For Quick Alerts
  ALLOW NOTIFICATIONS  
  For Daily Alerts

  ರುಚಿ ಕೆಡದ ‘ಗೌರಮ’್ಮನ ‘ಉಪ್ಪಿ’ನ ಕಾಯಿ

  By Staff
  |
  • ಮಹಾಂತೇಶ ಬಹಾದುಲೆ
  ನಾಲ್ಕು ಬಾರಿ ನೋಡಿದಾಗಲೇ ಉಪೇಂದ್ರ ಅವರ ಚಿತ್ರಗಳು ಅರ್ಥವಾಗುತ್ತವೆ ಎಂಬುದಕ್ಕೆ ‘ಗೌರಮ್ಮ’ ಚಿತ್ರ ಅಪವಾದ. ಏಕೆಂದರೆ ಒಮ್ಮೆಲೆ ಕಿವಿಯಾಳಗೆ ನುಗ್ಗಿ ಗುದ್ದುವಂಥ ಸಂಭಾಷಣೆಗಳ ಸರಮಾಲೆ ಇದರಲ್ಲಿಲ್ಲ. ಪ್ರತಿಬಾರಿಗೊಮ್ಮೆ ಪ್ರೇಮ, ಪ್ರಣಯಗಳ ಅರ್ಥ ಹುಡುಕುತ್ತ ಕಿರುಚಾಡಿ, ಕಿರಿಕಿರಿ ಉಂಟುಮಾಡುವ ಸನ್ನಿವೇಶಗಳು ಇಲ್ಲಿಲ್ಲ. ಸುಮ್ಮನೇ ಹೋಗುತ್ತಿರುವ ಕಥೆ ಇದ್ದಕ್ಕಿದ್ದಂತೆ ಉಲ್ಟಾಪಲ್ಟಾ ಲಗಾಟೆ ಹೊಡೆಯುವ ಕಸರತ್ತು ಈ ಸಿನಿಮಾದಲ್ಲಿ ಸಿಗದು. ಏನಿದ್ದರೂ ಡೀಸೆಂಟ್‌ ಡೈಲಾಗ್‌ ಹಾಗೂ ಸ್ಮೂಥ್‌ ಫ್ಲೋಯಿಂಗ್‌ ಸ್ಟೋರಿ ಇರುವ ಸಿನಿಮಾ. ಇದು ತೆಲುಗು ಚಿತ್ರ ‘ನುವ್ವು ನಾಕು ನಚ್ಚಾವು’ನ ರಿಮೇಕ್‌ ಆಗಿರುವುದೂ ಇದಕ್ಕೆ ಕಾರಣವಾಗಿರಬಹುದು.

  ಚಿತ್ರದ ಹೆಸರು ‘ಗೌರಮ್ಮ’ನಾದರೂ ಇದು ನಾಯಕ ಪ್ರಧಾನ ಚಿತ್ರವೆ. ಈ ಹೆಸರಿಗೂ ಹಾಗೂ ನಾಯಕಿ ಗೌರಿ(ರಮ್ಯ)ಯ ಉಡುಪುಗಳಿಗೂ ಯಾವುದೇ ಸಂಬಂಧವಿಲ್ಲ. ವೆಂಕಿಯಾಗಿ ಅಭಿನಯಿಸಿರುವ ಉಪೇಂದ್ರ ಚಿತ್ರಕ್ಕೆ ಕೊನೆವರೆಗೂ ಲವಲವಿಕೆ ತುಂಬಿದ್ದಾರೆ.

  ಈ ವೆಂಕಿ ವಿದ್ಯಾರ್ಹತೆ ಇದ್ದರೂ ನೌಕರಿಗೆ ಅರ್ಹತೆ ಇಲ್ಲದಿರುವಂಥ ಹುಡುಗ. ಅದನ್ನು ಹುಡುಕಿಕೊಂಡು ತಂದೆ(ರಮೇಶ್‌ ಭಟ್‌)ಯ ಗೆಳೆಯ ಸೀನು(ಶ್ರೀನಿವಾಸಮೂರ್ತಿ)ವಿನ ಮನೆಗೆ ಬರುವ ಸಂದರ್ಭ. ಅಲ್ಲಿ ಸೀನುವಿನ ಮಗಳು ಗೌರಿ ಮದುವೆಯ ನಿಶ್ಚಿತಾರ್ಥ. ವೆಂಕಿಯ ಪ್ರವೇಶದಿಂದ ಆ ಮನೆಗೆ ಮತ್ತೊಂದು ರೀತಿಯ ಕಳೆ. ಮದುವೆಯ ದಿನವನ್ನೂ ಗೊತ್ತು ಮಾಡಲು ತಡವಾಗುವುದಿಲ್ಲ.

  ಈ ನಿಶ್ಚಿತಾರ್ಥ ಹಾಗೂ ಮದುವೆಯ ದಿನದ ನಡುವಿನ ವೇಳೆಯಲ್ಲೇ ಗೌರಿಯ ಜತೆ ವೆಂಕಿಯ ಪ್ರೇಮ ಅಂಕುರಿಸಿದಾಗ ಚಿತ್ರಕಥೆಗೆ ಮತ್ತೊಂದು ತಿರುವು. ಇಲ್ಲಿಯವರೆಗೆ ಚಿತ್ರದ ಅರ್ಧ ಭಾಗ ಮುಗಿದಿರುತ್ತದೆ. ಇಷ್ಟರಲ್ಲೇ ನಾಯಕ-ನಾಯಕಿ ಪ್ರೇಮದ ಕನವರಿಕೆಯಲ್ಲೇ ವಿದೇಶಕ್ಕೆ ಹೋಗಿ ಪ್ರೇಮಗೀತೆಯನ್ನು ಹಾಡಿ ಬಂದಿರುತ್ತಾರೆ. ಎಣಿಸಿದಂತೆ ಮದುವೆಯ ದಿನವೂ ಬಂದಾಗ ಮನೆತನದ ಮರ್ಯಾದೆಗಾಗಿ ಇಬ್ಬರೂ ಪರಸ್ಪರರನ್ನು ತ್ಯಾಗ ಮಾಡಲು ಸಿದ್ಧರಾಗುತ್ತಾರೆ. ಕೊನೆಗೆ ಕಥೆ ಹೇಗೆ ಮುಕ್ತಾಯವಾಗುತ್ತದೆ ಎಂಬುದನ್ನು ತೆರೆಯ ಮೇಲೆಯೇ ನೋಡಬೇಕು.

  ನಾಯಕಿ ರಮ್ಯಳನ್ನು ಹೊರತುಪಡಿಸಿದರೆ ಅಭಿನಯದಲ್ಲಿ ಯಾರೂ ಒಬ್ಬರಿಗಿಂತ ಇನ್ನೊಬ್ಬರು ಕಡಿಮೆ ಎಂದೆನಿಸುವುದಿಲ್ಲ. ಪೋಷಕ ಪಾತ್ರಗಳಲ್ಲಿ ರಮೇಶ್‌, ಶ್ರೀನಿವಾಸ ಮೂರ್ತಿ, ಚಿತ್ರಾ ಶೆಣೈ, ಪವಿತ್ರಾಲೋಕೇಶ್‌ ಮಿಂಚಿದ್ದರೆ, ಹಾಸ್ಯ ಕಲಾವಿದರಾದ ಸಾಧು ಕೋಕಿಲಾ, ದೊಡ್ಡಣ್ಣ ಹಾಗೂ ಕೋಮಲ್‌ ಪ್ರೇಕ್ಷಕರನ್ನು ನಗಿಸದೇ ಬಿಡುವುದಿಲ್ಲ.

  ವಿಭಿನ್ನ ಕಥೆಯಿಂದಲೋ ಏನೋ, ಸಾಂದರ್ಭಿಕವಾಗಿ ಹಾಸ್ಯಪ್ರಜ್ಞೆ ಪ್ರದರ್ಶಿಸುವ ಉಪೇಂದ್ರ ಅವರ ಅಭಿನಯದಲ್ಲಿ ಹೊಸತನವಿದೆ. ರಮ್ಯ ಮಾತ್ರ ಕೊಬ್ಬಿನಿಂದ ಇರುವುದೇ ನಟನೆ ಎಂದು ತಿಳಿದಂತಿದೆ. ಸಂಬಂಧಗಳ ಎಳೆಗಳನ್ನು ಪರಿಣಾಮಕಾರಿಯಾಗಿ ತೋರಿಸದೇ ಹೋದರೂ, ಸಿನಿಮಾದಲ್ಲಿ ಎಲ್ಲಿಯೂ ಲೋಪವಾಗದಂತೆ ಇಡಿಯಾಗಿ ಕಥೆಯನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

  ಹೊಡೆದಾಟದ ದೃಶ್ಯಗಳಿಲ್ಲದಿದ್ದರೂ ಮನರಂಜನೆ ಹಾಗೂ ಭಾವನಾತ್ಮಕ ಸಂಬಂಧಗಳನ್ನು ಆಧಾರವಾಗಿಟ್ಟುಕೊಂಡು ಕಥೆ ಹೆಣೆದಿರುವುದು ಈ ಚಿತ್ರದ ಹೈಲೈಟ್‌. ಇತ್ತೀಚೆಗೆ ಬರೀ ಫೈಟಿಂಗ್‌ ಸಿನಿಮಾಗಳನ್ನು ನೋಡಿ ನೋಡಿ ಬೇಸತ್ತಿರುವ ಕನ್ನಡದ ಪ್ರೇಕ್ಷಕರಿಗೆ ಇದು ಹೊಸ ರೀತಿಯ ಸಿನಿಮಾದಂಥ ಅನುಭವ ತಂದುಕೊಟ್ಟರೆ ಆಶ್ಚರ್ಯವಿಲ್ಲ.

  ‘ಬಾಲ್ಯದಿಂದಲೂ ಹೆಣ್ಣು ಮಗುವಿನ ಬಗ್ಗೆ ಅತ್ಯಂತ ಮುತುವರ್ಜಿ ವಹಿಸುವ ತಂದೆ-ತಾಯಿ, ಮದುವೆಯ ವೇಳೆ ಮಾತ್ರ ಯಾಕೆ ಅವಳನ್ನು ನೂಕಿಬಿಡುವಂತೆ ವರ್ತಿಸುತ್ತಾರೆ ಎಂಬುದೇ ತಿಳಿಯದು’ ಎಂಬಂಥ ಸಾಲುಗಳು ಸಂಭಾಷಣೆಯಲ್ಲಿ ಗಮನ ಸೆಳೆಯುತ್ತವೆ. ಯಾವ ಸಂದರ್ಭದಲ್ಲೂ ದ್ವಂದ್ವಾರ್ಥಗಳು ಇಣುಕದಿರುವುದು ಸಮಾಧಾನಕರ. ಉಪೇಂದ್ರ ಹಾಗೂ ನಾಗಣ್ಣ ಜಂಟಿಯಾಗಿ ಸಂಭಾಷಣೆ ಬರೆದಿದ್ದಾರೆ. ಎಸ್‌.ಎ. ರಾಜ್‌ಕುಮಾರ್‌ ಅವರ ಸಂಗೀತ ಹಿತಮಿತವಾಗಿದೆ. ಎರಡು ಹಾಡುಗಳು ಇಂಪಾಗಿವೆ. ಸಾಯಿ ಸತೀಶ್‌ ಅವರ ವಿದೇಶಗಳಲ್ಲಿಯ ಛಾಯಾಗ್ರಹಣ ಮನೋಹರ ಎನಿಸುತ್ತದೆ.

  ‘ಕುಟುಂಬ’ ಚಿತ್ರದ ನಂತರ ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ನೋಡುವಂಥ ಚಿತ್ರ ನೀಡಿದ ನಿರ್ಮಾಪಕ ಶೈಲೇಂದ್ರ ಬಾಬು ಹಾಗೂ ನಿರ್ದೇಶಕ ನಾಗಣ್ಣ ತಮ್ಮ ಎರಡನೇ ಪ್ರಯತ್ನದಲ್ಲೂ ಗೆದ್ದಿದ್ದಾರೆ. ಈ ನಿಟ್ಟಿನಲ್ಲಿ ಚಿತ್ರ ಗೆಲ್ಲುವ ಭರವಸೆ ಮೂಡಿಸಿದೆ.

  (ಸ್ನೇಹ ಸೇತು : ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X