»   » ಹುಚ್ಚು ಮನಸ್ಸಿನ ಹತ್ತು ಮುಖಗಳು!

ಹುಚ್ಚು ಮನಸ್ಸಿನ ಹತ್ತು ಮುಖಗಳು!

Subscribe to Filmibeat Kannada


ಒಂದು ಒಳ್ಳೆಯ ಕತೆಯನ್ನು ಎಷ್ಟು ಚೆನ್ನಾಗಿ ಕೆಡಿಸಬಹುದು ಎನ್ನುವುದಕ್ಕೆ ಶ್ರೇಷ್ಠ ಉದಾಹರಣೆ ‘ತಿಮ್ಮ’. ಚಿತ್ರದ ಆರಂಭ ಚೆನ್ನಾಗಿದೆ. ಚಿತ್ರ ಅಷ್ಟೇ ಚೆನ್ನಾಗಿಯೂ ಮುಗಿಯುತ್ತದೆ. ಈ ಮಧ್ಯದ ಒಂದೂಮುಕ್ಕಾಲು ಗಂಟೆಯಿದೆಯಲ್ಲಾ ಅದು ಯಮಹಿಂಸೆ.

  • ಚೇತನ್‌ ನಾಡಿಗೇರ್‌
ಚಿತ್ರ : ತಿಮ್ಮ
ನಿರ್ಮಾಣ : ಸಂಪತ್‌ಕುಮಾರ್‌, ಶಿಲ್ಪಾ ಶ್ರೀನಿವಾಸ್‌
ನಿರ್ದೇಶನ : ಸಾಯಿಸಾಗರ್‌
ಸಂಗೀತ : ವೆಂಕಟ್‌ನಾರಾಯಣ್‌
ತಾರಾಗಣ : ಅರ್ಜುನ್‌, ಅನೂಷ್ಕಾ, ಬಿ.ಸರೋಜಾದೇವಿ ಮತ್ತಿತರರು.

ಅವನು ಹುಚ್ಚ. ಬರೀ ಅಷ್ಟೇ ಅಲ್ಲ, ಅವನೊಬ್ಬ ಪ್ರೀತಿ ಹುಚ್ಚ. ಪ್ರೀತಿಯ ಗಳೆತಿ ಸತ್ತು 10ವರ್ಷಗಳಾಗಿದ್ದರೂ ಅವಳು ಬದುಕಿದ್ದಾಳೆಂದು ನಂಬಿರುವ ಹುಚ್ಚ. ಅವನ ಹುಚ್ಚುತನದ ಬಗ್ಗೆ ಯಾರಾದರೂ ಕೇವಲವಾಗಿ ಮಾತಾಡಿದರೆ, ಅವರಿಗೆ ಚೆನ್ನಾಗಿ ತದುಕುವ ಹುಚ್ಚ. ಪೇಟೆಯಿಂದ ಬಂದಿರುವ ಹುಡುಗಿಯನ್ನು ನೋಡಿ, ನನ್ನ ಕನಕಮ್ಮಿ ಬಂದೌಳೇ... ಎಂದು ಬಡಬಡಾಯಿಸುವ ಹುಚ್ಚ. ಅವಳನ್ನು ಹುಡುಕಿಕೊಂಡು ಹೋಗಿ ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದು ಒದ್ದಾಡುವ ಹುಚ್ಚ. ಅದಕ್ಕಾಗಿ ನಾನಾ ಕಷ್ಟಗಳನ್ನು ಎದುರಿಸಿ, ಕೊನೆಗೂ ತನ್ನವಳಲ್ಲ ಎಂದು ಗೊತ್ತಾದಾಗ ಪ್ರಾಣಬಿಡುವ ಹುಚ್ಚ...

ಇದು ತಿಮ್ಮನ ಸಂಕ್ಷಿಪ್ತ ಕತೆ. ಒಂದು ಒಳ್ಳೆಯ ಕತೆಯನ್ನು ಎಷ್ಟು ಚೆನ್ನಾಗಿ ಕೆಡಿಸಬಹುದು ಎನ್ನುವುದಕ್ಕೆ ಶ್ರೇಷ್ಠ ಉದಾಹರಣೆ ತಿಮ್ಮ. ಚಿತ್ರದ ಆರಂಭ ಚೆನ್ನಾಗಿದೆ. ಚಿತ್ರ ಅಷ್ಟೇ ಚೆನ್ನಾಗಿಯೂ ಮುಗಿಯುತ್ತದೆ. ಈ ಮಧ್ಯದ ಒಂದೂಮುಕ್ಕಾಲು ಗಂಟೆಯಿದೆಯಲ್ಲಾ ಅದು ಯಮಹಿಂಸೆ. ಹಾಗೆ ನೋಡಿದರೆ ಇದೇ ಚಿತ್ರವನ್ನು ಕಡಿಮೆ ಅವಧಿಯಲ್ಲಿ ಸುಂದರವಾಗಿ ನಿರೂಪಿಸಿದ್ದರೆ ಗಿಟ್ಟುತ್ತಿತ್ತೇನೋ? ಆದರೆ, ಸಾಯಿಸಾಗರ್‌ ತಮ್ಮ ಪ್ರತಿಭೆಯನ್ನೆಲ್ಲಾ ಧಾರೆಯೆರೆದು ಚಿತ್ರಕತೆ ಬರೆದಿದ್ದಾರೆ. ಬೇಡವಾದದ್ದನ್ನೆಲ್ಲಾ, ನಂಬಲಾಗದ ವಿಷಯಗಳನ್ನು ಅನವಶ್ಯಕವಾಗಿ ತುರುಕಿ ಎಳೆದಾಡಿದ್ದಾರೆ. ಒಂದು ಮುಗ್ಧ ಪ್ರೇಮಕತೆಗೆ ವಾಕರಿಕೆ ಬರುವಷ್ಟು ಹಿಂಸೆ, ಕ್ರೌರ್ಯ, ವಿಕೃತಿ ತುಂಬಿಬಿಟ್ಟಿದ್ದಾರೆ(ಸೆನ್ಸಾರ್‌ನವರು ಎ ಪ್ರಮಾಣಪತ್ರ ಕೊಟ್ಟಿರಬಹುದು. ಆದರೂ ಅಷ್ಟೊಂದು ಹಿಂಸೆಯನ್ನು ಅದ್ಹೇಗೆ ಬಿಟ್ಟರೋ ಗೊತ್ತಿಲ್ಲ?). ಅದೇ ಕಾರಣಕ್ಕೆ ಚಿತ್ರ ಸುಸ್ತು ಹೊಡೆಸಿಬಿಡುತ್ತದೆ.

ಹಾಗಂತ ಚಿತ್ರವನ್ನು ತೀರಾ ತೆಗೆದು ಹಾಕುವ ಹಾಗಿಲ್ಲ. ನಿರೂಪಣೆ, ಚಿತ್ರಕತೆ ವಿಷಯ ಬಿಟ್ಟರೆ ಚಿತ್ರ ತಾಂತ್ರಿಕವಾಗಿ ಶ್ರೀಮಂತವಾಗಿದೆ. ಛಾಯಾಗ್ರಾಹಕ ರಮೇಶ್‌ಬಾಬು ಕೆಲಸ ಸೊಗಸಾಗಿದೆ. ಅದರಲ್ಲೂ ಆರಂಭ ಹಾಗೂ ಕ್ಲೈಮ್ಯಾಕ್ಸ್‌ ದೃಶ್ಯಗಳಲ್ಲಿ ರಮೇಶ್‌ಬಾಬೂದು ಸಖತ್‌ ಕೆಲಸ. ಬಹಳ ದಿನಗಳ ನಂತರ ವೆಂಕಟ್‌ನಾರಾಯಣ್‌ ಪುನಃ ಜಾದೂ ತೋರಿಸಿದ್ದಾರೆ. ‘ಉಯ್ಯಾಲೆ ಉಯ್ಯಾಲೆ... ’, ‘ಹೆತ್ತ ತಾಯಿಗೆ ಮಗನ ಚಿಂತೆ... ’ ಹಾಡುಗಳು ಕೇಳಬಹುದು. ಸಾಧ್ಯವಾದಷ್ಟು ಸಂಕಲನಕಾರ ರಾಜಶೇಖರರೆಡ್ಡಿ ಸಹ ಚಿತ್ರ ಚುರುಕಾಗಿಸುವುದಕ್ಕೆ ಕಷ್ಟಪಟ್ಟಿದ್ದಾರೆ.

ಈ ಚಿತ್ರದಲ್ಲಿ ತಂತ್ರಜ್ಞರು ಗೆಲ್ಲುವಂತೆ ಕಲಾವಿದರು ಗೆಲ್ಲುವುದಿಲ್ಲ. ಅದರಲ್ಲೂ ಬಿ.ಸರೋಜಾದೇವಿಯವರಂಥ ಹಿರಿಯ ನಟಿ ಹೀಗೆ ಬಂದು ಹಾಗೆ ಹೋಗುವುದು ಬೇಸರ ತರಿಸುತ್ತದೆ. ಬಹಳ ವರ್ಷಗಳ ನಂತರ ಅವರ ಅಭಿನಯವನ್ನು ಸವಿಯಲು ಬಂದವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ನಾಯಕ ಅರ್ಜುನ್‌ ಶಕ್ತಿ ಮೀರಿ ಅಭಿನಯಿಸಿದ್ದಾರೆ. ನಾಯಕಿ ಅನೂಷ್ಕಗೆ ಹೆದರುವುದೇ ಅಭಿನಯ. ಹನುಮಂತೇಗೌಡರಂಥ ಪ್ರತಿಭಾವಂತರಿಂದ ಅಷ್ಟು ಕೆಟ್ಟ ಹಾಗೂ ನಾಟಕೀಯ ಅಭಿನಯ ತೆಗೆಸಿದ್ಯಾಕೆಂದು ಸಾಯಿ ಸಾಗರ್‌ ಅವರೇ ಉತ್ತರಿಸಬೇಕು. ಇನ್ನೂ ಎಷ್ಟೋ ಪಾತ್ರಗಳಿವೆ. ಅವ್ಯಾವುವೂ ತಿಮ್ಮನ ಹುಚ್ಚು ಮನಸ್ಸಿನ ಹತ್ತು ಮುಖಗಳ ಮುಂದೆ ನಿಲ್ಲುವುದಿಲ್ಲ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada