ಮಕ ಹಾಗೂ ಕಮರ್ಷಿಯಲ್ ಚಿತ್ರದಲ್ಲಿ ಏನೇನಿರಬೇಕೋ ಎಲ್ಲವೂ ಇದೆ.
ಪ್ರಸ್ತುತ, ಊಟಕ್ಕಿಂತ ಅನಿವಾರ್ಯ ಎನಿಸಿರುವ ಮೊಬೈಲ್ ಮಾತುಕಥೆಯಿಂದ ಪ್ರಾರಂಭವಾಗುತ್ತದೆ 'ವಿಷ್ಣುವರ್ಧನ' ಚಿತ್ರ. ಕಥೆಯಲ್ಲಿ ಮೊಬೈಲ್ ಪ್ರಮುಖ ಪಾತ್ರ ವಹಿಸಿರುವುದೂ ಹೌದು. ಡಾನ್ ಆದಿಶೇಷನ ಮೊಬೈಲ್ ಕಳೆದು ಹೋಗುವ ಮೂಲಕ ಬಿಚ್ಚಿಕೊಳ್ಳುವ ಕಥೆ, ಅದು ನಾಯಕ 'ವಿಷ್ಣುವರ್ಧನ' ನ ಕೈಗೆ ಸಿಕ್ಕು ಮುಂದುವರಿಯುತ್ತದೆ.
ಲಾಂಡ್ರಿಯವನ ಮಗನಾಗಿರುವ ನಾಯಕನಿಗೆ ಬೆಟ್ಟದಷ್ಟು ಕನಸು. ಆದರೆ ಅದನ್ನು ನನಸು ಮಾಡಿಕೊಳ್ಳುವ ಯಾವ ದಾರಿಯೂ ಇರದಿರುವ ವೇಳೆಯಲ್ಲಿ ಈ ಮೊಬೈಲ್ ಅವನ ಕೈಗೆ ಬರುತ್ತದೆ. ನಾಯಕ ವಿಷ್ಣು ಜೊತೆ ಫೆವಿಕೋಲ್ ನಂತೆ ಇರುವ ಜೀವದ ಗೆಳೆಯ, ಶಾಸ್ತ್ರಿ ಎಂಬ ಜ್ಯೋತಿಷಿ ಅವನಿಗೆ ಬದುಕುವ ದಾರಿಯನ್ನು ಭವಿಷ್ಯದಂತೆ ಆಗಾಗ ಹೇಳುತ್ತಿರುತ್ತಾನೆ. ಆದರೆ ಅದು ಮೂಢನಂಬಿಕೆಯ ಪರಿಧಿಗೆ ಹೋಗುವುದಿಲ್ಲ.
ಡಾನ್ ಗೆ ಹೋಗಬೇಕಾಗಿರುವ ದುಡ್ಡೆಲ್ಲಾ ನಾಯಕನ ಕೈ ತಲುಪುತ್ತದೆ. ಆದರೆ ನಾಯಕ ವಿಷ್ಣುವನ್ನು ಹಿಡಿಯಲು ಡಾನ್ ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಗುತ್ತದೆ. ಕೊನೆಯಲ್ಲಿ ನಾಯಕನನ್ನು ಹಿಡಿಯಲು ಡಾನ್ ಮಾಡಿದ ಪ್ರಯತ್ನದಲ್ಲಿ ಡಾನ್ ಹಾಗೂ ಅವನ ಸ್ನೇಹಿತ ಎಸಿಪಿ ಇಬ್ಬರೂ ಹೇಗೆ ಬಲಿಯಾಗುತ್ತಾರೆ ಎಂಬುದು ಕಥೆ.
ಕಥೆಯ ನಿರೂಪಣೆ ಚೆನ್ನಾಗಿದೆ. ನಿರ್ದೇಶಕ ಪಿ. ಕುಮಾರ್, ಸಿನಿಮಾವನ್ನು ಟೋಟಲ್ ಪ್ಯಾಕೇಜ್ ಆಗಿ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ ಎಲ್ಲವೂ ಪ್ರೇಕ್ಷಕರನ್ನು ಚೆನ್ನಾಗಿ ರೀಚ್ ಆಗುವಂತಿದೆ. ಅನಾವಶ್ಯಕ ಪಾತ್ರಗಳನ್ನು ಸೃಷ್ಟಿಸಿ ಕಥೆಯನ್ನು ಗೊಂದಲದ ಗೂಡಾಗಿ ಮಾಡದೇ ಎಷ್ಟು ಬೇಕೋ ಅಷ್ಟು ಪಾತ್ರಗಳ ಮೂಲಕ ಸಿನಿಮಾವನ್ನು ಬೋರಾಗದಂತೆ ಕಟ್ಟಿಕೊಡುವಲ್ಲಿ ನಿರ್ದೆಶಕರ ಶ್ರಮ ಹಾಗೂ ಟ್ಯಾಲೆಂಟ್ ಎದ್ದು ಕಾಣುತ್ತದೆ.
ಪಕ್ಕಾ ದ್ವಾರಕೀಶ್ ಶೈಲಿಯ ಈ ಚಿತ್ರದಲ್ಲಿ ನಟ ವಿಷ್ಣುವರ್ಧನ್ ರನ್ನು ಮೊದಲ 20 ನಿಮಿಷ ಬಿಟ್ಟು ಸುದೀಪ್ ಪಾತ್ರದ ಮೂಲಕ ಎಲ್ಲಿಯೂ ಅವರ ಇಮೇಜ್ ಗೆ ತಕ್ಕಂತೆ (ಹೋಲಿಸಿ) ಬಳಸಿಕೊಂಡಿಲ್ಲ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಮೋಸವಾಗದಂತೆ ಆಗಾಗ ಸಾಹಸ ಸಿಂಹನನ್ನು ತೆರೆಯ ಮೇಲೆ ನೋಡಿ ಆನಂದಿಸಿಬಹುದು. ದ್ವಾರಕೀಶ್ ಮಾತುಗಳಲ್ಲಿ ಆಗಾಗ ವಿಷ್ಣುವರ್ಧನ್ ಇನ್ನೂ ಅವರ ಮನಸ್ಸಿನಲ್ಲಿ ಗಟ್ಟಿಯಾಗಿರುವುದನ್ನು ಸ್ಪಷ್ಟವಾಗಿಯೇ ಗುರುತಿಸಬಹುದು. ಚಿತ್ರದ ಟೈಟಲ್ ಕಾರ್ಡಿನಲ್ಲೇ ಭಾರತಿ ವಿಷ್ಣುವರ್ಧನ್ ರಿಗೆ 'ಕೃತಜ್ಞತೆ' ಕೂಡ ತಿಳಿಸಲಾಗಿದೆ.
ಇನ್ನು ಪಾತ್ರಪೋಷಣೆ ವಿಷಯಕ್ಕೆ ಬಂದರೆ, ಸುದೀಪ್ ಅಭಿನಯ ಚಿತ್ರದ ಹೈಲೈಟ್. ವಿಷ್ಣುವರ್ಧನ್ ಹೆಸರಿನ ಸಿನಿಮಾ ಆಗಿದ್ದರೂ ಎಲ್ಲಿಯೂ ಅವರ ಅಭಿನಯವನ್ನು ಅನುಕರಿಸಿಲ್ಲ. ಅಷ್ಟೇ ಅಲ್ಲ ಸ್ವಂತ ಇಮೇಜ್ ಕೂಡ ಪಕ್ಕಕ್ಕಿಟ್ಟು ಮನೋಜ್ಞ ಅಭಿನಯ ನೀಡಿದ್ದಾರೆ. ಚಿತ್ರದಲ್ಲಿ ನಾಯಕಿಯ ತಂದೆಯಾಗಿ ಕಾಣಿಸಿಕೊಂಡಿರುವ ಚಿತ್ರದ ನಿರ್ಮಾಪಕರೂ ಆಗಿರುವ ದ್ವಾರಕೀಶ್, ತಮ್ಮ ಎಂದಿನ ಶೈಲಿಯ ಸಂಭಾಷಣೆ ಹಾಗೂ ಅಭಿನಯದಿಂದ ಗಮನಸೆಳೆಯುತ್ತಾರೆ.
ನಾಯಕಿಯರಾಗಿ ಅಭಿನಯಿಸಿರುವ ಜಾಕಿ ಖ್ಯಾತಿಯ ಭಾವನಾ ಹಾಗೂ ಪ್ರಿಯಾಮಣಿಗೆ ಅವರ ಪ್ರತಿಭೆಗೆ ತಕ್ಕಂತ ಪಾತ್ರವಿಲ್ಲ. ಆದರೂ ಇರುವ ಪಾತ್ರಕ್ಕೆ ಇಬ್ಬರೂ ಲವಲವಿಕೆ ಹಾಗೂ ಅಭಿನಯದ ಮೂಲಕ ಜೀವ ತುಂಬಿದ್ದಾರೆ. ನಾಯಕ ಸುದೀಪ್ ಸ್ನೇಹಿತನಾಗಿ ಅರುಣ್ ಸಾಗರ್ ಅಭಿನಯ ಸಖತ್ತಾಗಿದೆ. ಡಾನ್ ಪಾತ್ರದಲ್ಲಿ 'ಸೋನು ಸೂದು' ಸೂಪರ್. ಇನ್ನುಳಿದ ಪೋಷಕ ಪಾತ್ರಗಳೆಲ್ಲವೂ ಪಾತ್ರಕ್ಕೆ ಸರಿಯಾದ ಪೋಷಣೆ ಮಾಡಿದ್ದಾರೆ.
ಚಿತ್ರದ ಹಾಡುಗಳು ಮತ್ತು ಸಂಗೀತ ಎಲ್ಲೂ ಬೋರು ಹೊಡೆಸುವುದಿಲ್ಲ. ತೀರಾ ಚೆನ್ನಾಗಿದೆ ಎನ್ನಲಾಗದಿದ್ದರೂ ಚಿತ್ರಕ್ಕೆ ಪೂರಕವಾಗಿದ್ದು ಗಮನಸೆಳೆಯುತ್ತವೆ, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಚಿತ್ರಕ್ಕೆ ನೀಡಬೇಕಾದ ನ್ಯಾಯ ಸಲ್ಲಿಸಿದ್ದಾರೆ. ಸಂಕಲನ ಆಗಾಗ ಕೈಕೊಟ್ಟಿದೆ. ಅರುಣ್ ಸಾಗರ್ ಪಾತ್ರಕ್ಕೆ ಸಮಯಪ್ರಜ್ಞೆ ಇಲ್ಲದ ಸಂಕಲನ ಎದ್ದು ಕಾಣುತ್ತದೆ. ಕ್ಯಾಮರಾ ಕೆಲಸ ಹಾಗೂ ಇಡೀ ಚಿತ್ರದ ಮೇಕಿಂಗ್ ಹಾಕಿರುವ ಬಜೆಟ್ ನಲ್ಲಿ ಚೆನ್ನಾಗಿಯೇ ಮೂಡಿ ಬಂದಿದೆ. ಅಲ್ಲಲ್ಲಿ ಚಿಕ್ಕ-ಪುಟ್ಟ ಲೋಪ-ದೋಷಗಳಿದ್ದರೂ ಅದ್ಯಾವುದೂ ಒಟ್ಟಾರೆ ಚಿತ್ರದ ಯಶಸ್ಸಿಗೆ ಧಕ್ಕೆ ತರುವಂತಿಲ್ಲ. ಕನ್ನಡದ ಸೀಮಿತ ಮಾರುಕಟ್ಟೆಗೆ ಈ ಚಿತ್ರ ನಿಜವಾದ ಕಾಣಿಕೆ.
ಇನ್ನು ಶೀರ್ಷಿಕೆಯ ವಿಷಯಕ್ಕೆ ಬಂದರೆ ನಾವೆಲ್ಲರೂ ಗಮನಿಸಬೇಕಾದ ಸಂಗತಿಯೊಂದಿದೆ. ಎಲ್ಲರೂ ಅವರವರಿಗೆ ಇಷ್ಟವಾಗಿದ್ದಕ್ಕೆ ಇಷ್ಟದ ಮಿತ್ರರ, ಮಡದಿಯ, ಪ್ರೇಯಸಿಯ ಹೆಸರಿಟ್ಟುಕೊಂಡಿರುತ್ತಾರೆ. ಅಂಗಡಿಗಳಿಗೆ. ಬಾರ್ ಗಳಿಗೆ, ವಾಹನಗಳಿಗೆ, ಮಕ್ಕಳಿಗೆ, ಕೊನೆಗೆ ನಾಯಿ, ಬೆಕ್ಕುಗಳಿಗೂ ಕೂಡ. ಅದೇ ರೀತಿ ದ್ವಾರಕೀಶ್, ಅವರ ಆಪ್ತಮಿತ್ರನ ಹೆಸರನ್ನು ಅವರು ಮರಣದ ನಂತರ ಮಾಡಿರುವ ಚಿತ್ರಕ್ಕೆ ಇಟ್ಟಿದ್ದಾರೆ ಅಷ್ಟೇ. ಅದು ತಪ್ಪು ಅನ್ನುವುದಕ್ಕಿಂತ ಅದು ಅವರ ಅಗಲಿದ ಗೆಳೆಯನ ಸ್ಮರಣೆ ಅಂದುಕೊಳ್ಳಬೇಕಲ್ಲವೇ?
ಒಟ್ಟಿನಲ್ಲಿ ಪಕ್ಕಾ ದ್ವಾರಕೀಶ್ ಶೈಲಿಯ ಚಿತ್ರ 'ವಿಷ್ಣುವರ್ಧನ' ಕುಟುಂಬ ಸಮೇತ ಹೋಗಿ ನೋಡಿ ಆನಂದಿಸಬಹುದಾದ ಸಿನಿಮಾ. ವಿಷ್ಣು ಅಭಿಮಾನಿಗಳಿಗೂ ಮೋಸವಿಲ್ಲ, ಸಿನಿಮಾಪ್ರಿಯರಿಗೂ ಮನರಂಜನೆಯ ಚಿತ್ರವೆಂದು ಘಂಟಾಘೋಷವಾಗಿ ಹೇಳಬಹುದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











