ರೀ ನಮ್ಮನ್ನು ಕಾಪಾಡ್ರಿ.. ಕಾಪಾಡ್ರೀ..
*ಮಹೇಶ್ ದೇವಶೆಟ್ಟಿ
‘ಶಶಿಕುಮಾರ್ ಬಂದವ್ರೇ...
ಜನರನ್ನು ಕಾಡಲಿಕ್ಕೇ...
ನಮ್ಮೂರ ಥೇಟರ್‌ನ್ಯಾಗೆ...ನಮ್ಮೂರ
ಥೇಟರ್‌ನ್ಯಾಗೆ...’
ಮುದುಕಿಯರು ಲಟಿಕೆ ಮುರಿಯುತ್ತಾ, ಹುಡುಗರು ಗುರ್ರ್ ಎನ್ನುತ್ತಾ, ಮುದುಕರು ಆಕಳಿಸುತ್ತಾ ಮನಸ್ಸಿನಲ್ಲಿಯೇ ಇದನ್ನು ಗುನುಗುತ್ತಿರುವಾಗ ಶಶಿಕುಮಾರ್ ಇದಾವುದರ ಬಗ್ಗೆ ಒಂದೀಟೂ ಖಬರಿಲ್ಲದೇ, ಮೈಮೇಲೆ ಎಚ್ಚರವಿಲ್ಲದೆ ವಟಗುಟ್ಟುತ್ತಿರುತ್ತಾರೆ. ಯಾವಳೋ ಹುಡುಗಿ ಡಿಕ್ಕಿ ಹೊಡೆದದ್ದಕ್ಕೆ ಮದುವೆ ಮಾಡಿ ಅರ್ಜೆಂಟು ಎನ್ನುತ್ತಾ , ದಿಂಬನ್ನು ಎರಡು ಕಾಲುಗಳ ನಡುವೆ ಇಟ್ಟುಕೊಂಡು... ಅರ್ಜೆಂಟು ಎನ್ನುತ್ತಾ ಮುಲುಗ್ತುತಿರುತ್ತಾರೆ. ನಮ್ಮನ್ನು ಕಾಪಾಡಿ ಅರ್ಜೆಂಟು ಎನ್ನುತ್ತಾ ಪ್ರೇಕ್ಷಕರು ಅಜೆಂಡಾ ರೂಪಿಸುವ ಹೊತ್ತಿಗೆ... ರಾಘವೇಂದ್ರ ನೀ ಮೌನವಾದರೆ ನಮ್ಮ ಗತಿಯೇನು...?
ಶಶಿಕುಮಾರ್ ವರ್ಷಗಳ ನಂತರ ಸೋಲೋ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಕಾಣಿಸದಿದ್ದರೇ ಚೆನ್ನಾಗಿತ್ತೆಂದು ಅನಿಸುವಂತೆ ನಟಿಸಿದ್ದಾರೆ. ಕಲೆ ಕೇವಲ ಚಟದ ಮಟ್ಟಿಗೆ ಇಳಿದಾಗ ಏನಾಗುತ್ತದೆಂದು ತೋರಿಸಿದ್ದಾರೆ. ಎಲೆಕ್ಷನ್ ಹತ್ತಿರ ಬರುತ್ತಿರುವಾಗ ಜನರಿಗೆ ಮಂಕುಬೂದಿ ಎರಚಲೆಂದೇ ಈ ಸಿನಿಮಾ ಮಾಡಿದ್ದಾರೆ. ‘ರೀ ಸ್ವಲ್ಪ ಬರ್ತೀರಾ’ ಎಂದು ಮರ್ಯಾದೆಯಿಂದಲೇ ಕರೆದರೂ ಪ್ರೇಕ್ಷಕರು ಮಾತ್ರ ‘ದಯವಿಟ್ಟು ನಮ್ಮ ಪಾಡಿಗೆ ನಮ್ಮನ್ನು ಬಿಡ್ತೀರಾ’ ಎನ್ನುತ್ತಿದ್ದಾರೆ.
ಇಪ್ಪ್ತತು ದಿನ, ಹದಿನೆಂಟು ದಿನ, ಹದಿನೇಳೂವರೆ- ಕೊರೆ ದಿನಗಳಲ್ಲಿ ರೀಲು ಸುತ್ತಿ ತಮ್ಮ ದಾಖಲೆಯನ್ನು ತಾವೇ ಮುರಿಯುತ್ತಿರುವ ನಿರ್ದೇಶಕ ಎ.ಆರ್.ಬಾಬು. ಶಶಿಕುಮಾರ್ ಇನ್ನೊಮ್ಮೆ ಗಾಂಧಿನಗರದ ಕಡೆ ತಲೆ ಹಾಕದಂತೆ ಎಚ್ಚರ ವಹಿಸಿದ್ದಾರೆ. ಯಾರಾದರೂ ಅವಕಾಶ ಕೊಟ್ಟರೆ ಸಾಕೆನ್ನುವ ಬಾಬುರಂಥವರಿಂದ ಇನ್ನೆಂತಹ ಸಿನಿಮಾ ನಿರೀಕ್ಷಿಸುವುದು ಸಾಧ್ಯ?
ವಯಸ್ಸಿಗೆ ಬಂದ ನಾಯಕ, ಅಣ್ಣನಿಗೆ ತಿಳಿಸದೆ ಮದುವೆಯಾಗುತ್ತಾನೆ. ಆತನಿಗೆ ಮಕ್ಕಳಾದರೆ ಮನೆಯಲ್ಲಿ ಕಾಲಿಗೊಂದು, ಕೈಗೊಂದು ತೊಡರುವ ತನ್ನ ಮಕ್ಕಳನ್ನು ನೋಡಿಕೊಳ್ಳಲು ಯಾರು ಬರ್ತಾರೆ? ಹೀಗೆಂದು ಯೋಚಿಸಿ, ಅಣ್ಣ ಇನ್ನೊಂದು ಹುಡುಗಿಯನ್ನು ತಂದು ನಾಯಕನನ್ನು ಕಕ್ಕಾವಿಕ್ಕಿ ಮಾಡುತ್ತಾನೆ. ಅವಳಿಗೆ ದುಡ್ಡಿನ ಜರೂರತ್ತು ಇರುತ್ತದೆ. ಅದಕ್ಕೆ ಹೀರೋನ ಮೊದಲ ಹೆಂಡತಿ ತಾನೆಂದು ನಾಟಕವಾಡಲು ಒಪ್ಪಿರುತ್ತಾಳೆ. ಇದಕ್ಕೊಂದು ಕತೆಯಂತೆ, ಅದಕ್ಕೊಬ್ಬ ಹೀರೋ ಅಂತೆ, ಇವರನ್ನು ಸಂಭಾಳಿಸಲು ಒಬ್ಬ ನಿರ್ದೇಶಕನಂತೆ. ಸಿನಿಮಾ ಅನ್ನೋದು ಶಶಿಕುಮಾರ್ ಅಂಥವರಿಗೆ ‘ಯಾವ್ಯಾವುದೋ’ ಕೆಲಸಕ್ಕೆ ಬಳಸಿಕೊಳ್ಳುವ ಫುಟ್‌ಬೋರ್ಡು. ಅಂಥವರಿಗಾಗಿ ಸದಾ ತೆರೆದ ಬಾಗಿಲಲ್ಲಿಯೇ ಬಾಬು ನಿಂತಿರುತ್ತಾರೆ. ಕನ್ನಡ ಮಾರ್ಕೆಟ್ಟು ಚಿಕ್ಕದು ಎನ್ನುತ್ತಾರೆ. ಹದಿನೈದು ದಿನಗಳಲ್ಲಾದರೂ ರೀಲು ಸುತ್ತುವುದಿಲ್ಲ, ಗುಣಮಟ್ಟ ಕಾಪಾಡ್ತುತೇವೆ ಎನ್ನುತ್ತಾ ಇಂತಹ ಸಿನಿಮಾ ಮಾಡುತ್ತಾರೆ.
ಇಷ್ಟರ ನಡುವೆ ಇಡೀ ಚಿತ್ರದಲ್ಲಿ ನೆನಪಿನಲ್ಲಿ ಉಳಿಯುವುದು ಕೌಸಲ್ಯ ಮತ್ತು ದಾಮಿನಿಯ ಅಭಿನಯ. ಸಂಗೀತ, ಛಾಯಾಗ್ರಹಣದ ಬಗ್ಗೆ ಉಸಿರೆತ್ತುವಂತಿಲ್ಲ. ಹುಡುಗಿಯನ್ನು ‘ಗಾಡಿ’ ಎಂದು ಕರೆದ ಗೀತರಚನೆಕಾರ ತನ್ನ ಸದಭಿರುಚಿ ಏನೆಂದು ತೋರಿಸಿದ್ದಾನೆ. ಉಳಿದುದರ ಬಗ್ಗೆ ಹೇಳುವುದೇನೂ ಇಲ್ಲ. ಜನರು ಕಾಪಾಡ್ರಿ ಕಾಪಾಡ್ರಿ ಎಂದು ಕೂಗುವುದನ್ನು ಹೇಳದಂತಿರಲು ಸಾಧ್ಯವೇ ಇಲ್ಲ !
(ಸ್ನೇಹಸೇತು- ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications











