»   » ಲವ್ವಾ? ಲಾಂಗಾ? ಲೈಫಾ?

ಲವ್ವಾ? ಲಾಂಗಾ? ಲೈಫಾ?

Posted By:
Subscribe to Filmibeat Kannada


ರೌಡಿಸಂ ಚಿತ್ರಗಳಲ್ಲಿ ಕಲಾವಿದರಿಗಿಂತ ಮಚ್ಚಿಗೆ ಹೆಚ್ಚು ಕೆಲಸ ಎಂಬ ಮಾತು ಸುಳ್ಳಾಗಿದೆ! ಉಪೇಂದ್ರ ತಮ್ಮ ನಿರ್ಲಿಪ್ತತೆಯಿಂದ ಇಷ್ಟವಾಗುತ್ತಾರೆ. ಜೆನಿಫರ್‌ ಅಭಿನಯಿಸುವ ಪ್ರಯತ್ನ ಮಾಡಿದ್ದಕ್ಕೆ ಥ್ಯಾಂಕ್ಸ್‌!

ಚಿತ್ರ : ಮಸ್ತಿ
ನಿರ್ಮಾಣ : ರಾಮು
ನಿರ್ದೇಶನ : ಶಿವಮಣಿ
ಸಂಗೀತ : ಗುರುಕಿರಣ್‌
ತಾರಾಗಣ : ಉಪೇಂದ್ರ, ಜೆನ್ನಿಫರ್‌, ಸಾಧು ಕೋಕಿಲ ಮತ್ತು ರಮೇಶ್‌ಭಟ್‌ ಮತ್ತಿತರರು.

ವಿಧಿ ಇಂಥದೊಂದು ವಿಚಿತ್ರ ಪರಿಸ್ಥಿತಿಯನ್ನು ತಂದೊಡ್ಡುತ್ತದೆ. ಬೇರೆ ದಾರಿಯೇ ಇಲ್ಲ, ಮಸ್ತಿ ಈ ಮೂರರಲ್ಲಿ ಒಂದು ಆಯ್ಕೆಯನ್ನು ಮಾಡಿಕೊಳ್ಳಬೇಕು. ಜೀವನದುದ್ದಕ್ಕೂ ಅದರೊಂದಿಗೆ ಹೊಂದಿಕೊಂಡು ಬಾಳಬೇಕು. ಆ ಒಂದು ಆಯ್ಕೆಗಾಗಿ ಇನ್ನೆರಡನ್ನು ತ್ಯಾಗ ಮಾಡಲೇಬೇಕು. ಹಾಗಾದರೆ ಈ ಮೂರರಲ್ಲಿ ಯಾವುದು ಮುಖ್ಯ?

1. ಲವ್ವಾ?: ಪಾಪ ಮಸ್ತಿಯೇನೂ ‘ಠಪೋರಿ’ಯಲ್ಲ, ‘ಪರೋಡಿ’ಯಲ್ಲ. ಇಷ್ಟಕ್ಕೂ ಅವನು ಯಾವ ಹುಡುಗಿಯನ್ನೂ ಪಟಾಯಿಸುವುದಕ್ಕೆ ಹೋಗುವುದಿಲ್ಲ. ಅದಕ್ಕೆ ಅವನಿಗೆ ಟೈಮೂ ಇಲ್ಲ. ಅವರನ್ನು ರಕ್ಷಿಸುವುದು, ಇವರನ್ನು ಭಕ್ಷಿಸುವುದರಲ್ಲೇ ಅವನಿಗೆ ಸಾಕುಸಾಕಾಗುತ್ತದೆ. ಹೀಗೆ ಒಮ್ಮೆ ರಕ್ಷಣಾ ಕಾರ್ಯದಲ್ಲಿರುವಾಗಲೇ ಒಂದು ಹುಡುಗಿಯ ಪರಿಚಯವಾಗುತ್ತದೆ.

ಎರಡನೆಯ ಬಾರಿ ಇನ್ನೊಂದು ಅನಾಹುತದಿಂದ ಆ ಹುಡುಗಿಯನ್ನು ಪಾರು ಮಾಡಿದಾಗ, ಆಕೆಗೆ ಮಸ್ತಿ ಮೇಲೆ ಪ್ರೀತಿ ಹುಟ್ಟುತ್ತದೆ. ಬೇಡ ಬೇಡ ಎಂದರೂ ಆ ಹೆಣ್ಮಗ ಅವನ್ಹಿಂದೆ ಬೀಳುತ್ತದೆ. ತನ್ನ ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕೆ ಏನು ಬೇಕಾದರೂ ಮಾಡುತ್ತೀನಿ ಎನ್ನುತ್ತದೆ. ಅದನ್ನು ಮಾಡಿಯೂ ತೋರಿಸುತ್ತದೆ. ಹಾಗಾದರೆ ಅವಳನ್ನು ಒಪ್ಪಿ ಮದುವೆಯಾಗಿ ನೆಮ್ಮದಿಯಾಗಿದ್ದರೆ?

2. ಲಾಂಗು : ಅದಕ್ಕೆ ಲಾಂಗು ಬಿಡಬೇಕಲ್ಲ? ನೆಮ್ಮದಿಯಾಗಿರಬೇಕೆಂದರೆ ಲಾಂಗು ಹಿಡಿಯಲೇಬೇಕು? ಇಲ್ಲ ಮಸ್ತಿಯ ಆಜನ್ಮ ವೈರಿ ಮೂಟೆ ನಾರಾಯಣ ಬಿಡುವುದಿಲ್ಲ. ಅವನ ಕಡೆಯವರು ಸುಮ್ಮನಿರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಮೇಲಿನ ಸೇಡು ಮಸ್ತಿಯನ್ನು ಸುಮ್ಮನೆ ಇರಗೊಡುವುದಿಲ್ಲ. ತನ್ನ ಅಣ್ಣತಾಯಿಯ ಸಾವಿಗೆ ಕಾರಣರಾದ ಮೂಟೆ ನಾರಾಯಣ ಅಂಡ್‌ ಬ್ರದರ್ಸ್‌ಗಳಲ್ಲಿ ಇಬ್ಬರನ್ನು ಶಿವನ ಪಾದ ಸೇರಿಸಿಯಾಗಿದೆ. ಇನ್ನಿಬ್ಬರನ್ನೂ ಅಲ್ಲಿಗೆ ಸೇರಿಸಿ ರಣಕಹಳೆ ಕೆಳಗಿಡುವುದಕ್ಕಾದರೂ ಲಾಂಗು ಬೇಕು. ಸರಿ, ಲಾಂಗು ಹಿಡಿದು ಯುದ್ಧ ಮುಂದುವರೆಸಿದರೆ?

3. ಲೈಫು : ಇನ್ನೆಷ್ಟು ದಿನಾಂತ ಇದೇ ಕೆಚ್ಚು, ಮಚ್ಚು, ಕೊಚ್ಚು? ಎಲ್ಲಕ್ಕೂ ಒಂದು ಅಂತ್ಯವಿದೆಯಲ್ಲಾ? ಹೀಗೆ ಕೊಲ್ಲುತ್ತಾ ಹೋದರೆ ಕೊನೆಯೆಲ್ಲಿ? ಇದು ಬಿಟ್ಟು ಜೀವನ ಸಾಗಿಸುವುದು ಅಸಾಧ್ಯವಾ? ಎಂದು ಮಸ್ತಿ ಲೆಕ್ಕಾಚಾರ ಹಾಕುತ್ತಿರುವಾಗಲೇ ಅಸಾಧ್ಯ ಎಂದು ಗೆಳೆಯನ ಹೆಣ ಮೊದಲ ಪಾಠ ಹೇಳಿಕೊಡುತ್ತದೆ. ತನ್ನವರೇ ತನ್ನ ಮೇಲೆ ಎಗರಿದಾಗ ಅದು ಮತ್ತಷ್ಟು ಖಾತ್ರಿಯಾಗುತ್ತದೆ. ಹಾಗಾದರೆ ಮುಂದೆ?

ಈಗ ಹೇಳಿ ಲವ್ವಾ? ಲಾಂಗಾ? ಲೈಫಾ?

ಇಂಥ ಪ್ರಶ್ನೆಗಳನ್ನು ಎದುರಿಗಿಟ್ಟುಕೊಂಡು ಶಿವಮಣಿ ಉತ್ತರ ಹುಡುಕುತ್ತಾ ಹೊರಡುತ್ತಾರೆ. ಈ ತರಹದ ಪ್ರಶ್ನೆಗಳು ಕನ್ನಡಕ್ಕೆ ಹೊಸತಲ್ಲ. ಉತ್ತರಗಳು ಅಷ್ಟೇ. ಅದನ್ನೇ ವಿಭಿನ್ನವಾಗಿ ತೆರೆದಿಡುವುದಕ್ಕೆ ಅವರು ಪ್ರಯತ್ನ ಮಾಡಿದ್ದಾರೆ. ರೌಡಿಸಂ ಹಳೆಯದಾದ್ದರಿಂದ ಆ ಚಿತ್ರಗಳ ಫಾರ್ಮುಲಾ ಇಲ್ಲೂ ಮುಂದುವರೆದಿದೆ.

ಒಂದಿಷ್ಟು ಹೆಣಗಳು, ಕ್ರೌರ್ಯ, ಹಿಂಸೆ, ರಕ್ತಪಾತ, ಆರ್ಭಟ, ಸೆಂಟಿಮೆಂಟ್‌ ಒಂದು ಐಟಂ, ಇನ್ನೊಂದು ಪ್ಯಾಥೋ, ಮತ್ತೊಂದು ಫ್ಯಾಮಿಲಿ ಸಾಂಗ್‌ ... ಇವೆಲ್ಲಾ ಹಳೆಯದಾದರೂ ಲ್ಯಾಂಡ್‌ ಮಾಫಿಯಾ ಇರುವುದರಿಂದ ಚಿತ್ರ ಸಮಕಾಲೀನವಾಗುತ್ತದೆ. ದ್ವಿತೀಯಾರ್ಧದಲ್ಲಿ ಬೋರು ಎನಿಸುವುದು ಬಿಟ್ಟರೆ ಚಿತ್ರ ನಿಧಾನ ಎನಿಸುವುದು ಕಡಿಮೆ, ಮಸ್ತಿಯ ಮಚ್ಚಿನಂತೆ. ಅಷ್ಟೇ ವೇಗವಾಗಿ, ಹರಿತವಾಗಿ ಸಾಗುತ್ತದೆ.

ಅದಕ್ಕೆ ಕಾರಣ ಗಿರಿ ಕ್ಯಾಮರಾ ಹಾಗೂ ದೀಪು ಎಸ್‌. ಕುಮಾರ್‌ರ ಸಂಕಲನ. ಮಂತ್ರಾಲಯ, ಬೆಂಗಳೂರು, ಹಾಸನಗಳಲ್ಲಿ ಗಿರಿ ಕ್ಯಾಮರಾ ಚುರುಕಾಗಿ ಓಡಿದಂತೆಯೇ ದೀಪು ಕತ್ತರಿ ಕೂಡ ಓಡುತ್ತದೆ. ಹಾಗಾಗಿ ಚಿತ್ರದ ಓಟ ಮತ್ತು ಓಘ ವೇಗವಾಗಿದೆ.

ರೌಡಿಸಂ ಚಿತ್ರಗಳಲ್ಲಿ ಕಲಾವಿದರಿಗಿಂತ ಮಚ್ಚಿಗೆ ಹೆಚ್ಚು ಕೆಲಸ ಎಂಬ ಮಾತು ಸುಳ್ಳಾಗಿದೆ. ಉಪೇಂದ್ರ ತಮ್ಮ ನಿರ್ಲಿಪ್ತತೆಯಿಂದ ಇಷ್ಟವಾಗುತ್ತಾರೆ. ಜೆನಿಫರ್‌ ಅಭಿನಯಿಸುವ ಪ್ರಯತ್ನ ಮಾಡಿದ್ದಕ್ಕೆ ಮೆಚ್ಚುಗೆಯಾಗುತ್ತಾರೆ.

ಪರಭಾಷಿಕರಿಗಿಂತ ನಾವೇನು ಕಡಿಮೆ ಎಂದು ರಮೇಶ್‌ ಭಟ್‌, ಕಿಶೋರ್‌ ತೋರಿಸಿಕೊಟ್ಟಿ ದ್ದಾರೆ. ಫಾರ್‌ ಎ ಚೇಂಜ್‌ ಚಿತ್ರಕ್ಕೆ ಸಂಬಂಧವಿಲ್ಲದಿದ್ದರೂ ಸಾಧು, ಬುಲೆಟ್‌ ಕಾಮಿಡಿ ನಗಿಸುತ್ತದೆ. ಗುರುಕಿರಣ್‌ ತಮ್ಮದೇ ಹಾಡುಗಳನ್ನು ರೀಮಿಕ್ಸ್‌ ಮಾಡಿದ್ದಾರೆ.

ಲವ್ವಾ? ಲಾಂಗಾ? ಲೈಫಾ? ಪ್ರಶ್ನೆಗಳಿಗೆ ಉತ್ತರ ಬೇಕಾದವರು ನೋಡಲಡ್ಡಿಯಿಲ್ಲ ...

‘ಮಸ್ತಿ ’ಯ ಮಸ್ತುಮಸ್ತು ಗ್ಯಾಲರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada