For Quick Alerts
  ALLOW NOTIFICATIONS  
  For Daily Alerts

  ‘ಅಜಯ್‌’ನ ಪ್ರೇಮ ವಿಜಯ

  By Staff
  |


  ಸಾಕಷ್ಟು ಬಾರಿ ಇಂಥ ಕತೆಗಳು ಬಂದಿವೆ. ಆದರೆ, ಅಜಯ್‌ ಗೆಲ್ಲುವುದು ತನ್ನ ಚಿತ್ರಕತೆಯಿಂದ. ಈಗಾಗಲೇ ಎರಡು ಭಾಷೆಗಳಲ್ಲಿ ಈ ಚಿತ್ರ ಬಂದಿದ್ದರೂ, ಅದನ್ನು ಪ್ರೇಕ್ಷಕರು ನೋಡಿದ್ದರೂ ಕನ್ನಡದ ‘ಅಜಯ್‌’ ಆಪ್ತನಾಗುತ್ತಾನೆ. ಅದಕ್ಕೆ ಕಾರಣಗಳು; ಪುನೀತ್‌, ಪ್ರಕಾಶ್‌ ರೈ, ಅನು, ಕಬಡ್ಡಿ ಆಟ, ಮೆಹರ್‌ ರಮೇಶ್‌ ಇತ್ಯಾದಿ ಇತ್ಯಾದಿ.

  • ಚೇತನ್‌ ನಾಡಿಗೇರ್‌
  ‘ನಾನು ಇಲ್ಲಿಗೆ ಬಂದಿದ್ದು ಕಬಡ್ಡಿ ಆಡೋಕೆ. ಇಲ್ನೋಡಿದರೆ ನಿಮ್ಜತೆ ಇಂಥ ಕಬಡ್ಡಿ ಆಡೋಂಗಾಯ್ತು ’ ಎಂದು ಬೇಸರದಿಂದಲೇ ಎದುರಿಗಿದ್ದ ದೈತ್ಯನ ಮೇಲೆ ಅಪ್ಪಳಿಸುತ್ತಾನೆ ಅಜಯ್‌.

  ಹೌದು. ಅಜಯ್‌ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಿದ್ದೇ ಕಬಡ್ಡಿ ಆಡೋಕೆ. ಆಡಿ ಗೆಲ್ಲೋಕೆ. ಆದರೆ ವಿಧಿಯ ಕೈವಾಡ ನೋಡಿ, ಅಖಾಡ ಬದಲಾಗುತ್ತದೆ. ಹಾಗೆಯೇ ತಂಡವು ಸಹ. ಆ ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಬೇಕೆನ್ನುವ ಅವನ ಗುರಿ ಕೂಡ.

  ಇದಕ್ಕೆಲ್ಲಾ ಕಾರಣ ಒಂದೇ. ಅದು ಹೆಣ್ಣೆಂಬ ಮಾಯೆ. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಗೆ ಹೋಗಿ ಸುಮ್ಮನೆ ಕಬಡ್ಡಿ ಆಡಿ ಹಿಂದಿರುಗಿದ್ದರೆ ಅಷ್ಟೆಲ್ಲಾ ಆಗುತ್ತಲೇ ಇರಲಿಲ್ಲವೇನೋ?ಆದರೆ ಅಜಯ್‌ ಸೀದಾ ಕಲಿಯುಗದ ವೀರಭದ್ರನನ್ನು ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ಲಿನಲ್ಲಿಯೇ ಇಟ್ಟಾಡಿಸಿಕೊಂಡು ಹೊಡೆಯುತ್ತಾನೆ.

  ಆ ವೀರಭದ್ರನೋ ಆಸೆ ಪಟ್ಟಿದ್ದೆಲ್ಲಾ ಬೇಕು ಎನ್ನುವವನು. ಅದ್ಯಾವುದೋ ಕೆಟ್ಟ ಘಳಿಗೆಯಲ್ಲಿ ಪದ್ದು ಎಂಬ ಪೆದ್ದು ಸುಂದರಿಯನ್ನು ನೋಡಿಬಿಟ್ಟಿರುತ್ತಾನೆ. ಅವಳಿಗೆ ‘ಐ ಲವ್‌ ಯು’ ಎನ್ನುತ್ತಾನೆ. ಅವಳು ತನ್ನವಳಾಗಬೇಕೆಂದು ಆಸೆಪಡುತ್ತಾನೆ. ಅದಕ್ಕೆ ಅಡ್ಡಬಂದ ಅವಳ ಅಣ್ಣನನ್ನು ಕೊಚ್ಚಿ ಬಿಸಾಕುತ್ತಾನೆ. ಅದನ್ನು ಕೇಳಲು ಬಂದ ಇನ್ನೊಬ್ಬನನ್ನು ಇರಿದು ಕೊಲ್ಲುತ್ತಾನೆ.

  ಸರಿ ಅವನ ಸಹವಾಸವೇ ಬೇಡ ಎಂದು ಊರು ಬಿಟ್ಟು ಹೋಗಲು ತಯಾರಾಗುವ ಪದ್ದುವನ್ನು ಬೀದಿಯಲ್ಲಿ ಜುಟ್ಟು ಹಿಡಿದು ಎಳೆದು ತರುತ್ತಾನೆ ವೀರಭದ್ರ. ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್‌ಗೆ ಬರುವ ಹೊತ್ತಿಗೆ ಅಜಯ್‌ ಎದುರು, ವೀರಭದ್ರ ಆ್ಯಂಡ್‌ ಪದ್ದು ಬದುರು. ಅಲ್ಲಿಯವರೆಗೂ ವೀರಭದ್ರನೆಂಬ ಜೇನುಗೂಡಿಗೆ ಕೈಹಾಕಲು ಹೆದರುತ್ತಿದ್ದ ಹುಬ್ಬಳ್ಳಿ ಮಂದಿ ಎದುರೇ ಅಜಯ್‌ ಆ ಗೂಡಿಗೆ ಕಲ್ಲುಹೊಡೆಯುತ್ತಾನೆ.

  ಗೂಡಿಗೆ ಕಲ್ಲು ಬಿದ್ದಿದ್ದೇ ತಡ ಜೇನು ಹುಳುಗಳು ಹೊರಬೀಳುತ್ತವೆ. ಅಜಯ್‌ ಹಾಗೂ ಪದ್ದುವನ್ನು ಕಚ್ಚಲು ಊರೂರು ತಿರುಗುತ್ತವೆ. ಅವರಿಂದ ತಪ್ಪಿಸಿಕೊಂಡು ಅಜಯ್‌, ಪದ್ದು ಮುಂದೆ ಮುಂದೆ... ಅವರನ್ನು ಹಿಡಿಯಲು ವೀರಭದ್ರ ಆ್ಯಂಡ್‌ ಫ್ರೆಂಡ್ಸ್‌ ಹಿಂದೆ ಹಿಂದೆ... ಕೊನೆಯಲ್ಲೇನಾಗುತ್ತದೆ ಎಂದು ನಿಮಗೆ ಗೊತ್ತೇ ಇದೆ. ಆದರೆ, ಅಜಯ್‌ ಪ್ರೇಮದಲ್ಲಿ ವಿಜಯ್‌ ಹೇಗಾಗುತ್ತಾನೆ ಎನ್ನುವುದು ಗೊತ್ತಿರಲ್ಲ ಬಿಡಿ. ಅದೂ ಥೇಟರ್‌ನಲ್ಲೇ ನೋಡಿ ಮಜಾ ಮಾಡಿಬಿಡಿ.

  ಇದೇನು ಅಂಥ ಹೊಸ ಕತೆಯಲ್ಲ. ಈಗಾಗಲೇ ಸಾಕಷ್ಟು ಬಾರಿ ಇಂಥ ಕತೆಗಳು ಬಂದಿವೆ. ಆದರೆ, ಅಜಯ್‌ ಗೆಲ್ಲುವುದು ತನ್ನ ಚಿತ್ರಕತೆಯಿಂದ. ಗುಣಶೇಖರ್‌ರ ಚಿತ್ರಕತೆ ಅದೆಷ್ಟು ಮಜಬೂತಾಗಿದೆಯೆಂದರೆ, ಈಗಾಗಲೇ ಎರಡು ಭಾಷೆಗಳಲ್ಲಿ ಈ ಚಿತ್ರ ಬಂದಿದ್ದರೂ, ಅದನ್ನು ಪ್ರೇಕ್ಷಕರು ನೋಡಿದ್ದರೂ ಇಲ್ಲಿ ಆಪ್ತವೆನಿಸುತ್ತದೆ. ಆ ಎರಡೂ ಭಾಷೆಗಳಲ್ಲಿದ್ದ ವೇಗವನ್ನೇ ನಿರ್ದೇಶಕ ಮೆಹರ್‌ ರಮೇಶ್‌ ಇಲ್ಲೂ ಹೆಚ್ಚು ಕಡಿಮೆ ಕಾಯ್ದುಕೊಂಡಿದ್ದಾರೆ. ಮೊದಲ 20 ನಿಮಿಷ, ಅಂದರೆ ಅಜಯ್‌ ಹುಬ್ಬಳ್ಳಿಗೆ ಬರುವುದಕ್ಕೆ ಮುಂಚೆ ಚಿತ್ರ ಸ್ವಲ್ಪ ಬೋರಾಗುವುದು ಬಿಟ್ಟರೆ, ಮತ್ತೆಲ್ಲೂ ಚಿತ್ರ ಸ್ಲೋ ಆಗುವುದಿಲ್ಲ. ಅದರಲ್ಲೂ ಚಿತ್ರದ ದ್ವಿತೀಯಾರ್ಧ ಪೂರಾ ಹಬ್ಬವೋ ಹಬ್ಬ.

  ಅದಕ್ಕೆ ಕಾರಣ ಪುನೀತ್‌ ಹಾಗೂ ಪ್ರಕಾಶ್‌ ರೈ. ಪುನೀತ್‌ಗೆ ಹೇಳಿ ಮಾಡಿಸಿದ ಪಾತ್ರವಿದು. ಮತ್ತು ಇಂಥಾ ಅವಕಾಶವನ್ನು ಪುನೀತ್‌ ಸಖತ್ತಾಗಿ ಬಳಸಿಕೊಂಡಿದ್ದಾರೆ. ಒಂದೆರಡು ಕಡೆ ಸಿಗರೇಟು ಸೇದಿ ತಮ್ಮ ಪವರ್‌ ಪೋಲುಮಾಡುತ್ತಾರೆ ಎನ್ನುವುದು ಬಿಟ್ಟರೆ, ಇನ್ನೆಲ್ಲ ಕಡೆ ಪುನೀತ್‌ ಪವರ್‌ ಸ್ಟಾರ್‌. ಇನ್ನು ಪ್ರಕಾಶ್‌ ರೈ ಬಗ್ಗೆ ಮಾತಾಡುವ ಹಾಗೆಯೇ ಇಲ್ಲ. ಅವರ ಮಾತು, ಶೈಲಿ, ಹಾವ, ಭಾವ, ಅಭಿನಯ ಎಲ್ಲ ನೋಡಿ ಕೊನೆಗೆ ಪ್ರೇಕ್ಷಕರೇ ಅವರಿಗೆ ‘ವಿ ಲವ್‌ ಯು’ ಎನ್ನದಿದ್ದರೆ ಕೇಳಿ.

  ನಾಯಕಿ ಅನು ಮೆಹ್ತಾ ಅಭಿನಯದಲ್ಲಿ ಪಳಗಿಲ್ಲ ಎನ್ನುವುದನ್ನು ಬಿಟ್ಟರೆ ಜನರಿಗೆ ಬೋಪಸಂದಾಗುತ್ತಾರೆ. ನಾಜರ್‌, ಸುಮಿತ್ರಾ ಜೋಡಿ ಚೆನ್ನಾಗಿದೆ. ಅಭಿನಯ ಕೂಡಾ. ಇನ್ನು ತೆಲಂಗಾಣ ಶಕುಂತಲಾ ಚಿತ್ರದ ಪೂರಾ ಅಬ್ಬರಿಸುವುದೇ ಅಭಿನಯ ಎಂದುಕೊಂಡಿದ್ದಾರೆ.

  ಪುನೀತ್‌ ಹಾಗೂ ಪ್ರಕಾಶ್‌ ರೈ ಜತೆ ಜತೆ ಚಿತ್ರ ನೋಡುವಂತೆ ಮಾಡುವುದು ವಾಸು ಕ್ಯಾಮೆರಾ ಕಣ್ಣು. ಅದರಲ್ಲೂ ‘ಏನ್‌ ಚೆಂದ ಏನ್‌ ಚೆಂದ’ ಹಾಡನ್ನು ಅವರು ಚಿತ್ರೀಕರಿಸಿರುವುದನ್ನು ನೋಡೇ ಎಂಜಾಯ್‌ ಮಾಡಬೇಕು. ಆ್ಯಕ್ಷನ್‌ ದೃಶ್ಯಗಳಲ್ಲೂ, ಇತರೆ ಹಾಡುಗಳಲ್ಲೂ, ಹುಬ್ಬಳ್ಳಿಯಲ್ಲೂ, ಇಟಲಿಯಲ್ಲೂ ವಾಸು ಫುಲ್‌ ಮಿಂಚುತ್ತಾರೆ.

  ಮಣಿಶರ್ಮ ಸಂಗೀತದಲ್ಲಿ ಮೂರು ಹಾಡುಗಳು ಕೇಳುವಂತಿವೆ. ಕರ್ನಾಟಕದಲ್ಲಿ ಲೊಕೇಷನ್‌ಗಳಿಲ್ಲ ಎಂದು ಕೊರಗುವವರಿಗೆ ಮೆಹರ್‌ ರಮೇಶ್‌ ಚಿತ್ರದುರ್ಗ, ಹುಬ್ಬಳ್ಳಿ, ಧಾರವಾಡದ ಸುತ್ತಮುತ್ತ ಅದ್ಭುತ ಲೊಕೇಷನ್‌ಗಳನ್ನು ಹುಡುಕಿಕೊಟ್ಟಿದ್ದಾರೆ.

  (ಸ್ನೇಹಸೇತು : ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X