For Quick Alerts
  ALLOW NOTIFICATIONS  
  For Daily Alerts

  ವಿಚಿತ್ರ ವಿನ್ಯಾಸ ವಿಶಿಷ್ಟ ಸಾಹಸ!

  By Staff
  |


  ಆತ ಮತ್ತು ಆಕೆ ಮಧ್ಯೆ ಪ್ರೇಮ ಚಿಗುರುತ್ತದೆ. ಇನ್ನೇನು ಇಬ್ಬರೂ ಒಬ್ಬರಾಗಬೇಕು, ಅಷ್ಟರಲ್ಲಿ ಅಣ್ಣಂದಿರು ಅಡ್ಡ ಬರುತ್ತಾರೆ. ಮುಂದೆಲ್ಲ ಮಾಮೂಲಿ ತಾನೇ ಎಂದು ಹಗುರವಾಗಿ ಕೇಳಬೇಡಿ. ಅಲ್ಲೇ ಇರೋದು ನಿಜವಾದ ಸರ್‌ಪ್ರೆೃಸು!

  • ಚೇತನ್‌ ನಾಡಿಗೇರ್‌
  ಇದು ಅಂತ್ಯ ಅಲ್ಲ ಆರಂಭ ಎನ್ನುತ್ತಿದೆ ಚಿತ್ರದ ಮೊದಲ ದೃಶ್ಯ!

  ಹೌದು ಕನ್ನಡ ಚಿತ್ರರಂಗದಲ್ಲಿ ಕ್ರಿಯಾಶೀಲತೆ ‘ಶುಭಂ’ ಆಗುವ ಕಾಲ ಬಂದಿದೆ ಎಂಬ ಮಾತು ಕೇಳಿ ಬರುತ್ತಿರುವ ಹೊತ್ತಿಗೇ, ಶುಭಂ ಬಂದಿದೆ. ಬಂದಿದ್ದಷ್ಟೇ ಅಲ್ಲ ಕ್ರಿಯಾಶೀಲತೆಗೆ ಶುಭಂ ಇಲ್ಲ, ಅದ್ಯಾವಾಗಲೂ ಆರಂಭ ಎಂದು ತೋರಿಸಿಕೊಟ್ಟಿದೆ.

  ಆ ಮೂವರು ಅಣ್ಣಂದಿರಿಗೆ ಆಕೆ ಒಬ್ಬಳೇ ತಂಗಿ. ಹಾಗಾಗಿ ಅವಳೇ ಅವರಿಗೆ ಸರ್ವಸ್ವ. ‘ನಿನಗಾದರೆ ನಾವೆಲ್ಲ ಇದ್ದೀವಿ. ಆದರೆ ನಮಗೆ ಇರುವುದು ನೀನೊಬ್ಬಳೇ’ ಎಂದು ದೊಡ್ಡಣ್ಣ ಹೇಳುವ ಮಾತು ಆವರ ಅನ್ಯೋನ್ಯತೆಗೆ ಸಣ್ಣ ಸಾಕ್ಷಿ. ಈ ಒಂದೇ ಬಳ್ಳಿಯ ಹೂಗಳು, ‘ ನಮ್ಮ ಸಂಸಾರ ಆನಂದ ಸಾಗರ’ ಎಂದು ಹಾಡುತ್ತಿರುವಾಗಲೇ, ತಂಗಿದೆ ಮದುವೆ ಗೊತ್ತಾಗುತ್ತದೆ. ಇನ್ನೇನು ಮದುವೆ... ಅಂದೇ ಆಕೆಯ ಕಿಡ್ನಾಪ್‌.

  ಆಕೆಯನ್ನು ಹೊತ್ತೊಯ್ಯುವವನು ದಟ್ಟು ಕಾಡೊಂದಕ್ಕೆ ಕರೆದೊಯ್ಯುತ್ತಾನೆ. ಅವರು ಮುಂದೆ ಮುಂದೆ... ಆಕೆಯ ಅಣ್ಣಂದಿರು ಹಿಂದೆ ಹಿಂದೆ... ಹೀಗೆ ಓಡುತ್ತಾ ಓಡುತ್ತಾ ಆತ ಮತ್ತು ಆಕೆಯ ಮಧ್ಯೆ ಪ್ರೇಮ ಚಿಗುರುತ್ತದೆ. ಅಷ್ಟು ದೂರ ಇದ್ದವರು ಹತ್ತಿರವಾಗುತ್ತಾರೆ. ಇನ್ನೇನು ಇಬ್ಬರೂ ಒಬ್ಬರಾಗಬೇಕು, ಅಷ್ಟರಲ್ಲಿ ಅಣ್ಣಂದಿರು ಅಡ್ಡ ಬರುತ್ತಾರೆ. ಮುಂದೆಲ್ಲ ಮಾಮೂಲಿ ತಾನೇ ಎಂದು ಹಗುರವಾಗಿ ಹೇಳಬೇಡಿ. ಅಲ್ಲೇ ಇರೋದು ನಿಜವಾದ ಸರ್‌ಪ್ರೆೃಸ್‌.

  ಒಂದು ಕತೆಯನ್ನು ಒಂದೇ ರೀತಿಯಲ್ಲಿ ಹೇಳಿದರೆ ಜನ ಸ್ವೀಕರಿಸುವುದಿಲ್ಲ ಎಂದು ರವಿ ಗರಣಿಗೆ ಚೆನ್ನಾಗಿ ಗೊತ್ತು. ಅದಕ್ಕೆ ಅವರು ಕತೆಯನ್ನು ವಿಭಿನ್ನವಾಗಿ ನಿರೂಪಿಸಲು ಯತ್ನಿಸಿದ್ದಾರೆ. 1,2,3,4 ಅಂತ ಶುರು ಮಾಡಿದರೆ, ಮುಂದೆ 5,6,7 ಅಂತ ಸುಲಭವಾಗಿ ಊಹಿಸುತ್ತಾರೆ. ಅದಕ್ಕೆ 1,3,2,4 ಎಂದು ಪ್ರಾರಂಭಿಸಿ, ಆಮೇಲಿನ್ನೇನು ಎಂದು ಜನಕ್ಕೆ ಬಿಟ್ಟುಬಿಟ್ಟಿದ್ದಾರೆ.

  ಒಟ್ಟಾರೆ ಪ್ರತಿ ದೃಶ್ಯದಲ್ಲೂ, ಪ್ರತಿ ಹಂತದಲ್ಲೂ ಕುತೂಹಲ ಕೆರಳಿಸಬೇಕು ಎಂಬುದು ಅವರ ಉದ್ದೇಶ. ಈ ಮುಂಚೆ ಇಂಥ ಶೈಲಿಯಿಂದ ಉಪೇಂದ್ರ ಯಶಸ್ವಿಯಾಗಿದ್ದರು. ಈಗ ರವಿ ಗರಣಿ ಕೂಡ ಅದೇ ಹಾದಿಯಲ್ಲಿದ್ದಾರೆ.

  ಹಾಗೆ ನೋಡಿದರೆ ಇದೊಂದು ಪಕ್ಕಾ ತಂತ್ರಜ್ಞರ ಚಿತ್ರ. ನಿರ್ದೇಶಕ ಸೇರಿದಂತೆ ಪ್ರತಿಯಾಬ್ಬರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅದರಲ್ಲೂ ಕ್ಯಾಮೆರಾಮನ್‌ ಗಿರಿ ನಿಜವಾದ ನಾಯಕನಂತೆ ಬೆವರು ಸುರಿಸಿದ್ದಾರೆ.

  ಕಾಡಾಗಲಿ, ಮನೆಯಾಗಲಿ, ಹಸಿರಾಗಲಿ, ಕತ್ತಲೆಯಾಗಲಿ... ಎಲ್ಲೆಲ್ಲೂ ಅವರ ಕ್ಯಾಮೆರಾ ಚೆಂದ ಚೆಂದ. ಒಂದೊಂದು ದೃಶ್ಯವನ್ನು ಗಿರಿ ಅದ್ಯಾವ ಪರಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆಂದರೆ ಅದನ್ನು ನೋಡೇ ಎಂಜಾಯ್‌ ಮಾಡಬೇಕು. ಅದಕ್ಕೆ ಪೂರಕವಾಗಿ ಗುರು ಸಂಗೀತ ಹಾಗೂ ನಾಗೇಂದ್ರ ಅರಸ್‌ ಸಂಕಲನ. ಅಲ್ಲಲ್ಲಿ ಸಣ್ಣ-ಪುಟ್ಟ ಓರೆಕೋರೆಗಳಿರುವುದು ನಿಜ. ಆದರೆ ಮೊದಲ ಬಾರಿ ನಿರ್ದೇಶನದಲ್ಲಿ ಅದು ಸಹಜ. ಆದರೂ ರವಿ ಗರಣಿ ತಮ್ಮತ್ತ ತಿರುಗಿ ನೋಡುವಂಥ ಚಿತ್ರ ಮಾಡಿದ್ದಾರೆ.

  ನಾಯಕಿ ಸಂಜಿತಾಳ ಮುಗ್ಧತೆ, ಸೌಂದರ್ಯ, ನಗು, ಅಳು... ಎಲ್ಲವನ್ನೂ ರವಿ ಚೆನ್ನಾಗಿ ಬಳಸಿಕೊಂಡಿದ್ದಾರೆ. ಆ ಪಾತ್ರಕ್ಕಂತೂ ಆಕೆ ಹೇಳಿ ಮಾಡಿಸಿದ ಹಾಗಿದ್ದಾರೆ. ನಾಯಕ ಶಿವಧ್ವಜ್‌ ಕೂಡ ಹಿಂದೆ ಬಿದ್ದಿಲ್ಲ. ಆರಂಭದಲ್ಲಿ ನಿಗೂಢತೆಯಿಂದ, ನಂತರ ಉಪೇಂದ್ರರ ಶೈಲಿಯ ಅಭಿನಯದಲ್ಲಿ ಗಮನ ಸೆಳೆದರೂ, ದ್ವಿತೀಯಾರ್ಧದಲ್ಲಿ ಬೇರೆ ರೀತಿಯಾಗಿ ಎದ್ದು ನಿಲ್ಲುತ್ತಾರೆ. ಕಿಶೋರ್‌, ಅಂಕಲ್‌ ಲೋಕನಾಥ್‌, ವನಿತಾವಾಸು ಅಭಿನಯ ಓಕೆ.

  ವಿಚಿತ್ರ ಸಂಕಲನ, ವಿಶಿಷ್ಟ ಚಿತ್ರಕತೆಯಿಂದ ತೆರೆ ಮೇಲೆ ಕವಿತೆ ಕಟ್ಟುವ ಕೆಲಸವನ್ನು ಗರಣಿ ಮಾಡಿದ್ದಾರೆ. ಆ ಕವಿತೆಯನ್ನು ಮತ್ತೆ ಮತ್ತೆ ಓದಿದಾಗ ಮಾತ್ರ ಅರ್ಥ ಅರಳುತ್ತದೆ. ಹೊಸ ಅನುಭವಕ್ಕೆ ಹಾದಿ ತೋರಿಸುತ್ತದೆ.

  (ಸ್ನೇಹ ಸೇತು : ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X