»   » ಶ್ರೀರಾಮನದೇ ದಯೆ, ಉಳಿದುದು ನವೆ...ನವೆ...

ಶ್ರೀರಾಮನದೇ ದಯೆ, ಉಳಿದುದು ನವೆ...ನವೆ...

Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

‘ಅಯ್ಯೋ ಅಂದ್ರೆ ನೂರು ವರುಷ. ಯೇ ಅಂದ್ರೆ ಮೂರೇ ನಿಮಿಷ. ನಾಯಕ ಹೀಗೆ ಗುಡುಗಿದಾಗ ಆತನ ಮೂರು ಬೆರಳು ಮೇಲೇರುತ್ತವೆ. ಎದುರಿದ್ದವರು ಕೆಳಗೆ ಬೀಳುತ್ತಾರೆ. ಆತ ಶಿವಣ್ಣನೂ ಹೌದು. ಶ್ರೀರಾಮನೂ ಹೌದು. ಒಂದು ಕಡೆ ಆಳು. ಮತ್ತೊಂದು ಕಡೆ ಯಜಮಾನ. ಒಂದೇ ರೂಪ ಎರಡೆರಡು ಹಗಲುವೇಷ. ಹಾಗಾದರೆ ಈತನದ್ದು ದ್ವಿಪಾತ್ರವಾ ? ನೋ ಚಾನ್ಸ್‌. ಮತ್ತೇನಪ್ಪಾ ಅಂದರೆ... ನೋಡಿದರಷ್ಟೇ ಸಿಗುತ್ತೆ ಬಿಸಿ ಬಿಸಿ ಹೋಳಿಗೆ ತುಪ್ಪ...

,ರಾಮಾಯಣ ಗೊತ್ತಿದ್ದವರಿಗೆ ಇದು ಹಳೆಯ ಕತೆ. ಆದ್ದರಿಂದ ಆತನ ಹೆಸರು ರಾಮ. ಊರಿಗೆಲ್ಲಾ ಬಂಗಾರದ ಮನುಷ್ಯ. ಅಪ್ಪ ಅಮ್ಮನಿಗೆ ಚಿನ್ನದಂತಾ ಮಗ. ಮಲತಾಯಿಗೆ ಮಾತ್ರ ಬ್ಯಾಡಗಿ ಮೆಣಸಿನ ಕಾಯಿ ರೂಪ. ಆತನನ್ನು ನೋಡಿ ಆಕೆ ಕರುಬುತ್ತಾಳೆ. ಅಪ್ಪ ಹಲುಬುತ್ತಾನೆ. ಶ್ರೀರಾಮ ವನವಾಸಕ್ಕೆ ಹೊರಟು ದೂರದ ಊರಿನಲ್ಲಿ ನೆಲೆಸುತ್ತಾನೆ. ಅಲ್ಲಿಗೆ ‘ಸೀತಾ’ಫಲ ಹಣ್ಣಿನಂತಹ ಹುಡುಗಿ ಬರುತ್ತಾಳೆ. ಇಬ್ಬರ ಮದುವೆಗೆ ಎರಡು ಸೆಕೆಂಡು ಉಳಿದಿದೆ. ಆಗ ಮಾಜಿ ಸೀತೆ ಫಡಫಡಿಸುತ್ತಾಳೆ. ಮದುವೆ ಗಂಡು ಗಡಬಡಿಸುತ್ತಾನೆ. ಹೆಣ್ಣು ಚಡಪಡಿಸುತ್ತಾಳೆ. ಮುಂದಾಗುವುದೆಲ್ಲ ಸಂಪೂರ್ಣ ‘ರಾಮಾ’ಯಾನ.

ಒಂದು ಮಸಾಲೆ ಸಿನಿಮಾಕ್ಕೆ ಯಾವ್ಯಾವ ಐಟಮ್‌ ಎಷ್ಟೆಷ್ಟು ಬೇಕೆನ್ನುವುದು ನಿರ್ದೇಶಕ ಎಂ. ಎಸ್‌ ರಮೇಶ್‌ಗೆ ಗೊತ್ತು. ಯಾವ ಮಾತು ಪಂಚ್‌ ನೀಡುತ್ತದೆ ಅನ್ನೋದು ಗೊತ್ತು. ಹೀರೋನನ್ನು ಹ್ಯಾಗೆ ವೈಭವೀಕರಿಸುವುದು ಅನ್ನೋದು ಗೊತ್ತು . ಆದರೆ ಇವೆಲ್ಲವೂ ತನಗೆ ಗೊತ್ತಿಗೆ ಅನ್ನುವುದೂ ಇವರಿಗೆ ಗೊತ್ತಾಗಿಬಿಟ್ಟಿದೆ. ರಮೇಶ್‌ ಎಲ್ಲವನ್ನೂ ತೂಕ ಮಾಡಿದಂತೆ ಹೇಳಲು ಹೊರಡುತ್ತಾರೆ. ಎಲ್ಲವನ್ನು ಅಚ್ಚುಕಟ್ಟಾಗಿ ತೋರಿಸುತ್ತಾರೆ. ಮುಂದೆ ಹೀಗೇ ಆಗುತ್ತದೆಂದು ಗೊತ್ತಾಗುವಂತೆ ಚಿತ್ರಿಸುತ್ತಾರೆ. ಹೇಳಬೇಕಾದುದರ ಜೊತೆಗೆ ಹೇಳಬಾರದ್ದನ್ನು ಹೇಳುತ್ತಾರೆ. ಎಲ್ಲವನ್ನೂ ಮಾತಿನಲ್ಲಿಯೇ ಮನೆ ಕಟ್ಟಲು ತವಕಿಸಿದ್ದಾರೆ. ಮೌನದ ಅರ್ಥವಂತಿಕೆ ಮೆರೆದಿದ್ದಾರೆ. ಅಗತ್ಯಕ್ಕಿಂತ ಹೆಚ್ಚಾಗಿ ವಾಚ್ಯವಾಗಿದ್ದಾರೆ.

ಮಾತು ಬರೆವಾಗ ಪ್ರಾಸಕ್ಕೆ ಹೆಚ್ಚು ತ್ರಾಸ ಪಟ್ಟಿದ್ದಾರೆ. ಕೆಲವೊಮ್ಮೆ ದೀರ್ಘದಂಡ ಪ್ರಣಾಮದಂತೆ ಡೈಲಾಗು ಉದುರಿಸುತ್ತಾರೆ. ತಾಂತ್ರಿಕವಾಗಿ ಇವರು ಇನ್ನಷ್ಟು ಹೆಚ್ಚು ತಿಳಿದುಕೊಳ್ಳುವ ಅಗತ್ಯವಿದೆ. ಆದರೆ ನಾಯಕನ್ನು ಚಿತ್ರಿಸಿದ ರೀತಿ ಅವರ ಅಭಿಮಾನಿಗಳಿಗೆ ಖುಷಿ ಕೊಡಬಹುದು. ರಜನಿ ಶೈಲಿಯನ್ನು ಹೋಲುವ ನಾಯಕನ ಮ್ಯಾನರಿಸಂನಲ್ಲಿ ಅತಿರೇಕವಿಲ್ಲ. ಕುಟುಂಬದಲ್ಲಿ ನಡೆವ ಕಲಹವನ್ನು ರಮೇಶ್‌ ಬಿಗಿಯಾಗಿ ನಿರೂಪಿಸಿದ್ದಾರೆ. ಸೆಂಟಿಮೆಂಟ್‌ ಖಂಡಿತ ವರ್ಕ್‌ಔಟು. ನಿರೂಪಣೆಯಲ್ಲಿ ಶ್ರೀಮಂತಿಕೆಯೇ ಹೈಲೈಟು.

ಟ್ರೇನ್‌ ಚೇಸಿಂಗ್‌ ದೃಶ್ಯ ಕನ್ನಡದ ಮಟ್ಟಿಗೆ ಚೇತೋಹಾರಿ. ಅದರಲ್ಲಿ ಮಾತ್ರ ವೇಣು ಛಾಯಾಗ್ರಹಣದ ತಪಸ್ಸು ಕಣ್ಣಿಗೆ ಕಾಣುತ್ತದೆ. ಉಳಿದಂತೆ ಒಂದೆರೆಡು ಶಾಟ್‌ ಬಿಟ್ಟರೆ ಮತ್ತೆಲ್ಲೂ ವೇಣು ಕಾಣಿಸುವುದೇ ಇಲ್ಲ. ‘ಮ್ಯೂಸಿಕ್‌ ಥೀಫ್‌’ ಎಂಬ ಸಿನಿಮಾ ತೆಗೆದರೆ ಅದಕ್ಕೆ ನಿರ್ವಿವಾದವಾಗಿ ಗುರುಕಿರಣ್‌ರನ್ನು ಹೀರೋ ಮಾಡಬಹುದು.

ಎಲ್ಲ ಮಿತಿಗಳ ನಡುವೆಯೂ ಚಿತ್ರವನ್ನು ಹೊತ್ತು ನಡೆದಿರುವುದು ಚಿತ್ರದ ನಾಯಕ. ಮೊದಲ ಬಾರಿಗೆ ತೆಲುಗು ಶೈಲಿಯ ನಾಯಕನಾಗಿ ಕಾಣಿಸಿಕೊಂಡಿರುವ ಇವರು ಸೆಂಟಿಮೆಂಟ್‌ ಮತ್ತು ಡ್ಯಾಶಿಂಗ್‌ ಭಾವನೆಗಳನ್ನು ಎಷ್ಟು ಹದವಾಗಿ ತೋರಿಸಿದ್ದಾರೆಂದರೆ ಇಬ್ಬರೂ ಒಬ್ಬರೇನಾ ಎಂಬ ಅನುಮಾನ ಮೂಡುತ್ತದೆ. ಹಡೆದವ್ವ ಮನೆಬಿಟ್ಟು ಹೋಗೆಂದು ಹೇಳುವಾಗ ತಂದೆ ಮಲತಾಯಿ ಕಾಲಿಗೆ ಬೀಳುವಾಗ ಇವರು ಬರೀ ಅಭಿನಯಿಸಲಿಲ್ಲ , ಅನುಭವಿಸಿದ್ದಾರೆ. ನಾಯಕಿ ಹೆಸರಿನಲ್ಲಿರುವ ಅಂಕಿತಾ ಇನ್ನೂ ಅಭಿನಯದ ಅಂಕೆಗಳನ್ನು ಮೊದಲಿನಿಂದ ಕಲಿಯಬೇಕಿದೆ. ಅಭಿರಾಮಿ ಕಲಿತರೂ ಕೆಲಸಕ್ಕೆ ಬಂದಿಲ್ಲ. ಕ್ರಿಯೇಟಿವ್‌ ನಿರ್ದೇಶಕನಿದ್ದರೆ ಸಯ್ಯದ್‌ನಂತಹ ಪೋಷಕ ನಟರೂ ಹೇಗೆ ತಮ್ಮ ಪ್ರತಿಭೆ ತೋರಿಸುತ್ತಾರೆ ಎನ್ನುವುದಕ್ಕೆ ಸಾಕ್ಷಿ ಇದೆ. ರಂಗಾಯಣ ರಘು ಅವಿನಾಶ್‌ ಲೋಕಾಯುಕ್ತನಾಗಿ ಮಿಂಚಿದ್ದಾರೆ. ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ನಟಿಸಿದ್ದು ಶ್ರೀನಿವಾಸ ಮೂರ್ತಿ.

ಅಂದಹಾಗೆ ಈ ಚಿತ್ರವನ್ನು ಮೇಲಿನಿಂದ ನೋಡಿದರೆ ತೆಲುಗಿನ ‘ಸಮರಸಿಂಹ ರೆಡ್ಡಿ’, ಕೆಳಗಿನಿಂದ ನೋಡಿದರೆ ‘ನರಸಿಂಹ ನಾಯ್ಡು’, ದೂರದಿಂದ ನೋಡಿದರೆ ಚಿರಂಜೀವಿ ನಟಿಸಿದ ‘ಇಂದ್ರ’ದ ನೆರಳು ಕಾಣುತ್ತದೆ. ಆದರಿದು ರಿಮೇಕ್‌ ಅಲ್ಲ. ಅಲ್ಲಿಯ ಮೂಲ ಹಂದರ ಮಾತ್ರ ತಂದಿದ್ದೇನೆ ಎನ್ನುತ್ತಾರೆ ನಿರ್ದೇಶಕ. ಹಾಗೆಯೇ ಇಂಟರ್‌ವೆಲ್‌ವರೆಗೆ ಒಂದು, ಅದಾದ ನಂತರ ಒಂದು ಚಿತ್ರವನ್ನು ನೋಡಿದಂತೆ ಅನಿಸುತ್ತದೆ. ಕೇವಲ ಮೂವತ್ತು ರೂಪಾಯಿಯಲ್ಲಿ ಎರಡು ಸಿನಿಮಾದ ರುಚಿ ತೋರಿಸಿದ್ದು ಪ್ರೇಕ್ಷಕರಿಗಾದ ಲಾಭವೋ ನಷ್ಟವೋ ಅನ್ನುವುದು ‘ಶ್ರೀರಾಮ’ನಿಗಲ್ಲ, ಕಾಲಕ್ಕಷ್ಟೇ ಗೊತ್ತು.

(ವಿ. ಕ.)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada