twitter
    For Quick Alerts
    ALLOW NOTIFICATIONS  
    For Daily Alerts

    ಬೆಳ್ಳಿತೆರೆಯ ಮೇಲೆ ಮತ್ತೊಂದು ಆತ್ಮಚರಿತ್ರೆ

    By Staff
    |

    ಇತ್ತೀಚಿನ ದಿನಗಳಲ್ಲಿ ಬೆಳ್ಳಿತೆರೆಯ ಮೇಲೆ ಬರೀ ರೌಡಿಗಳ, ಪರೋಡಿಗಳ ಹಾಗೂ ಕಳ್ಳಕಾಕರ ಆತ್ಮಚರಿತ್ರೆಗಳನ್ನೇ ನೋಡಿ ಬೇಸತ್ತಿದ್ದ ಕನ್ನಡ ಪ್ರೇಕ್ಷಕರಿಗೆ ಈ ವಾರ ಮತ್ತೊಂದು ಆತ್ಮಚರಿತ್ರೆ ಸಿದ್ಧವಿದೆ. ಆದರೆ, ಈ ಚರಿತ್ರೆ ಯಾವುದೋ ರೌಡಿಯ ಆತ್ಮದ್ದಲ್ಲ! ಬದಲಿಗೆ ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ರದು.

    ಐತಿಹಾಸಿಕ ಪುರುಷರ ಬಗ್ಗೆ ಚಿತ್ರ ಮಾಡಿದಾಗಲೆಲ್ಲಾ ವಿವಾದಗಳೇಳುವುದು ಮಾಮೂಲಿ. ಈ ವರ್ಷ ತೆರೆಕಂಡ ಹಿಂದಿ ಚಿತ್ರಗಳಾದ ‘ಮಂಗಲ್‌ ಪಾಂಡೆ ದಿ ರೈಸಿಂಗ್‌’,‘ ಸುಭಾಷ್‌ ಚಂದ್ರ ಬೋಸ್‌ ದಿ ಫರ್ಗಾಟನ್‌ ಹೀರೋ’ ಚಿತ್ರಗಳಾಗಲೀ, ಅದಕ್ಕೂ ಹಿಂದೆ ತೆರೆಕಂಡ ಭಗತ್‌ಸಿಂಗ್‌ ಕುರಿತು ಚಿತ್ರಗಳಾಗಲೀ ಈ ವಿವಾದಗಳಿಂದ ಪಾರಾಗಲು ಸಾಧ್ಯವಾಗಲಿಲ್ಲ. ಆದರೆ, ಡಾ. ಬಿ.ಆರ್‌.ಅಂಬೇಡ್ಕರ್‌ ಚಿತ್ರ ಮಾತ್ರ ವಿವಾದಗಳಿಂದ ದೂರವಾಗಿದೆ. ಅದಕ್ಕೆ ಕಾರಣ ಸರಳ ಕಥಾ ಹಂದರ. ನಿರ್ದೇಶಕ ಶರಣ್‌ ಕುಮಾರ್‌ ಕಬ್ಬೂರು ಚಿತ್ರ ಎಲ್ಲೂ ವಿವಾದಾತ್ಮಕವಾಗದಿರುವಂತೆ ಎಚ್ಚರವಹಿಸಿ ಬಹಳ ಜಾಣ್ಮೆಯಿಂದ ಆತ್ಮ ಚರಿತ್ರೆಯನ್ನು ಮಾತ್ರ ನಿರೂಪಿಸಿದ್ದಾರೆ.

    ಚಿತ್ರ ಅಂಬೇಡ್ಕರ್‌ರ ಜನನದಿಂದ ಪ್ರಾರಂಭವಾಗುತ್ತದೆ. ಅವರ ಮರಣದಿಂದ ಮುಕ್ತಾಯವಾಗುತ್ತದೆ. ಮಧ್ಯೆ ಮಧ್ಯೆ ಅವರು ಅನುಭವಿಸಿದ ಕಷ್ಟ ಕಾರ್ಪಣ್ಯಗಳು, ಅವರ ಸಾಧನೆಗಳು, ಅವರ ವೈಯಕ್ತಿಕ ಜೀವನದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಇವೆಲ್ಲಾ ಈಗಾಗಲೇ ಪ್ರೆೃಮರಿ ಸ್ಕೂಲ್‌ ಪಠ್ಯಪುಸ್ತಕಗಳಲ್ಲೂ ಬಂದಿರುವುದರಿಂದ, ಓದುಗರು ನೋಡುಗರಾದರೂ ಹೆಚ್ಚಿನ ವ್ಯತ್ಯಾಸ ಕಾಣುವುದಿಲ್ಲ. ಅಲ್ಲದೆ, ಚಿತ್ರ ಬಹಳ ‘ ಸ್ಲೋ’ ಆಗಿ ಮುಂದುವರಿಯುವುದರಿಂದ ಚಿತ್ರಕತೆ ಬಹಳ ಸುಲಭವಾಗಿ ಅರ್ಥವಾಗುತ್ತದೆ.

    ಅಂಬೇಡ್ಕರ್‌ ಆಗಿ ವಿಷ್ಣುಕಾಂತ್‌ ಬಹಳ ಕಷ್ಟಪಟ್ಟು ಅಭಿನಯಿಸಿದ್ದಾರೆ. ಅವರ ಶ್ರಮ ಚಿತ್ರದುದ್ದಕ್ಕೂ ಕಾಣಸಿಗುತ್ತದೆ. ಅಭಿನಯದ ಜತೆಗೆ ಚಿತ್ರ ನಿರ್ಮಾಣದ ಜವಾಬ್ದಾರಿಯನ್ನೂ ಅವರು ಹೊತ್ತಿರುವುದರಿಂದ ದುಡ್ಡು ಹಾಗೂ ಅಭಿನಯಗಳೆರಡನ್ನೂ ಬಹಳ ಮಿತವಾಗಿ ಖರ್ಚು ಮಾಡಿದ್ದಾರೆ. ಅವರ ಪತ್ನಿ ರಮಾ ಆಗಿ ಅಭಿನಯಿಸಿರುವ ತಾರಾ ಅಭಿನಯ ಕೂಡಾ ಚೆನ್ನಾಗಿದೆ.

    ಭವ್ಯ, ದತ್ತಾತ್ರೇಯ ಬಂದು ಹಾಗೆ ಹೋಗುತ್ತಾರೆ. ಬಿರಾದರ್‌, ಗುರುರಾಜ್‌ ಹೊಸಕೋಟೆ ಮುಂತಾದವರು ಹಾಡುಗಳಿಗೆ ಮಾತ್ರ ಮೀಸಲು. ಚಿತ್ರದ ಹೈಲೈಟೆಂದರೆ ಅಭಿಮನ್‌ರ ಹಾಡುಗಳು. ಎಲ್ಲ ಹಾಡುಗಳು ಕೇಳುವಂತಿವೆ. ಆರಾಧ್ಯ ಛಾಯಾಗ್ರಹಣದಲ್ಲಿ ಯಾವುದೇ ವಿಶೇಷತೆಯಿಲ್ಲ.

    (ಸ್ನೇಹ ಸೇತು : ವಿಜಯ ಕರ್ನಾಟಕ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Thursday, March 28, 2024, 18:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X