»   » ವಾರಸ್ದಾರ ಚಿತ್ರ ವಿಮರ್ಶೆ: ಏನ್ರೀ ಗುರು ಇದೆಲ್ಲಾ?

ವಾರಸ್ದಾರ ಚಿತ್ರ ವಿಮರ್ಶೆ: ಏನ್ರೀ ಗುರು ಇದೆಲ್ಲಾ?

Posted By:
Subscribe to Filmibeat Kannada

ಇದು ಹಿಂದಿಯ ಸೂಪರ್ ಹಿಟ್ ಸರ್ಕಾರ್ ಚಿತ್ರದ ರಿಮೇಕ್ ಅಲ್ಲ. ಆದರೆ ಆ ಕಲ್ಪನೆಯ ನೆರಳು ಕಾಣುತ್ತದೆ. ಪೂರ್ತಿ ನೋಡಿದ ಮೇಲೆ ಅನ್ನಿಸುವುದು ಇಷ್ಟೇ. ಆ ಚಿತ್ರವನ್ನು ರಿಮೇಕ್ ಮಾಡಿದ್ದರೇ ನಿರ್ದೇಶಕ ಗುರು ದೇಶಪಾಂಡೆ ಕೊಂಚ ಜೀವ ಉಳಿಸಿಕೊಳ್ಳುತ್ತಿದ್ದರು!

ದೇವಶೆಟ್ಟಿ ಮಹೇಶ್

ಆತ ಶಕ್ತಿ ಪ್ರಸಾದ್(ರವಿ ಬೆಳಗೆರೆ), ಭೂಗತ ದೊರೆ. ಆದರೆ ಸರ್ಕಾರಿ ವ್ಯವಸ್ಥೆ ಕೆಟ್ಟಾಗ ಅದನ್ನು ವಿರೋಸುತ್ತಾ, ಅನ್ಯಾಯ ವಾದ ಜನರಿಗೆ ನ್ಯಾಯ ಕೊಡಿಸುವ ಮನಸಿನಾತ. ಒಂಥರಾ ಗಾಡ್ ಫಾದರ್ ಸ್ವಭಾವ, ಸಮಾಜಸೇವಕ. ಹೀಗಾಗಿ ಮುಖ್ಯಮಂತ್ರಿಗಳು ಈತನ ಆರೋಗ್ಯ ವಿಚಾರಿಸುತ್ತಾರೆ. ನೀವು ಸರಿ ಮಾಡದಿದ್ದರೆ ನಾನೇ ಮಾಡುತ್ತೇನೆ ಎಂದು ಶಕ್ತಿ ಹೇಳಿದರೆ ಬೆದರುತ್ತಾರೆ. ಟೆರರಿಸ್ಟ್‌ಗಳು ದೇಶದ ನಾಶಕ್ಕೆ ಸಂಚು ಹೂಡಿದಾಗ ಎಲ್ಲಾ ಭೂಗತ ದೊರೆಗಳು ಒಂದಾಗಿ ಅವರನ್ನು ಮಟ್ಟ ಹಾಕಲೂ ಈತನೇ ಕಾರಣವಾಗುತ್ತಾನೆ. ಕೊನೆಗೆ ಏನಾಗುತ್ತಾನೆ ಎನ್ನುವು ದನ್ನು ನೀವೇ ನೋಡಿ. ಈ ನಡುವೆ ಈತನ ಮಗನ ಅಪಾರ್ಥ, ಲವ್ವು, ಕೊಂಚ ಸೆಂಟಿಮೆಂಟು, ಫೈಟು, ಆಗಾಗ ಹಾಡು, ಇಲ್ಲದಿದ್ದಾಗ ಆಡು ಆಟ ಆಡು...

ಕೆಲವು ಕತೆಗಳು ಮತ್ತೆ ಮತ್ತೆ ಸಿನಿಮಾ ಆಗುತ್ತಿರುತ್ತವೆ. ಆದರೆ ಅಂಥಾ ಕತೆಗಳಿಗೆ ಕಾಲಕ್ಕೆ ತಕ್ಕ ಟ್ರೀಟ್‌ಮೆಂಟ್ ಬೇಕಾಗುತ್ತದೆ. ನಿರೂಪಣೆ, ಕ್ಯಾಮರಾ ಕೆಲಸ, ಹಿನ್ನೆಲೆ ಸಂಗೀತ, ಸಂಭಾಷಣೆ... ಇವೆಲ್ಲಾ ಒಂದು ಹದದಲ್ಲಿ ಬೆರೆತಾಗ ಮಾತ್ರ ಜನ ಮೆಚ್ಚುತ್ತಾರೆ. ಇಪ್ಪತ್ತು ವರ್ಷದ ಹಿಂದಿನ ಕತೆಯನ್ನು ಅದೇ ಹಳೇ ಶೈಲಿಯಲ್ಲಿ ಅಥವಾ ಅದಕ್ಕಿಂತ ಕೆಟ್ಟದಾಗಿ ಹೇಳಿದರೆ ಏನಾಗುತ್ತದೆ? ಉತ್ತರ ಬೇಕಾದರೆ ವಾರಸ್ದಾರ ನೋಡಿ. ಸಂಭಾಷಣೆ ಗ್ರಾಂಥಿಕವಾಗಿವೆ. ಹೇಳ ಬೇಕು ಹೇಳಬೇಕು ಅಷ್ಟೇ. ತಾಂತ್ರಿಕವಾಗಿ ಚೆನ್ನಾಗಿದೆಯಾ ಅಂದರೆ ಅಲ್ಲೂ ನಿರ್ದೇಶಕ ಗುರು ನಿರಾಸೆ ಮೂಡಿಸುತ್ತಾರೆ. ಕೆಲವು ಕಡೆಯಂತೂ ಲೈಟಿಂಗ್ ಭಯ ಹುಟ್ಟಿಸುತ್ತದೆ. ಕೆಂಪುಬಣ್ಣ, ಮುಖ ಕಾಣಿಸದ ಬಿಸಿಲು, ಪಾತ್ರಗಳ ಮುಖಗಳನ್ನು ಹೀಚುವ ಕೋನ, ದೈಹಿಕ ರಚನೆಯನ್ನು ವಿಕಾರವಾಗಿ ತೋರಿಸುವುದು... ಇಲ್ಲ... ಅದನ್ನು ಸಹಿಸಲು ಸಾಧ್ಯವಿಲ್ಲ.

ನಿರೂಪಣೆ ಕೂಡ ಇದರ ಜೊತೆಗೇ ಸಾಗುತ್ತದೆ. ಒಂದರ ಹಿಂದೊಂದು ದೃಶ್ಯಗಳು ಮೂಡುತ್ತವೆ. ಆದರೆ ಅದನ್ನೆಲ್ಲಾ ಬೆಸೆಯುವ ಜೀವಂತಿಕೆ ಕಾಣೆಯಾಗಿದೆ. ಬಿಡಿ ಬಿಡಿಯಾಗಿ ಕೆಲವು ದೃಶ್ಯಗಳು ಇಷ್ಟವಾದರೂ ಬಿಡಿ ಹೂವು ಮಾಲೆಯಾಗುವುದಿಲ್ಲ ಎನ್ನುವ ಸತ್ಯ ಗೊತ್ತಿರಲಿ. ಹೋಲಿಸುವುದು ತಪ್ಪಾದರೂ ಸರ್ಕಾರ್ ಇಲ್ಲಿ ನೆನಪಿಗೆ ಬರುತ್ತದೆ. ಆ ಚಿತ್ರದಗತ್ತು ಇರುವುದು ಕತೆಯಲ್ಲಿ ಅಲ್ಲ, ಅದನ್ನೆಲ್ಲಾ ಮೀರಿ ನಿಲ್ಲುವ ಸದ್ದಿಲ್ಲದ ಹಿನ್ನೆಲೆ ಸಂಗೀತದಲ್ಲಿ, ಮೌನವನ್ನೂ ಒಂದು ಪಾತ್ರವಾಗಿ ಬಳಸಿಕೊಂಡ ರೀತಿಯಲ್ಲಿ, ಪ್ರತಿಯೊಂದು ಶಾಟ್‌ಗೆ ಕ್ಯಾಮರಾಮೆನ್ ಪಟ್ಟ ಶ್ರಮದಲ್ಲಿ, ಲೈಟಿಂಗ್ ಮೂಡಿಸುವ ಮೋಡಿಯಲ್ಲಿ, ಬೆಂಕಿ ಉಗುಳುವ ಪಾತ್ರಗಳ ಅಭಿನಯದಲ್ಲಿ... ಅದಕ್ಕೆ ಕಿರೀಟ ಇಟ್ಟಂತಿದ್ದ ಚಿತ್ರಕತೆಯಲ್ಲಿ...

ಒಂದು ಮಾದರಿ ಚಿತ್ರವನ್ನು ಇಟ್ಟುಕೊಂಡ ಮೇಲೂ ಗುರು ಹೀಗೇಕೆ ಮಾಡಿದರೊ ಗೊತ್ತಾಗುತ್ತಿಲ್ಲ. ಆದರೂ ಮಾಡಿದ್ದಾರೆ. ಹೊಸ ಹುಡುಗ ಸಂದೀಪ್ ಇನ್ನೂ ಪಳಗಬೇಕು. ಆದರೂ ಕೆಲವು ಕಡೆ ಒಳಗೊಬ್ಬ ಕಲಾವಿದ ಇದ್ದಾನೆಂದು ತೋರಿಸಿದ್ದಾರೆ. ನಾಯಕಿ ಅಶ್ವಿನಿಗೂ ಇದೇ ಮಾತನ್ನು ಹೇಳಬಹುದು. ಇನ್ನುಳಿದ ಮಾಮೂಲಿ ಪಾತ್ರಗಳು ನೆನಪಿನಲ್ಲಿ ಉಳಿಯುವುದಿಲ್ಲ. ಇನ್ನು ಮುಖ್ಯ ಪಾತ್ರಧಾರಿ ರವಿ ಬೆಳಗೆರೆಯವರ ಬಗ್ಗೆ ಹೇಳಬೇಕು. ಇವರೂ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಬೆವರು ಹರಿಸಿದ್ದಾರೆ. ಆದರೆ ಯಾಕೋ ಅವರಿಗೆ ಇನ್ನೂ ಅಭಿನಯ ಪಕ್ಕಾಗಿಲ್ಲ. ಇವರ ಪಾತ್ರವೇ ಗಂಭೀರವಾದದ್ದು ನಿಜ. ಆದರೆ ಆ ಗಂಭೀರತೆಯಲ್ಲೂ ವೈವಿಧ್ಯಮಯ ಅಥವಾ ಆಯಾ ದ್ಯಶ್ಯಗಳಿಗೆ ತಕ್ಕಂಥ ಭಾವನೆ ಮೂಡಿಸುವಲ್ಲಿ ಸೋತಿದ್ದಾರೆ. ಸಂಭಾಷಣೆ ಹೇಳುವ ಶೈಲಿ ಪಕ್ಕಾ ಬುಕ್ಕಿಶ್, ಏರಿಳಿತಕ್ಕೆ ಜಾಗವನ್ನೇ ಕೊಟ್ಟಿಲ್ಲ. ಕೆಲವು ಕಡೆ ಕ್ರೈಂ ಡೈರಿ ನೆನಪಿಗೆ ಬರು ತ್ತದೆ. ಒಂದು ಮಾತನ್ನು ಹೇಳಲೇಬೇಕು. ಇವರ ಬರಹದ ಮೋಡಿಗೆ ಸಿಲುಕಿದ ಮಂದಿ ಇವರ ಬಗ್ಗೆ ಇಲ್ಲಿವರೆಗೆ -ಯಾರಿಗೂ ಇಲ್ಲದ - ಇಮೇಜ್ ಇಟ್ಟುಕೊಂಡಿರುತ್ತಾರೆ. ಯಾವಾಗ ಒಂದು ಮುಖ್ಯ ಮತ್ತು ಸೀರಿಯಸ್ ದ್ಯಶ್ಯದಲ್ಲಿ ಬೆಳಗೆರೆಯವರ ಅಭಿನಯ ನೋಡಿ ನಗು ಹೊರಗೆ ಬಂದರೆ... ಇಲ್ಲ... ಬಂದು ಬಿಡುತ್ತದೆ!

ಹಾಗಾದಾಗ ಏನಾಗುತ್ತದೆ ಎಂದು ಎಲ್ಲರಿಗೂ ಗೊತ್ತು ? ಇನ್ನು ಮುಂದೆ ನಿರ್ದೇಶಕರನ್ನು ನೋಡಿ ಸಿನಿಮಾ ಒಪ್ಪಿಕೊಳ್ಳಲಿ ಅಥವಾ ಅಭಿನಯವನ್ನು...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada