»   » ಹಂಸ ಜೋಗುಳದಲ್ಲಿ ಪಾಟೀಲರ ಕಲರವ

ಹಂಸ ಜೋಗುಳದಲ್ಲಿ ಪಾಟೀಲರ ಕಲರವ

Posted By:
Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

‘ಆಕಾಶಕೆ ಒಬ್ಬ ಸೂರ್ಯ ಕಣೋ
ಈ ಭೂಮಿಗೆ ಒಬ್ಬ ಚಂದ್ರ ಕಣೋ
ಎಲ್ಲಾರಿಗೂ ಒಂದೇ ಗಾಳಿ ಕಣೋ
ಬೆಂಕಿ ನೀರು ಮಣ್ಣು ಒಂದೇ ಕಣೋ
ಹಾಡು ಹಾಡು ರಾಮನೇ...’
ಅವಳು ಹಾಡುತ್ತಿದ್ದರೆ ಅದರ ಗುಂಗಿನಲ್ಲಿಯೇ ನೀವೂ ಗುನುಗುತ್ತೀರಿ. ಮತ್ತೆ ಮತ್ತೆ ನಾಲಿಗೆಗೆ ತೊಡರಿಕೊಳ್ಳುವ ಸಾಲುಗಳಿಗೆ ಶರಣಾಗುತ್ತೀರಿ. ಅಷ್ಟರಲ್ಲಿ ಮನಸ್ಸನ್ನು ತಟ್ಟುವ ಸಾಲುಗಳು ಎದುರಾಗುತ್ತವೆ.
‘ಕಲ್ಲು ಅಲ್ಲ ಅದು ದೈವ ಕಣೋ’
ಹೌದು, ಇದು ಹಾಡೆಂದರೆ ಹಾಡು. ಕವಿತೆಯೆಂದರೆ ಕವಿತೆ. ಸರ್ವಜ್ಞನ ವಚನವೊಂದರ ಸ್ಫೂರ್ತಿ ಪಡೆದ ಹಂಸಲೇಖ ಅದರ ಮುಂದುವರಿದ ಭಾಗವನ್ನು ಪದಗಳಲ್ಲಿ ಪೋಣಿಸಿದ್ದಾರೆ. ಯಾವೊಂದು ಸಾಲು ಇಷ್ಟೇನಾ ಅನ್ನಿಸದಂತೆ ಹೊಸೆದಿದ್ದಾರೆ. ಹೊಸ ರೂಪಕಗಳನ್ನು ಸೃಷ್ಟಿಸಿದ್ದಾರೆ. ಚಿತ್ರವೊಂದು ಹಾಡಿನಿಂದಲೇ ಬಿಚ್ಚುವ, ಬೆಳೆಯುವ ಮತ್ತು ಹೊಳೆಯುವ ಸೊಬಗನ್ನು ತೋರಿಸಿ ಸುಮ್ಮನೆ ನಕ್ಕಿದ್ದಾರೆ. ಅವರು ಜೋಗುಳದ ಜೋಗ ಜಲಪಾತ. ಆ ಜಲಪಾತದಿಂದ ಅಷ್ಟೊಂದು ಪ್ರೀತಿ ಹುಟ್ಟಿಸುವ ಸಂಗೀತ ಮತ್ತು ಗೀತೆಗಳನ್ನು ಕಿತ್ತುಕೊಂಡ ಕ್ರೆಡಿಟ್ಟು ಕ್ಯಾಪ್ಟನ್‌ ಎಸ್‌.ಮಹೇಂದರ್‌ಗೂ ಸಲ್ಲಬೇಕು.

ಎರಡು ಚಿಟಿಕೆ ಶ್ರದ್ಧೆ, ಹಿಡಿಯಷ್ಟು ಸೃಜನಶೀಲತೆಯನ್ನು ಜತನದಿಂದ ರೂಪಿಸಿದರೆ ಎಷ್ಟು ಒಳ್ಳೆಯ ಸಿನಿಮಾ ಮಾಡಬಹುದೆನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಕನ್ನಡದಲ್ಲಿ ಕತೆಗಳೇ ಇಲ್ಲ ಅನ್ನುವವರು ಇದನ್ನು ಒಮ್ಮೆ ನೋಡಬೇಕು. ದಾನವನೊಬ್ಬ ಮಾನವನಾಗುವ ಹಳೆಯ ಕಲ್ಪನೆಗೇ ಹೊಸ ರಕ್ತ ತುಂಬಿರುವ ಮಧು, ಮಣ್ಣಿನ ವಾಸನೆಯನ್ನು ಬಿಟ್ಟುಕೊಡದ ಜಾಣ ಕತೆಗಾರ.

‘ಅಮ್ಮ ಸತ್ತಳಾ? ನೀನೇ ಅವಳನ್ನು ದಫನ್‌ ಮಾಡಿಬಿಡು’ ಇದು ನಾಯಕನ ವ್ಯಕ್ತಿತ್ವ. ಇಂಥವನಿಗೆ ಪಾಠ ಕಲಿಸಲೆಂದೇ ಆತನಿಂದ ಅತ್ಯಾಚಾರಕ್ಕೆ ಒಳಗಾದ ನಾಯಕಿ ಮಗುವಿಗೆ ಜನ್ಮ ನೀಡುತ್ತಾಳೆ. ಮಗುವನ್ನು ಅವನಿಗೇ ಕೊಡುತ್ತಾಳೆ. ಅತ್ಯಾಚಾರ ನಿನ್ನಂತಹವನಿಗೆ ಮೋಜು. ಹೆಣ್ಣಿಗೆ ಅದೇ ಸರ್ವನಾಶ. ಅದು ತಿಳಿಯಬೇಕಾದರೆ ಈ ಮಗುವನ್ನು ಸಾಕು. ಈ ಸವಾಲನ್ನು ಆತ ಹೇಗೆ ಸ್ವೀಕರಿಸುತ್ತಾನೆ, ಆ ಮಗುವಿನಿಂದ ಹೇಗೆ ಮನುಷ್ಯನಾಗುತ್ತಾನೆ ಅನ್ನುವುದೇ ಕತೆಯ ತಿರುಳು. ಪುಟ್ಟದೊಂದು ಕತೆಯನ್ನು ಇಟ್ಟುಕೊಂಡು ಅದರ ಎಲ್ಲ ಮಗ್ಗಲುಗಳನ್ನು ಶೋಧಿಸುವ ಕೆಲಸವನ್ನು ಮಹೇಂದರ್‌ ಅಚ್ಚುಕಟ್ಟಾಗಿ ಮಾಡಿದ್ದಾರೆ. ಕೊಂಚ ಗಂಭೀರವಾದೊಡನೆ ನವಿರು ಹಾಸ್ಯವನ್ನು ಬಾಯಿಗೆ ಒರೆಸುತ್ತಾರೆ. ಸೆಂಟಿಮೆಂಟು, ಗೋಳಿನ ಗೋಳಗುಮ್ಮಟವಾಗದಂತೆ ಎಚ್ಚರ ವಹಿಸ್ತುತಾರೆ. ಎಲ್ಲದರಲ್ಲೂ ಜಿಪುಣತನ ತೋರಿದ್ದಾರೆ. ಹಾಗೆ ಮಾಡುತ್ತಲೇ ಪ್ರೇಕ್ಷಕರನ್ನು ಗೆದ್ದುಬಿಟ್ಟಿದ್ದಾರೆ. ಮಧು ಬರೆದ ಮಾತುಗಳಲ್ಲಿ ಗ್ರಾಮೀಣ ಬದುಕಿನ ಸೊಗಡು ಘಮಘಮಿಸುತ್ತದೆ. ನಾಯಕಿಯ ಮಾತುಗಳು ಕೆಲವೊಮ್ಮೆ ಉಪದೇಶವಾಗಿಬಿಡುವ ಅಪಾಯವನ್ನು ಅವರ ಸೂಕ್ಷ್ಮ ಲೇಖನಿ ತಪ್ಪಿಸಿದೆ.

‘ನಿಜಕ್ಕೂ ಬಿ.ಸಿ.ಪಾಟೀಲ್‌ ಇವರೇನಾ?’ ಹೀಗನ್ನಿಸದಿದ್ದರೆ ಅದು ಅವರು ಪಟ್ಟ ಶ್ರಮಕ್ಕೆ ಮೋಸವಾದೀತು. ಇತ್ತೀಚಿನ ಚಿತ್ರಗಳಲ್ಲಿ ಅವರ ಅಭಿನಯವನ್ನು ಗೇಲಿ ಮಾಡಿದವರಿಗೆ ತಮ್ಮ ಗಿರಿಜಾ ಮೀಸೆ ತಿರುವಿ ಪಾಟೀಲ್‌ ಉತ್ತರಿಸಿದ್ದಾರೆ. ತಾಳ್ಮೆಯಿಂದ ಕೆತ್ತುವ ನಿರ್ದೇಶಕ ಸಿಕ್ಕರೆ ಯಾವುದೇ ಪಾತ್ರವನ್ನು ನಿಭಾಯಿಸಬಲ್ಲೆನೆಂದು ತೋರಿಸಿದ್ದಾರೆ. ಕೋವಿ ಹಿಡಿದೇ ಮಾತನಾಡಿಸುವ ರಕ್ಕಸತನವಿರಲಿ, ಮಗುವಿನ ಹಾಲಿಗಾಗಿ ಮೀಸೆಯನ್ನೇ ಬೋಳಿಸಿಕೊಳ್ಳುವ ಆರ್ದ್ರತೆ ಇರಲಿ. ಎರಡೂ ಭಾವನೆಗಳಲ್ಲಿ ಅವರು ಬರಿ ಅಭಿನಯಿಸಿಲ್ಲ, ಅನುಭವಿಸಿದ್ದಾರೆ. ನಿರ್ದೇಶನ ಗಿರ್ದೇಶನ ಬಿಟ್ಟು ನಟನೆಯಾಂದಕ್ಕೆ ನಿಯತ್ತಾಗಿದ್ದರೆ ಪಾಟೀಲ್‌ ಇನ್ನಷ್ಟು ಬೆಳೆಯಬಹುದು. ವಿಜಯಲಕ್ಷ್ಮಿಯಂತಹ ಕನ್ನಡದ ಹುಡುಗಿಯನ್ನು ನಮ್ಮ ಚಿತ್ರರಂಗ ಇಷ್ಟೊಂದು ನಿರ್ಲಕ್ಷ್ಯ ಮಾಡಬಾರದಿತ್ತು. ನಾಯಕನನ್ನು ದ್ವೇಷಿಸುತ್ತಲೇ ಆತನ ಮಗುವನ್ನು ಪ್ರೀತಿಸುವ, ಅದನ್ನು ತೋರಿಸದೆ ಒಳಗೊಳಗೇ ಚಡಪಡಿಸುವ ಹುಡುಗಿಯಾಗಿ ಅವಳ ಅಭಿನಯ ವಂಡರ್‌ಫುಲ್‌. ಕಣ್ಣಿನಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ಅವಳಿಗಷ್ಟೇ ದಕ್ಕಿದೆಯೇನೋ... ಅನಂತವೇಲು, ಬಿ.ವಿ.ರಾಧಾ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಅಂದಹಾಗೆ ಎಲ್ಲೂ ಬೋರಾಗದಂತೆ ನಿರೂಪಿಸಬೇಕೆನ್ನುವ ಅವಸರದಲ್ಲಿ ಮಹೇಂದರ್‌ ಕೆಲವು ತಪ್ಪುಗಳನ್ನು ಮಾಡಿದ್ದಾರೆ. ತಾಯಿಯ ಹೆಣಕ್ಕೆ ಇನ್ನೊಬ್ಬರಿಂದ ಬೆಂಕಿ ಹಚ್ಚಿಸಿದವನು, ಮಗುವಿನಿಂದ ಮನುಷ್ಯನಾಗೋದಿಕ್ಕೆ ಅವರು ಹೇಳಿದ ಕಾರಣಗಳು ಸಾಕಾಗುವುದಿಲ್ಲ. ಇನ್ನಷ್ಟು ಪೂರಕ ಅಂಶಗಳನ್ನು ಸೇರಿಸಿದ್ದರೆ ಚೆನ್ನಾಗಿತ್ತು. ಅದಲ್ಲದೆ ಹಳ್ಳಿಯಲ್ಲಿ ಮದುವೆಯಿಲ್ಲದೆ ಮಗುವಿನ ತಾಯಿಯಾಗುವುದು ಅವರು ತಿಳಿದಷ್ಟು ಅಥವಾ ಹೇಳಿದಷ್ಟು ಸುಲಭವಲ್ಲ. ಏನೇ ಆದರೂ ಸಿನಿಮಾ ನೋಡ್ತಾ ನೋಡ್ತಾ ನಿಮ್ಮ ಮಗು ನೆನಪಾದರೆ, ನಾಯಕನ ಸ್ಥಿತಿಗೆ ಕಣ್ಣು ತೇವಗೊಂಡರೆ... ಮಹೇಂದರ್‌ಗೆ ಪುಟ್ಟ ಥ್ಯಾಂಕ್ಸ್‌ ಹೇಳಿ. ಪಾಟೀಲರಿಗೆ ಸುಮ್ನೆ ಕಂಗ್ರಾಟ್ಸ್‌ ಉಸುರಿಬಿಡಿ...

(ಸ್ನೇಹಸೇತು- ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X