»   » ಪ್ರೀತಿಯೇ ‘ಧರ್ಮ’ದ ಮೂಲವಯ್ಯ...

ಪ್ರೀತಿಯೇ ‘ಧರ್ಮ’ದ ಮೂಲವಯ್ಯ...

Posted By:
Subscribe to Filmibeat Kannada
  • ರಮೇಶ್‌ ಕುಮಾರ್‌ ನಾಯಕ್‌
ಅಡುಗೆ ಮನೇಲಿ ಸಾಸುವೆ, ಕರಿಬೇವಿನ ಎಲೆ, ಕೊತ್ತಂಬರಿ ಸೊಪ್ಪು, ಇಂಗು, ಶುಂಠಿ, ಟೊಮೆಟೊ, ಎಂಟಿಆರ್‌ ಪೌಡರ್‌ ಸಿದ್ಧವಾಗಿರಬಹುದು. ಅದರೆ ಅವುಗಳನ್ನು ಒಪ್ಪವಾಗಿ ಬೆರೆಸಿ ಬೇಯಿಸಿದರೆ ಮಾತ್ರ ಬಾಯಲ್ಲಿ ನಿರೂರಿಸುವ ರಸಂ. ಹದ ತಪ್ಪಿದರೆ ನೀರಸಂ.

‘ಧರ್ಮ’ದ ಕತೆಯೂ ಇದೇ. ಇಲ್ಲಿ ಎಲ್ಲವೂ ಇದೆ. ಆದರೆ ಯಾವುದು ಎಲ್ಲಿರಬೇಕಿತ್ತೊ ಅಲ್ಲಿಲ್ಲ. ಹೇಗಿರಬೇಕಿತ್ತೊ ಹಾಗಿಲ್ಲ. ಉತ್ತಮ ಕತೆ ಬರೆದಿರುವ ನಿರ್ದೇಶಕ ಕೆ.ವಿ.ಚಂದ್ರನಾಥ್‌, ಅದನ್ನು ಚಿತ್ರಕತೆಗೆ ಒಗ್ಗಿಸಿ ನಿರೂಪಿಸುವಲ್ಲಿ ಯಶಸ್ವಿಯಾಗಿಲ್ಲ.

ದರ್ಶನ್‌ (ಧರ್ಮ) ರೌಡಿ ಇಮೇಜಿನ ಹುಡುಗ. ಇದ್ದಕ್ಕಿದ್ದಂತೆ ಆತನ ಒರಟು ಬದುಕಿನಲ್ಲಿ ಸಿಂಧು ಮೆನನ್‌ ಮೂಲಕ ಕವಿತೆಯ ಪ್ರವೇಶವಾಗುತ್ತದೆ. ಸಿಂಧು ಮನೆ ಖಾಲಿ ಮಾಡಿಸುವ ಡೀಲ್‌ ಪಡೆಯುವ ದರ್ಶನ್‌, ಅದರಿಂದ ವಿಮುಖನಾಗಿ ಆಕೆಯ ಹೃದಯದ ಮನೆಯಲ್ಲಿ ಕೂತುಬಿಡುತ್ತಾನೆ. ಆಕೆಯ ತಂದೆಗೆ ತೊಂದರೆಯಾಗದಿರಲಿ ಎಂದು ಕೊಲೆಗಾರನ ಸ್ಥಾನದಲ್ಲಿ ನಿಂತು ಜೈಲು ಸೇರುತ್ತಾನೆ. ಈ ನಡುವೆ ರಾಜಕಾರಣಿ ಮಗಳು ಮನಿಷಾಗೂ ಆತ ಇಷ್ಟವಾಗುತ್ತಾನೆ. ಆಕೆ ದರ್ಶನ್‌ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಾಳೆ. ಸಿಂಧುಳಿಂದ ಆತನನ್ನು ಕಸಿದುಕೊಳ್ಳಲು ಹವಣಿಸುತ್ತಾಳೆ.....

ಮೂಲ ಕತೆ ತುಂಬಾ ಚೆನ್ನಾಗಿದೆ. ಚಿತ್ರಕತೆಯಲ್ಲೇ ಯಡವಟ್ಟಾಗಿದೆ. ರೌಡಿಸಂ, ಪ್ರೀತಿ ಮತ್ತು ಶಾಸಕನ ಕೊಲೆ ಮಾಡಿದ್ದು ಯಾರು ಎನ್ನುವುದು ಚಿತ್ರದ ಆಧಾರ ಸ್ಥಂಭಗಳು. ದುರದೃಷ್ಟವಶಾತ್‌ ಈ ಮೂರೂ ಭಾಗಗಳು ದುರ್ಬಲವಾಗಿವೆ. ದರ್ಶನ್‌ನ ಹೀರೋಯಿಸಂ ಪ್ರದರ್ಶನಕ್ಕೆ ನಿರ್ದೇಶಕರು ಇಂಟರ್‌ವೆಲ್‌ ಬಳಿಕದ ಅವಧಿ ಬಳಸಿ ಸುಖಾಸುಮ್ಮನೆ ಚಿತ್ರವನ್ನು ಜಗ್ಗಾಡಿದ್ದಾರೆ.

ಇಲ್ಲಿ ಒರಟು ಹೃದಯವನ್ನು ಹೂವಾಗಿ ಅರಳಿಸುವುದು ‘ಪ್ರೀತಿ’. ಚಾಕು ಹಿಡಿದು ಓಡಾಡುವವನಿಗೆ, ತಾಕತ್ತಿದ್ದರೆ ಕವಿತೆ ಬರೆದು ತೋರಿಸು ಎಂದು ನಾಯಕಿ ಸವಾಲೆಸೆಯುತ್ತಾಳೆ. ಆತ ಹೇಗೋ ನಾಲ್ಕು ಸಾಲು ಬರೆದು ಕಾಲೇಜಿನ ಸಮಾರಂಭದಲ್ಲಿ ಆಕೆಗೆ ಸಾಥ್‌ ನೀಡುತ್ತಾನೆ. ಅಂದು ಬೈಕ್‌ನಲ್ಲಿ ಮನೆಗೆ ಡ್ರಾಪ್‌ ಕೊಡುವ ಆತ, ನಾವಿಬ್ಬರು ಮದುವೆಯಾಗಲು ನಿರ್ಧರಿಸಿದ್ದೇವೆ ಎನ್ನುತ್ತಾನೆ. ಆದರೆ, ಅವರಿಬ್ಬರ ನಡುವೆ ಮದುವೆ ಪ್ರಸ್ತಾಪವೇ ಇರುವುದಿಲ್ಲ!

ಆಕಸ್ಮಿಕ ಘಟನೆಯಾಂದರಲ್ಲಿ ದರ್ಶನ್‌, ಮನಿಷಾಳ ಪಾದ ನೋಡಿ ಕವಿತೆ ಬರೆಯುತ್ತಾನೆ. ಕವಿತೆಯ ಚೀಟಿಯನ್ನು ಆಕೆಯ ಗೆಜ್ಜೆಗೆ ಸಿಕ್ಕಿಸುತ್ತಾನೆ. ಇಷ್ಟಕ್ಕೇ ಆಕೆ ದರ್ಶನ್‌ನ ಪ್ರೀತಿಗೆ ಹಪಹಪಿಸುತ್ತಾಳೆ... ಚಿತ್ರದ ಪ್ರಮುಖ ಸಾರವಾಗಿರುವ ‘ಪ್ರೀತಿ’ ಇಷ್ಟು ಪೇಲವವಾಗಿ ವ್ಯಕ್ತವಾಗಿದೆ.

ನಾಯಕ ರೌಡಿ ಎಂದು ಬಿಂಬಿಸುವಾಗಲೇ ದರ್ಶನ್‌ನ ಪರಾಕ್ರಮ ಪ್ರದರ್ಶಿಸಿ, ಪ್ರೀತಿಯನ್ನು ಮತ್ತಷ್ಟು ಆಳವಾಗಿ ಚಿತ್ರಿಸಿ, ಶಾಸಕನ ಕೊಲೆಯ ರಹಸ್ಯ ಕ್ಲೈಮ್ಯಾಕ್ಸ್‌ನಲ್ಲಿ ಬಯಲು ಮಾಡಿದರೆ ಚಿತ್ರ ಬೊಂಬಾಟಾಗಿರುತ್ತಿತ್ತು.

ದರ್ಶನ್‌ ಪಾಲಿಗೆ ಇದು ಹತ್ತರ ಜತೆ ಹನ್ನೊಂದನೆಯ ಚಿತ್ರ. ಸಿಂಧು ಮೆನನ್‌ ಮತ್ತು ದೊಡ್ಡಣ್ಣ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗುತ್ತಾರೆ. ರಂಗಾಯಣ ರಘು ವಿಲಕ್ಷಣ ಭಾವಭಂಗಿಯಿಂದ ಗಮನ ಸೆಳೆಯುತ್ತಾರಾದರೂ ಕೊನೆ ಕೊನೆಗೆ ಇದು ಕಿರಿಕಿರಿ ಎನಿಸುತ್ತದೆ. ಹಂಸಲೇಖ ಎಲ್ಲ ವೆರೈಟಿಯ ಹಾಡುಗಳನ್ನು ನೀಡಿದ್ದಾರೆ. ಸುಂದರನಾಥ್‌ ಸುವರ್ಣರ ಛಾಯಾಗ್ರಹಣ ನಾಗೇಂದ್ರಪ್ರಸಾದರ ಸಂಭಾಷಣೆ ಮತ್ತು ನಾಗೇಂದ್ರ ಅರಸ್‌ ಅವರ ಸಂಕಲನ ಚೆನ್ನಾಗಿದೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada