»   » ‘ಸಿಕ್ಸರ್‌’ ಚಿತ್ರ ‘ಪ್ರಜ್ವಲಿ’ಸುತ್ತ್ತಿದೆ!

‘ಸಿಕ್ಸರ್‌’ ಚಿತ್ರ ‘ಪ್ರಜ್ವಲಿ’ಸುತ್ತ್ತಿದೆ!

Posted By:
Subscribe to Filmibeat Kannada


ತಮ್ಮ ಮೊದಲ ಹೊಡೆತದಲ್ಲೇ ನಟ ದೇವರಾಜ್‌ ಪುತ್ರ ಪ್ರಜ್ವಲ್‌ ‘ಸಿಕ್ಸರ್‌’ ಎತ್ತಿದ್ದಾರೆ. ಸ್ಪಷ್ಟ ಕನ್ನಡ, ಲೀಲಾಜಾಲ ಅಭಿನಯ, ಒಂದಿಷ್ಟೂ ಆತಂಕವಿಲ್ಲದ ಮುಖ, ತಮ್ಮದೇ ಆದ ವಿಶಿಷ್ಟ ಡೈಲಾಗ್‌ ಡೆಲಿವರಿ, ಕೂಲಾಗಿ ಕಾಣಿಸುವ ತಾಕತ್ತು. ಎಲ್ಲವೂ ಪ್ರಜ್ವಲ್‌ರನ್ನು ಭವಿಷ್ಯದ ನಾಯಕನ ಸಾಲಿಗೆ ಸೇರಿಸಿವೆ.

ಚಿತ್ರ : ಸಿಕ್ಸರ್‌
ನಿರ್ಮಾಣ : ಉಷಾಕಿರಣ್‌ ಮೂವೀಸ್‌
ನಿರ್ದೇಶನ : ಶಶಾಂಕ್‌
ಸಂಗೀತ : ಹಂಸಲೇಖ
ತಾರಾಗಣ : ಪ್ರಜ್ವಲ್‌, ದೇವಕಿ, ರಂಗಾಯಣ ರಘು, ಸಾಧು ಕೋಕಿಲ, ಅವಿನಾಶ್‌, ಶರಣ್‌, ತುಳಸಿ ಶಿವಮಣಿ, ಚಿತ್ರಾ ಶೆಣೈ, ಶೋಭರಾಜ್‌ ಮತ್ತಿತರರು

ಮಾಡಿದಾಗ ಶಿಕ್ಷೆ ಕೊಟ್ಟರೆ ಸಾಲದು, ತಪ್ಪು ಮಾಡಿದವರಿಗೆ ಅದನ್ನು ತಿದ್ದಿಕೊಳ್ಳುವ ಮನಸ್ಸೂ ಇರಬೇಕು ... ಎಂದು ಥೇಟ್‌ ಕ್ಲಾಸಿನಲ್ಲಿ ಹೇಳುವಂತೆ ಮಗನಿಗೆ ಹೇಳುತ್ತಾನೆ ‘ಮಾಸ್ತರ್‌’ ಅಪ್ಪ್ಪ.

ಬೇರೆಯವರಾದರೆ ಅದನ್ನು ಮರೆತು ಇನ್ನೊಂದು ಹೊಸ ತಪ್ಪುಮಾಡುತ್ತಿದ್ದರೇನೋ? ಆದರೆ ರಾಹುಲ್‌ ತಂದೆಗೆ ತಕ್ಕ ಮಗ. ತಪ್ಪು ಮಾಡುತ್ತಾನೆ. ಮಾಡಿದ ತಪ್ಪಿಗೆ ತಾನೇ ಪಶ್ಚಾತ್ತಾಪ ಪಡುತ್ತಾನೆ. ಪ್ರಾಯಶ್ಚಿತ್ತ ಅನುಭವಿಸುವುದಕ್ಕೆ ಸಿದ್ಧವಾಗುತ್ತಾನೆ. ಇಷ್ಟೆಲ್ಲವನ್ನೂ ಆತ ಗೊತ್ತಿದ್ದೇ ಮಾಡುತ್ತಾನೆ ಅನ್ನೋದು ಹೈಲೈಟು.

ಹಾಗಾದ್ರೆ ಗೊತ್ತಿದ್ದೂ ತಪ್ಪೇಕೆ ಮಾಡುತ್ತಾನೆ? ಕಾರಣ ದೊಡ್ಡ ಕ್ರಿಕೆಟ್‌ ಆಟಗಾರನಾಗುವ ಆಸೆ. ಹಾಗಾಗಲು ಕ್ರಿಕೆಟ್‌ ಅಕಾಡೆಮಿ ಸೇರಬೇಕು. ತಿಂಗಳಿಗೆ ಆರು ಸಾವಿರ ರೂ. ತೆರಬೇಕು. ತಂದೆ ಬಡ ಮೇಷ್ಟ್ರು. ಅಪ್ಪನ ಹತ್ತಿರ ಅಷ್ಟೊಂದು ದುಡ್ಡು ಕೇಳುವ ಹಾಗಿಲ್ಲ. ಹಾಗಂತ ಜೀವನದ ಅತಿ ದೊಡ್ಡ ಗುರಿ ಕ್ರಿಕೆಟ್‌ ಮರೆಯುವ ಹಾಗಿಲ್ಲ. ಸರಿ ರೌಡಿ ಖಂಡ್ರೆ ಬಳಿ ಕೆಲಸಕ್ಕೆ ಸೇರುತ್ತಾನೆ. ಬೇಗ ಅವನಿಗೆ ಹತ್ತಿರನಾಗುತ್ತಾನೆ. ತನ್ನ ಪರಮ ವೈರಿ ಮಲ್ಪೆ ನಾಯಕನ ಮಗಳ ಮದುವೆ ನಿಲ್ಲಿಸುವುದಕ್ಕೆ ಖಂಡ್ರೆ, ರಾಹುಲ್‌ನನ್ನು ಬಳಸಿಕೊಳ್ಳುತ್ತಾನೆ. ಅವಳನ್ನು ಪಟಾಯಿಸುವ ಕೆಲಸವನ್ನು ಅವನಿಗೆ ಕೊಡುತ್ತಾನೆ.

ಸರಿ ಬಾಸ್‌ ಹೇಳಿದ ಈ ಪಾರ್ಟ್‌ಟೈಂ ಕೆಲಸವನ್ನು ರಾಹುಲ್‌ ಚಾಚೂ ತಪ್ಪದೆ ಮಾಡಿ ಮುಗಿಸುತ್ತಾನೆ. ಮುಂದೇನಾಯಿತು ಎಂದು ಹೇಳುವುದು ಸುಲಭ. ಆದ್ರೆ ನೀವ್‌ ನೋಡೋಕೆ ಏನ್‌ ಉಳಿಯುತ್ತೆ? ಕತೆ ಕೇಳಿದರೆ ಹಳೆಯ ಕೆಲವು ಚಿತ್ರಗಳು ನೆನಪಿಗೆ ಬರಬಹುದು. ಅದು ನಿರ್ದೇಶಕ ಶಶಾಂಕ್‌ಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿಯೇ ಅವರು ಚಿತ್ರಕತೆಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ.

ಒಂದಾದ ಮೇಲೊಂದು ಘಟನೆಗಳು ಹಾಜರಾಗುವಂತೆ ನೋಡಿಕೊಂಡಿದ್ದಾರೆ. ಕೆಲವು ದೃಶ್ಯಗಳು ಬೋರ್‌ ಹೊಡೆಸುತ್ತವೆ ಎನಿಸಿದರೂ, ಅದು ಹೆಚ್ಚು ಹೊತ್ತು ನಿಲ್ಲದಂತೆ ಮಾಡಿದ್ದಾರೆ. ವಿಶೇಷವೆಂದರೆ ಬೇರೆ ಚಿತ್ರಗಳ ತರಹ ಇಲ್ಲಿ ಹೀಗೇ ಆಗುತ್ತದೆ ಎಂದು ಕರಾರು ವಾಕ್ಕಾಗಿ ಹೇಳುವುದು ಕಷ್ಟ. ಆ ಮಟ್ಟಿಗೆ ಶಶಾಂಕ್‌ ತಮ್ಮ ಮೊದಲ ಚಿತ್ರದಲ್ಲೇ ಗೆದ್ದಿದ್ದಾರೆ. ಅದಕ್ಕೆ ಅವರಿಗೆ ನೆರವಾದವರು ಸಂಭಾಷಣೆಕಾರ ಪ್ರಸನ್ನ ಹಾಗೂ ನಾಯಕ ಪ್ರಜ್ವಲ್‌. ಮೊದಲಿಂದ ಕೊನೆಯವರೆಗೂ ಎಲ್ಲರೂ ಎಂಜಾಯ್‌ ಮಾಡಬಹುದಾದಂಥ ಸಂಭಾಷಣೆ ಬರೆದಿದ್ದಾರೆ.

ಇನ್ನು ಪ್ರಜ್ವಲ್‌ ಈ ಚಿತ್ರದ ನಿಜವಾದ ಹೀರೋ. ಅವರಿಗೆ ಈ ಕತೆ, ಪಾತ್ರ ಹೇಳಿ ಮಾಡಿಸಿದಂತಿದೆ. ಹಾಗಾಗಿ ಪ್ರಜ್ವಲ್‌ ಚಿತ್ರದ ತುಂಬ ಪ್ರಜ್ವಲಿಸುತ್ತಾರೆ. ಎಲ್ಲರಿಗೂ ಆಪ್ತರಾಗುತ್ತಾರೆ. ಇದು ಅವರ ಮೊದಲ ಚಿತ್ರವಾದರೂ ಅದು ಗೊತ್ತಾಗುವುದಿಲ್ಲ. ಆ ಮಟ್ಟಿಗೆ ಅವರು ತಮ್ಮ ಮೊದಲ ಹೊಡೆತದಲ್ಲೇ ಸಿಕ್ಸರ್‌ ಎತ್ತಿದ್ದಾರೆ. ಸ್ಪಷ್ಟ ಕನ್ನಡ, ಲೀಲಾಜಾಲ ಅಭಿನಯ, ಒಂದಿಷ್ಟೂ ಆತಂಕವಿಲ್ಲದ ಮುಖ, ತಮ್ಮದೇ ಆದ ವಿಶಿಷ್ಟ ಡೈಲಾಗ್‌ ಡೆಲಿವರಿ, ಕೂಲಾಗಿ ಕಾಣಿಸುವ ತಾಕತ್ತು... ಎಲ್ಲವೂ ಪ್ರಜ್ವಲ್‌ರನ್ನು ಭವಿಷ್ಯದ ನಾಯಕನ ಸಾಲಿಗೆ ಸೇರಿಸುತ್ತವೆ. ಅವರನ್ನು ಸರಿಯಾಗಿ ಬಳಸಿಕೊಂಡಿದ್ದಕ್ಕೆ ಶಶಾಂಕ್‌ಗೊಂದು ಶಹಬ್ಬಾಸ್‌ ಹೇಳಿಬಿಡಬೇಕು.

ಖಂಡ್ರೆಯಾಗಿ ಆದಿ ಲೋಕೇಶ್‌, ಮಲ್ಪೆ ನಾಯಕನಾಗಿ ರಂಗಾಯಣ ರಘು ಅತ್ತ ಹೆದರಿಸುವುದೂ ಇಲ್ಲ, ಇತ್ತ ನಗಿಸುವುದೂ ಇಲ್ಲ. ಆ ಎರಡೂ ಕೆಲಸವನ್ನು ನಾಯಕಿ ದೇವಕಿ ಮಾಡಿ ಮುಗಿಸುತ್ತಾರೆ.

ಸಾಧು ಕೋಕಿಲ, ಅವಿನಾಶ್‌, ಶರಣ್‌, ತುಳಸಿ ಶಿವಮಣಿ, ಚಿತ್ರಾ ಶೆಣೈ, ಶೋಭರಾಜ್‌ ಸೇರಿದಂತೆ ಹಲವು ಪಾತ್ರಗಳು ಆಗಾಗ್ಗೆ ಬಂದು ಹೋಗುತ್ತಿರುತ್ತವೆ. ಅವರೆಲ್ಲರನ್ನೂ ಪ್ರಜ್ವಲ್‌ ಮರೆಸುತ್ತಾರೆನ್ನುವುದು ಅವರಿಗೆ ಸಲ್ಲಬೇಕಾದ ಕಾಂಪ್ಲಿಮೆಂಟು.

ಕಳೆದ ವರ್ಷ ಕೆಲವು ಒಳ್ಳೆಯ ಹಾಡುಗಳನ್ನು ಕೊಟ್ಟ ಹಂಸಲೇಖ ಜಾದೂ ಇಲ್ಲಿ ಕೇವಲ ಎರಡು ಹಾಡುಗಳಲ್ಲಿ ಕೇಳುತ್ತದೆ. ಛಾಯಾಗ್ರಾಹಕ ಮಕರಂದ್‌ ಪ್ರಾಮಾಣಿಕತೆ ಇನ್ನಷ್ಟು ಹೆಚ್ಚಾಗಬೇಕು.

ಒಟ್ಟಿನಲ್ಲಿ ಹೊಸ ವರ್ಷದಲ್ಲಿ ಹೊಸ ಹುಡುಗರು ಹೊನ್ನಿನ ಪ್ರಣತಿಯ ದೀಪ ಹಚ್ಚಿದ್ದಾರೆ. ಆ ದೀಪ ವರ್ಷದುದ್ದಕ್ಕೂ ಬೆಳಗುತ್ತಿರಲಿ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada