twitter
    For Quick Alerts
    ALLOW NOTIFICATIONS  
    For Daily Alerts

    ಅಭಿಮಾನಿಗಳ ಕಣ್ಣಲ್ಲಿ ಕರ್ಣ ಪರ್ವ

    By Staff
    |

    ‘ಕರ್ಣನ ಸಂಪತ್ತು’ ಸುಮಾರು 14ವರ್ಷಗಳಷ್ಟು ಹಳೆಯದು. ಆದರೂ 35 ಎಂ.ಎಂ.ನಲ್ಲಿ ತಯಾರಾಗಿರುವ ಈ ಚಿತ್ರ ಯಾವುದೇ ಸಮಯಕ್ಕೆ ಬೇಕಾದರೂ ಹೊಂದುವಂತಿದೆ. ಅದಕ್ಕೆ ಕಾರಣ ಚಿತ್ರದ ಕತೆ.

    ಮೊದಲು ಕತೆ ಕೇಳಿಬಿಡಿ. ಅದೊಂದು ಪುಟ್ಟ ಊರು. ಹೆಸರು ಕೂಗೂರು. ಅಲ್ಲಿನ ಚಾಮಯ್ಯ ಮೇಷ್ಟರಿಗೆ (ಅಶ್ವತ್ಥ್‌) ಶಾಲೆಯಿಂದ ನಿವೃತ್ತಿಯಾಗುತ್ತದೆ. ಮಕ್ಕಳಿಗೆ ಇನ್ನೂ ಪಾಠ ಮಾಡುವ ಹುಮ್ಮಸ್ಸು. ಆದರೆ ಶಾಲೆಯಲ್ಲಿ ಅನುಮತಿಯಿಲ್ಲ. ಜಾತಿ, ಧರ್ಮ, ಮತ ಹಾಗೂ ರಾಜಕೀಯದಿಂದ ದೂರವಿರುವ ಆದರ್ಶ ಶಾಲೆಯನ್ನು ಕಟ್ಟುವ ಕನಸು ಕಾಣುತ್ತಾರೆ. ಈ ರೀತಿ ಸಮಾಜ ಸೇವೆ ಮಾಡಲು ಅವರಿಗೆ ನಟ ಅಂಬರೀಷ್‌ ಸ್ಫೂರ್ತಿ. ಹೀಗೆ ಬೇರೆಬೇರೆ ಜಾತಿ ಹಾಗೂ ಧರ್ಮಗಳ ಅಂಬರೀಷ್‌ ಅಭಿಮಾನಿಗಳು ಒಂದಾಗಿ, ಅಂಬಿಯಂತೆಯೇ ತಾವು ಸಮಾಜ ಸೇವೆ ಮಾಡಬೇಕೆಂದು ಅಭಿಮಾನಿ ಸಂಘ ಕಟ್ಟಿ ಆ ಮೂಲಕ ಹಲವಾರು ಸಮಾಜ ಸೇವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

    ಬೆಂಗಳೂರಿನಲ್ಲಿರುವ ಅಂಬಿಗೆ ಈ ವಿಷಯ ತಿಳಿಯುತ್ತದೆ. ತನ್ನ ಅಭಿಮಾನಿಗಳು ಇಂಥದೊಂದು ಉತ್ತಮ ಕೆಲಸ ಮಾಡುತ್ತಿರುವುದರಿಂದ ಸಂತೋಷಗೊಂಡು ಪತ್ರಿಕೆಗಳ ಮೂಲಕ ಅವರಿಗೆ ಧನ್ಯವಾದ ಅರ್ಪಿಸುತ್ತಾರೆ. ಅದನ್ನು ಓದುವ ಅಭಿಮಾನಿಗಳು ಅಂಬಿಯನ್ನು ಒಂದು ಬಾರಿ ಹೋಗಿ ನೋಡಿ ಬರಲೇಬೇಕೆಂದು ಬೆಂಗಳೂರಿಗೆ ಹೊರಡುತ್ತಾರೆ. ಆದರೆ ಅಲ್ಲಿ ಅವರಿಗೆ ನಾನಾ ಸಮಸ್ಯೆ, ಮೋಸ ಎದುರಾಗುತ್ತದೆ. ‘ಅಂಬಿಯ ಕಾಣಲು ಬಂದು ಅಂಬಲಿ ದುಡ್ಡು ಹೋಯ್ತೇ, ದೊಂಬಿಯ ನಗರದಲ್ಲಿ ಇಂದು ಅಂಬೋ ಅನ್ನೋ ಹಾಗಾಯ್ತೇ!’ಎಂದು ಗೋಳಿಡುವವರೆಗೂ ಅದು ಮುಂದುವರಿಯುತ್ತದೆ. ಏನೇನೋ ಕಷ್ಟಕೋಟಲೆಗಳ ಮಧ್ಯೆ ಕೂಗೂರಿನ ಅಭಿಮಾನಿಗಳೆಲ್ಲಾ ಅಂಬಿಯನ್ನು ಕಂಡ ತಮ್ಮ ಅಭಿಮಾನವನ್ನು ತೋಡಿಕೊಳ್ಳುವಲ್ಲಿ ಚಿತ್ರ ಮುಗಿಯುತ್ತದೆ.

    ಇದು ಚಿತ್ರದ ಒಟ್ಟಾರೆ ಸಾರಾಂಶ. ಮೊದಲೇ ಹೇಳಿದ ಹಾಗೆ ಚಿತ್ರ ನಿಂತಿರುವುದೇ ಅಭಿಮಾನ ಹಾಗೂ ಅಭಿಮಾನಿಗಳ ಮೇಲೆ. ಹಾಗಾಗಿ ಇಲ್ಲಿ ಅಭಿಮಾನವೇ ಮೂಲ, ಅಭಿಮಾನಿಗಳೇ ಎಲ್ಲ. ಆದರೂ, ಚಿತ್ರ ನೋಡುತ್ತಿದ್ದಂತೆ ಅಭಿಮಾನ ಕೊಂಚ ಅತಿಯಾಯಿತೆನಿಸಿದರೆ ಆಶ್ಚರ್ಯಪಡಬೇಕಿಲ್ಲ. ಏಕೆಂದರೆ ಏಟು ಬಿದ್ದರೂ ಬ್ಯಾಂಡೇಜ್‌ ಹಾಕಿಸಿಕೊಂಡಾದರೂ ಮೊದಲ ದಿನ ಅಂಬರೀಷ್‌ ಚಿತ್ರವನ್ನು ನೋಡುವ ಬಾಲಕ, ತಮ್ಮ ಮೆಚ್ಚಿನ ನಟನಿಗೆ ಎಳೆನೀರು, ಚಕ್ಕುಲಿ, ಕೊಬ್ಬರಿ ಮಿಠಾಯಿ, ಬಾಳೆಹಣ್ಣು ಮುಂತಾದ ತಿಂಡಿ ತಿನಿಸುಗಳನ್ನು ಕಳುಹಿಸಿಕೊಡುವ ಗ್ರಾಮಸ್ಥರು, ಹೆಂಗಸರೇನು ಅಭಿಮಾನಗಳಲ್ವ ಎಂದು ಜಗಳಕ್ಕೆ ನಿಲ್ಲುವ ಹೆಂಗಸರು,ಮಾತು ಮಾತಿಗೂ ಕರ್ಣ, ದೇವ್ರು ಎಂದು ಹಾಡಿ ಹೊಗಳುವ ಅಭಿಮಾನಿಗಳು, ಇವೆಲ್ಲಾ ಅಭಿಮಾನವೋ, ಮುಗ್ಧತೆಯೋ ಅಥವಾ ಮೌಢ್ಯದ ಪರಾಕಾಷ್ಠೆಯೋ ಎಂಬುದನ್ನು ತಿಳಿಯಲು ಸ್ವಲ್ಪ ಸಮಯವೇ ಹಿಡಿಯುತ್ತದೆ.

    ಒಂದು ಕಡೆ ಅಭಿಮಾನಿಗಳ ಅಭಿಮಾನವನ್ನು ವೈಭವೀಕರಿಸುತ್ತಲೇ ಮತ್ತೊಂದು ಕಡೆ ಆ ಅಭಿಮಾನಿಗಳು ತಮ್ಮ ಮೆಚ್ಚಿನ ಕಲಾವಿದರನ್ನು ನೋಡಲು ಏನೆಲ್ಲಾ ಕಷ್ಟಗಳನ್ನು ಎದುರಿಸಬೇಕಾಗಬಹುದು ಎಂಬುದನ್ನು ಸಮರ್ಥವಾಗಿ ವಿವರಿಸುತ್ತಾರೆ ನಿರ್ದೇಶಕ ಶಾಂತಾರಾಂ. ಕಲಾವಿದರು ಕೂಡಾ ಹೇಗಿದ್ದರೆ ಚೆನ್ನ ಎಂಬುದನ್ನು ಅವರು ಅಂಬಿ ಪಾತ್ರದ ಮೂಲಕ ಹೇಳುತ್ತಾರೆ.

    ಅಂಬರೀಷ್‌ ಇಲ್ಲಿ ನಟ ಅಂಬರೀಷ್‌ ಆಗಿಯೇ ಕಾಣಿಸಿಕೊಂಡಿದ್ದಾರೆ. ಆದರೂ ಅವರು ಅಭಿಮಾನಿಗಳ ಕಣ್ಣಿಗೆ ಕರ್ಣ, ಕನ್ವರ್‌ಲಾಲ್‌, ನ್ಯೂಡೆಲ್ಲಿ ಸಂಪಾದಕ...ಮುಂತಾದ ಹಲವು ವೇಷಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ಅವರು ಫೈಟ್‌ ಮಾಡಿಲ್ಲ, ಗಿಮಿಕ್‌ಗಳೂ ಇಲ್ಲ. ಆದರೂ ಅವರು ಬಹಳ ಸಲೀಸಾಗಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಅದಕ್ಕೆ ಕಾರಣ ಅವರ ಮಾಸದ ಜನಪ್ರಿಯತೆ. ಒಂದು ದಶಕಕ್ಕೂ ಹೆಚ್ಚು ಹಳೆಯದಾಗಿರುವುದರಿಂದ ಚಿತ್ರದಲ್ಲಿ ಪೋಷಕನಟರಿಗೆ ಸಾಕಷ್ಟು ಪ್ರಾಮುಖ್ಯತೆಯಿದೆ. ಹಾಗಾಗಿಯೇ ಅಶ್ವತ್ಥ್‌ ಚಿತ್ರದುದ್ದಕ್ಕೂ ವಿಜೃಂಭಿಸುತ್ತಾರೆ. ಅದೇ ರೀತಿ ಉಮಾಶ್ರೀ, ಟೆನ್ನಿಸ್‌ ಕೃಷ್ಣ, ಹೊನ್ನವಳ್ಳಿ ಕೃಷ್ಣ, ಮನ್‌ ದೀಪ್‌ ರೈ ಮುಂತಾದವರು ಗಮನ ಸೆಳೆಯುತ್ತಾರೆ. ಚಿಕ್ಕ ಪಾತ್ರಗಳಾದರೂ ಪ್ರಕಾಶ್‌ ರೈ ಹಾಗೂ ಮುಖ್ಯಮಂತ್ರಿ ಚಂದ್ರುಚೊಕ್ಕವಾಗಿ ನಟಿಸಿದ್ದಾರೆ. ಇದ್ದಕ್ಕಿಂತ ಹಳೆಯ ಚಿತ್ರ ಸದ್ಯಕ್ಕೆ ಬಿಡುಗಡೆ ಯಾವುದೂ ಇಲ್ಲದಿರುವುದರಿಂದ ಸುಧೀರ್‌, ಮೈಸೂರು ಲೋಕೇಶ್‌, ‘ಚೋಮನ ದುಡಿ’, ವಾಸುದೇವ ರಾವ್‌. ಸುಂದರಕೃಷ್ಣ ಅರಸ್‌ ಮುಂತಾದ ದಿವಂತರು ನಟಿಸಿದ ಕಡೆಯ ಚಿತ್ರ ಎಂದು ಪರಿಗಣಿಸಬಹುದು.

    ಸೌಂಡ್‌ ಆಫ್‌ ಮ್ಯೂಸಿಕ್‌ ಗುರು ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳೂ ಕೇಳುವಂತಿವೆ.

    (ಸ್ನೇಹ ಸೇತು : ವಿಜಯ ಕರ್ನಾಟಕ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Friday, March 29, 2024, 10:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X