twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ:ಜೈ ಅಭಿರಾಮ್ ಅನಾಥ(ನಾ)!

    By *ದೇವಶೆಟ್ಟಿ ಮಹೇಶ್
    |

    ಅಮ್ಮನ ಕಣ್ಣೀರು. ಮಗ ಸುರಿಸುವ ಪನ್ನೀರು. ಅಪ್ಪನ ಕಣ್ಣಲ್ಲಿ ಜಿನುಗುವ ಉಪ್ಪು ನೀರು. ನೀರು ನೀರಲ್ಲಿ ಲೀನವಾಗಿ ಇಡೀ ಚಿತ್ರವೇ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಕೊನೆಗೆ ಪ್ರೇಕ್ಷಕನ ತಲೆ ಮೇಲೆ ತಣ್ಣೀರು ಸುರಿದ ಅನುಭವ. ಅವ್ವನ 'ಅಪ್ಪ'ಸ್ವರ, ಗರ ಗರ ಗರ ಗರ!

    ಇಡೀ ಚಿತ್ರ ಗಲಾಟೆ ಸಂಸಾರ. ಸೆಂಟಿಮೆಂಟ್ ಎಂಬ ಛೂ ಬಾಣವನ್ನು ನಿರ್ದೇಶಕ ಶ್ರೀನಿವಾಸ್ ಗುಂಡರೆಡ್ಡಿ ಪ್ರೇಕ್ಷಕರ ಗುಂಡಿಗೆ ಮೇಲೆ ಛೂ ಬಿಡುತ್ತಾರೆ. ನಗಿಸಲು ಹೋಗಿ ಅಳಿಸುತ್ತಾರೆ. ಅಳಿಸುತ್ತಾ ಅಳಿಸುತ್ತಾ ಆಕಳಿಸುವಂತೆ ಮಾಡುತ್ತಾರೆ.

    ನಿರ್ದೇಶಕರಲ್ಲಿ ಒಂದೇ ಒಂದು ಕಳಕಳಿಯ ಪ್ರಾರ್ಥನೆ ಹಾಗೂ ಮನವಿ ಮತ್ತು ಬಿನ್ನಹ : ತಮ್ಮ ಕತೆಯ ಝರಾಕ್ಸ್ ಕೊಟ್ಟರೆ ಅದನ್ನು ಗಾಂಧಿನಗರದ ಊರಬಾಗಿಲಲ್ಲಿ ನೇತು ಹಾಕುತ್ತೇವೆ. ಚಿತ್ರರಂಗ ಏಕೆ ಸೋಲು ಕಾಣುತ್ತಿದೆ ಎಂಬ ಬಗ್ಗೆ ನಿಮ್ಮನ್ನು ಹಾಗೂ ನಿಮ್ಮ ಕತೆಯನ್ನು ಉದಾಹರಿಸಬೇಕೆಂದಿದ್ದೇವೆ!

    ಅಭಿರಾಮ್(ಅನಾಥನಾ?) ಚಿತ್ರದ ನಿರ್ಮಾಪಕರು ಕಷ್ಟಪಟ್ಟು ಹಣ ಸುರಿದಿದ್ದಾರೆ. ನಿರ್ದೇಶಕರು ಅದನ್ನು ಇಷ್ಟಪಟ್ಟು ಖರ್ಚು ಮಾಡಿದ್ದಾರೆ. ನಾಯಕ ಗಂಟಲು ಬೇನೆಯಿಂದ ಬಸವಳಿದವನಂತೆ ಅರಚುತ್ತಾನೆ. ನಟನೆಯ ಗಂಧ, ಗಾಳಿ, ತಾಳ, ಮೇಳ ಇಲ್ಲ. ಸಂಗೀತದಲ್ಲಿ ಸಾರವಿಲ್ಲ. ಛಾಯಾಗ್ರಹಣದಲ್ಲಿ ಜೀವವಿಲ್ಲ. ಸಂಭಾಷಣೆಯ ಹೈಲೈಟ್- ಮಾತು
    ಮಾತಿಗೆ'ನನ್ ಮಗ್ನೆ ನನ್ ಮಗ್ನೆ'. ನಾಯಕಿಯರಲ್ಲಿ ಇಬ್ಬರು ಒಬ್ಬರಿಗಿಂತ ಒಬ್ಬರು 'ಮೇಲು'. ಅಕ್ಷತಾ ಅವಾಚ್ಯ ಪದಗಳನ್ನು ಅನಂತಾನಂತವಾಗಿ ಹೇಳುತ್ತಾ ಹೋಗುತ್ತಾರೆ.

    ಇನ್ನೊಬ್ಬಾಕೆ ಸ್ವಾತಿ ನಟನೆ ಎಂಬ ಪದದ ವಿರುದ್ಧಾರ್ಥಕ ಪದ. ಉಳಿದಂತೆ ಯಾವ ಪಾತ್ರಗಳೂ ತಲೆಯಲ್ಲಿ ರಿಜಿಸ್ಟರ್ ಆಗುವುದಿಲ್ಲ. ಬರುತ್ತವೆ, ಹೋಗುತ್ತವೆ, ಹೋಗ್ತಾನೇ ಇರ್‍ತವೆ! ನಿರ್ಮಾಪಕಗಾರು ದಯವಿಟ್ಟು ಇಂಥ ಚಿತ್ರಕ್ಕೆ ಬಂಡವಾಳ ಹೂಡುವ ಮುನ್ನ ಒಮ್ಮೆ ಯೋಚಿಸಿ, ಚರ್ಚಿಸಿ, ಹಣ ಉಳಿಸಿ, ಉದ್ಯಮ ಬೆಳೆಸಿ. ಜೈ ಅಭಿರಾಮ್ ಅನಾಥ(ನಾ)!

    Sunday, May 9, 2010, 17:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X