For Quick Alerts
  ALLOW NOTIFICATIONS  
  For Daily Alerts

  ಮೊನಾಲಿಸ : ಚಿತ್ರ ನೋಡಿ, ಸಿಂಪ್ಲಿ ಎಂಜಾಯ್‌ ಮಾಡಿ

  By Staff
  |
  ರೇಸ್‌ಗೆ ಇಳಿದಂತೆ ಹೊರಟ ಕಾರುಗಳ ಮೆರವಣಿಗೆ, ಆ್ಯಕ್ಸಿಡೆಂಟ್‌ ರಭಸಕ್ಕೆ ಮತ್ತೊಂದು ಕಾರಿನ ಮೂತಿಯ ಮೇಲೆ ಎಗರಿ ಬೀಳುವ ನಾಯಕನ ದೇಹ, ಇದರ ಬೆನ್ನಿಗೇ ಹಾಡು, ಹಾಡಿನ ಬೆನ್ನಟ್ಟಿ ಹಾಸ್ಯ, ಇದಕ್ಕೆ ಕೊಕ್‌ ಕೊಡುವ ಫೈಟ್‌, ಪ್ರೇಕ್ಷಕ ಬೆವರೊರೆಸಿಕೊಳ್ಳುವಷ್ಟರಲ್ಲಿ ಸೆಂಟಿಮೆಂಟ್‌, ಕರ್ಚಿಪ್‌ ಎತ್ತಿಕೊಳ್ಳುವಷ್ಟರಲ್ಲಿ ಐಟಂ ಸಾಂಗ್‌, ಒಣಗಿದ ತುಟಿಯ ಮೇಲೆ ನಾಲಿಗೆ ಆಡಿಸುವಷ್ಟರಲ್ಲಿ ಮತ್ತೆ ಜೋಕಿನ ಜೋಕಾಲಿ, ರಷ್ಯನ್‌ ಬಾಲೆಯರ ಸಮೂಹ ನೃತ್ಯ, ವಿರಹ ಗೀತೆ, ಅನಿರೀಕ್ಷಿತ ತಿರುವು, ಕುಟುಕುವ ಡೈಲಾಗ್‌, ಕಣ್ಣು ಕುಕ್ಕುವ ಗ್ಲಾಮರ್‌...

  ಚಿತ್ರದ ನಿರೂಪಣೆ ವೇಗ ಶೂಮಾಕರ್‌ ಕಾರಿನ ಸ್ಪೀಡನ್ನೂ ಮೀರಿಸುವಂತಿದೆ. ಪ್ರೇಕ್ಷಕನಿಗೆ ಕಣ್ಣು ಮಿಟುಕಿಸಲೂ ಪುರುಸೊತ್ತಿಲ್ಲ. ದುಡ್ಡು ಕೊಟ್ಟು ಥಿಯೇಟರ್‌ಗೆ ಬರುವವರು ಏನು ಬಯಸುತ್ತಾರೆಂಬ ಮರ್ಮವನ್ನು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಚೆನ್ನಾಗಿ ಅರಿತಿದ್ದಾರೆಂಬುದಕ್ಕೆ ಮೊನಾಲಿಸಾ ಸಾಕ್ಷಿ. ಜನಾಕರ್ಷಣೆಯ ಹೊಸ ಜಾಡಿನಲ್ಲಿ ಅವರದು ಯಶಸ್ವಿ ಪಯಣ.

  ಈ ಚಿತ್ರದಲ್ಲಿನ ನೃತ್ಯ ಸಂಯೋಜನೆ, ಸಂಗೀತದ ಅಬ್ಬರ, ಹಾಡುಗಳ ಮೆಲೋಡಿ, ಇತಿಮಿತಿಯ ಪೋಕರಿ ಜೋಕ್‌, ನಿರೂಪಣೆಯ ಲವಲವಿಕೆ, ತಾಜಾತಾಜಾ ದೃಶ್ಯಾವಳಿಗಳು ಯಶ್‌ ಛೋಪ್ರಾ, ಸೂರಜ್‌ ಬರ್ಜಾತ್ಯಾ, ಕರಣ್‌ ಜೋಹಾರ್‌ರಂಥವರ ಬಾಲಿವುಡ್‌ ಸಿನಿಮಾ ನೆನಪಿಸುತ್ತದೆ.

  ‘ಮೊನಾಲಿಸಾ’ ಇಷ್ಟವಾಗುವುದು ಅದರ ತಾಜಾತನದಿಂದ. ಎಲ್ಲೂ ತಂಗಳಿನ ವಾಸನೆ ಇಲ್ಲ. ಇಂಥ ಮಿಸಳ್‌ಭಾಜಿ ಸಿನಿಮಾದ ಚಿತ್ರಕಥೆ ಒಂದು ಸವಾಲು. ದೃಶ್ಯ-ದೃಶ್ಯಗಳ ಜೋಡಣೆ ಕ್ಲಿಷ್ಟಕರ. ಆದರೆ ಎಲ್ಲಿಯೂ ಢಾಳಾಗದಂತೆ ದೃಶ್ಯ ಸಂಯೋಜಿಸುವ ಮೂಲಕ ಇಂದ್ರಜಿತ್‌ ಜಾಣತನ ಪ್ರದರ್ಶಿಸಿದ್ದಾರೆ. ಕೆಲವು ಸನ್ನಿವೇಶಗಳು- ಛೆ! ಹೀಗಾಗಬಾರದಿತ್ತು ಎನಿಸುವಷ್ಟರಲ್ಲಿ ಮತ್ತೊಂದು ದೃಶ್ಯ ಈ ಲೋಪ ಮುಚ್ಚಿ ಹಾಕಿ ಚಿತ್ರವನ್ನು ಮುನ್ನಡೆಸುತ್ತದೆ.

  ಪ್ರೇಕ್ಷಕರನ್ನು ರಂಜಿಸಲು ಇಂದ್ರಜಿತ್‌ ಏನೆಲ್ಲ ಕಸರತ್ತು ಮಾಡಿದ್ದಾರೆಂದರೆ- ಸಚಿನ್‌ ತೆಂಡೂಲ್ಕರ್‌ ಕೈಲಿ ಬಲೂನು ಮಾರಿಸಿದ್ದಾರೆ, ಹೋಟೆಲ್‌ ಚಾಕರಿ ಮಾಸಿದ್ದಾರೆ, ಉಪೇಂದ್ರನ ಕರಡಿ ಕೂದಲನ್ನು ಬೋಳಿಸುವ ಕ್ಷೌರಿಕನ ಕೆಲಸವನ್ನೂ ಕೊಟ್ಟಿದ್ದಾರೆ! ಸಚಿನ್‌ ಮತ್ತು ಉಪೇಂದ್ರ ಡಮ್ಮಿಯಾದರೂ, ದರ್ಶನ್‌ರಂಥ ‘ಸ್ಟಾರ್‌’ರನ್ನು ರಷ್ಯನ್‌ ಷೋಡಶಿಯರ ಜೊತೆ ಡ್ಯಾನ್ಸ್‌ ಮಾಡಿಸಿದ್ದಾರೆ. ಎರಡು ತುಂಡು ರಿಬ್ಬನ್‌ನಷ್ಟು ಉಡುಪು ಧರಿಸಿ ನರ್ತಿಸುವ ‘ರಷ್ಯನ್‌ ಬ್ಯಾಲೆ ’ ಯರೂ ನಾಚುವಂತೆ ‘ಚಿತ್ರಾ’ ಖ್ಯಾತಿಯ ರೇಖಾ ಮತ್ತು ದುರ್ಗಾ ಶೆಟ್ಟಿಯರಿಂದ ಕುಣಿಸಿದ್ದಾರೆ. ‘ಚೋಲಿ ಕೆ ಪೀಛೇ ಕ್ಯಾ ಹೈ’ ಹಾಡನ್ನು ಕಾಮಿಡಿ ಟ್ರ್ಯಾಕ್‌ಗೆ ಬಳಸಿ ಕಚಗುಳಿ ಇಟ್ಟಿದ್ದಾರೆ. ‘ಕಾಮಕಸ್ತೂರಿ’ ಶಕೀಲಾರಿಂದ ಹಾಸ್ಯರಸ ಹರಿಸಿದ್ದಾರೆ.

  ಇಂಥ ‘ಫ್ರೂಟ್‌ ಸಲಾಡ್‌’ ಗೆ ಬೆನ್ನೆಲುಬಾಗಿ ಸಾಲಿಡ್‌ ಕತೆಯೂ ಇದೆ-

  ದೇಶಿ ಹುಡುಗ, ಅನಿವಾಸಿ ಹುಡುಗಿ ಹತ್ತಿರವಾಗುತ್ತಾರೆ. ಅವರ ನಡುವೆ ಪ್ರೀತಿ ಅರಳಬೇಕೆನ್ನುವಷ್ಟರಲ್ಲಿ ಹುಡುಗಿಯ ಅಪ್ಪನ ಅನಾರೋಗ್ಯದ ಸಂದೇಶ. ಆತುರಾತುರವಾಗಿ ಆಕೆ ಅಮೆರಿಕಕ್ಕೆ ಮರಳುತ್ತಾಳೆ. ಅನಿವಾಸಿ ಹುಡುಗಿಯ ಅಗಲುವಿಕೆಯಿಂದ ಹುಡುಗ ಪರ್ದೇಶಿಯಂತಾಗುತ್ತಾನೆ. ಈ ನಡುವೆ ಆಕೆ ಅಪಘಾತದಲ್ಲಿ ಸತ್ತ ಸುದ್ದಿ ಬರುತ್ತದೆ. ಪಾಲಕರ ಒತ್ತಾಸೆಯಿಂದ ಹುಡುಗ ಮದುವೆಯಾಗುತ್ತಾನೆ. ಕಾಕತಾಳೀಯವಾಗಿ ವಧು ಥೇಟ್‌ ಆತ ಪ್ರೀತಿಸಿದ ಹುಡುಗಿಯಂತಿರುತ್ತಾಳೆ. ಮದುವೆ ಬಳಿಕವೂ ಆತ ‘ಸದಾ’ ಹಿಂದಿನ ಹುಡುಗಿಯ ‘ಧ್ಯಾನ’ದಲ್ಲೇ ಇರುತ್ತಾನೆ. ಸತ್ತಳೆಂದು ಹೇಳಲಾದ ಹುಡುಗಿ ಮತ್ತೆ ಪ್ರತ್ಯಕ್ಷಳಾಗುತ್ತಾಳೆ. ಆಕೆಯ ಹತ್ಯೆಗೆ ಹುಡುಗನ ಮಾವನಿಂದ ಸುಪಾರಿಯ ಹೂರಣ, ಕ್ಲೈಮ್ಯಾಕ್ಸ್‌ನಲ್ಲಿ ಇಬ್ಬರು ಹುಡುಗಿಯರಲ್ಲೊಬ್ಬರ ಮರಣ, ಶಿಶುವಿನ ಜನನ...

  ಇಷ್ಟಾಗಿಯೂ ಈ ಸಿನಿಮಾದ ಮಿತಿ ಎಂದರೆ, ಇದು ಮನಸ್ಸಿಗೆ ತಟ್ಟುತ್ತದೆಯೇ ಹೊರತು ಹೃದಯವನ್ನು ಮುಟ್ಟುವುದಿಲ್ಲ.

  ‘ಮೊನಾಲಿಸಾ’ ದ ಕಲಾವಿದರು ಪಡೆದ ಅಂಕಗಳ ಶೇಕಡಾವಾರು ಹೀಗಿದೆ- ನಿರ್ದೇಶಕ ಇಂದ್ರಜಿತ್‌ 96%, ನಾಯಕ ಧ್ಯಾನ್‌ 71%, ನಾಯಕಿ ಸದಾ 69%, ಶರಣ್‌-ರಮ್ಯಾ ಜೋಡಿ 74%, ಉಮಾಶ್ರೀ 61%, ಛಾಯಾಗ್ರಾಹಕ ಕೃಷ್ಣಕುಮಾರ್‌ 89%, ಸಂಭಾಷಣೆಕಾರ ಬಿ. ಎ. ಮಧು 65%, ಸಂಗೀತಕಾರರಾದ ವಲೀಶಾ ಸಂದೀಪ್‌ 72%, ಗೀತ ರಚನೆಕಾರರಾದ ಕೆ. ಕಲ್ಯಾಣ್‌, ನಾಗೇಂದ್ರ ಪ್ರಸಾದ್‌ ಮತ್ತು ದೊಡ್ಡರಂಗೇಗೌಡ 65 % (ಶಕೀಲಾ ಅವರ ಫಲಿತಾಂಶ ತಾಂತ್ರಿಕ ಕಾರಣಗಳಿಂದ ತಡೆ ಹಿಡಿಯಲಾಗಿದೆ. ನಿರ್ಮಾಪಕರಾದ ಕೆ. ಎಸ್‌. ದುಷ್ಯಂತ್‌ ಮತ್ತು ಸಂತೋಷ್‌ ಕುಮಾರ್‌ ಅವರ ಫಲಿತಾಂಶ ಈ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರಗಳ ಎದುರು ಸೋಮವಾರ ಪ್ರಕಟವಾಗಲಿದೆ!)

  ಕಿವಿಮಾತು: ಈ ಚಿತ್ರದಲ್ಲಿ ಎಷ್ಟು ಹಾಡುಗಳಿವೆ ಎಂಬುದನ್ನು ಲೆಕ್ಕ ಮಾಡಲು ಪಕ್ಕದ ಸೀಟಿನವರಿಗೆ ಹೇಳಿ ನೀವು ನಿಶ್ಚಿಂತೆಯಿಂದ ಸಿನಿಮಾ ನೋಡಿ!

  ಷರಾ: ‘ಮಲ್ಲ ’ನ ಬಳಿಕ ತೆರೆಕಂಡ ಅತ್ಯುತ್ತಮ ಮನರಂಜನಾತ್ಮಕ ಚಿತ್ರ.

  (ಸ್ನೇಹಸೇತು : ವಿಜಯ ಕರ್ನಾಟಕ)

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X