twitter
    For Quick Alerts
    ALLOW NOTIFICATIONS  
    For Daily Alerts

    ಕೃಷ್ಣ : ಇಲ್ಲಿ ಸರ್ವಂ ಗಣೇಶ ಮಯಂ!

    By * ದೇವಶೆಟ್ಟಿ ಮಹೇಶ್
    |

    Ganesh and Sharmila Mandre
    ಗಣೇಶ ಈಗ ಏನು ಮಾಡಿದರೂ ಚೆಂದ. ಕುಣಿದರೆ, ನಿಂತರೆ, ಕುಂತರೆ, ಮಾತಿಗೆ ಬಿದ್ದರೆ, ಅತ್ತರೆ, ನಕ್ಕರೆ.. ಎಲ್ಲವೂ ಸಕತ್ ಹಾಟ್ ಮಗಾ. ಯಾಕೆಂದರೆ ಇದು ಗಣೇಶ್ ಜಮಾನಾ. ಅದೇ ಕೃಷ್ಣ ಚಿತ್ರದ ಜೀವಾಳ. ಇದೇ ಪಾತ್ರವನ್ನು ಬೇರೆ ಯಾರಾದರೂ ಮಾಡಿದ್ದರೆ ಇಷ್ಟು ತೂಕ ಸಿಗುತ್ತಿತ್ತಾ?

    ಮುಟ್ಟಿದ್ದೆಲ್ಲ ಚಿನ್ನವಾಗುತ್ತಿರುವ ಸಮಯದಲ್ಲಿ ಗಣೇಶ್ 'ಕೃಷ್ಣ'ನಾಗಿದ್ದಾನೆ. ಇದೊಂದು ಮಾಮೂಲಿ ಕತೆ. ಮೊದಲಾರ್ಧದಲ್ಲಿ ಬರೀ ಕಾಮಿಡಿಗೆ ಮೀಸಲು. ಎರಡನೇ ಭಾಗದಲ್ಲಿ ಕತೆ ಬಿಚ್ಚಿಕೊಳ್ಳುತ್ತದೆ. ನಾಯಕ ಟೀವಿ ನಿರೂಪಕ. ಅಲ್ಲಿಗೆ ಒಬ್ಬ ಹುಡುಗಿ ಬೆಳದಿಂಗಳ ಬಾಲೆಯಾಗಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾಳೆ. ಆಕೆ ಯಾರೆಂದು ಗೊತ್ತಾಗುವುದು ವಿರಾಮದ ಸಸ್ಪೆನ್ಸ್. ಆಕೆಗೆ ನಾಯಕನ ಫ್ಲ್ಯಾಶ್ ಬ್ಯಾಕ್ ಗೊತ್ತಾಗುತ್ತದೆ. ಅಲ್ಲೊಂದು ಪ್ರೇಮ ಕತೆ ಇದೆ. ಆದರೆ ದುಡ್ಡಿನ ಆಸೆಗೆ ಆಕೆ ಇವನನ್ನು ದೂರ ಮಾಡಿರುತ್ತಾಳೆ. ಅದೇ ನೋವಿನಲ್ಲಿ ಇರುವಾಗಲೇ, ಬಾಲೆ ಬಳಿಗೆ ಬಂದಿರುತ್ತಾಳೆ. ಅದೇ ಹೊತ್ತಿಗೆ ಮಾಜಿ ಪ್ರಿಯತಮೆ ಮತ್ತೆ ಸಿಗುತ್ತಾಳೆ. ಆಕೆಯ ಕಷ್ಟಕ್ಕೆ ನಾಯಕ ನೆರವಾಗುತ್ತಾನೆ. ಅವಳನ್ನು ವೈದ್ಯಳನ್ನಾಗಿ ಮಾಡುತ್ತಾನೆ. ಆದರೆ ಕೊನೆಯಲ್ಲಿ ಯಾರನ್ನು ಮದುವೆಯಾಗುತ್ತಾನೆ ಎನ್ನುವುದನ್ನು ತೆರೆಯ ಮೇಲೆ ನೋಡಿ.

    ಇದು ತಮಿಳಿನ ಉನ್ನೈ ನಿನ್ನೈತಾನ್ ಚಿತ್ರದ ರೀಮೇಕು. ಅದಕ್ಕೆ ಕೊಂಚ ನೇಟಿವಿಟಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಎಂ.ಡಿ.ಶ್ರೀಧರ್.

    ಗಣೇಶ್ ಎಂದಿನಂತೆ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಪಾತ್ರ ಏನು ಬೇಡುತ್ತದೆಯೋ ಅದನ್ನು ಮತ್ತು ಅದನ್ನಷ್ಟೇ ಮಾಡಿದ್ದಾರೆ. ಅಂತಿಮ ದೃಶ್ಯದಲ್ಲಿ ಇಷ್ಟವಾಗುತ್ತಾರೆ. ಕೊನೆಯ ಅರ್ಧಗಂಟೆ ಪಾತ್ರದ ತಳಮಳ, ಗೊಂದಲ, ನೋವು ಮತ್ತು ವಿಷಣ್ಣತೆಯನ್ನು ಅವರು ಮಾತಿಲ್ಲದೇ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ವಂಡರ್ ಫುಲ್. ಅದಕ್ಕೆ ಶರಣ್ ಸಾಥ್ ನೀಡಿದ್ದಾರೆ. ಅವರ ಟೈಮಿಂಗ್ ಅದ್ಫುತ.

    ಮುಂಗಾರು ಮಳೆಯಲ್ಲಿ ನನಗೆ ಮೇಕಪ್ ಸರಿಯಾಗಿ ಮಾಡಿಲ್ಲ ಎಂದಿದ್ದು ಸರಿಯಾಗಿಯೇ ಇದೆ ಎಂದು ಪೂಜಾ ಗಾಂಧಿ ತೋರಿಸಿದ್ದಾರೆ. ಮಾಡ್ ಡ್ರೆಸ್ ನಲ್ಲಿ ಈ ಹುಡುಗಿ ಜಿಂಕೆ ಮರಿ. ಹಾಗೆಯೇ ಅಭಿನಯದಲ್ಲೂ ಹಿಂದೆ ಬಿದ್ದಿಲ್ಲ. ಜಗಳಗಂಟಿಯಾಗಿ, ಪ್ರೇಮಿಯಾಗಿ ಮನಸಲ್ಲಿ ಉಳಿಯುತ್ತಾರೆ. ಇನ್ನೊಬ್ಬ ನಾಯಕಿ ಶರ್ಮಿಳಾ ಕೂಡ ಅಷ್ಟೇ. ಇಬ್ಬರೂ ತಮ್ಮ ತಮ್ಮ ಪಾತ್ರದ ಆಳ ಅರ್ಥಮಾಡಿಕೊಂಡು ಕ್ಯಾಮರಾ ಮುಂದೆ ನಿಂತಿದ್ದಾರೆ. ಉಳಿದಂತೆ ಅವನಾಶ್, ಭರತ್ ಭಾಗವತರ್ ಅವರವರ ಪಾತ್ರಗಳಿಗೆ ಜೀವ ತುಂಬಿದ್ದಾರೆ.

    ಹರಿಕೃಷ್ಣ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ಸಾಗರ ತೀರವನ್ನು ಕಣ್ಣಿಗೆ ಕಟ್ಟುವಂತೆ ಸೆರೆ ಹಿಡಿದ ಶೇಖರ್ ಕ್ಯಾಮರಾ ನೆನಪಿನಲ್ಲಿ ಉಳಿಯುತ್ತದೆ. ಮರೆಯದೇ ಹೇಳಬೇಕಾದ ವಿಷಯ ಸಂಭಾಷಣೆ. ಬಿ.ಎ.ಮಧು ಬರೆದ ಮಾತುಗಳು ಏಳೆಂದು ದೃಶ್ಯಗಳಲ್ಲಿ ಹೊಚ್ಚ ಹೊಸತಾಗಿದೆ. ಕ್ಲೈಮ್ಯಾಕ್ಸ್ ನಲ್ಲಂತೂ ಈ ರೀತಿಯೂ ಡೈಲಾಗ್ ಬರೆಯಬಹುದೆಂದು ಅವರು ತೋರಿಸಿದ್ದಾರೆ. ಹಾಗಂತ ಇದರಲ್ಲಿ ತಪ್ಪೇ ಇಲ್ಲವೆಂದು ತಿಳಿಯಬೇಡಿ. ಇನ್ನಷ್ಟು ಟ್ರಿಮ್ ಮಾಡುವ ಅವಕಾಶ ಇದ್ದರೂ ನಿರ್ದೇಶಕ ಅದನ್ನು ಮಾಡಿಲ್ಲ.

    ಒಂದು ಹಾಡಿನಲ್ಲಿ ಹೀಗೆ ಕುಣಿದು ಹಾಗೆ ಹೋಗಲು ರಶ್ಮೀ ಅಗತ್ಯ ಇರಲಿಲ್ಲ. ಸೆಂಟಿಮೆಂಟ್ ದೃಶ್ಯಗಳನ್ನು ಇನ್ನೂ ತೂಕವಾಗಿ ತೋರಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಏನೇ ಆದರೂ ಒಮ್ಮೆ ನೋಡಿ ಬರಲು ಅಡ್ಡಿ ಇಲ್ಲ. ಯಾಕೆಂದರೆ ಗಣೇಶ್ ಇದ್ದಾನಲ್ಲ...

    ಟೈಟಲ್ ಕಾರ್ಡ್

    ಚಿತ್ರ : ಕೃಷ್ಣ
    ನಿರ್ಮಾಣ : ರಮೇಶ್ ಯಾದವ್
    ನಿರ್ದೇಶನ : ಎಂ.ಡಿ.ಶ್ರೀಧರ್
    ಸಂಗೀತ : ವಿ.ಹರಿಕೃಷ್ಣ
    ಛಾಯಾಗ್ರಹಣ : ಶೇಖರ್ ಚಂದ್ರು
    ಸಂಭಾಷಣೆ : ಮಧು
    ಸಾಹಸ : ಕೌರವ ವೆಂಕಟೇಶ್ ಮತ್ತು ರವಿವರ್ಮ
    ತಾರಾಗಣ : ಗಣೇಶ್, ಪೂಜಾ ಗಾಂಧಿ, ಶರ್ಮಿಳಾ ಮಾಂಡ್ರೆ, ಶರಣ್, ರಶ್ಮೀ, ಅವಿನಾಶ್, ವಿನಯಪ್ರಕಾಶ್, ಸುಧಾ ಬೆಳವಾಡಿ, ಭರತ್ ಭಾಗವತರ್, ವಿಜಯಸಾರಥಿ ಮತ್ತಿತರರು.

    Thursday, May 19, 2011, 15:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X