»   » ತ್ರಿಕೋನ ಪ್ರೀತಿಗೆ ಸಂಗೀತ ಭಾಷ್ಯ

ತ್ರಿಕೋನ ಪ್ರೀತಿಗೆ ಸಂಗೀತ ಭಾಷ್ಯ

Subscribe to Filmibeat Kannada
  • ವಿಶಾಖ ಎನ್‌.
ಪ್ರೀತಿ ಏಕೆ ಭೂಮಿ ಮೇಲಿದೆ ?ಹೀಗೊಂದು ಕಿಕ್ಕರ್‌ ಮುಂದಿಟ್ಟುಕೊಂಡು ಯುವ ನಿರ್ದೇಶಕ ಪ್ರೇಮ್‌ ಪಕ್ಕದಲ್ಲಿ ಕೂರಿಸಿಕೊಂಡಿದ್ದು ಪಕ್ಕದೂರಿನ ಮಟ್ಟುಗಾರ ಆರ್‌.ಪಿ.ಪಟ್ನಾಯಕ್‌ ಅವರನ್ನ. ಹೊಸಬರನ್ನ ಹಾಕಿಕೊಂಡರೆ ಮಾತ್ರ ಸಂಗೀತ ಕೊಡ್ತೀನಿ ಅನ್ನೋದು ಪಟ್ನಾಯಕ್‌ ಹಾಕಿದ ಷರತ್ತು. ಇಂಥದೊಂದು ಚಿತ್ರದ ವೆಂಚರ್‌ಗೆ ಹಣ ಹಾಕಲು ಮುಂದೆ ಬಂದಿದ್ದಾತ ಕೂಡ ಹೊಸಬ, ಹೆಸರು ಸುರೇಶ್‌. ಮೊದಲು ಮಟ್ಟು- ಹಾಡುಗಳ ಕೆಲಸ. ಆಮೇಲೆ ಕಲಾವಿದರ ತಾಲೀಮು. ಹಾಗೆ ಹರಳುಗಟ್ಟಿದ ಚಿತ್ರ ‘ಎಕ್ಸ್‌ಕ್ಯೂಸ್‌ ಮಿ’. ಕೊನೆಗೆ ಚಿತ್ರವನ್ನು ತೆರೆಗೆ ಕಾಣಿಸಲು ಹೊಸ ವಿತರಕರ ದಂಡೂ ಹುಟ್ಟಿಕೊಂಡಿತು.

ಚಿತ್ರೀಕರಿಸುವ ಮೊದಲೇ ಇದು ಮ್ಯೂಸಿಕಲ್‌ ಅನ್ನುವ ಸ್ಪಷ್ಟ ನೆಲೆಗಟ್ಟು ಪ್ರೇಮ್‌ ಮನಸ್ಸಲ್ಲಿ ಇತ್ತು. ತಮ್ಮ ಚಿತ್ರಕ್ಕೆ ಪಟ್ನಾಯಕ್ಕೇ ಸಂಗೀತ ನಿರ್ದೇಶಕ ಅನ್ನುವ ಬಲವಾದ ತೀರ್ಮಾನವೂ ಆಗಿಹೋಗಿತ್ತು. ಒಬ್ಬ ಕನ್ನಡದ ನಿರ್ದೇಶಕ ಹೀಗೆ ಸ್ಪಷ್ಟವಾಗಿ, ಶ್ರದ್ಧೆಯಿಂದ ಯೋಚಿಸುವುದು ಮೆಚ್ಚತಕ್ಕ ವಿಷಯ. ಆದರೆ, ಅಂತಿಮ ಚಿತ್ರದ ಫಲಶೃತಿ ಐನಾತಿ ಅನ್ನುವ ಹಾಗಿಲ್ಲ. ಅಲ್ಲಿ ಹಿಂದಿಯಲ್ಲಿ ಬಂದು ಹೋದ ‘ಸಾಜನ್‌’ ಚಿತ್ರದ ನೆರಳಿದೆ. ಸಾಜನ್‌ನಲ್ಲಿ ಸಾಹಿತ್ಯ ಪ್ರೀತಿ, ಇದರಲ್ಲಿ ಸಂಗೀತ ಪ್ರೀತಿ.

ಇಬ್ಬರು ಬಾಲ್ಯ ಸ್ನೇಹಿತರು. ಒಬ್ಬ ಕೆಟ್ಟ ಹಟವಾದಿ. ಇನ್ನೊಬ್ಬ ಪಿಟೀಲು ಪ್ರಿಯ. ಒಬ್ಬ ಅಪ್ಪ- ಅಮ್ಮನನ್ನೇ ಎಕ್ಕಾ ಮಕ್ಕಾ ಅನ್ನುವವ. ಅಪ್ಪನ ಕಳೆದುಕೊಂಡ ಇನ್ನೊಬ್ಬನಿಗೆ ಅಮ್ಮನೇ ದೇವರು. ಅವರಿಬ್ಬರ ಚಾರಿತ್ರ್ಯವನ್ನು ಬಾಲ್ಯಾವಸ್ಥೆಯಲ್ಲೇ ಡಿಫೈನ್‌ ಮಾಡುವ ನಿರ್ದೇಶಕ ಪ್ರೇಮ್‌, ಆಮೇಲೆ ಚಿತ್ರವನ್ನು ಹಳ್ಳಿಯಿಂದ ಸಿಟಿಗೆ ಶಿಫ್ಟ್‌ ಮಾಡುತ್ತಾರೆ. ಬಹುತೇಕ ಚಿತ್ರಗಳಲ್ಲಿ ಮೊದಲರ್ಧದಲ್ಲಿ ಸೆಂಟಿಮೆಂಟ್‌ ಕಾಣೋದಿಲ್ಲ. ಆದರೆ ಇಲ್ಲಿ ಅಮ್ಮ- ಮಗನ ಪ್ರೀತಿ, ಅಗಲುವಿಕೆಯ ಅಳಲು ಮೊದಲ ಅರ್ಧ ಗಂಟೆಯಲ್ಲೇ ಬರುತ್ತದೆ. ಆಮೇಲೇನಿದ್ದರೂ ಪ್ರೀತಿ ಪ್ರೀತಿ ಪ್ರೀತಿ. ಇಬ್ಬರೂ ಹುಡುಗರು ಹಾಗೂ ಒಬ್ಬ ಹುಡುಗಿಯ ಪ್ರೀತಿ. ಹಟವಾದಿ ಹುಡುಗನ ಅಬ್ಬರದ ಪ್ರೀತಿ. ಪಿಟೀಲು ನಾಯಕನ ಸಂಗೀತ ಪ್ರೀತಿ. ನಡುವೆ ಹಂಚಿಹೋಗುವ ನಾಯಕಿ ಪ್ರೀತಿ. ಅಂತಿಮವಾಗಿ ಸಾಜನ್‌ ರೀತಿ ತ್ಯಾಗವಲ್ಲ, ಹಕೀಕತ್ತು ತೋರುವ ಪ್ರೇಮ್‌ ಕರಾಮತ್ತು .

ಕಾಲೇಜು, ಪಡ್ಡೆ ಹೈಕಳು. ಚಪ್ಪರ್‌, ಸಿಸ್ಯ, ಹೊಗೆಹಾಕು, ಕಾಟ್‌ ಹಾಕು ಎಂಬ ಮಾತುಗಳು, ಹೊಡೆದಾಟದ ಹೊಸ ಪರಿಕರಗಳು, ನಾಯಕಿಯ ಕಟ್‌ ಅಂಡ್‌ ರೈಟ್‌ ಮಾತಿನ ವರಸೆ, ಪ್ರೀತಿಗೆ ಮೀಡಿಯೇಟರ್‌ಗಳಾಗುವ ಆಧುನಿಕ ಚಿಣ್ಣರು- ಇವೆಲ್ಲ ಶಿಳ್ಳೆ ಗಿಟ್ಟಿಸಿಕೊಳ್ಳಲೆಂದೇ ಹಾಕಿದ ಸರಕು.

ಬಾಲಿವುಡ್‌ ಗರಡಿಯನ್ನೂ ನೋಡಿ ಬಂದಿರುವ ‘ಫ್ರೀಕಿ ಚಕ್ರ’ದ ಫಂಕಿ ಹುಡುಗ ಸುನಿಲ್‌ ಮುಖಭಾವ ಹಾಗೂ ನಟನೆ ಹಸನು. ಪಾತ್ರಕ್ಕೆ ತಕ್ಕ ಕೋಪದ ಕಣ್ಣುಗಳಿರುವ ಈ ಹುಡುಗನಿಗೆ ಅದಕ್ಕೆ ತಕ್ಕ ಮೈಕಟ್ಟು ಇಲ್ಲದಿರುವುದು ದೊಡ್ಡ ಕೊರೆ. ಮೌನದಲ್ಲೇ ಹೆಚ್ಚು ಹೇಳಬೇಕಾದ ಪ್ರಶಾಂತ್‌ ನಟನೆ ಸೋಬರ್‌. ಅಮ್ಮ ಸತ್ತಾಗ ಅವರು ಅಕ್ಷರಶಃ ಅಳುತ್ತಾ ಅಳಿಸುತ್ತಾರೆ. ಮಿಂಚುನಟಿ ರಮ್ಯಾಳ ಇಸ್ತ್ರಿ ಮಾಡಿದಂತಿರುವ ಮುದ್ದುಮುಖದಲ್ಲಿ ಭಾವನೆಯ ಗೆರೆಗಳಿಗೆ ಬರವಿದೆ.

ಹಳ್ಳಿ ವರಸೆಯಲ್ಲಿ ರಮೇಶ್‌ ಭಟ್‌ ಹಾಗೂ ಆತನ ತಮ್ಮನ ಪಾತ್ರಧಾರಿ ಮೆಚ್ಚಾಗುತ್ತಾರೆ. ಸುಮಲತಾ ಇವತ್ತಿಗೂ ಸುಂದರವಾಗಿದ್ದಾರೆ. ಪವಿತ್ರಾ ಲೋಕೇಶ್‌ಗೆ ಪರ್ಮನೆಂಟಾಗಿ ಆಂಟಿಯಾಗಿ ಬಡ್ತಿ ಸಿಕ್ಕಿದೆ.

ಚಿತ್ರದ ನಿಜವಾದ ನಾಯಕ ಸಂಗೀತ. ಹಾಗಾಗಿ ಅದರ ಕ್ರೆಡಿಟ್ಟು ಪಟ್ನಾಯಕ್‌ಗೆ ಸಲ್ಲಬೇಕು. ಜಯಂ ತೆಲುಗು ಚಿತ್ರದ ಮೂಲಕ ಸಂಚಲನೆ ಹುಟ್ಟಿಸಿದ್ದ ಈ ಯುವ ಪ್ರತಿಭೆಯ ಬತ್ತಳಿಕೆಯಲ್ಲಿ ಜಾನಪದದ ಗುಂಗು, ಮಾಧುರ್ಯದ ಮೆರುಗು, ಪಡ್ಡೆಗಳಿಗೆ ಬೇಕಾದ ಟಪ್ಪಾಂಗ್‌ ನಂಬರುಗಳು ಹೇರಳ. ಖುದ್ದು ಹಾಡಿರುವ ಪಟ್ನಾಯಕ್‌ ಕಂಠ ಹಾಗೂ ಅವರ ಕನ್ನಡದ ಸ್ಪಷ್ಟ ಉಚ್ಚಾರಣೆಯನ್ನು ಮೆಚ್ಚಲೇಬೇಕು. ನಿರ್ದೇಶಕ ಪ್ರೇಮ್‌ ಕೈಲಿ ಕೂಡ ಹಾಡು ಹಾಡಿಸಿರುವುದು ಅವರ ಪ್ರಯೋಗಶೀಲತೆಗೆ ಹಿಡಿದ ಕನ್ನಡಿ. ರೋಡಿಗಿಳಿ ರಾಧಿಕಾ ಎಂಬ ಚಮಕ್ಕಿನ ಸಾಲು ಬರೆಯುವ ಡಾ.ನಾಗೇಂದ್ರ ಪ್ರಸಾದ್‌ ಅಮ್ಮನ ಕುರಿತು ದಂಡೆಯಿರದ ಕಡಲು ಎಂದು ಜೀವತುಂಬಿ ಬರೆದಿದ್ದಾರೆ.

ಪ್ರೇಮಿಗಳು ಸಾಯ್ತಾರೆ ಪ್ರೀತಿ ಸಾಯಲ್ಲ, ಪ್ರೀತಿ ಹುಟ್ಟೋದು ಮನಸ್ಸಿನಿಂದ ಕಣ್ಣಿಂದ ಅಲ್ಲ ಎಂಬ ಫಿಲಾಸಫಿಯ ಡೈಲಾಗುಗಳು ತೆರೆಯ ಮೇಲೆ ಡೈಲ್ಯೂಟ್‌ ಆಗಿ ಕಾಣುತ್ತವೆ. ಕ್ಲೈಮ್ಯಾಕ್ಸಿನ ಅತಿ ಭಾವುಕ ಅಬ್ಬರ ಆ ಸೀನಿನಲ್ಲಿರುವಂತೆಯೇ ಮಳೆ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಸುನಿಲ್‌ಕುಮಾರ್‌ ದೇಸಾಯಿ ಗರಡಿಯಲ್ಲಿ ಪಳಗಿರುವ ಪ್ರೇಮ್‌ ತಮ್ಮ ಶ್ರದ್ಧೆಗೆ ಗುಲಗಂಜಿಯಷ್ಟು ಸಂಯಮ ಸೇರಿಸಿಕೊಂಡರೆ ಬರುವ ದಿನಗಳು ಅವರಿಗೆ ಬಲು ಚೆನ್ನಾಗಲಿವೆ.

ಈ ಸಿನಿಮಾ ಮೂಲಕ ಕನ್ನಡದ ಹಾಡುಗಳಿಗೆ ಮಟ್ಟು ಹಾಕಿರುವ ಪಟ್ನಾಯಕ್‌ ಸದ್ಯಕ್ಕೆ ಸಂಗೀತದಿಂದ ಬ್ರೇಕ್‌ ತೆಗೆದುಕೊಂಡಿರುವುದರಿಂದ ಅವರಿಂದ ಹೊಸ ಹಾಡುಗಳನ್ನು ನಿರೀಕ್ಷಿಸುವಂತಿಲ್ಲ. ಇದೇ ಚಿತ್ರದ ನಿರ್ಮಾಪಕ ‘ನಮ್ಮ ಪ್ರೀತಿಯ ರಾಮು’ ಚಿತ್ರವನ್ನು ತೆಲುಗಿಗೆ ರೀಮೇಕ್‌ ಮಾಡುತ್ತಿದ್ದು, ಅದಕ್ಕೆ ಪಟ್ನಾಯಕ್‌ ನಾಯಕರಾಗಿ ಗೊತ್ತಾಗಿದ್ದಾರೆ. ಹಾಗೆ ನಟನೆಗೆ ಹೋಗುವ ಮುನ್ನ ಅಶ್ವಿನಿ ಆಡಿಯೋದವರಿಗೆ ಶಬರಿಮಲೆ ಅಯ್ಯಪ್ಪನ ಕುರಿತ ಕನ್ನಡ ಹಾಡುಗಳಿಗೆ ಮಟ್ಟು ಹಾಕಿಕೊಟ್ಟಿದ್ದಾರೆ. ಒಬ್ಬ ಒಳ್ಳೆಯ ಮಟ್ಟುಗಾರ ಹೀಗೆ ಬೇರೆ ಕಲಾ ಪ್ರಕಾರಕ್ಕೆ ವಲಸೆ ಹೋಗುವುದು ಎಷ್ಟು ಸರಿ ಎಂಬ ಬಗ್ಗೆ ಆಂಧ್ರಪ್ರದೇಶದಲ್ಲಿ ಶುರುವಾಗಿರುವ ಚರ್ಚೆ ಕರ್ನಾಟಕದಲ್ಲೂ ಮುಂದುವರೆದಿದೆ.

ಈ ಸಿನಿಮಾ ನೂರು ದಿನ ಓಡೇ ಓಡುತ್ತದೆ ಅಂತ ಪಟ್ನಾಯಕ್‌ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ. ತಮಿಳಿನ ‘ಕಾದಲ್‌ ದೇಶಂ’ನಂಥಾ ಚಿತ್ರವೇ ಜೋರಾಗಿ ಓಡಿತ್ತು ಅಂದಮೇಲೆ ಇದೂ ಯಾಕೆ ಓಡಬಾರದು ಅನ್ನಿಸುತ್ತದೆ. ಆದರೆ ಕನ್ನಡದಲ್ಲಿ ಬರೀ ಸಂಗೀತ ಹಾಗೂ ಪ್ರೀತಿಗೆ ಕೊಡುವ ಹೊಸ ಭಾಷ್ಯದಿಂದ ಸಿನಿಮಾ ಕ್ಲಿಕ್ಕಾಗುವ ಕಾಲ ಈಗ ದೂರವಾಗಿದೆ. ಯುವ ಪ್ರತಿಭೆಗಳ ಶ್ರದ್ಧೆಯನ್ನು ಹಾಗೂ ಕೆಲವು ಅತಿರೇಕವನ್ನು ಅನುಭವಿಸುತ್ತಲೇ, ಒಮ್ಮೆ ಪ್ರೇಮ್‌ಗೆ ಎಕ್ಸ್‌ಕ್ಯೂಸ್‌ ಮಿ ಅಂದುಬಿಡಿ. ಇದು ಸ್ವಮೇಕ್‌ ಆದುದರಿಂದ ಪ್ರೇಮ್‌ಗೆ ಇನ್ನೊಮ್ಮೆ ಶಹಬ್ಭಾಸ್‌ ಅನ್ನಲಿಕ್ಕಡಿಯಿಲ್ಲ .

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada