ತೆರೆಯ ಮೇಲೆ ರಿಮೇಕ್ 'ಶೈಲೂ' ದೃಶ್ಯ ಪ್ರೇಮಕಾವ್ಯ

ಶೈಲೂ ತೀರಾ ಒಳ್ಳೆಯ ಪ್ರೇಮಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಹೊಂದಿರುವ ಚಿತ್ರ. ಗಟ್ಟಿಯಾದ ಕಥೆ, ನಿರೂಪಣೆ ಹಾಗೂ ಚಿತ್ರೀಕರಿಸಿರುವ ಸ್ಥಳ, ಹೀಗೆ ಎಲ್ಲವೂ ಒಂದಕ್ಕೊಂದು ಪೂರಕವಾಗಿದ್ದು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಹಾಸ್ಯ ಅಗತ್ಯಕ್ಕಿಂತ ತುಸು ಹೆಚ್ಚೇ ಅನ್ನಿಸಿದರೂ ಎಲ್ಲೂ ಪ್ರೇಕ್ಷಕರ ಸಹನೆ ಕೆಡಿಸುವುದಿಲ್ಲ. ನಿರ್ದೇಶಕ ನಾರಾಯಣ್ ರದು ರೀಮೇಕ್ ಗೆ ನಿರ್ದೇಶನವಾದ್ದರಿಂದ ಚಿತ್ರವನ್ನು ಕೆಡಿಸಿಲ್ಲ ಅನ್ನಬಹುದು. ಆದರೆ ಇಲ್ಲಿನ ನೇಟಿವಿಟಿ, ಜನರ ಅಭಿರುಚಿಗೆ ಬದಲಾಯಿಸುವ ಅವಕಾಶವನ್ನು 'ಮಿಸ್' ಮಾಡಿಕೊಂಡಿದ್ದಾರೆ.
ಶೀರ್ಷಿಕೆಯ ಪಾತ್ರಧಾರಿ ನಟಿ 'ಭಾಮಾ' ಪಾತ್ರವನ್ನೇ ಆವಾಹನೆ ಮಾಡಿಕೊಂಡಿದ್ದಾರೆ. 'ಮೊದಲಾ ಸಲ' ಚಿತ್ರದ ಮೂಲಕ ಈಗಾಗಲೇ ಒಳ್ಳೆಯ ನಟಿ ಎಂದು ಕನ್ನಡಿಗರಿಗೆ ಪರಿಚಯವಿರುವ ಭಾಮಾ ಅಭಿನಯ, 'ಭಾಮಾ.., ಇಲ್ಲೇ ಇರಮ್ಮಾ' ಅನ್ನುವಂತಿದೆ. ಪ್ರೇಮಿಯ ಅಭಿನಯದಲ್ಲಿ 'ಒನ್ ಅಂಡ್ ಓನ್ಲಿ' ಅನ್ನುವಂತಿರುವ ಗಣೇಶ್ ಗೆ ಸರಿಸಮನಾಗಿ ಅಭಿನಯಸಿರುವ ಭಾಮಾಗೆ ಕನ್ನಡಿಗರು 'ಭೇಷ್' ಅನ್ನದಿದ್ದರೆ ಹೇಳಿ.
ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಶೈಲೂ ಪ್ರೇಮಿಯ ಮಂಜನ ಪಾತ್ರವನ್ನು ಅನುಭವಿಸಿ ಮಾಡಿದ್ದಾರೆ. ಚಾಕೊಲೇಟ್ ಹೀರೋ ಗಣೇಶ್ ಗೆ ಆ 'ರಫ್' ಪಾತ್ರ ಸೂಟ್ ಆಗಲ್ಲ ಅನ್ನುವವರಿಗೂ ನಾನು ಎಲ್ಲ ಪಾತ್ರವನ್ನೂ ತೀರಾ ಚೆನ್ನಾಗಿ ಮಾಡಬಲ್ಲೆ ಎಂಬ ಉತ್ತರ ಹೇಳಿದ್ದಾರೆ. ಗಣೇಶ್ ಅಭಿನಯ ನೋಡಿದವರು ಮೆಚ್ಚಿಕೊಳ್ಳದಿರಲು ಸಾಧ್ಯವೇ ಇಲ್ಲ. ಜೈಲರ್ ಪಾತ್ರಧಾರಿ ಸುಚೇಂದ್ರ ಪ್ರಸಾದ್ ಅಭಿನಯ ಸೂಪರ್. ರಂಗಾಯಣ್ ರಘು ಅವರದು ಅರ್ಧ ಒಳ್ಳೆಯ ಆಕ್ಟಿಂಗ್, ಇನ್ನರ್ಧ ಓವರ್ ಆಕ್ಟಿಂಗ್.
ಇನ್ನುಳಿದ ಪೋಷಕ ವರ್ಗವೆಲ್ಲವೂ ಚಿತ್ರದ ಪಾತ್ರಗಳಿಗೆ ಒಬ್ಬರಿಗೊಬ್ಬರು ಸ್ಪರ್ಧೆಗೆ ಬಿದ್ದವರಂತೆ ಜೀವ ತುಂಬಿದ್ದಾರೆ. ಸಂಗೀತ, ಸಾಹಿತ್ಯ ಚಿತ್ರಕ್ಕೆ ಪೂರಕವಾಗಿದ್ದು ಚೆನ್ನಾಗಿದೆ. ಸೋನು ನಿಗಮ್, ಶ್ರೇಯಾ ಘೋಷಾಲ್ ಕಂಠಸಿರಿಯಲ್ಲಿ ಮೂಡಿಬಂದಿರುವ ಟೈಟಲ್ ಸಾಂಗ್ 'ಶೈಲೂ ಶೈಲೂ...' ನಿಮ್ಮನ್ನು ಕನಸಿನಲ್ಲೂ ಕಾಡಲಿದೆ. ಜೆಸ್ಸಿ ಗಿಫ್ಟ್ ಸಂಗೀತ ಈ ದೃಶ್ಯ ಪ್ರೇಮಕಾವ್ಯಕ್ಕೆ ಹೇಳಿ ಮಾಡಿಸಿದಂತಿದೆ.
ಜೆ ಎಸ್ ವಾಲಿ ಛಾಯಾಗ್ರಹಣದ ಮೂಲಕ ಮುನ್ನಾರ್ ಹಾಗೂ ಸುತ್ತಮುತ್ತಲಿನ ಪ್ರದೇಶದ ಇಂಚುಇಂಚನ್ನೂ ಕಣ್ಣಿಗೆ ಹಬ್ಬವಾಗುವಂತೆ ಚಿತ್ರೀಕರಿಸಿದ್ದಾರೆ. ಈ ಪ್ರೇಮಕಾವ್ಯದ ಜೊತೆ ನಿಸರ್ಗದ ಸೌಂದರ್ಯ ನಿಮಗೆ ಬೋನಸ್. ಕ್ಯಾಮೆರಾ ಮನ್ ವಾಲಿಗೆ ಹ್ಯಾಟ್ಸ್ ಆಫ್. ಲಿಂಗರಾಜು ಸಂಕಲನವೂ ಪೂರಕ ಹಾಗೂ ಹಿತಮಿತ.
ಒಟ್ಟಿನಲ್ಲಿ 'ಚೆಲುವಿನ ಚಿತ್ತಾರ'ದ ನಂತರ 'ಶೈಲೂ' ಎಂಬ ಚಿತ್ರ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕಲಾ ಸಾಮ್ರಾಟ್ ಎಸ್ ನಾರಾಯಣ್ ರ ಮತ್ತೊಂದು ಪ್ರೇಮ ದೃಶ್ಯ ಕಾವ್ಯ. ಆದರೆ ಕಾಲಕ್ಕೆ, ಕನ್ನಡ ಪ್ರೇಕ್ಷಕರಿಗೆ ಸರಿಯಾಗಿ 'ಕೊಂಚ' ಬದಲಾವಣೆ ಮಾಡಿದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಹಾಗಿದ್ದರೆ ಈ 'ಶೈಲೂ', ಎಸ್ ನಾರಾಯಣ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ರ 'ಗೆಲುವಿನ ಚಿತ್ತಾರ' ವಾಗುವ ನಿರೀಕ್ಷೆ ಇನ್ನೂ ಹತ್ತಿರವಿರುತ್ತಿತ್ತು. (ಒನ್ ಇಂಡಿಯಾ ಕನ್ನಡ )
ಚಿತ್ರ: ಶೈಲೂ
ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ: ಎಸ್ ನಾರಾಯಣ್
ತಾರಾಗಣ: ಗಣೇಶ್, ಭಾಮ, ಸುಚೇಂದ್ರ ಪ್ರಸಾದ್, ರಂಘಾಯಣ ರಘು, ಮುಂತಾದವರು
ಸಂಗೀತ: ಜೆಸ್ಸಿ ಗಿಫ್ಟ್
ಛಾಯಾಗ್ರಹಣ: ಜೆ ಎಸ್ ವಾಲಿ
ಸಂಕಲನ: ಕೆ ಅರ್ ಲಿಂಗರಾಜು


Click it and Unblock the Notifications











