ಅವ್ವ : ಇದು ಬರೀ ಮುಸ್ಸಂಜೆ ಪ್ರೇಮ ಪ್ರಸಂಗ...
ಕವಿತಾ ಲಂಕೇಶ್ ನಿರ್ದೇಶನದ ಅವ್ವ ಗ್ರಾಮೀಣ ಬದುಕಿನ ಹೊಸ ಲೋಕವನ್ನು ತೆರೆದಿಡುತ್ತದೆ.ಹರಯಕ್ಕೆ ಬಂದ ಮಗಳು ಹುಡುಗರ ಜತೆ ಮಾತಾಡಿದರೆ ಆಕೆಯ ಅವ್ವ ಪಡುವ ಆತಂಕ,ಊರ ಜನರನ್ನು ಎದುರು ಹಾಕಿಕೊಂಡರೆ ಏನು ಮಾಡುತ್ತಾರೋ ಎನ್ನುವ ಹೆದರಿಕೆ,ಈಕೆಯ ಬಾಯಿ ಹರುಕುತನಕ್ಕೆ ಪಾಠ ಕಲಿಸಲು ನಿಂತ ಅದೇ ಜಾತಿಗೆ ಸೇರಿದ ಬರಮಣ್ಣ,ಇವರ ತಂಟೆ ಬೇಡವೆಂದು ಪ್ರೇಮದ ಬಲೆಯಲ್ಲಿ ಬಿದ್ದ ಮಂಜ ಮತ್ತು ಸಾವಂತ್ರಿ,
ದೇವಶೆಟ್ಟಿ ಮಹೇಶ್
ಆಕೆ ರಂಗವ್ವ.ಬಡ್ದಿಗೆ ಹಣ ಕೊಟ್ಟು ಜೀವನ ಮಾಡುತ್ತಿರುತ್ತಾಳೆ.ಆಕೆಯ ಮಗಳು ಸಾವಂತ್ರಿಗೆ ಕೆಳ ಜಾತಿಯ ಮಂಜ ಪ್ರೇಮಿ.ಗಿರಣಿ ಇಟ್ಟಿರುವ ಬರಮಣ್ಣನಿಗೆ ಗಂಡಸುತನ ಇಲ್ಲ.ಅವನ ಪತ್ನಿಗೆ ಸುಖದ ಮುಖ ಇಲ್ಲ.ಬಾಲಕ ಕರಿಯ ಉಂಡಾಡಿ ಗುಂಡ.ಯಾವ ಕೆಲಸ ಯಾರು ಹೇಳಿದರೂ ಮಾಡುವ ಒಂಥರಾ ಪೋಲಿ.ಕೆಳ ಜಾತಿಯ ಹುಡುಗನನ್ನು ಮೇಲು ಜಾತಿಯ ಹುಡುಗಿ ಪ್ರೀತಿಸುವುದು ಬರಮಣ್ಣನಿಗೆ ಇಷ್ಟ ಆಗೋಲ್ಲ.ಹೇಗಾದರೂ ಮಾಡಿ ರಂಗವ್ವನ ಸೊಕ್ಕು ಮುರಿಯಲು ಯತ್ನಿಸುತ್ತಲೇ ಇರುತ್ತಾನೆ.ಈ ನಡುವೆ ಈ ಪ್ರೇಮಿಗಳು ಪೊದೆಗಳಲ್ಲಿ ಹರೆಯದ ಕೊಬ್ಬು ಕರಗಿಸುತ್ತಿರುತ್ತಾರೆ.ಹೀಗೆ ಸಾಗುವ ಕತೆ ಒಂದೊಂದೇ ಪಾತ್ರ ಹಾಗೂ ಆ ಹಳ್ಳಿಯ ಬಣ್ಣವನ್ನು ಬಯಲು ಮಾಡುತ್ತಾ ಸಾಗುತ್ತದೆ.
ಕವಿತಾ ಲಂಕೇಶ್ ನಿರ್ದೇಶನದ ಅವ್ವ ಗ್ರಾಮೀಣ ಬದುಕಿನ ಹೊಸ ಲೋಕವನ್ನು ತೆರೆದಿಡುತ್ತದೆ.ಹರಯಕ್ಕೆ ಬಂದ ಮಗಳು ಹುಡುಗರ ಜತೆ ಮಾತಾಡಿದರೆ ಆಕೆಯ ಅವ್ವ ಪಡುವ ಆತಂಕ,ಊರ ಜನರನ್ನು ಎದುರು ಹಾಕಿಕೊಂಡರೆ ಏನು ಮಾಡುತ್ತಾರೋ ಎನ್ನುವ ಹೆದರಿಕೆ,ಈಕೆಯ ಬಾಯಿ ಹರುಕುತನಕ್ಕೆ ಪಾಠ ಕಲಿಸಲು ನಿಂತ ಅದೇ ಜಾತಿಗೆ ಸೇರಿದ ಬರಮಣ್ಣ,ಇವರ ತಂಟೆ ಬೇಡವೆಂದು ಪ್ರೇಮದ ಬಲೆಯಲ್ಲಿ ಬಿದ್ದ ಮಂಜ ಮತ್ತು ಸಾವಂತ್ರಿ,ಕೆಳ ಜಾತಿಯ ಹುಡುಗನನ್ನು ಪ್ರೀತಿಸುವ ಸಾವಂತ್ರಿ ತಮಗೇಕಿಲ್ಲ ಎಂದು ಜೊಲ್ಲು ಸುರಿಸುವ ಊರ ಮಂದಿ,ಪ್ಯಾಟೆಯಿಂದ ಬಂದು ಸಾವಂತ್ರಿಯನ್ನು ಮದುವೆಯಾಗಲು ಚಡಪಡಿಸುವ ಶಿವನಂಜ...ಇವರ ಸುತ್ತ ಕತೆ ಸುತ್ತುತ್ತದೆ.
ಒಂದು ಹಳ್ಳಿಯ ಬದುಕನ್ನು ಹಸಿ ಹಸಿಯಾಗಿಯೇ ಚಿತ್ರ ತೆರೆದಿಡುತ್ತದೆ.ಹಾಗೇ ಮಂಜ ಬೇಲಿ ಹಾರುವಾಗ,ನಾಯಕಿಗೆ ಲೊಚಕ್ಕನೆ ಕದ್ದು ಮುತ್ತುಕೊಡುವಾಗ ಸಿಸ್ಟರ್ ಎನ್ನುತ್ತಲೇ ಸಾವಂತ್ರಿಯತ್ತ ಇಕ್ಬಾಲ್ ಕಣ್ಣು ಹಾಕುವಾಗ,ಕರಿಯ ಕದ್ದು ಮಿಲನ ಮಹೋತ್ಸವ ನೋಡುವಾಗ ಲಂಕೇಶ್ ಕಾಣಿಸುತ್ತಾರೆ.ಎಷ್ಟು ದಕ್ಕುತ್ತಾರೆ ಎನ್ನುವುದು ಅವರವರ ಕಣ್ಣಿಗೆ ಬಿಟ್ಟದ್ದು.ಶ್ರುತಿ ಮೊದಲ ಬಾರಿ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ.ಪ್ರೀತಿಯಿಂದ ನಟಿಸಿ ಅಷ್ಟೇ ಪ್ರೀತಿ ಮೂಡಿಸುತ್ತಾರೆ.ಸ್ಮಿತಾ ಅಚ್ಬರಿ ಹುಟ್ಟಿಸುವಷ್ಟು ಸೊಗಸಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ.ವಿಜಯ್ ನಾಯಕನು ಹೌದು,ಸಹ ನಟನೂ ಹೌದು.ಒಟ್ಟಿನಲ್ಲಿ ಅಲ್ಲಲ್ಲಿ ಕಾಣಿಸಿದರೂ ಮೆಚ್ಚುಗೆ ಗಳಿಸುತ್ತಾರೆ.ರಂಗಾಯಣ ರಘು,ಅರುಂಧತಿ,ಕರಿಯ ಪಾತ್ರಧಾರಿ,ಏಣಗಿ ನಟರಾಜ,ನೀನಾಸಂ ಅಶ್ವಥ್ಥ...ಸೇರಿದಂತೆ ಬಹುತೇಕ ಯಾವ ಪಾತ್ರವೂ ಮೋಸ ಮಾಡಿಲ್ಲ. ಮುಖ್ಯವಾಗಿ ಹೇಳಬೇಕಾಗಿರುವುದು ಬಿ.ಚಂದ್ರೇಗೌಡರ ಸಂಭಾಷಣೆ.ಪಕ್ಕಾ ಹಳ್ಳಿ ಸೊಗಡಿನ ಭಾಷೆಯನ್ನು ಅದರ ಎಲ್ಲಾ ಮಗ್ಗಲು ಸಹಿತ ಮಾತಿನಲ್ಲಿ ಹೊಸೆದಿದ್ದಾರೆ.ನೀವು ಕೇಳದ ಹೊಸ ಬೈಗುಳಗಳ ಸರಮಾಲೆಯೇ ಇದೆ.ಇಡಿ ಚಿತ್ರದಲ್ಲಿ ಇವುಗಳನ್ನು ಒಂದೆಡೆ ಸೇರಿಸಿದರೆ ಕನಿಷ್ಠ ಹದಿನೈದು ನಿಮಿಷದಷ್ಟಿದೆ.ಒಟ್ಟಿನಲ್ಲಿ ಚಿತ್ರವನ್ನು ಮುನ್ನುಗ್ಗಿಸುವುದು ಇದೇ ಸಂಭಾಷಣೆ ಎನ್ನುವುದು ಇವರಿಗೆ ಸಿಗುವ ಹೆಗ್ಗಳಿಕೆ.ರಾಷ್ಟ್ರಮಟ್ಟದ ಖ್ಯಾತಿಯ ಛಾಯಗ್ರಾಹಕ ಮಧು ಅಂಬಟ್ ವಿಶೇಷ ಕೆಲಸವನ್ನೇನು ಮಾಡಿಲ್ಲ.ಅವರ ಜಾಗದಲ್ಲಿ ಬೇರೆ ಯಾರಿದ್ದರೂ ವ್ಯತ್ಯಾಸ ಆಗುತ್ತಿರಲಿಲ್ಲ.
ಕೊನೆಗೊಂದು ಮಾತು,ಪಿ.ಲಂಕೇಶ್ ಬರೆದ ಮುಸ್ಸಂಜೆಯ ಕಥಾ ಪ್ರಸಂಗ ಕಾದಂಬರಿಯನ್ನು ಸಿನಿಮಾ ಮಾಡುವುದು ಕಷ್ಟ.ಯಾಕೆಂದರೆ ಆ ಕತೆಗೆ ಕೇಂದ್ರ ಹಂದರ ಇಲ್ಲ.ಒಬ್ಬ ಬಾಲಕನ ಕಣ್ಣಿನಿಂದ ಒಂದು ಹಳ್ಳಿಯ ನೀಚತನ,ಜಾತೀಯತೆ,ಹಾದರ,ಪ್ರೇಮ,ಹತಾಶೆ ತೆರೆದುಕೊಳ್ಳುತ್ತದೆ.ಆ ಮೂಲಕ ಆಯಾ ಪಾತ್ರಗಳ ತಳಮಳ,ಮನುಷ್ಯನ ನಿಗೂಢ ಆತಂಕ ಹಾಗೂ ತಲ್ಲಣಗಳನ್ನು ಹೊರಹಾಕುತ್ತದೆ.ಅದೇ ಕಾದಂಬರಿಯ ಹೆಚ್ಚುಗಾರಿಕೆ.ನವ್ಯ ಕಾಲ ಘಟ್ಟದಲ್ಲಿ ನಿಂತರೂ ಲಂಕೇಶ್ ಮನುಷ್ಯನ ಮುಲಭೂತ ಗುಣಗಳ ದರ್ಶನ ಮಾಡಿಸಿ ಅಚ್ಚರಿ ಮೂಡಿಸಿದ್ದರು.ಕವಿತಾ ಆ ಆಶಯ ಪಕ್ಕಕ್ಕೆ ಇಟ್ಟು,ಒಂದು ಸಿಂಪಲ್ ಚಿತ್ರಕತೆ ಹೆಣೆದಿದ್ದಾರೆ.ಬಹುಶಃ ಜನ ಸಾಮಾನ್ಯರಿಗೂ ಅರ್ಥವಾಗಲಿ ಎನ್ನುವ ಉದ್ದೇಶ ಇರಬಹುದು!
ಹೀಗಾಗಿ ದೃಶ್ಯ ಮತ್ತು ಸಂಭಾಷಣೆಯಾಚೆ ಕತೆ ಬೇರೇನನ್ನೂ ಹೇಳಲು ಯತ್ನಿಸುವುದಿಲ್ಲ.ಸೇಮ್ ಟೈಮ್ ಕವಿತಾ ಆ ಸಾಧ್ಯತೆಯನ್ನೂ ಬಳಸಿಕೊಂಡಿಲ್ಲ.ಜಾತಿ ಸಂಘರ್ಷಕ್ಕೆ ತೀವ್ರತೆ ದಕ್ಕುವುದಿಲ್ಲ.ಆದರೆ ಪ್ರೇಮಿಗಳ ದೇಹಕ್ಕೆ ಹೆಚ್ಚು ತೀವ್ರತೆ ಒದಗಿಸಿದ್ದಾರೆ.ದ್ವಿತೀಯಾರ್ಧದಲ್ಲಿ ಕೆಲವು ಅನಗತ್ಯ ದೃಶ್ಯಗಳು ಇಣುಕುತ್ತವೆ.ಮಂಜ ಶಾಲೆಯಲ್ಲಿ ಕೂಡುವುದು,ಭಟ್ಟಿ ಸಾರಾಯಿ ಮಾಡುವ ದೃಶ್ಯ ಕತೆಯಾಚೆ ಉಳಿಯುತ್ತವೆ.ಉಡುಪ ಪಾತ್ರದ ನಾಟಕೀಯತೆ,ಇಕ್ಬಾಲನ ಗೊಂದಲಕ್ಕೆ ಫೈನಲ್ ಟಚ್ ಸಿಕ್ಕಿಲ್ಲ.ಬಹುತೇಕ ಕಡೆ ಹೀಗಾಗಿದೆ.ಕಾದಂಬರಿ ಹಂಗಿಲ್ಲದೆ ನೋಡಿದರೆ ಇದೆಲ್ಲಾ ಅನುಮಾನಗಳೇ ಉಳಿಯುವುದಿಲ್ಲ. ಇನ್ನೊಂದು ಕಿವಿಮಾತು.ವಿಜಯ್ ಇದ್ದಾರೆಂದು ಫೈಟು,ಹಾಡು ನೀರಿಕ್ಷೆ ಮಾಡಿ ಹೋದರೆ ಕಷ್ಟ.ಇದು ಆ ವಿಜಯ್ ಸಿನಿಮಾ ಅಲ್ಲ.ಹಾಗಂತ ಕಮರ್ಶಿಯಲ್ ಚಿತ್ರವೂ ಅಲ್ಲ.ಕಲಾತ್ಮಕ ಚಿತ್ರದಂತೆ ಹೆಚ್ಚು ನಿಧಾನಗತಿಯೂ ಇಲ್ಲ.ಎರಡನ್ನೂ ಬೆಸೆದಿರುವುದರಿಂದ...ಬ್ರಿಜ್ ಕೆಟಗರಿ ಇದ್ದೇ ಇದೆಯಲ್ಲ...
ಒಟ್ಟಿನಲ್ಲಿ ಕವಿತಾ ನಿರ್ದೇಶನದ ತನನಂ ತನನಂ ಚಿತ್ರಕ್ಕಿಂತ ಅವ್ವ ಇಷ್ಟವಾಗುತ್ತಾಳೆ.ಆದರೆ ತನನಂ ಎಷ್ಟು ಚೆನ್ನಾಗಿತ್ತು ಎಂದು ಮಾತ್ರ ಕೇಳಬೇಡಿ!


Click it and Unblock the Notifications











