»   » ‘ರವಿಶಾಸ್ತ್ರಿ’ಗೆ ಪಾಯಸ : ನೋಡುಗರಿಗೆ ಆಯಾಸ!

‘ರವಿಶಾಸ್ತ್ರಿ’ಗೆ ಪಾಯಸ : ನೋಡುಗರಿಗೆ ಆಯಾಸ!

Posted By:
Subscribe to Filmibeat Kannada


ಬ್ರಾಹ್ಮಣರು ವಡೆ-ಪಾಯಸ ಪ್ರಿಯರು ಎಂದು ನಿರ್ದೇಶಕರಿಗೆ ಅದ್ಯಾರು ದಾರಿ ತಪ್ಪಿಸಿದರೋ ಗೊತ್ತಿಲ್ಲ.

  • ಚೇತನ್‌ ನಾಡಿಗೇರ್‌
ಚಿತ್ರ : ರವಿಶಾಸ್ತ್ರಿ
ನಿರ್ಮಾಣ : ಸಂದೇಶ್‌ ನಾಗರಾಜ್‌
ನಿರ್ದೇಶನ : ಎಂ.ಎಸ್‌.ರಾಜಶೇಖರ್‌
ಸಂಗೀತ : ರಾಜೇಶ್‌ ರಾಮನಾಥ್‌
ತಾರಾಗಣ : ರವಿಚಂದ್ರನ್‌, ಸ್ನೇಹಾ, ಉಮಾಶ್ರೀ, ಕರಿಬಸಯ್ಯ, ವಿನಯಪ್ರಸಾದ್‌ ಮತ್ತಿತರರು.

ವೇಷ, ನೇಷ, ವೇಷ, ಬದುಕೇ ಬಣ್ಣದ ವೇಷ, ಕಾಲಕ್ಕೆ ತಕ್ಕ ಹಾಗೇ ವೇಷ ಹಾಕಣ್ಣ...-ನಾಯಕ ಈ ಹಾಡು ಹಾಡುವ ಹೊತ್ತಿಗೆ ವೇಷ ಬದಲಿಸಿರುತ್ತಾನೆ. ರವಿಯಿಂದ ರವಿಶಾಸ್ತ್ರಿ ಯಾಗಿರುತ್ತಾನೆ. ಕಾರಣ ಒಂದೇ. ಹೇಗಾದರೂ ತನ್ನ ತಾಯಿಯ ಕಣ್ಣು ರಿಪೇರಿ ಮಾಡಿಸುವುದು. ಅದಕ್ಕಾಗಿ ಕೆಲಸ ಹುಡುಕುತ್ತಾನೆ. ಸಿಕ್ಕದಿದ್ದಾಗ ಕಂಗಾಲಾಗುತ್ತಾನೆ.

ಜನಿವಾರವೊಂದಿದ್ದರೆ ಯಾವುದಾದರೂ ಕೆಲಸ ಸಿಗುತ್ತದೆ ಎಂದು ಗೊತ್ತಾದಾಗ ಅದನ್ನು ಹಾಕುತ್ತಾನೆ. ಬ್ರಾಹ್ಮಣನಾದ ಮೇಲೆ ಉದ್ಯೋಗಸ್ಥನಾಗುತ್ತಾನೆ. ಅದು ಮಹಾಬ್ರಾಹ್ಮಣ ದೀಕ್ಷಿತರ ಮನೆಯಲ್ಲೇ. ಅಲ್ಲಿಂದ ಅವನ ಜೀವನವೇ ಬದಲಾಗುತ್ತದೆ. ರವಿಶಾಸ್ತ್ರಿ ಆ ಮನೆಯ ಎಲ್ಲರಿಗೂ ಹತ್ತಿರವಾಗುತ್ತಾನೆ. ಅದರಲ್ಲೂ ದೀಕ್ಷಿತರ ಮಗಳು ಭಾನುಗೆ ಬೇಕಾದವನಾಗುತ್ತಾನೆ.

ಪ್ರೀತಿಯ ಮಗಳಿಗೆ ಬೇಕಾದವನು, ಅಪ್ಪನಿಗೆ ಬೇಡವಾದಾನೆ? ಸರಿ ರವಿಶಾಸ್ತ್ರಿ-ಭಾನು ಮದುವೆಗೆ ದೀಕ್ಷಿತರು ತಥಾಸ್ತು ಹೇಳುತ್ತಾರೆ. ರವಿಶಾಸ್ತ್ರಿ ತನ್ನ ಜನ್ಮ ರಹಸ್ಯ ಹೇಳಲು ಪ್ರಯತ್ನಿಸುತ್ತಾನೆ. ಆದರೆ, ಕೇಳುವುದಿಲ್ಲ ಅಷ್ಟೇ. ಕೊನೆಗೆ ಅನಿವಾರ್ಯವಾಗಿ ರವಿಶಾಸ್ತ್ರಿ ಮದುವೆಗೆ ಒಪ್ಪುತ್ತಾನೆ.

ಮದುವೆಯೂ ಮುಗಿಯುತ್ತದೆ.. ಸರಿ ಹೋಯಿತು ಎನ್ನುವಷ್ಟರಲ್ಲಿ ರವಿಯ ತಂದೆ-ತಾಯಿ ಊರಿಂದ ಬರುತ್ತಾರೆ. ತಮ್ಮ ಮಗ ಒಬ್ಬ ಬ್ರಾಹ್ಮಣ ಕನ್ಯೆಯ ಮದುವೆಯಾಗಿದ್ದನ್ನು ನೋಡಿ ಎದೆ ಎದೆ ಹೊಡೆದುಕೊಂಡ ಅಳುತ್ತಾರೆ. ಇದನ್ನು ನೋಡಿದ ದೀಕ್ಷಿತರು, ಮಗಳು-ಅಳಿಯ ತನ್ನ ಪಾಲಿಗಿನ್ನಿಲ್ಲ ಎನ್ನುತ್ತಾನೆ. ಮುಂದೆ ? ರವಿಶಾಸ್ತ್ರಿ, ಎಲ್ಲ ಜಾತಿ ಹಾಗೂ ಧರ್ಮಗಳಿಗಿಂತಲೂ ಮಾನವ ಧರ್ಮವೇ ದೊಡ್ಡದು ಎಂದು ತೋರಿಸಿಕೊಡುವಲ್ಲಿ ಚಿತ್ರ ಮುಗಿಯುತ್ತದೆ.

ಸುಮಾರು 18 ವರ್ಷಗಳ ಹಿಂದೆ ತಮಿಳಿನಲ್ಲೂ ಈ ಚಿತ್ರ ಬಂದಿತ್ತು. ಹೆಸರು ‘ಇದು ನಮ್ಮ ಆಳ್‌’. ಈಗ ಅದೇ ಅಧಿಕೃತ ರೀಮೇಕ್‌ ‘ರವಿಶಾಸ್ತ್ರಿ ’ ಹೆಸರಿನಲ್ಲಿ ಬಂದಿದೆ. ರೀಮೇಕ್‌ ಚಿತ್ರಗಳಂತೆ ಇಲ್ಲೂ ನಿರ್ದೇಶಕರು ಮೂಲ ಬೇಕೋ, ಬೇಡವೋ ಎಂದು ಯೋಚಿಸದೆ ಸೀದಾ ಇಳಿಸಿದ್ದಾರೆ. ಹಾಗಾಗಿ ಕೆಲವು ದೃಶ್ಯಗಳು ಅಪ್ರಸ್ತುತವೆನಿಸುತ್ತವೆ. ಇವತ್ತಿನ ದಿನಗಳಲ್ಲಿ ಕೆಲಸವಿಲ್ಲದೆ ಬೇರೆ ವೇಷ ತೊಡುವುದೇ ದೊಡ್ಡ ಜೋಕು. ಅದರಲ್ಲೂ ಬ್ರಾಹ್ಮಣರ ವೇಷ ತೊಡುವುದು ಇನ್ನೂ ‘ದೊಡ್ಡ ಜೋಕು’. ಆದರೂ ಇದು ಚಿತ್ರವಾದ್ದರಿಂದ ಅವನ್ನೆಲ್ಲ ಸಹಿಸಿಕೊಳ್ಳುವುದು ಅನಿವಾರ್ಯ. ಮೊದಲರ್ಧ ಕಾಮಿಡಿ. ದ್ವಿತೀಯಾರ್ಧದಲ್ಲಿ ಬೇಡ ಬಿಡಿ ...

ಬ್ರಾಹ್ಮಣರು, ಬ್ರಾಹ್ಮಣಿಕೆಯ ಬಗ್ಗೆ ಚಿತ್ರತಂಡ ಕೊಂಚ ಅಧ್ಯಯನ ಮಾಡಿದ್ದರೆ ಚೆನ್ನಾಗಿತ್ತು. ಅದಿಲ್ಲದಿರುವುದರಿಂದಲೇ ಸಾಕಷ್ಟು ಯಡವಟ್ಟಾಗಿವೆ. ಈ ಮಧ್ಯೆ ಬ್ರಾಹ್ಮಣರು ವಡೆ, ಪಾಯಸ ಪ್ರಿಯರು ಎಂದು ನಿರ್ದೇಶಕರಿಗೆ ಅದ್ಯಾರು ದಾರಿ ತಪ್ಪಿಸಿದರೋ ಗೊತ್ತಿಲ್ಲ, ಒಟ್ಟಿನಲ್ಲಿ ಬ್ರಾಹ್ಮಣ ಪದದಷ್ಟೇ ಬಾರಿ ವಡೆ, ಪಾಯಸವೂ ಹಾಜರಾಗುತ್ತದೆ. ಅದರಲ್ಲೂ ತಂದೆ ತನ್ನ ಮಗಳು ಇನ್ನು ತನ್ನ ಪಾಲಿಗಿಲ್ಲ ಎಂದು ನೀರು ಬಿಟ್ಟ ದಿನವೇ ಅದೇ ಮಗಳು, ಗಂಡನಿಗೆ ವಡೆ, ಪಾಯಸ ತಿನ್ನಿಸುತ್ತಾಳೆ. ಇದು ಹೆಚ್ಚಾದ ಪ್ರೀತಿ ಅಜ್ಞಾನವೋ ಅಥವಾ ತಂದೆಯ ನಿರ್ಧಾರಕ್ಕೆ ಧಿಕ್ಕಾರವೋ, ನಿರ್ದೇಶಕರೇ ಹೇಳಬೇಕು.

ರವಿಚಂದ್ರನ್‌ಗೆ ಹೇಳಿ ಮಾಡಿಸಿದಂಥ ಪಾತ್ರವಿದು. ಹಾಗಾಗಿ ಅವರು ಬಹಳ ಸಲೀಸಾಗಿ ಕಾಣಿಸಿಕೊಂಡಿದ್ದಾರೆ. ಸ್ನೇಹಾ ಲವಲವಿಕೆ ಇಷ್ಟವಾಗುತ್ತದೆ. ಕೆಲವು ಕಡೆ ಕಿರಿಕಿರಿ ಎನಿಸುತ್ತದೆ. ಅನಂತ್‌ನಾಗ್‌ ಎಂದಿನಂತೆ ತಮ್ಮ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸಿದ್ದಾರೆ. ಉಮಾಶ್ರೀ, ದೊಡ್ಡಣ್ಣ , ವಿನಯಪ್ರಸಾದ್‌, ಕರಿಬಸವಯ್ಯ ಸಹ. ಇನ್ನುಳಿದಂತೆ ಅಸಂಖ್ಯ ಪಾತ್ರಗಳಿವೆ. ಅವ್ಯಾವೂ ಶ್ಯಾನೆ ಹೊತ್ತು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಸುಂದರನಾಥ ಸುವರ್ಣರ ಕ್ಯಾಮೆರಾ 80ರ ದಶಕ ನೆನಪಿಸುತ್ತವೆ. ರಾಜೇಶ್‌ ರಾಮನಾಥ್‌ರ ಕೆಲವು ಹಾಡುಗಳೂ ಅಷ್ಟೇ. ಚಿತ್ರಕತೆಯೇ ಬಹಳ ದುರ್ಬಲವಾಗಿದೆ. ಹೀಗಾಗಿ ಸಂಕಲನಕಾರರನ್ನು ದೂರುವುದು ತಪ್ಪಾಗುತ್ತದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada