»   » ಜೋಗವೂ ಅಶೋಕ್‌ ಪಾಟೀಲರ ಜೋಕ್‌ಫಾಲ್ಸೂ !

ಜೋಗವೂ ಅಶೋಕ್‌ ಪಾಟೀಲರ ಜೋಕ್‌ಫಾಲ್ಸೂ !

Posted By:
Subscribe to Filmibeat Kannada
  • ಹ.ಚ. ನಟೇಶ್‌ಬಾಬು
ಪಾಪ ಪಾಂಡು ಮತ್ತು ಸಿಲ್ಲಿಲಲ್ಲಿ ಮಾದರಿಯ ಸೀರಿಯಲ್‌ ಮೆಚ್ಚುವ ಮಂದಿಗೆ ಜೋಕ್‌ಫಾಲ್ಸ್‌ ಇಷ್ಟವಾಗುತ್ತದೆ. ಪ್ರಪಂಚದಲ್ಲಿರೋದೆ 50 ಜೋಕ್ಸ್‌. ಅವುಗಳನ್ನೇ ಹಿಂದೆ ಮುಂದೆ ಮಾಡಿದರೆ ಹೊಸ ಜೋಕ್‌ ಹುಟ್ಟುತ್ತದೆ ಎನ್ನುವುದನ್ನು ಜೋಕ್‌ಫಾಲ್ಸ್‌ ಮೂಲಕ ನಿರ್ದೇಶಕರು ಸಾಬೀತುಪಡಿಸಿದ್ದಾರೆ.

ಚಿತ್ರದಲ್ಲಿ ಜೋಕ್‌ಗಳ ಸರಪಳಿಯೇ ಇದೆ. ಒಂದರ ಹಿಂದೊಂದು ಲಗ್ಗೆ ಹಾಕುವ ಜೋಕುಗಳು ಪ್ರೇಕ್ಷಕರನ್ನು ನಗಿಸಲೇ ಬೇಕೆಂದು ಪಣ ತೊಟ್ಟಂತಿವೆ. ಆದರೆ ಕೆಲವು ಜೋಕ್‌ಗಳು ಮಾತ್ರ ಸಿಡಿಯುತ್ತವೆ. ಪ್ರೇಕ್ಷಕರು ಹೊಟ್ಟೆ ತುಂಬ ನಗುತ್ತಾರೆ. ಮತ್ತೆ ಕೆಲವು ಇದು ಜೋಕಾ? ಎನ್ನುವಂತೆ ಅಚ್ಚರಿಪಡಿಸುತ್ತವೆ. ಒಂದೊಂದು ಸಲ ಜೋಕ್‌ಗಳು ಖಾಲಿಯಾದವೇನೋ ಎಂಬಂತೆ ಚಿತ್ರ ಕುಂಟುತ್ತದೆ. ಆಗ ಮತ್ತೆ ರೀಚಾರ್ಜ್‌ ಆದವರಂತೆ ನಿರ್ದೇಶಕ ಅಶೋಕ್‌ ಪಾಟೀಲ್‌ ಹೊಸ ಜೋಕ್‌ಗಳ ಬುತ್ತಿ ಬಿಚ್ಚುತ್ತಾರೆ.

ಜೋಕ್‌ಫಾಲ್ಸ್‌ ನೋಡಲು ಬಂದವರು ಕತೆಗಾಗಿ ಹಠ ಹಿಡಿಯಬಾರದು. ಇಲ್ಲಿ ಕತೆ ನೆಪಕ್ಕಷ್ಟೇ ಇದೆ, ಇದೊಂದು ಹಾಸ್ಯ ಚಿತ್ರ ಎಂದು ನಿರ್ಮಾಪಕ-ನಿರ್ದೇಶಕರು ಈಗಾಗಲೇ ಘೋಷಿಸಿದ್ದಾರೆ! ಒಂದು ಸಾಲಿನ ಕತೆಯುಳ್ಳ ಈ ಚಿತ್ರಕ್ಕೆ ಜೋಕ್‌ಗಳೇ ಆಸ್ತಿ.

ಅಪ್ಪ-ಮಗ, ಅಳಿಯ-ಮಾವ, ಅತ್ತೆ-ಸೊಸೆ ಹೀಗೆ ಸವಾಲಿನ ಚಿತ್ರಗಳನ್ನು ನೋಡಿರುವ ಪ್ರೇಕ್ಷಕರಿಗೆ, ಇದು ಮತ್ತೊಂದು ಸವಾಲಿನ ಕತೆ. ಇಲ್ಲಿ ನಾಯಕಿಯ ಭಾವನಿಗೆ ನಾಯಕ ಸವಾಲು ಹಾಕುತ್ತಾನೆ. ಹಿಂದಿಯ ಚುಪ್ಕೆಚುಪ್ಕೆ ಚಿತ್ರವನ್ನು ನಮ್ಮ ನೆಲಕ್ಕೆ ಹೊಂದುವಂತೆ ಅಶೋಕ್‌ಪಾಟೀಲ್‌ ರಿಮೇಕ್‌ ಮಾಡಿದ್ದಾರೆ. ಅವರು ಒಳ್ಳೆಯ ತಂತ್ರಜ್ಞರು!

ಕಥೆಯನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ- ಅನಂತ್‌ಪಾಟೀಲ್‌(ರಮೇಶ್‌) ಕಸ-ಕಡ್ಡಿ ಡಾಕ್ಟ್ರು. ಅಂದರೆ ಬಾಟನಿ ಫ್ರೊಫೆಸರ್‌. ಈತ ಬರೆದ ಪುಸ್ತಕವನ್ನು ಪಠ್ಯವಾಗಿ ಓದುವ ಕಾಲೇಜು ವಿದ್ಯಾರ್ಥಿನಿ ಸುಲೇಖ(ನೀತಾ)ಗೆ ಫ್ರೊಫೆಸರ್‌ ಕಂಡರೆ ಇಷ್ಟ . ಆಕಸ್ಮಿಕವಾಗಿ ಸಂಧಿಸುವ ಇಬ್ಬರೂ ಮದುವೆ ಮೂಲಕ ಒಂದಾಗುತ್ತಾರೆ. ನೀತಾಳಿಗೆ ಜಗತ್ತಿನಲ್ಲಿ ತನ್ನ ಭಾವ ರಾಘವ(ದತ್ತಣ್ಣ) ಒಬ್ಬನೇ ಸರ್ವಜ್ಞ ಎನ್ನುವ ನಂಬಿಕೆ. ಆ ನಂಬಿಕೆ ಹುಸಿ ಮಾಡಲು, ರಮೇಶ್‌ ಕಾರು ಡ್ರೆೃವರ್‌ ರೂಪದಲ್ಲಿ ದತ್ತಣ್ಣನ ಮನೆಗೆ ಪ್ರವೇಶಿಸುತ್ತಾನೆ.,

ದತ್ತಣ್ಣನಿಗೆ ಹಿಡಿದಿರುವ ಇಂಗ್ಲಿಷ್‌ ಮೋಹವನ್ನು ನಿವಾರಿಸುವುದೇ ಕಥಾನಾಯಕನ ಸಾಮಾನ್ಯ ಕನಿಷ್ಠ ಕಾರ್ಯಕ್ರಮ. ಇಂಗ್ಲಿಷ್‌ ಅವೈಜ್ಞಾನಿಕ ಭಾಷೆ ಎನ್ನುವ ರಮೇಶ್‌- ಎಲ್ಲಾ ಓಕೆ ಆಂಗ್ಲ ಯಾಕೆ ಅನ್ನುತ್ತಾನೆ. RAMA ರಾಮ, RAMA ರಮ, ಇದರಲ್ಲಿ ಯಾವುದು ಸರಿ? To ಟೂ, Do ಡೂ ಆದ ಮೇಲೆ Go ಗೂ ಯಾಕೆ ಆಗಲ್ಲ ? - ಹೀಗೆ ಪ್ರಶ್ನೆಗಳ ರಾಶಿಯನ್ನೇ ಸುರಿಸುತ್ತಾನೆ ಚಿತ್ರದ ನಾಯಕ. ಮೊಬೈಲ್‌ಗೆ ಜಂಗಮಗಂಟೆ ಎನ್ನುವ ಪ್ರಯೋಗ ಚಿತ್ರದಲ್ಲಿದ್ದು , ಇದು ತಮ್ಮ ಅನ್ವೇಷಣೆಯೆಂದು ಚಿತ್ರದ ತಂಡ ಹೇಳಿಕೊಂಡಿರುವುದಾಗಿ ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿದೆ. ಶುದ್ಧ ಕನ್ನಡದಲ್ಲಿ ರಮೇಶ್‌ ಮಾತನಾಡುವುದೇ ಹಾಸ್ಯದ ಸರಕಾಗಿರುವುದು ವಿಧಿ ವಿಪರೀತಂ.

ಚಿತ್ರದಲ್ಲಿ ನಗೆ ಊಟ ಬಡಿಸಲು ಅನುಭವಿಗಳ ತಂಡವೇ ಇದೆ. ರೌಡಿಸಂ ಕಲಿಯಲು ಬರುವ ಹುಡುಗರಿಗೆ ಎಲ್‌-ಬೋರ್ಡ್‌ ನೇತು ಹಾಕುವ ಮೈಕಲ್‌, ಪದ್ಯ ಬರೆಯಬೇಕೆಂದು ತಿಣುಕುವ ಡ್ರೆೃವರ್‌ ಪಾತ್ರದಲ್ಲಿ ಕಾಶಿ ಮಿಂಚಿದ್ದಾರೆ. ಈ ಪಾತ್ರಗಳು ಕಿರಿದಾದರೂ ನೆನಪಲ್ಲಿ ಉಳಿಯುತ್ತವೆ. ಸಿಹಿಕಹಿ ಚಂದ್ರು, ಶರಣ್‌ಗೆ ಗಂಭೀರ ಪಾತ್ರಗಳು. ಅರಳೆಣ್ಣೆ ಕುಡಿದ ಅವರ ವದನವನ್ನು ಪ್ರೇಕ್ಷಕರು ಕಷ್ಟಪಟ್ಟು ನೋಡಬೇಕು.

ಬೋಳುತಲೆಯಿಂದ ಹೆಂಡತಿ ಓಡಿ ಹೋದಳೆಂದು ಕೊರಗುತ್ತಾ ಕೂದಲು ಬೆಳೆಯುವ ಫಾರ್ಮುಲಾಗಾಗಿ ಪರದಾಡುವ ಕಾಮಿಡಿ ವಿಲನ್‌, ಫಾರ್ಮುಲಾದ ಹಕ್ಕುಗಳಿಗಾಗಿ ರಮೇಶ್‌ಗಾಗಿ ಹುಡುಕುವ ಮಲಯಾಳಿ, ನಾನು ಅನಂತ ಪಾಟೀಲ್‌ ಅಲ್ಲ ಎಂದರೂ ಏಟು ತಿನ್ನುವ ಅಮೇರಿಕಾ ಪ್ರೇಮಿ, ಇಂಗ್ಲಿಷ್‌ ಫ್ರೊಫೆಸರ್‌ ಬಾಟನಿ ಹೇಳಿಕೊಡಲು ತಿಣುಕಾಡುವುದು ಎಲ್ಲವೂ ಚಿತ್ರದಲ್ಲಿ ಭಲೇ ಭಲೇ ಎನ್ನುವಂತಿವೆ.

ನನ್ನ ಪ್ರೀತಿಯ ಹುಡುಗಿ ಚಿತ್ರದ ಕಾರ್‌ಕಾರ್‌ ಹುಡುಗಿ ದೀಪಾಲಿ ಚಿತ್ರದಲ್ಲಿ ನಟಿಸಿದ್ದಾಳೆ ಎನ್ನುವುದಕ್ಕಿಂತಲೂ ಇದ್ದಾಳೆ ಎಂದರೆ ಸೂಕ್ತ. ಕನ್ನಡಕ್ಕೆ ಕಾಲಿಟ್ಟಿರುವ ದಿಲೀಪ್‌ರನ್ನು ಹಾಸ್ಯಚಿತ್ರಕ್ಕೆ ಕರೆಸಿದ ಉದ್ದೇಶ ಅಶೋಕ್‌ ಪಾಟೀಲ್‌ಗೆ ಮಾತ್ರ ಗೊತ್ತಿದೆ.

ಅಮೆರಿಕನ್ನಡಿಗ ಮನೋಮೂರ್ತಿ ಅವರ ಸಂಗೀತದ ಅಬ್ಬರದಲ್ಲಿ ಹಾಡುಗಳ ಸಾಹಿತ್ಯ ಕೇಳಿಸುವುದೇ ಇಲ್ಲ. ಹೀಗಾಗಿ ನೆನಪಲ್ಲಿ ಉಳಿಯುವ ಪ್ರಶ್ನೆಯೇ ಇಲ್ಲ. ಸೊಗಸಾದ ಫ್ರೇಂಗಳಲ್ಲಿ ಪ್ರಕೃತಿಯನ್ನು ಕಣ್ಣಲ್ಲಿ ತುಂಬುವ ಛಾಯಾಗ್ರಾಹಣದಿಂದಾಗಿ ಒಂದೆರಡು ಹಾಡುಗಳನ್ನು ನೋಡಲು ಅಡ್ಡಿ ಇಲ್ಲ.

ಜೋಕುಮಾರ ರಮೇಶ್‌ ದೊಡ್ಡ ಗಾತ್ರದ ಹೆಂಗಸನ್ನು ನೋಡಿ ಕಾಶೀನಾಥ್‌ ಸ್ಟೈಲ್‌ನಲ್ಲಿ ಸೂಟ್‌ಕೇಸ್‌ ಜೋಕ್‌ ಹೇಳುವುದು ಬೇಕಿತ್ತಾ?

ದತ್ತಣ್ಣ ಮತ್ತು ರಮೇಶ್‌ ಲವಲವಿಕೆಯಿಂದ ನಟಿಸಿದ್ದಾರೆ. ಆದರೆ, ಉಲ್ಟಾಪಲ್ಟಾ ಚಿತ್ರವನ್ನು ತಲೆಯಲ್ಲಿ ತುಂಬಿಕೊಂಡು ಚಿತ್ರಮಂದಿರಕ್ಕೆ ಹೋದಿರಾದರೆ, ಸಾರಿ!

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada