»   » ಹೊಸತನ ಸೆಳಕು, ಆಯ್ಕೆ ಹುಳುಕು

ಹೊಸತನ ಸೆಳಕು, ಆಯ್ಕೆ ಹುಳುಕು

Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

ಆತ ಒಳ್ಳೆಯ ಹುಡುಗ. ಒಳ್ಳೆಯ ಸಂಬಳ. ಒಳ್ಳೆಯ ನೌಕರಿ. ಅದಕ್ಕೆ ತಕ್ಕಂತೆ ಒಳ್ಳೆಯ ಗೆಳೆಯರನ್ನೇ ಆತ ಬಯಸುತ್ತಾನೆ. ಸಿಕ್ಕವರು ಮಾತ್ರ ಅಪ್ಪಟ ಕಚ್ಚೆ ಹರುಕರು. ಹುಡುಗಿಯರೆಂದರೆ ಜೊಲ್ಲು ಬರುಕರು. ಇದೆಲ್ಲ ಆತನಿಗೆ ಇಷ್ಟವಿರುವುದಿಲ್ಲ . ಹೀಗಾಗಿ ತನ್ನ ಮದುವೆಯನ್ನು ಗುಟ್ಟಾಗಿ ಮಾಡಿಕೊಳ್ಳುತ್ತಾನೆ. ಪತ್ನಿ ಮತ್ತು ಗೆಳೆಯರ ನಡುವಿನ ಅಂತರ ಕಾದುಕೊಳ್ಳುತ್ತಾನೆ. ಆಕಸ್ಮಿಕವಾಗಿ ಗೆಳೆಯರಿಗೆ ಇವನು ಮಾಡಿದ ನಾಟಕ ಗೊತ್ತಾಗುತ್ತದೆ. ಆತನಿಗೆ ಕಿರಿಕಿರಿ ಮಾಡಲು ಅವನ ಪತ್ನಿಯ ಸ್ನೇಹ ಬೆಳೆಸುತ್ತಾರೆ. ಮೊದಲೇ ಅನುಮಾನದ ಪ್ರಾಣಿಯಾದ ನಾಯಕ ಇದನ್ನು ಸಹಿಸುವುದಿಲ್ಲ. ತನ್ನ ಪತ್ನಿಗೆ ಅವರೊಂದಿಗೆ ಸಂಬಂಧವಿದೆಯೆಂದು ತಿಳಿಯುತ್ತಾನೆ. ಅವಳನ್ನು ಕೊಲ್ಲಲು ಪ್ಲಾನ್‌ ಹಾಕುತ್ತಾನೆ.

ಇದು ಕನ್ನಡಕ್ಕೆ ಬಂದ ಹೊಚ್ಚ ಹೊಸ ಕತೆಯ ಚಿತ್ರ. ನಾಲ್ಕು ಹುಡುಗರು ಒಂದು ಹುಡುಗಿಯ ಸುತ್ತ ಗಿರಿಗಿಟ್ಲೆ ಹಾಕುವ ಮಾಮೂಲಿ ಟ್ರೆಂಡ್‌ ಇದರಲ್ಲಿ ಇಲ್ಲ. ಒಬ್ಬ ಸೊಫೆಸ್ಟಿಕೇಟೆಡ್‌ ಹುಡುಗನೂ ಪತ್ನಿಯನ್ನು ಅನುಮಾನಿಸುವ, ಅದರಿಂದ ಅವಳಿಗೆ ಮಾನಸಿಕ ಹಿಂಸೆ ನೀಡುವ ರೀತಿಯೇ ಹೊಸತನದ ವಾಸನೆ ಹಾಡುತ್ತದೆ. ಉಪ್ಪಿ ಚಿತ್ರಗಳಲ್ಲಿ ಭೀಕರವಾಗಿ ಕಾಣುವ ಅನುಮಾನದ ಪ್ರವೃತ್ತಿ ಇದರಲ್ಲಿ ಪಕ್ಕದ ಮನೆಯ ನಾರ್ಮಲ್‌ ಸಂಸಾರದ ಛಾಯೆ ಮೂಡಿಸಿದೆ. ಮೊದಮೊದಲು ಹಾಸ್ಯದಿಂದ ಶುರುವಾಗಿ ಕೊನೆಗೆ ಗಂಭೀರವಾಗುತ್ತದೆ. ಮಂಜುನಾಥ್‌ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಹಾಗಂತ ಅನಿಸದಿರೋದು ಅವರಿಗೆ ಸಿಗುವ ಶಹಬ್ಬಾಸ್‌ಗಿರಿ.

ಹೀಗಂದ ಮಾತ್ರಕ್ಕೆ ಇದನ್ನು ಪರಿಪೂರ್ಣ ಚಿತ್ರವೆನ್ನಲು ಸಾಧ್ಯವಿಲ್ಲ. ನಿರ್ದೇಶಕರಿಗೆ ಹಲವಾರು ಗೊಂದಲಗಳಿವೆ. ಅದು ತೆರೆ ಮೇಲೆ ಕಾಣಿಸಿದ್ದೇ ಎಡವಟ್ಟಾಗಿದೆ. ನಾಯಕನ ಪಾತ್ರಕ್ಕೆ ಅವರು ಸರಿಯಾದ ಪರ್‌ಫೆಕ್ಷನ್‌ ಕೊಟ್ಟಿಲ್ಲ. ಮೊದಲು ಪೆದ್ದನಂತೆ ಕಾಣುವ ನಾಯಕ ಏಕ್‌ದಮ್‌ ಪತ್ನಿಯ ಕೊಲೆ ಮಾಡಲು ತಯಾರಾಗೋದು, ನಾಲ್ಕು ದಿನ ಹುಡುಗರ ಜತೆ ಮನೆ ಹಂಚಿಕೊಂಡ ಮಾತ್ರಕ್ಕೆ ಅವರನ್ನೇ ಗೆಳೆಯರೆಂದುಕೊಂಡು ಅವರಿಂದ ತನ್ನ ಮದುವೆ- ಪತ್ನಿಯನ್ನು ಗುಟ್ಟಾಗಿ ಇಡೋದು, ಮನೆಗೆ ಬಂದ ಗೆಳೆಯರನ್ನು ಪತ್ನಿಗೆ ಪರಿಚಯಿಸದೆ ನಾಯಕ ಒಳಗೆ ಅಡಗುವುದು... ಇವೆಲ್ಲ ತರ್ಕಕ್ಕೆ ಸಿಲುಕುವುದಿಲ್ಲ. ಯಾಕೆಂದರೆ ಅದರಲ್ಲಿ ತರ್ಕವೇ ಇಲ್ಲ.

ಗಂಭೀರ ವಿಷಯಕ್ಕೆ ಕಾಮಿಡಿ ಟಚ್‌ ಕೊಟ್ಟಿದ್ದೇ ಚಿತ್ರದ ಸೋಲಿಗೆ ಮೊದಲ ಕಾರಣ. ನಾಯಕನ ಪಾತ್ರಧಾರಿ ಚರಣ್‌ ಆಯ್ಕೆಯಲ್ಲಿ ಎಡವಿದ್ದು ಎರಡನೇ ಕಾರಣ. ನವಿರಾದ ಹಾಸ್ಯದಿಂದ ರಂಜಿಸುವ ಪೋಲಿ ಪಟಾಲಂ ಬಾಯಿಯಿಂದ ಆಗಾಗ ಮಿಡ್‌ನೈಟ್‌ ಮಸಾಲ ಮಾತುಗಳು ಹಾರಾಡುವುದು ಕೊನೆಯ ಕಾರಣ. ಇಷ್ಟಾದರೂ ಮಂಜುನಾಥ್‌ ಮೊದಲ ಪ್ರಯತ್ನದಲ್ಲಿ ಭರವಸೆ ಮೂಡಿಸಿದ್ದಾರೆ. ಅವರಿಂದ ಇನ್ನು ಮುಂದೆ ಹೆಚ್ಚಿನದನ್ನು ನಿರೀಕ್ಷೆ ಮಾಡಿದರೆ ತಪ್ಪೇನಿಲ್ಲ.

ತಾನು ಗಾಯಕ ಎಸ್‌.ಪಿ. ಮಗನೆಂದು ದೇಹದಾಢ್ಯತೆಯಿಂದಲೇ ಚರಣ್‌ ಆಧಾರ ಸಮೇತ ನಿರೂಪಿಸಿದ್ದಾರೆ. ಪಕ್ಕದ ಮನೆಯ ಹುಡುಗನಂತಿರೋದು ಇವರ ಮಿತಿಯೂ ಹೌದು, ವಿಶೇಷತೆಯೂ ಹೌದು. ಅವರ ಅಭಿನಯವನ್ನು ತೀರಾ ತಳ್ಳಿ ಹಾಕುವಂತಿಲ್ಲ. ಆದರೆ ಆ ಪಾತ್ರಕ್ಕೆ ಅವರು ಅಷ್ಟೇನೂ ಹೊಂದದಿದ್ದುದೇ ಅವರು ಮಾಡಿದ್ದೆಲ್ಲ ಹೊಳೆಯಲ್ಲಿ ಹುಣಿಸೆ ತೊಳೆದಂತಾಗಿದೆ.

ರಾಧಿಕಾ ಮತ್ತಷ್ಟು ಫ್ರೆಶ್ಶಾಗಿ ಕಾಣುತ್ತಾಳೆ. ಅದು ಛಾಯಾಗ್ರಾಹಕನ ಕೃಪೆಯಷ್ಟೇ ಅನ್ನುವಂತಿಲ್ಲ. ಪಾತ್ರದ ಸೀರಿಯಸ್‌ನೆಸ್‌ ಗೊತ್ತು ಮಾಡಿಕೊಂಡರೆ ಅವಳು ಇನ್ನಷ್ಟು ತಲ್ಲೀನವಾಗಲು ಸಾಧ್ಯವಾಗುತ್ತಿತ್ತು. ನಾಗಶೇಖರ್‌, ಆನಂದ್‌, ಹರಿ ಮತ್ತು ಗಣೇಶ್‌ ಮಜಾ ಕೊಡುತ್ತಾರೆ. ಛಾಯಾಗ್ರಾಹಕ ಸಿಕ್ಕ ಅವಕಾಶವನ್ನು ಪೂರ್ತಿಯಾಗಿ ಬಳಸಿಕೊಂಡಿದ್ದಾರೆ. ಸಂಗೀತದಲ್ಲಿ ವಿಶೇಷವೇನೂ ಇಲ್ಲ.

(ಸ್ನೇಹಸೇತು- ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada