»   » ನಿಂತರೆ ಭಗವಾನ್‌, ಜಿಗಿದರೆ ಹನುಮಾನ್‌!

ನಿಂತರೆ ಭಗವಾನ್‌, ಜಿಗಿದರೆ ಹನುಮಾನ್‌!

Posted By:
Subscribe to Filmibeat Kannada
  • ವಿನಾಯಕ ಭಟ್‌
‘ಶುಕ್ರವಾರ ಪೂಜಿಸಿದರೆ ಇವನು ಶಾಂತ ನರಸಿಂಹ, ಹಿರಣ್ಯಕಶ್ಯಪುವಿನಂತೆ ಆಡಿದರೆ ಉಗ್ರ ನರಸಿಂಹ’.

‘ಶುಕ್ಲಾಂಬರಧರಂ ಎಂದು ಕೈಯೆತ್ತಿ ಮುಗಿದರೆ ವರ ಕೊಡುವ ಗಣಪ. ಇಲ್ಲವಾದರೆ ನಿಮ್ಮ ಪಾಲಿನ ಯಮ’ .

ಹೀಗೆಲ್ಲ ಬಾಲಂಗೋಚಿಗಳು ಹೊಗಳಿ ಹೊಗಳಿ ಸಾಕಾಗುವ ಹೊತ್ತಿಗೆ ಮೊದಲು ಕೈ. ಆಮೇಲೆ ಬೂಟು. ನಿಧಾನಕ್ಕೆ ಕ್ಯಾಮರಾ ಮೇಲಕ್ಕೆ ಹೋಗುತ್ತದೆ. ಆತ ಭಗವಾನ್‌, ನಿಂತರೆ ಭಗವಾನ್‌, ಜಿಗಿದರೆ ಹನುಮಾನ್‌.

ಹಾಗಂತ ಹನುಮಾನ್‌ನಂತೆ ಬ್ರಹ್ಮಚಾರಿ ಎನ್ನುವಂತಿಲ್ಲ . ತಂದೆ-ತಾಯಿಯರ ಬಳಿಯೇ ‘ಏನೋ ಒಂದೆಡು ಹೆಪ್ಪು ಹಾಕ್ದೆ, ಇದು ತಪ್ಪಾ’ ಎಂದು ಕೇಳುವಷ್ಟು ತುಂಟ. ಆದರೂ ಬಹಳಷ್ಟು ಹುಡುಗಿಯರು ಕಟ್ಟಿದ ರಾಖಿ ಇವನ ಮುಂಗೈಲಿ. ಮಾಸ್ತರರ ಮಗನಾದ್ದರಿಂದ ಕನ್ನಡ ಎಲ್ಲ ಲೇಖಕರ ಹೆಸರುಗಳು ಬಾಯಲ್ಲಿ . ಇವನ ಸಹವಾಸದಿಂದ ನಾಲ್ವರು ಬಾಲಂಗೋಚಿಗಳ ಬಾಯಿಯಲ್ಲೂ ನಲಿನಲಿದಾಡುವುದು ಕನ್ನಡ-ಕಸ್ತೂರಿ. ಉದಾ- ಏನೇ ಕಾನೂರು ಹೆಗ್ಗಡತಿ ಥರಾ ಓಡಾಡ್ತಿದ್ದಿ ? ಇತ್ಯಾದಿ.

ಭಗವಾನ್‌ ಹೆಣ್ಣುಮಕ್ಕಳನ್ನು ರೇಗಿಸೋರನ್ನು ಕಂಡರೆ ಕೆಂಡ. ಇದೇ ಕಾರಣಕ್ಕೆ ಪದೇಪದೇ ರಂಪಾಟ ಮಾಡಿ ಜೈಲು ಸೇರುವುದು, ಅಪ್ಪ ಹೋಗಿ ಬಿಡಿಸಿಕೊಂಡು ಬರುವುದು ನಿತ್ಯದ ಕಾಯಕ. ಪತ್ರಕರ್ತ ಬಾಬ್ಬಿ (ಭಾವನಾ) ಮೇಲೆ ಪುಂಡರ ಗುಂಪು ಆಕ್ರಮಣ ಮಾಡಿದಾಗ ರಕ್ಷಣೆ. ಅವಳೆದೆಯಲ್ಲಿ ಪ್ರೀತಿ ಅಂಕುರ. ಅವನಿಗೆ? ಗೊತ್ತಿಲ್ಲ .

ಬಾಬ್ಬಿಗೆ ಖ್ಯಾತ ಚಿತ್ರತಾರೆ ನಂದಿತಾ (ಡೈಸಿ ಬೋಪಣ್ಣ) ಸಂದರ್ಶನ ಮಾಡಬೇಕೆಂಬ ಹುಚ್ಚು . ಆದರೆ ನಂದಿತಾಳದು ಬೇರೆ ಕಥೆ.

ಆಕೆ ಆಂಧ್ರದ ರಾಜಮಂಡ್ರಿಯ ಭರತನಾಟ್ಯ ಕಲಾವಿದೆ. ಕುಡುಕ ತಂದೆ ಆಕೆಯನ್ನು ತಲೆಹಿಡುಕನೊಬ್ಬನಿಗೆ (ರಂಗಾಯಣ ರಘು) 20 ವರ್ಷ ಎಗ್ರಿಮೆಂಟ್‌ ಮೇಲೆ ಕೊಟ್ಟು ಬಿಡುತ್ತಾನೆ. ಆತ ಆಕೆಯನ್ನು ಸಿನಿ ಸ್ಟಾರ್‌ ಮಾಡಿ ಹಣ ಕೊಳ್ಳೆ ಹೊಡೆಯುತ್ತಾನೆ.

ಸಂದರ್ಶನಕ್ಕೆಂದು ಬಾಬ್ಬಿ ಜತೆ ಹೋದಾಗ ಈ ದೌರ್ಜನ್ಯ ಕಂಡು ತನ್ನ ಬೈಕ್‌ ಮೇಲೆ ಹತ್ತಿಸಿಕೊಂಡು ಊರಿಗೆ ಪರಾರಿ. ಆಕೆ ಗುಣಮುಖಳಾದ ಮೇಲೆ ತಂದೆ ತಾಯಿಯ ಬಳಿ ಬಿಟ್ಟು ಬರಲು ಹೊರಡುತ್ತಾನೆ. ಕಥೆ ಹೈವೇಗಿಳಿಯುತ್ತದೆ. ಬೈಕ್‌ನಲ್ಲಿ ಸೂಪರ್‌ ಸ್ಟಾರ್‌ ಒಬ್ಬಳು ಹೋಗುತ್ತಿರುವಾಗ ಯಾರೂ ಗುರ್ತಿಸುವುದೇ ಇಲ್ಲ .

ಹೋಗ್ತಾ ಹೋಗ್ತಾ ಮೂಡುವುದು ಲವ್ವು . ಆದರೆ ಸಾಕಷ್ಟು ಅಡೆತಡೆ, ಹೊಡೆದಾಟ, ಜಲಪಾತದ ಹಾಡು ಮುಗಿದ ಮೇಲೆ ನಾಯಕಿ ಮತ್ತೆ ಮಾಯ. ನಾಯಕ ಒಂಟಿಯಾಗಿ ರಾಯಲ್‌ಸೀಮೆ ಸೇರಿದಾಗ ಎದುರಾಗುವವ ದೇವುಡು (ಸಾಯಿಕುಮಾರ್‌). ಈತ ತೆಲುಗ. ವಿಜಯನಗರದ ವಂಶಸ್ಥನಂತೆ. ಅಲ್ಲಿಗೆ ವಿಜಯನಗರದ ಅರಸರು ತೆಲುಗು ಮಾತೃಭಾಷೆಯವರು ಎಂಬ ಅಲ್ಲಿನವರ ವಾದಕ್ಕೆ ಕನ್ನಡ ಹೋರಾಟಗಾರರು ಅಂಕಿತ ಹಾಕಿದಂತಾಗಿದೆ. ಅವನ ಸಹಾಯದಿಂದ ನಾಯಕಿಯನ್ನು ಮರಳಿ ಸಿಗುತ್ತಾಳೆಯೇ ಎಂಬ ಕುತೂಹಲ ತಣಿಸಲು ಚಿತ್ರ ನೋಡಿ.

ಸೂಕ್ಷ್ಮವಾಗಿ ನೋಡಿದರೆ ಕಥೆಯ ಎಳೆಯ ಮೇಲೆ ಇನ್ನೊಂದು ಸ್ವಲ್ಪ ಚಿಂತನೆ ನಡೆಸಿದ್ದರೆ, ಒಳ್ಳೆಯ ಚಿತ್ರಕಥೆ ಸಿದ್ಧವಾಗುತ್ತಿತ್ತು . ಆದರೆ ಲಾಜಿಕ್ಕುಗಳೆಲ್ಲ ಮೂಲೆ ಸೇರಿ ದರ್ಶನ್‌ ವೈಭವೀಕರಿಸುವುದೇ ಉದ್ದೇಶವಾದ್ದರಿಂದ ಇಂತ ಹೇಳಿಕೆ ನಿರರ್ಥಕ. ನಿರ್ದೇಶಕ ಎಚ್‌. ವಾಸು ಅವರ ‘ಲಾಲಿಹಾಡು’ ಖ್ಯಾತಿ ಇಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ . ಚಿತ್ರದ ಮೊದಲಾರ್ಧ ಶೇ.60 ತೆಲುಗು ಸಂಭಾಷಣೆ, ದ್ವಿತೀಯಾರ್ಧದಲ್ಲಿ ಶೇ.30. ಕೆಲವೊಮ್ಮೆ ಕಲಸುಮೇಲೋಗರ. ಇಷ್ಟೆಲ್ಲ ತೆಲುಗು ಬಳಸಿದ್ದಕ್ಕೆ ಮಾತೆತ್ತಿದರೆ ಕನ್ನಡಕ್ಕಾಗಿ ಹೋರಾಡುವ ನಿರ್ಮಾಪಕ ಸಾ.ರಾ.ಗೋವಿಂದು ಯಾವ ರೀತಿ ಸಮರ್ಥನೆ ಕೊಡಬಲ್ಲರು ?

ಸಂಭಾಷಣೆ ಬರೆದ ಕೆ.ವಿ.ರಾಜು, ಕನ್ನಡ ಎಲ್ಲ ಸಾಹಿತಿಗಳ-ಪುಸ್ತಕಗಳ ಹೆಸರುಗಳನ್ನು ಹಾಕಿ ತೊಳಸಿ ಪಲಾವ್‌ ಮಾಡಿದ್ದಾರೆ. ಹಾಗೆಯೇ ದ್ವಿತೀಯಾರ್ಧದಲ್ಲಿ ಸಾಯಿಕುಮಾರ್‌ ಬಾಯಿಯಿಂದ ಕನ್ನಡದ ಹಿರಿಮೆಯ ಮಾತುಗಳು ಪುಂಖಾನುಪುಂಖ. ಇದು ತೆಲುಗುಮಯ ಮೊದಲಾರ್ಧಕ್ಕೆ ಪರಿಹಾರ ಎಂದು ನಿರ್ದೇಶಕರು ಅಂದುಕೊಂಡಿರಬಹುದು.

ದರ್ಶನ್‌ದು ಸಹಜಾಭಿನಯ. ಆದರೆ ಇದೇ ತೆರನಾದ ಚಿತ್ರ ಒಪ್ಪಿಕೊಳ್ಳುತ್ತಾ ಹೋದರೆ ಭವಿಷ್ಯ ಕಷ್ಟ ಮಗಾ! ಭಾವನಾ ನಟನೆ ಹೆಚ್ಚು ಬಟ್ಟೆ ಕಡಿಮೆ. ಬಾಲಿವುಡ್‌ ಮೇಲೆ ಕಣ್ಣಿಟ್ಟಾಕೆಗೆ ಹೇಳೋದೇನಿದೆ ? ಡೈಸಿ ಎತ್ತರದಲ್ಲಿ , ಚಳಿ ಬಿಡಿಸುವ ಕುಣಿತದಲ್ಲಿ ದರ್ಶನ್‌ಗೆ ಉತ್ತರವಾಗುತ್ತಾಳೆಯೇ ಹೊರತು ನಟನೆ ಸೊನ್ನೆ . ಸಾಯಿಕುಮಾರ್‌ ಬಗ್ಗೆ ಎರಡು ಮಾತು ಅವಶ್ಯವಿಲ್ಲ .

ಕರ್ನಾಟಕ, ಆಂಧ್ರದಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಬಹುದಾದ ಈ ಚಿತ್ರವನ್ನು ಕನ್ನಡ ಚಿತ್ರರಂಗದ ಉಳಿವಿಗಾಗಿ ಕನ್ನಡಿಗರು ನೋಡಲೇಬೇಕೆಂದು ನಿರ್ಮಾಪಕರು ಚಳವಳಿ ಹಮ್ಮಿಕೊಂಡರೆ ಅಚ್ಚರಿಯಿಲ್ಲ .

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada