For Quick Alerts
  ALLOW NOTIFICATIONS  
  For Daily Alerts

  ಚಿತ್ರ ವಿಮರ್ಶೆ: ಬಾಬಾ ದಯವಿಟ್ಟು ಹೋಗಿ ಬಾ !

  By Staff
  |

  ಚಿತ್ರ ವಿಮರ್ಶೆ ಓದುವ ಮುನ್ನ ಈ ಕೆಳಗಿನ ಪ್ರಶ್ನೆಗಳನ್ನು ಸುಮ್ಮನೇ ಗಮನಿಸಿ:

  *ವಿನಾಯಕರಾಮ್ ಕಲಗಾರು

  1 :ಮನೆಯ ಎಲ್ಲಾ ಜವಾಬ್ದಾರಿಯನ್ನೂ ಹೊರಬೇಕಾದವ ನೀನು. ಅದಕ್ಕಾಗಿ ಓದಿ ಉದ್ಧಾರ ಆಗು ಮಗನೇ' ಎಂದು ಕಿವಿ ಹಿಂಡುವ ಹೆತ್ತವರ ಮಾತು ಕೇಳಲಾರದ ಸ್ಥಿತಿ ತಲುಪಿದ್ದೀರಾ?
  2:ಜನ ಕಂಡಕೂಡಲೇ ಗುರುತಿಸಬೇಕು. ಎಲ್ಲರಿಗಿಂತ ಹೆಚ್ಚು ಗೌರವ, ಮರ್ಯಾದೆ' ಕೊಡಬೇಕು. ಕಂಡಕಂಡಲ್ಲಿ ಯಣ್ಣಾ , ನಮಸ್ಕಾರ ಕಣಣ್ಣಾ' ಎಂದು ಸಲಾಮ್ ಹೊಡೀಬೇಕು ಎಂದು ಪೆನ್ನು ಹಿಡಿಯುವ ವಯಸ್ಸಿನಲ್ಲೇ ಗನ್ನು ಹಿಡಿದಿದ್ದೀರಾ?
  3: ಮೀಸೆ ಚಿಗುರಿದ ಮರುದಿನವೇ ಮೈ ಕೊಡವಿ, ಲವ್ವು-ಪವ್ವು ಎಂದು ಬೀದಿಬೀದಿ ಸುತ್ತುತ್ತಿದ್ದೀರಾ?
  4: ದೇವಸ್ಥಾನದಲ್ಲೋ, ಬಸ್ಸಲ್ಲೋ, ಇನ್ನೆಲ್ಲೋ ಕಂಡ ಹುಡುಗಿಗೋಸ್ಕರ ಅಪ್ಪ ಅಮ್ಮನ ಮಾತು ಕ್ಕರಿಸಿ, ಇರುವ ಮೂರು ಕಾಸಿನ ನೌಕರಿಯನ್ನೂ ಬಿಟ್ಟು ಬೀದಿಗೆ ಬಂದಿದ್ದೀರಾ?
  5: ಧರಿಸಿದ ಅಯ್ಯಪ್ಪ ಸ್ವಾಮಿ ಮಾಲೆಯನ್ನೂ ಧಿಕ್ಕರಿಸಿ ಅವಳ ಅಡ್ರೆಸ್ ಪತ್ತೆಗಾಗಿ ಹೊರಟಿದ್ದೀರಾ(!)?
  6: ಅವಳಿಗಾಗಿ ಯಾರ್‍ಯಾರನ್ನೋ ಎದುರು ಹಾಕಿಕೊಂಡಿದ್ದೀರಾ? ಇನ್ಯಾರಿಗೋ ದನಕ್ಕೆ ಬಡಿದಂತೆ ಬಡಿದಿದ್ದೀರಾ?
  7: ಅವಳ ಪ್ರೀತಿಗಾಗಿ ಕುಡಿತ, ದಾದಾಗಿರಿ ದುಶ್ಚಟ, ದುರ್ಮಾರ್ಗಗಳಿಗೆ ತಿಲಾಂಜಲಿ ಹಾಡಿ, ಯೋಗ್ಯ ಹಾದಿ(!) ತುಳಿದಿದ್ದೀರಾ?
  8: ಕೊನೆಯದಾಗಿ ಅವಳೇ ಹೆಣವಾದಾಗ ಕುತ್ತಿಗೆಗೆ ರೇಜರ್ ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದೀರಾ?
  9: ಅಥವಾ ಈ ಎಂಟೂ ಪ್ರಶ್ನೆಗಳಿಗೆ ಉತ್ತರವಾಗುವ ಭಗ್ನ ಪ್ರೇಮಿಗಳನ್ನು ನೋಡಿದ್ದೀರಾ?

  ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಾ ? ಹಾಗಾದರೆ ಈ ವಾರ ತೆರೆ ಕಂಡ ಬಾಬಾ ಚಿತ್ರಕ್ಕೆ ಹೋಗಿ !

  ನಿರ್ದೇಶಕ ತ್ರಿಶೂಲ್ ಈ ಸಿದ್ಧಾಂತದ ಎಳೆ ಇಟ್ಟುಕೊಂಡ ಒಂದು ಮಕ್ಕಳ ಚಿತ್ರ' ಮಾಡಿದ್ದಾರೆ. ಬಾಬಾಗೂ ಮಕ್ಕಳಿಗೂ ಏನು ಸಂಬಂಧ ಎಂಬ ಡೌಟಾ ? ಸಂಬಂಧ ಇರೋದೇ ಅಲ್ಲಿ .ಕತೆಯಲ್ಲಿ ಬರುವ ನಾಯಕ ಮೊನ್ನೆಯಷ್ಟೇ ಮೀಸೆ ಚಿಗುರಿದ ಮಿಳ್ಳೆ ! ನಿನ್ನೆಯಷ್ಟೇ ಎಸ್ಸೆಸ್ಸೆಲ್ಸಿ ಮೆಟ್ಟಿಲು ಹತ್ತಲು ಹೋಗಿ ಲಗಾಟಿ ಹೊಡೆದ ಅಮೂಲ್ ಬೇಬಿ. ನಾಯಕಿಯೂ ಹತ್ತನೇ ಕ್ಲಾಸು. ಈ ಇಬ್ಬರ ಪ್ರೇಮ ಪ್ರಸಂಗದ ಒಟ್ಟು ಮೊತ್ತವೇ ಬಾಬಾ. ಜತೆಗೊಂದಿಷ್ಟು ಡಿಶುಂ ಡಿಶುಂ. ಆಗಾಗ ಗಲ್ಲಿ ಗಲ್ಲಿ ಸುತ್ತಿ ದುಶ್ಮನ್‌ಗಳನ್ನು ಮಚ್ಚಿನಿಂದ ಮಾತನಾಡಿಸುವ ಜೂಟಾಟ, ಕೂಗಾಟ... ಒಟ್ಟಾರೆ ಹೇಳುವುದಾದರೆ ಇದೊಂಥರಾ ಆಟ ಬೊಂಬಾಟ. ಆದರೆ ನೋಡುಗರಿಗೆ ಮಾತ್ರ ಪ್ರಾಣ ಸಂಕಟ !

  ಮೊದಲ ಬಾರಿಗೆ ನಾಯಕಗಿರಿ ಗಿಟ್ಟಿಸುವ ಹಂಬಲದಲ್ಲಿ ಕಾರ್ತಿಕ್ ತುಸು ಬಿರುಸಾಗಿಯೇ ಅಭಿನಯಿಸಿದ್ದಾರೆ. ಮಾತೊಂದನ್ನು ಬಿಟ್ಟು, ಹೊಡೆದಾಟ, ಬಡಿದಾಟ, ಕುಣಿದಾಟ ಎಲ್ಲದರಲ್ಲೂ ಎತ್ತಿದ ಕೈ. ಕತೆಯಲ್ಲಿ ಇನ್ನಷ್ಟು ಖದರ್ ಇದ್ದಿದ್ದರೆ ಅವನ ಅಭಿನಯವೇ ಹೈಲೈಟ್ ಆಗುತ್ತಿತ್ತು. ನಾಯಕಿ ಪ್ರಜ್ಞಾ ಹೆಚ್ಚಿನ ದೃಶ್ಯಗಳಲ್ಲಿ ಹಲ್ಲು ಗಿಂಜುವುದನ್ನು ಬಿಟ್ಟರೆ ಇನ್ನೇನನ್ನೂ ಮಾಡಿಲ್ಲ. ಆದರೂ ಅವಳ ಪಾತ್ರ ಇಷ್ಟವಾಗುತ್ತೆ. ಎಲ್ಲಕ್ಕಿಂತ ಚಿತ್ರದುದ್ದಕ್ಕೂ ಮನ ಮೀಟುವ ಪಾತ್ರ ರಮೇಶ್ ಭಟ್ ಹಾಗೂ ಪದ್ಮಾವಾಸಂತಿ ಅವರದ್ದು. ಆದರೆ ಸಹಿಸಲೇ ಆಗದ ಹಾಗೂ ಮೈ ಪರಚಿಕೊಳ್ಳುವಂತೆ ಮಾಡುವಂಥದ್ದು ಸುನಿಲ್‌ನ ಕಾಮಿಡಿ ರೋಲ್. ಹಳೇ ಡಬ್ಬಾ ಕಾಮಿಡಿ ಡೈಲಾಗ್ ಹೇಳಿ ತಲೆಗೆ ಹುಳ ಬಿಡುವ ಬದಲು ಆತ ಉದಯಟಿವಿಯ ಕುರಿಗಳು ಸಾರ್ ಕುರಿಗಳು ಕಾರ್ಯಕ್ರಮಕ್ಕೆ ಮತ್ತೆ ವಾಪಾಸಾಗುವುದೇ ಲೇಸು !

  ನಿರ್ದೇಶಕರು ಮೊದಲು ಸೋತಿದ್ದು ಕತೆಯ ಆಯ್ಕೆಯಲ್ಲಿ. ಮನಸುಗಳ ಮಾತು ಮಧುರ, ನಂದ ನಂದಿತಾ ಸೇರಿದಂತೆ ಇತ್ತೀಚೆಗೆ ಬಂದ ಒಂದಿಷ್ಟು ಸಿನಿಮಾಗಳ ಆಯ್ದ ಭಾಗಗಳು ಬಾಬಾದಲ್ಲಿ ಬಂದುಹೋಗುವಂತೆ ಮಾಡಿದ್ದಾರೆ ತ್ರಿಶೂಲ್. ಮೊದಲಾರ್ಧದ ಕೆಲವು ದೃಶ್ಯಗಳನ್ನು ಸಹಿಸಿಕೊಂಡು ನೋಡಬಹುದು. ಚಿತ್ರ ಸಾಗುತ್ತಾ ಹೋದಂತೇ ಚಿತ್ರಾನ್ನ ಆಗುತ್ತದೆ. ಇನ್ನುಳಿದಂತೆ ಸುಂದರ್‌ನಾಥ್ ಸುವರ್ಣರ ಕ್ಯಾಮೆರಾ ವರ್ಕ್ ಪರವಾಗಿಲ್ಲ. ಅರ್ಜುನ್ ಸಂಗೀತದಲ್ಲಿ ಎರಡು ಹಾಡು ಬಿಟ್ಟರೆ ಉಳಿದದ್ದು ಹೇಳಿಕೊಳ್ಳುವಂತಿಲ್ಲ.

  ಬರೀ ಹೊಡೆದಾಟ, ಬಡಿದಾಟಗಳಿಂದ ಒಂದು ಸಿನಿಮಾ ಮಾಡಬಹುದು. ಇಂತಹ ಗಿಮಿಕ್ ಉಪಯೋಗಿಸಿ ಪ್ರೇಕ್ಷಕರ ಕಿವಿಗೆ ಲಾಲ್‌ಬಾಗ್ ಇಡಬಹುದು ಎಂದು ಕೊಂಡಿದ್ದರೆ ಅದು ನಿರ್ದೇಶಕರ ಬುದ್ಧಿವಂತಿಕೆ'ಯ ಪರಮಾವಧಿಯೇ ಸರಿ !

  ಅಪ್ಪಟ ಪ್ರಣಯಾಧಾರಿತ ಚಿತ್ರ ಬಾಬಾ ತೆರೆಗೆ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X