»   » ಹೆಣ್ಣಿಗೆ ಮನೆಯೇ ಗುಡಿ, ಗಂಡನೇ ದೇವರು ಎನ್ನುವ ಉಪದೇಶ, ‘ಮನು’ ಸಿದ್ಧಾಂತದ ಪುನರುಚ್ಛಾರ, ಈ ಪರಿಯ ಸಿಂಹಾದ್ರಿಯ ಸಿಂಹ ಮೀಸೆ ಸರಣಿಯ ‘ವಿಷ್ಣು ವಿಜಯ!’

ಹೆಣ್ಣಿಗೆ ಮನೆಯೇ ಗುಡಿ, ಗಂಡನೇ ದೇವರು ಎನ್ನುವ ಉಪದೇಶ, ‘ಮನು’ ಸಿದ್ಧಾಂತದ ಪುನರುಚ್ಛಾರ, ಈ ಪರಿಯ ಸಿಂಹಾದ್ರಿಯ ಸಿಂಹ ಮೀಸೆ ಸರಣಿಯ ‘ವಿಷ್ಣು ವಿಜಯ!’

Subscribe to Filmibeat Kannada

ಹಸಿವಿನಿಂದ ಹೊಟ್ಟೆ ಕಾ..ಕಾ.. ಅಂತಿದ್ದರೂ ಗಂಡನ ನಂತರವೇ ಊಟ ಮಾಡಬೇಕೆಂಬುದು ಅಲ್ಲಿಯ ಅಲಿಖಿತ ಶಾಸನ. ಆಕಸ್ಮಾತ್‌ ಗಂಡನಿಗಿಂತ ಮುಂಚೆ ಊಟ ಮಾಡಿದ್ದೇ ಈಕೆಯ ಮಹಾಪರಾಧವಾಗುತ್ತದೆ. ಇದು ಹೆಣ್ಣಿನ ಲಕ್ಷಣವಲ್ಲ ಎನ್ನುವ ಉಪನ್ಯಾಸ ಕೂಡಾ ಉಚಿತವಾಗಿ ನೀಡಲಾಗುತ್ತದೆ. ಅಲ್ಲಿಂದ ಯುದ್ಧ ಶುರುವಾದರೂ, ಹಿರಿಯಣ್ಣನ ಮನೆತನದ ಗೌರವ- ಮರ್ಯಾದೆಯ ಮಾತುಗಳಿಂದ ಈಕೆ ಕೂಡಾ ಮರುಳಾಗುತ್ತಾಳೆ. ಆ ಮನೆಯವರೊಂದಿಗೆ ಒಂದಾಗುತ್ತಾಳೆ. ಒಂಥರಾ ಬಂಧಿಯಾಗುತ್ತಾಳೆ. ಆಮೆಲೆ ಕಿರಿಸಿಂಹ ಕೊಲೆ ಆಪಾದನೆ ಮೇರೆಗೆ ಊರಿನಿಂದ ಆಚೆ ಬದುಕುವ ಶಿಕ್ಷೆ ಪಡೆಯುತ್ತಾನೆ. ಈ ನಡುವೆ ಮತ್ತೊಂದು ಸಿಂಹ ಫ್ಲಾಶ್‌ ಬ್ಯಾಕ್‌ನಲ್ಲಿ ಗುರುಗುಡುತ್ತದೆ. ಅಲ್ಲೊಂದು ಸೇಡಿನ ಕತೆ ಇದೆ.

ಇದು ತಮಿಳಿನ ನಾಟ್ಟಮೈ ಚಿತ್ರದ ರಿಮೇಕು. ಸರ್ಕಾರಕ್ಕಿಂಥ ಪಾಳೆಗಾರಿಕೆ ದೊಡ್ಡದೆನ್ನುವ ನೀತಿ ಹೇಳುವ ಕತೆ ಇಲ್ಲಿದೆ. ಆ ಮೂಲಕ ಗುಲಾಮಗಿರಿ, ಉರಿವ ಬೆಂಕಿ ಹರಿವ ನೀರು ಸುಳಿವ ಗಾಳಿಯಷ್ಟೇ ಸಹಜವೆನ್ನುವ ಮೆಗಾ ಸಂದೇಶವೂ ಇದೆ. ಹೆಣ್ಣು ಸದಾ ಸಂಪ್ರದಾಯದ ಕಟ್ಟಳೆಯಲ್ಲೇ ಕೊಳೆಯಬೇಕು. ಮಾನ-ಮರ್ಯಾದೆಗೆ ಅಂಜಿ ಮನೆಯಲ್ಲಿ ಇದ್ದರೆ ಮಾತ್ರ ಅವಳು ಸೀತೆಯಾಗುತ್ತಾಳಂತೆ. ಇದು ನಿರ್ದೇಶಕ ಎಸ್‌.ನಾರಾಯಣ್‌ ಪ್ರಸ್ತುತ ಪಡಿಸುವ ಹೊಸ ಸಂಶೋಧನೆಯ ಸ್ಯಾಂಪಲ್‌ಗಳು. ಹುಡುಕುತ್ತಾ ಹೋದರೆ ಇಂತಹ ಸಾವಿರಾರು ಕ್ರಾಂತಿಕಾರಿ ನಿಲುವುಗಳು ನಿಮಗೆ ದೊರೆಯಬಹುದು. ಇಷ್ಟು ಕೇಳಿದ ಮೇಲೆ ಕತೆಯಲ್ಲಿ ಹೊಸತನವಿಲ್ಲವೆಂಬುದೂ, ಇದೊಂದು ಅನಾದಿ ಕಾಲದ ಕತೆಯೆಂಬುದೂ, ಆದಿ ಸಂಸ್ಕೃತಿಯನ್ನು ಇಂದಿನ ಸಂಸ್ಕೃತಿಯೆಂದು ಬಿಂಬಿಸುವ ಉದ್ದೇಶ ಹೊಂದಿರುವುದೂ ಅರಿವಾಗುತ್ತದೆ. ಇದೆಲ್ಲಕ್ಕಿಂಥ ನಿಮ್ಮನ್ನು ಬೆಚ್ಚಿಬೀಳಿಸುವುದು ನಾರಾಯಣ್‌ರ ‘ಮನು’ ವಾದ. ತಲೆಯಿಂದ ಕೆಲಸ ಮಾಡುವವನು ಬ್ರಾಹ್ಮಣ, ಶಕ್ತಿಯಿಂದ ಕ್ಷತ್ರಿಯ, ಯುಕ್ತಿಯಿಂದ ವೈಶ್ಯ... ಹಾಗೆಯೇ ಶೂದ್ರನ ಕಡೆಗೆ ಬಂದಾಗ ಎಲ್ಲರ ಬಯಕೆಗಳನ್ನು ಈಡೇರಿಸುವ, ನಮಗೆ ಅನ್ನ ನೀಡುವ ವ್ಯಕ್ತಿ ಎನ್ನುವಂತೆ ನಾರಾಯಣ್‌ ಪಾತ್ರವೊಂದರ ಮೂಲಕ ಹೇಳಿಸುತ್ತಾರೆ. ಪಾಳೆಗಾರಿಕೆ ಗತ್ತನ್ನು ತೋರುವ ಎದ್ವಾ ತದ್ವಾ ‘ಖುಸಿ’ಯಲ್ಲಿ ನಾರಾಯಣ್‌ ಮೈ ಮರೆತಿದ್ದಾರೆ. ಜೊತೆಗೆ ಬುದ್ಧಿ ಕೂಡಾ.. ಯಾರೇನೆ ಮಾಡಲಿ ವಿಷ್ಣು ಅಭಿಮಾನಿಗಳ ಪಾಲಿಗಿಲ್ಲಿ ಹಬ್ಬದೂಟ ರೆಡಿಯಾಗಿದೆ. ಒಂದಲ್ಲ , ಎರಡಲ್ಲ ಅನಾಮತ್ತು ಮೂರು ಮೂರು ಸಿಂಹಗಳ ಘರ್ಜನೆಯನ್ನು ಒಂದೇ ಸಿನಿಮಾದಲ್ಲಿ ನೋಡುವ ಸೌಭಾಗ್ಯ ಕಾದಿದೆ. ಜೊತೆಗೆ ಮೂರು ವಿಭಿನ್ನ ಮೀಸೆಗಳ ಕುಸುರಿತನ ಕಣ್ಣು ಕುಕ್ಕುತ್ತದೆ. ಇನ್ನೆಷ್ಟು ವೆರೈಟಿ ಮೀಸೆಗಳನ್ನು ನಾರಾಯಣ್‌ ತಮ್ಮ ಲಾಕರ್‌ನಲ್ಲಿ ಇಟ್ಟಿದ್ದಾರೆಂದು ತಿಳಿಯದೆ ಚಿತ್ತ ಚಕಿತರನ್ನಾಗಿಸುತ್ತದೆ.

ಎರಡು ಲೀಟರ್‌ ಕಣ್ಣೀರು, ನಾಲ್ಕು ಲೋಡು ಹ್ಞೂಂಕಾರ, ಎರಡೇ ಚಮಚ ತಮಾಷೆ, ರುಚಿಗೆ ತಕ್ಕಷ್ಟು ಗಂಭೀರತೆ ಸೇರಿಸಿದರೆ ಮೂರು ಪಾತ್ರಗಳ ಬಣ್ಣ ಬಯಲಾಗುತ್ತದೆ. ವಿಷ್ಣು ಅಭಿಮಾನಿಗಳಿಗಾಗಿಯೇ ಬಳಸಿದ ಗ್ರಾಫಿಕ್ಸ್‌, ಪಂಚಿಂಗ್‌ ಸಂಭಾಷಣೆ ಮತ್ತು ಒಂದು ಹಾಡು ಅವರವರ ಭಕುತಿಗೆ ಅವರವರ ಪ್ರೀತಿಗೆ ಬಿಡಬಹುದು. ವಿಷ್ಣು ಕಟ್ಟಾ ಅಭಿಮಾನಿ ವಿಜಯಕುಮಾರ್‌ ನಿರ್ಮಿಸಿದ ಈ ಚಿತ್ರದ ವಿಶೇಷ ಇರುವುದು ಅದರ ಶ್ರೀಮಂತಿಕೆಯಲ್ಲಿ . ಪ್ರತಿಯಾಂದು ಫ್ರೇಮ್‌ನಲ್ಲಿ ಅದ್ಧೂರಿತನ ತೋರಿಸಲು ನಾರಾಯಣ್‌ ಶ್ರಮಿಸಿದ್ದಾರೆ. ಆದರೆ ಮುಖ್ಯಮಂತ್ರಿ ಚಂದ್ರುಗೆ ಹೆಣ್ಣು ವೇಷ ತೊಡಿಸಿ ತಮ್ಮ ಹುಟ್ಟುಗುಣ ಇನ್ನು ಮರೆತಿಲ್ಲ ವೆಂಬುದನ್ನು ಸಾಬೀತುಪಡಿಸಿದ್ದಾರೆ.

ಒಂದೆರಡು ದೃಶ್ಯಗಳಲ್ಲಿ ಮೀನಾ ಅಚ್ಚರಿ ಹುಟ್ಟಿಸಿದರೂ ಆಮೇಲೆ ಆಕೆಯೂ ಹತ್ತರಲ್ಲಿ ಹನ್ನೊಂದು. ಶೋಭರಾಜ್‌ ನಟನೆ ಭಯಂಕರ. ಉಮಾಶ್ರೀಯಂಥ ಕಲಾವಿದೆ ಸಿಕ್ಕಿದ್ದು ಕನ್ನಡಿಗರ ಪಾಲಿನ ಹೆಮ್ಮೆ . ಭಾನುಪ್ರಿಯ, ಅಭಿಜಿತ್‌, ಸುಂದರ್‌ರಾಜ, ರೇಖದಾಸ್‌ ಕರಿಬೇವಿನ ಸೊಪ್ಪು .

ಕಲ್ಲಾದರೆ ನಾನು.. ಹಾಡಿನ ಸಾಹಿತ್ಯಕ್ಕಿಂತ ಅದನ್ನು ಚಿತ್ರಿಸಿದ ರೀತಿ ಅದಕ್ಕೊಂದು ಬೆಲೆ ತಂದಿದೆ. ಇನ್ನೆರಡು ಹಾಡು ಕೇಳುವಂತಿವೆ. ಮನಸ್ಸಿಗೆ ಹತ್ತಿರವೆನಿಸುವ ಸಂಭಾಷಣೆ ಬರೆದ ನಾರಾಯಣ್‌, ಕೆಲವೊಮ್ಮೆ ‘ನಡು’ಗನ್ನಡದಿಂದ ತಮ್ಮ ಎಡಬಿಡಂಗಿ ಅಭಿರುಚಿ ತೋರಿಸುತ್ತಾರೆ. ಏನೇ ಆದರೂ ವಿಷ್ಣು ಪಾರಾಯಣ ಮಾಡುವ ಮಂದಿಗೆ ಇದು ವಿಷ್ಣು ವಿಜಯ. ಕೆಲವೊಮ್ಮೆ ಸಿಂಹ ಘರ್ಜನೆ, ಮತ್ತೊಮ್ಮೆ ಯಜಮಾನ, ಮಗದೊಮ್ಮೆ ಸಿಂಹಾದ್ರಿಯ ಸಿಂಹ. ನೋಡುಗರೂ ಸಿಂಹವಾಗದಿದ್ದರೆ ಅದೊಂದೇ ನಾರಾಯಣ್‌ಗೆ ಸಿಕ್ಕುವ ಕ್ರೆಡಿಟ್ಟು !

(ವಿಜಯ ಕರ್ನಾಟಕ)

Post your own Review

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada