»   » ಮಚ್ಚು ಇಲ್ಲದೆ ಅಭಿಮಾನಿಗಳನ್ನು ಮೆಚ್ಚಿಸುವ ‘ಮಂಡ್ಯ’

ಮಚ್ಚು ಇಲ್ಲದೆ ಅಭಿಮಾನಿಗಳನ್ನು ಮೆಚ್ಚಿಸುವ ‘ಮಂಡ್ಯ’

Posted By:
Subscribe to Filmibeat Kannada
  • ಚೇತನ್‌ ನಾಡಿಗೇರ್‌
‘ಲಾಂಗ್‌ ಲಾಂಗ್‌’ ಎಗೋದಿಂದ ಲಾಂಗ್‌ ಹಿಡಿದು ವಿಜೃಂಭಿಸಿದ ದರ್ಶನ್‌ ಮಂಡ್ಯದಲ್ಲಿ ಲಾಂಗ್‌ ಪಕ್ಕಕ್ಕಿಟ್ಟಿದ್ದಾರೆ! ಹಾಗಂತ, ಅಭಿಮಾನಿಗಳು ಬೇಸರ ಪಟ್ಟುಕೊಳ್ಳುವ ಅವಶ್ಯಕತೆಯೇನಿಲ್ಲ. ಏಕೆಂದರೆ ದರ್ಶನ್‌ ‘ಮಂಡ್ಯ’ದಲ್ಲಿ ಯಾವುದೇ ಆಯುಧಗಳಿಲ್ಲದೆ, ಬರಿ ಕೈಯಲ್ಲೇ ರಕ್ತಪಾತ ಮಾಡಿ ಮುಗಿಸಿದ್ದಾರೆ. ಆ ಮಟ್ಟಿಗೆ ದರ್ಶನ್‌ ಬ್ಲಡ್‌ ಡೊನೇಷನ್‌ ಕ್ಯಾಂಪ್‌ ನಿರಂತರವಾಗಿ, ಅವ್ಯಾ ಹತವಾಗಿ ಸಾಗಿದೆ, ಸಾಗುತ್ತಲೇ ಇರುತ್ತದೆ. ಇದು ‘ಮಂಡ್ಯ’ ಚಿತ್ರದ ಒಟ್ಟಾರೆ ಮುಖ್ಯಾಂಶಗಳು.

ಇನ್ನುಳಿದಂತೆ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ, ಆರಕ್ಕೂ ಹೆಚ್ಚು ಫೈಟುಗಳಿವೆ, ತ್ರಿಕೋನ ಪ್ರೇಮವಿದೆ, ಸೆಂಟಿಮೆಂಟಿದೆ, ಸಿಳ್ಳೆ ತರಿಸುವ ಡೈಲಾಗ್‌ಗಳಿವೆ... ಇದನ್ನೆಲ್ಲ ಸೇರಿಸುವ ಒಂದು ತೆಳುವಾದ ಕತೆಯಿದೆ. ಆ ಕತೆಯನ್ನು ನೀವಾಗಲೇ ಬಹಳಷ್ಟು ಬಾರಿ ಕೇಳಿ ಬಿಟ್ಟಿರುತ್ತೀರಿ. ಮತ್ತೊಮ್ಮೆ ಕೇಳಿಬಿಡಿ.

ಅವನು ಗಣೇಶ. ಕಾಂಡಿಮೆಂಟ್ಸ್‌ ವ್ಯಾಪಾರಿ. ತಮ್ಮ, ತಂಗಿ, ಮಾವನೇ ಅವನ ಬಂಧುಗಳು. ತಾನಾಯಿತು ತನ್ನ ಕುಟುಂಬದ ಪಾಡಾಯಿತು ಎನ್ನುವ ಸಭ್ಯಸ್ಥ. ಅಂಥವನ ತಂಟೆಗೆ ಯಾರಾದರೂ ಬಂದರೆ, ಮೊದಲು ಬಾಯಿಂದ ತಿದ್ದು ತ್ತಾನೆ. ಒಪ್ಪಲಿಲ್ಲ ಎಂದರೆ ಕೈಯಿದ್ದೇ ಇದೆ. ಇನ್ನೂ ಕ್ಲಿಯರ್ರಾಗಿ ಹೇಳಬೇಕೆಂದರೆ, ಖಾದಿ ಹಾಕದೇ ಸೇವೆ ಮಾಡುತ್ತಾನೆ, ಕಾವಿ ಹಾಕದೆ ಬುದ್ಧಿ ಹೇಳುತ್ತಾನೆ, ಖಾಕಿ ಹಾಕದೆ ಶಿಕ್ಷಿಸುತ್ತಾನೆ, ಕೋಟು ಹಾಕದೆ ನ್ಯಾಯ ಹೇಳುತ್ತಾನೆ. ಇಂಥವನಿಗೊಬ್ಬಳು ಅಭಿಮಾನಿ ಪಾರೋ.

ಇಷ್ಟೆಲ್ಲ ಕೆಲಸಗಳ ಜತೆ ಗಣೇಶ, ಪಾರೋ ಹೊಟ್ಟೆ ಮೇಲಿರುವ ಚಿಟ್ಟೆ ಹಿಡಿಯುತ್ತಾನೆ, ಅವಳಿಗೆ ಪ್ಯಾಂಟ್‌ ತೊಡಿಸುತ್ತಾನೆ, ಇನ್ನೂ ಬಿಡುವಾದಾಗ ಅವಳ ಜತೆ ಬೆಂಗಳೂರಿನಿಂದ ಹಾಂಕ್‌ಕಾಂಗ್‌ಗೆ ಹೋಗಿ ಕುಣಿಯುತ್ತಾನೆ. ಇದೆಲ್ಲ್ಲ ಮೊದಲಾರ್ಧದ ಕತೆ. ಇಂಟರ್‌ವೆಲ್‌ ಮುಗಿಯುತ್ತಿದ್ದಂತೆ ಆ ಗಣೇಶ ಕೇವಲ ಗಣೇಶನಲ್ಲ ಎಂಬ ಸತ್ಯಾಂಶ ಗೊತ್ತಾಗುತ್ತದೆ. ಅಷ್ಟೇ ಅಲ್ಲ , ಅವನು ಮಂಡ್ಯದವನು ಎಂದೂ ತಿಳಿಯುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಗಣೇಶ ಅಜ್ಞಾತವಾಸದಲ್ಲಿರುವ ಮಂಡ್ಯದ ಈಶ್ವರ ಎಂಬ ಸತ್ಯಾಂಶ ಗೊತ್ತಾ ದಾಗ ‘ಭಾಷಾ’ ನೆನಪಾಗುತ್ತದೆ. ಅಲ್ಲಿಂದ ಫ್ಲಾಷ್‌ಬ್ಯಾಕ್‌ ಶುರು.

ಫ್ಲಾಷ್‌ಬ್ಯಾಕ್‌ನಲ್ಲಿ ಅವನು ಈಶ್ವರ. ಕೆಟ್ಟವರ ಪಾಲಿಗೆ ಶನೀಶ್ವರ. ಜನರೇ ಅವನ ಸೈನ್ಯ. ಪ್ರೀತೀನೇ ಅವನ ಆಯುಧ. ಜನರ ವಿಷಯಕ್ಕೆ ಬಂದರೆ ಅವನಿಗೆ ಸಂಬಂಧಿಕರೂ ನೆನಪಾಗುವುದಿಲ್ಲ. ರೈತರಿಗೆ ಮೋಸ ಮಾಡಿದ ಎಂದು ತನ್ನ ಸ್ವಂತ ಭಾವನ ತಮ್ಮನನ್ನೇ ಜೈಲಿಗೆ ಕಳುಹಿಸುತ್ತಾನೆ. ಅಕ್ಕನ ಗಂಡನ ಮನೆಯವರು ರಾಂಗಾಗುತ್ತಾರೆ. ಸರಿ, ಮುಂದೇನಿದ್ದರೂ ಕೌಟುಂಬಿಕ ಕಲಹಗಳು, ರಕ್ತಪಾತಗಳು, ಕೊಲೆಗಳಾಗುತ್ತ ಕತೆ ಮುಂದುವರಿಯುತ್ತದೆ. ಕೊನೆಗೆ ಈಶ್ವರ, ಖಳರಿಗೆ ಒದ್ದು ಬುದ್ಧಿ ಕಲಿಸುವಲ್ಲಿಗೆ ಚಿತ್ರ ಮುಗಿಯುತ್ತದೆ.

ಈ ಕತೆ ಕೇಳುತ್ತಿದ್ದಂತೆ ಓಂ ಪ್ರಕಾಶ್‌ರಾಯರೂ ಬದಲಾಗಿಲ್ಲ ಎಂದು ಮತ್ತೊಮ್ಮೆ ಸಾಬೀತಾಗುತ್ತದೆ. ಅವರು ಎಲ್ಲೂ ತಮ್ಮ ಫಾರ್ಮುಲಾವನ್ನು ಆಚೀಚೆ ಬಿಟ್ಟು ಹೋಗದಂತೆ ಬಹಳ ಜಾಗರೂಕತೆ ವಹಿಸಿದ್ದಾರೆ. ಆದರೂ, ಗಾಂಜಾ ಬೆಳೆ, ವರದಕ್ಷಿಣೆ ಮುಂತಾದ ಸಮಕಾಲೀನ ಸಮಸ್ಯೆಗಳನ್ನು ತುರುಕಿದ್ದಾರೆ. ಎಂದಿನಂತೆ ಹಲವು ಭಾಷೆಗಳ ಬೇರೆಬೇರೆ ಚಿತ್ರಗಳನ್ನು ‘ಮಂಡ್ಯ’ ಚಿತ್ರವೊಂದರಲ್ಲೇ ನೋಡುವ ಅವಕಾಶವನ್ನು ಕನ್ನಡಿಗರಿಗೆ ಒದಗಿಸಿಕೊಟ್ಟಿದ್ದಾರೆ.

ಗುರು ಕಿರಣ್‌ ಈ ಚಿತ್ರದಲ್ಲಿ ಹೆಚ್ಚಾಗಿ ಮಾಸ್‌ ಸಂಗೀತಕ್ಕೆ ಒತ್ತು ಕೊಟ್ಟಿದ್ದಾರೆ. ಗಣೇಶ ಹಾಗೂ ಕೋಳಿ ಹಾಡುಗಳಿಗೆ ಶಿಳ್ಳೆ ಬೀಳುತ್ತವೆ. ಛಾಯಾ ಗ್ರಾಹಕ ಅಣಜಿ ನಾಗರಾಜ್‌ ಫೈಟಿಂಗ್‌ನಲ್ಲೇ ಹೆಚ್ಚು ಮಿಂಚುತ್ತಾರೆ.

ದರ್ಶನ್‌ ಎರಡೂ ಪಾತ್ರಗಳನ್ನು ಬಹಳ ಸಲೀಸಾಗಿ ಮಾಡಿ ಮುಗಿಸಿದ್ದಾರೆ. ರಕ್ಷಿತಾ ಅಭಿನಯಿಸಲು ಸಾಕಷ್ಟು ‘ಕಷ್ಟ ಪಟ್ಟಿದ್ದಾರೆ. ಇನ್ನು ರಾಧಿಕಾ ಹೀಗೆ ಬಂದು ಹಾಗೆ ಹೋಗುತ್ತಾರೆ. ಸತ್ಯಜಿತ್‌ ಬಿಟ್ಟರೆ ಅಸಂಖ್ಯ ಪೋಷಕ ಕಲಾವಿದರಲ್ಲಿ ಒಬ್ಬರೂ ನೆನಪಿನಲ್ಲುಳಿಯುವುದಿಲ್ಲ.

ಚಿತ್ರದ ದ್ವಿತೀಯಾರ್ಧ ಮಂಡ್ಯದಲ್ಲಿ ನಡೆಯುತ್ತದೆ ಎನ್ನುವುದಷ್ಟೇ ವಿಶೇಷ. ಅದು ಬಿಟ್ಟರೆ ಇನ್ನೆಲ್ಲ ಓಲ್ಡೋ ಓಲ್ಡು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada