For Quick Alerts
  ALLOW NOTIFICATIONS  
  For Daily Alerts

  ಅಬ್ಬಬ್ಬಾ ಎಂಥಾ ಹುಡುಗ, ಎಂಥಾ ಫೈಟು, ಎಂಥಾ ಡ್ಯಾನ್ಸು!

  By Staff
  |
  • ವಿನಾಯಕ ತದ್ದಲಸೆ
  ಹೊಸ ನಾಯಕನನೊಬ್ಬನನ್ನು ಚಿತ್ರ ನೋಡುವ ಮುಂದಿನ ಸಾಲಿನ ಮಂದಿ ಒಪ್ಪಿಕೊಂಡು ಅಪ್ಪಿಕೊಂಡರೆ ಆತ ನಿಜಕ್ಕೂ ಅದೃಷ್ಟವಂತ. ಅದೃಷ್ಟದ ಜೊತೆಗೆ ಮಾನವ ಪ್ರಯತ್ನವೂ ಬೇಕೆನ್ನಿ. ‘ನೀ ಬರೆದ ಕಾದಂಬರಿ’ಯ ಎಳೆ ಬಿಸಿಲಿನಂತ ಮಾಸ್ಟರ್‌ ಅರ್ಜುನ್‌, ಈಗ ನಾಯಕನಾಗಿ ಜನರೆದುರು ಬರುವಾಗ ಯಾವ ರೀತಿ ಇರಬೇಕೆಂದು, ಮಗನಿಗಾಗಿ ನಿರ್ಮಾಪಕರೂ ಆಗಿರುವ ಅರುಣ್‌ ಕಾರ್ಯ ಯೋಜಿಸಿಯೇ ಕಾರ್ಯಪ್ರವೃತ್ತರಾಗಿದ್ದಾರೆ. ಇದರ ಫಲವೇ ಸಾಕಷ್ಟು ಹಾಡು, ಫೈಟ್‌ ತುಂಬಿರುವ ‘ಅಬ್ಬಬ್ಬ ಎಂಥಾ ಹುಡುಗ’. ನಾಯಕ ಅರ್ಜುನ್‌ ತಾಯಿ ಇಲ್ಲದ ತಬ್ಬಲಿ. ನಾಯಕಿ ನಾಜ್‌ ತಂದೆ ಇಲ್ಲದ ತಬ್ಬಲಿ.

  ಅರ್ಜುನ್‌ ರಫ್‌ ಎಂಡ್‌ ಟಫ್‌. ಆಡೋದು ಒಂದೇ ಮಾತು. ಎರಡನೆ ಮಾತೇ ಹೊಡೆದಾಟ. ಕಾಲೇಜಿನ ವಿದ್ಯಾರ್ಥಿಗಳಿಗಷ್ಟೇ ಏಕೆ, ಉಪನ್ಯಾಸಕರಿಗೂ ಇವನನ್ನು ಕಂಡರೆ ಗಡಗಡ. ಅಪ್ಪ ಅಜ್ಜಿಗೆ ಮಗನ ದೊಂಬರಾಟ ಗೊತ್ತು. ಅದಕ್ಕೆ ಎದುರಾಡುವುದಿಲ್ಲ.

  ಸ್ನೇಹಿತನ ತಂಗಿಯ ಮದುವೆಗೆಂದು ಹಳ್ಳಿಗೆ ಬಂದ ಅರ್ಜುನ್‌, ಅಲ್ಲಿ ಮದುವೆ ಹುಡುಗಿ ನಾಜ್‌ಳನ್ನೇ ಮೋಹಿಸುತ್ತಾನೆ. ಇಂಥಾ ಅಸಡ್ಡಾಳ ಕೆಲಸ ಯಾವ ಸ್ನೇಹಿತರಾದರೂ ಮಾಡ್ತಾರಾ? ಸ್ನೇಹಿತರ ಹಿತ ವಚನದಂತೆ ಹುಡುಗಿಯನ್ನು ಮರೆಯುವ ಯತ್ನ ಮಾಡುವ ಹೊತ್ತಿಗೆ, ಹುಡುಗಿಯೇ ನಿಶ್ಚಿತವಾದ ಹುಡುಗ ನನಗಿಷ್ಚವಿಲ್ಲ ಎಂದು ಹೇಳುತ್ತಾಳೆ. ಮತ್ತೆ ಇವನ ಪ್ರೀತಿಗೆ ಚಾಲನೆ.

  ಅಲ್ಲಿಂದ ಶುರುವಾಗುತ್ತದೆ, ನಿಶ್ಚಿತಾರ್ಥದ ಮನೆಯಿಂದ ರುಕ್ಮಿಣಿ ಅಪಹರಣ. ಪೃಥ್ವಿರಾಜ-ಸಂಯುಕ್ತೆಯರಂತೆ ಕಾಡು ಮೇಡು ಸುತ್ತಿ ಕೊನೆಗೂ ಹುಡುಗನ ಮನೆ ಸೇರುತ್ತಾರೆ. ಅಪ್ಪನೊಂದಿಗೆ ಮರಳಿ ಹೋದ ಹುಡುಗಿ ಮತ್ತೆ ಮನಸ್ಸು ಬದಲಾಯಿಸಿ ಹಳೆಯ ಹುಡುಗನನ್ನೇ ಮದುವೆಯಾಗಲು ಒಪ್ಪುತ್ತಾಳೆ. ಮದುವೆಯ ತಯಾರಿಯೂ ನಡೆಯುತ್ತದೆ. ಇನ್ನೇನು ತಾಳಿ ಕಟ್ಟಬೇಕು ಎಂದುಕೊಳ್ಳುವಷ್ಟರಲ್ಲಿ ದೊಣ್ಣೆಯಾಂದಿಗೆ ನಾಯಕನ ಆಗಮನ. ಮತ್ತೊಮ್ಮೆ ಮದುವೆ ಹುಡುಗಿ ಅಪಹರಣ ಯತ್ನ. ನಡುವೆ ಬೀಳುವುದು ಒಂದು ಹೆಣ. ಇದೆಲ್ಲ ಆಗಿದ್ದು ಕುತಂತ್ರದಿಂದ. ಅದು ಏನು? ತಂತ್ರ ಫಲಿಸಿತೇ? ನಾಯಕ-ನಾಯಕಿ ಒಂದಾದರೇ?- ಈಗಲೇ ವಿವರಿಸಿದರೆ ಮಜಾ ಇರುವುದಿಲ್ಲ.

  ಚೆನ್ನಾಗಿ ಕಥೆ ಹೆಣೆದಿರುವ ನಿರ್ದೇಶಕ ಹೇಮಂತ ಹೆಗಡೆಯವರ ಚಿತ್ರ ಕಥೆ ಅಷ್ಟೇ ಸಲೀಸಾಗಿ ಹೋದಂತಿಲ್ಲ. ಅಲ್ಲಲ್ಲಿ ಟಿವಿ ಧಾರವಾಹಿ ರೂಪ ಪಡೆದು ಬಿಡುತ್ತದೆ. ಮೊದಲ ಅರ್ಧದಲ್ಲಿ ಕಾಲೇಜು ದೃಶ್ಯಗಳು, ಹೊಡೆದಾಟ, ಹುಡುಗಾಟ ತುಂಬಿದ್ದು, ದೃಶ್ಯಗಳನ್ನು ಬಿಡಿಬಿಡಿಯಾಗಿ ಆನಂದಿಸಬಹುದು. ಹಾಸ್ಯ ದೃಶ್ಯಗಳನ್ನು ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸಲೆಂದೇ ಸೇರಿಸಲಾಗಿದೆ. ‘ಮರ್ಮಾಂಗದ ಶಕ್ತಿ ಪ್ರದರ್ಶನ ’ದೃಶ್ಯವಂತೂ ನಿರ್ದೇಶಕರ ಜಾಣ್ಮೆಗೆ ಕನ್ನಡಿ ಹಿಡಿದಂತಿದೆ. ದ್ವಿತೀಯಾರ್ಧದ, ಕುತಂತ್ರ ಬಯಲಾಗುವ ದೃಶ್ಯವೇ ಚಿತ್ರದ ಜೀವಾಳ. ಅದಕ್ಕೆ ಇನ್ನೂ ಹೆಚ್ಚು ಸತ್ವ ತುಂಬುವ ಕೆಲಸ ನಿರ್ದೇಶಕರಿಂದ ಆಗಬೇಕಿತ್ತು.

  ಸಂಕಲನಕಾರ ಯಾರದೋ ಮೇಲಿನ ಸಿಟ್ಟನ್ನು ಚಿತ್ರದ ಮೇಲೆ ತೀರಿಸಿಕೊಂಡಂತಿದೆ. ರಾಜಸ್ಥಾನ, ಮಹಾಬಲೇಶ್ವರ, ಗೋವಾ ಹೊರಾಂಗಣ ಕಣ್ಣಿಗೆ ಮುದನೀಡುತ್ತವೆ. ನಾಯಕ ನೆನಪಿನಲ್ಲಿ ಉಳಿಯ ಬಲ್ಲ. ನಾಯಕಿ ನಾಜ್‌ ಅಭಿನಯದಲ್ಲಿ ಕಲಿಯುವುದು ಸಾಕಷ್ಟಿದೆ. ಕಾಲೇಜು ‘ಮಾಮ’ಗಳ ಪಟಾಲಂನಲ್ಲಿ ಕಿರುತೆರೆಯ ಕಲಾವಿದರು ಮುದ ಕೊಡುತ್ತಾರೆ. ಇತರ ಪಾತ್ರಗಳದು ಸಹಜಾಭಿನಯ.

  ಸುಂದರವಾಗಿ ನಗುವ ಅರ್ಜುನ್‌, ನೃತ್ಯ ಹೊಡೆದಾಟ ಎರಡರಲ್ಲೂ ಸೈ. ರಫ್‌ ಎಂಡ್‌ ಟಫ್‌ ಪಾತ್ರಕ್ಕೆ ಸಂಭಾಷಣೆ ಹೇಳುವ ರೀತಿ ಇನ್ನೂ ಗಡುಸಾಗಬೇಕಿತ್ತು. ರೋಮ್ಯಾಂಟಿಕ್‌ ಪಾತ್ರಕ್ಕೂ ಸೈ ಎನಿಸಿಕೊಳ್ಳಬಲ್ಲ ಈ ಎತ್ತರದ ನಿಲುವಿನ , ಸದೃಢ ಮೈಕಟ್ಟಿನ ಹುಡುಗ ಪಳಗಿದರೆ ಒಳ್ಳೆಯ ನಟ ಆಗಬಲ್ಲ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X