»   » ಇದು ಈ ವರ್ಷದ ಎರಡನೇ ಯುಗಾದಿ!

ಇದು ಈ ವರ್ಷದ ಎರಡನೇ ಯುಗಾದಿ!

Subscribe to Filmibeat Kannada


ಒಂದು ಸಿನಿಮಾಕ್ಕೆ ಇನ್ನೇನು ಬೇಕು? ಮನಸ್ಸು ಯುಗಾದಿ, ಮನೆ ತುಂಬಾ ಬೇವು ಬೆಲ್ಲ ತುಂಬಿಕೊಳ್ಳಲು ನೀವೊಮ್ಮೆ ಹೋಗಿ ಬನ್ನಿ!ಚಿತ್ರ : ಯುಗಾದಿ
ನಿರ್ಮಾಣ : ಗಣೇಶ್ ಮತ್ತು ಜಗದೀಶ್
ನಿರ್ದೇಶನ :ಸಾಯಿ ಪ್ರಕಾಶ್
ಸಂಗೀತ : ಪಟ್ನಾಯಕ್
ತಾರಾಗಣ : ರವಿಚಂದ್ರನ್, ಶ್ರೀಕಾಂತ್, ಕಾಮನಾ ಜೇಠ್ಮಲಾನಿ, ಜೆನ್ನಿಫರ್, ಶ್ರೀನಿವಾಸ ಮೂರ್ತಿ ಮತ್ತಿತರರು.

ಯುಗಾದಿ ಮತ್ತೆ ಬಂದಿದೆ. ಈ ಮಳೆಗಾಲದಲ್ಲಿ ಇದ್ಯಾವ ಯುಗಾದಿ ಅಂದರೆ ಸಾಯಿ ಪ್ರಕಾಶ್ ಒಂದು ಚೆಂದದ ಕತೆಗೆ ತೋರಣ ಕಟ್ಟಿದ್ದಾರೆ. ಹೌದು, ಇದು ಇತ್ತೀಚೆಗೆ ಬಂದ ಚಿತ್ರಗಳಲ್ಲಿ ತುಂಬ ವಿಭಿನ್ನ ಸ್ಥಾನ ಗಿಟ್ಟಿಸಿದೆ. ಒಂದು ತುಂಬು ಕುಟುಂಬದ ಕತೆಯನ್ನು ಹೃದಯ ತುಂಬಿ ಬರುವಂತೆ ನಿರೂಪಿಸಿದೆ.

ತಮ್ಮ ಬುದ್ಧಿವಂತಿಕೆ ಕೈಬಿಟ್ಟು ತೆಲುಗಿನಲ್ಲಿ ಹೇಗಿತ್ತೋ ಹಾಗೇ ಇಳಿಸಿದ್ದಾರೆ ಸಾಯಿ. ಅದು ಒಳ್ಳೆಯ ಫಲಿತಾಂಶವನ್ನೇ ನೀಡಿದೆ. ಮೊದಲಾರ್ಧದಲ್ಲಿ ತಮಾಷೆ, ಪ್ರೀತಿ, ತೆಳು ಸೆಂಟಿಮೆಂಟು ಇದೇ ರೀತಿ ಸಾಗುವ ಕತೆಯಲ್ಲಿ ಟ್ವಿಸ್ಟ್ ಇರದಿದ್ದರೆ ಹೇಗೆ? ಅದಕ್ಕೆ ಒಬ್ಬ ನಾಯಕಿ ಸಾಯುತ್ತಾಳೆ. ಜತೆಗೆ ನಾಯಕನ ಕೈಗೊಂದು ಮಗುವನ್ನು ಇಡುತ್ತಾಳೆ. ಅವಳ ಜಾಗಕ್ಕೆ ಇನ್ನೊಂದು ಹುಡುಗಿ ಬರಲು ತವಕಿಸುತ್ತಾಳೆ. ಆದರೆ ಆ ಹುಡುಗಿಯ ಹಿಂದೆ ಇನ್ನೊಬ್ಬ ಹುಡುಗ ಬಿದ್ದಿರುತ್ತಾನೆ. ಅಂತಿಮವಾಗಿ ಪರಿಹಾರ ಏನಪ್ಪಾ ಅಂದರೆ ಸಿನಿಮಾ ನೋಡಬೇಕಷ್ಟೇ...

ಇದು ತೆಲುಗಿನ ಸಂತೋಷಂ ಚಿತ್ರದ ರೀಮೇಕು. ಅಲ್ಲಿ ನಾಗಾರ್ಜುನ್ ಮಾಡಿದ ಪಾತ್ರವನ್ನು ಇಲ್ಲಿ ರವಿಚಂದ್ರನ್ ಮಾಡಿದ್ದಾರೆ. ಒಂದು ಹಂತದ ತನಕ ಗೆದ್ದಿದ್ದಾರೆ.

ನಾಗಾರ್ಜುನ್ ಪಾತ್ರ ನೆನಪಿಟ್ಟುಕೊಳ್ಳದೆ ನೋಡಿದರೆ ರವಿ ಖುಷಿ ಕೊಡುತ್ತಾರೆ. ಇಂಥ ಪಾತ್ರಗಳನ್ನು ಹಿಂದೆ ಮಾಡಿದ್ದರಿಂದ ಎಲ್ಲವೂ ಸರಳ, ಸುಲಲಿತ. ತೆಲುಗು ನಟ ಮತ್ತು ಕನ್ನಡದ ಹುಡುಗ ಶ್ರೀಕಾಂತ್, ತಮ್ಮ ಪಾತ್ರದ ಮೂಲಕ ಪ್ರೇಕ್ಷಕರ ಹೆಗಲ ಮೇಲೆ ಕೈ ಹಾಕುತ್ತಾರೆ. ಪಕ್ಕದ ಮನೆಯ ಹುಡುಗನಂತೆ ಅವರ ಪಾತ್ರ ಇಷ್ಟವಾಗುತ್ತದೆ.

ಕಾಮನಾ ಜೇಠ್ಮಲಾನಿ ಕನ್ನಡಕ್ಕೆ ಬಂದ ಇನ್ನೊಬ್ಬ ಪ್ರತಿಭಾವಂತೆ. ಜೆನ್ನಿಫರ್ ಇಲ್ಲಿ ಬೇರೂರುವ ಎಲ್ಲ ಲಕ್ಷಣ ತೋರಿಸಿದ್ದಾಳೆ. ಶ್ರೀನಿವಾಸ ಮೂರ್ತಿ ಬಗ್ಗೆ ಕೆಮ್ಮಂಗಿಲ್ಲ.

ನವಿರು ಸಂಭಾಷಣೆ, ಅಚ್ಚರಿ ಹುಟ್ಟಿಸುವ ಪಟ್ನಾಯಕ್ ಜಬರ್ ದಸ್ತ್ ಸಂಗೀತ, ವೇಣು ಕ್ಯಾಮೆರಾ ನೋಡಲು ಎರಡು ಕಣ್ಣು ಸಾಲವುದಿಲ್ಲ. ಕಣ್ಣಿಗೆ ತಂಪು, ಕಿವಿಗೆ ಇಂಪು, ಮನಸಿಗೆ ಸೊಂಪು.

ಒಂದು ಸಿನಿಮಾಕ್ಕೆ ಇನ್ನೇನು ಬೇಕು? ಮನಸ್ಸು ಯುಗಾದಿ, ಮನೆ ತುಂಬಾ ಬೇವು ಬೆಲ್ಲ ತುಂಬಿಕೊಳ್ಳಲು ನೀವೊಮ್ಮೆ ಹೋಗಿ ಬನ್ನಿ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada