»   » ತೆನಾಲಿರಾಮ : ಇದು ನಿಮ್ಮನ್ನು ನಗಿಸಲು ಮಾತ್ರ!

ತೆನಾಲಿರಾಮ : ಇದು ನಿಮ್ಮನ್ನು ನಗಿಸಲು ಮಾತ್ರ!

Posted By:
Subscribe to Filmibeat Kannada


ಕಾಮಿಡಿ ಚಿತ್ರವೆಂದರೆ ಅಲ್ಲಿ ತರ್ಕಕ್ಕೆ ಜಾಗವಿಲ್ಲ. ನಗಲು ಯಾರ ಅಡ್ಡಿಯೂ ಇಲ್ಲ. ಅಂತಹ ಚಿತ್ರಗಳಲ್ಲಿ ‘ತೆನಾಲಿರಾಮ ’ ಸಹಾ ಒಂದು. ಇದು ಚಿತ್ರದ ಒನ್‌ಲೈನ್‌ ವಿಮರ್ಶೆ. ಅದರಲ್ಲೂ ಜಗ್ಗೇಶ್‌ ಮತ್ತು ರಮೇಶ್‌ ಸೇರಿದ ಮೇಲೆ ಕೇಳಬೇಕೆ?

  • ದೇವಶೆಟ್ಟಿ ಮಹೇಶ
ಚಿತ್ರ : ತೆನಾಲಿರಾಮ
ನಿರ್ಮಾಪಕರು : ಎಸ್‌.ವಿ.ಬಾಬು
ನಿರ್ದೇಶಕರು : ಮಾಗಡಿ ಪಾಂಡು
ಸಂಗೀತ : ಆರ್‌.ಪಿ.ಪಟ್ನಾಯಕ್‌
ತಾರಾಗಣ : ಜಗ್ಗೇಶ್‌, ರಮೇಶ್‌, ಸಂತೋಷಿ, ದೀಪು, ರಂಗಾಯಣ ರಘು, ಧರ್ಮ, ಗಝರ್‌ ಖಾನ್‌ ಮತ್ತಿತರರು

ಹೀಗಾಗುತ್ತಾ ಎಂದು ಕೇಳುವಂತಿಲ್ಲ... ಯಾಕೆಂದರೆ ಇದು ಕಾಮಿಡಿ ಸಿನಿಮಾ.

ಇದು ನಿಮ್ಮ ತಲೆಯಲ್ಲಿದ್ದರೆ ಮುಲಾಜಿಲ್ಲದೆ ಎರಡೂವರೆ ಗಂಟೆ ನಕ್ಕೂ ನಕ್ಕು ಸುಸ್ತಾಗುತ್ತೀರಿ. ನಕ್ಕು ಮನಸು ಹಗುರ ಮಾಡಿಕೊಳ್ಳಿ ಎನ್ನುವ ತತ್ವದಿಂದಲೇ ಬಂದಿದೆ ತೆನಾಲಿರಾಮ.

ಕಾಮಿಡಿ ಚಿತ್ರವೆಂದರೆ ಅಲ್ಲಿ ತರ್ಕಕ್ಕೆ ಜಾಗವಿಲ್ಲ. ಮಾತಿಗೆ ಕಡಿವಾಣ ಇಲ್ಲ. ನಗಲು ಯಾರ ಅಡ್ಡಿಯೂ ಇಲ್ಲ. ಇದು ಇದರ ಒನ್‌ಲೈನ್‌ ವಿಮರ್ಶೆ. ಅದರಲ್ಲೂ ಜಗ್ಗೇಶ್‌ ಮತ್ತು ರಮೇಶ್‌ ಸೇರಿದ ಮೇಲೆ ಕೇಳಬೇಕೆ ? ಇಬ್ಬರೂ ತಮ್ಮ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ್ದಾರೆ. ಇಬ್ಬರದೂ ಒಂದೊಂದು ಥರ ಥರ ಹೊಸ ಥರ. ಅದರಲ್ಲೂ ಜಗ್ಗೇಶ್‌ ತಮ್ಮದೇ ವಿಚಿತ್ರ ಭಾಷೆ, ಮೂಕ ಸನ್ನೆ, ನಿಕ್ಕಿ ಟೈಮಿಂಗ್‌ನಿಂದ ನಿಗಿ ನಿಗಿ ಅಂತಾರೆ. ರಮೇಶ್‌ ಕೂಡ ಹಿಂದೆ ಬಿದ್ದಿಲ್ಲ. ಅವರದು ಮತ್ತೊಂದು ಧಾಟಿ.

ಇವರ ಜತೆಗೆ ರಂಗಾಯಣ ರಘು, ಧರ್ಮ ಅಚ್ಚರಿಗೊಳಿಸುತ್ತಾರೆ. ಇದುವರೆಗೆ ವಿಲನ್‌ ಪಾತ್ರಕ್ಕೆ ಸೀಮಿತವಾಗಿದ್ದ ಧರ್ಮ ವಿಲನ್‌ ಕಾಮಿಡಿಯನ್‌ ಆಗಿ ಗೆದ್ದಿದ್ದಾರೆ. ಅಲ್ಲಲ್ಲಿ ಇಣುಕುವ ಉಮೇಶ್‌, ಕೋಮಲ್‌ ಕುಮಾರ್‌ ಕುಣಿಯಲು ಸಾಕಷ್ಟು ಅವಕಾಶ ಇದೆ. ಅಭಿನಯಕ್ಕೆ ಅವಕಾಶ ನೀಡಲು ನಿರ್ದೇಶಕ ಯಾಕೊ ಹಿಂದೇಟು ಹಾಕಿದ್ದಾರೆ.

ಆರ್‌.ಪಿ.ಪಟ್ನಾಯಕ್‌ ನೀಡಿರುವ ಸಂಗೀತಕ್ಕೆ ಅವರನ್ನು ಅಲ್ಲಿಂದಿಲ್ಲಿಗೆ ಕರೆಸುವ ಅಗತ್ಯ ಇರಲಿಲ್ಲ ಅನ್ನೋದು ಜನರ ಅಭಿಪ್ರಾಯ. ಕಾಮಿಡಿಯೇ ಮುಖ್ಯ ಉದ್ದೇಶ ಆಗಿರುವುರಿಂದ ನಿರ್ದೇಶಕ ಉಳಿದ ವಿಭಾಗಗಳತ್ತ ಡೋಂಟ್‌ ಕೇರ್‌ ಅಂದಿದ್ದಾರೆ. ಏನೇ ಆದರೂ ನಗಿಸಿದ್ದಾರೆ.

ನಡುನಡುವೆ ಬರುವ ಹಳೆಯ ಹಾಡುಗಳ ತುಣುಕುಗಳು ಮೊದಲು ಖುಷಿ ಕೊಡುತ್ತವೆ. ಅದೇ ಜಾಸ್ತಿಯಾಗಿದೆ. ಅತಿಯಾದರೆ ಅಮೃತವೂ ವಿಷ ಎನ್ನುವುದನ್ನು ನಿರ್ದೇಶಕ ಮಾಗಡಿ ಪಾಂಡು ತಿಳಿದುಕೊಳ್ಳಲಿ. ಆದರೆ ಅವರು ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕೆ ಲಿಂಕ್‌ ಕೊಡುವ ರೀತಿ ಅದು ನಾಟಕೀಯ ಅನ್ನಿಸದೆ ಕತೆಯಲ್ಲೇ ಒಂದಾಗುತ್ತದೆ.

ಆದರೆ ಇದು ಮಲಯಾಳಿ ಚಿತ್ರವೊಂದರ ರೀಮೇಕ್‌ ಅನ್ನುವುದು ಮಲಯಾಳಿ ಮಿತ್ರರ ಪಕ್ಕಾ ಬಾಂಡ್‌ ಪೇಪರ್‌ ಶೈಲಿಯ ಮಾತು. ಆದರೂ ಪಾಂಡು ಇಲ್ಲಿಗೆ ತಕ್ಕಂತೆ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ. ಜಗ್ಗೇಶ್‌ ತಮ್ಮ ಮಾತುಗಳನ್ನು ತಾವೇ ಬರೆದುಕೊಂಡಂತೆ ಚೆಂದ ಮಾತಾಡಿದ್ದಾರೆ. ಇದೆಲ್ಲಾ ಸಣ್ಣ ಪುಟ್ಟ ಓರೆಕೋರೆಗಳನ್ನು ಮರೆಸುತ್ತದೆ.

ಇಷ್ಟೆಲ್ಲಾ ಹೇಳಿ ಕತೆಯನ್ನೇ ಹೇಳಲಿಲ್ಲವಲ್ಲ ಎಂದು ಕೇಳಬೇಡಿ. ಮೊದಲೇ ಹೇಳಿದಂತೆ ಕಾಮಿಡಿ ಚಿತ್ರಕ್ಕೆ ಕತೆ ಅಂಥ ಅಗತ್ಯವೇ ಇಲ್ಲ. ಆದರೆ ಇಲ್ಲಿ ಸಾಮಾನ್ಯವಾದರೂ ನೀಟಾದ ಕತೆ ಇದೆ. ಅದನ್ನು ಹೇಳಿಬಿಟ್ಟರೆ ನಿಮಗೆ ನಗಲು ಚಾನ್ಸ್‌ ಸಿಗೋಲ್ಲ. ಬೇಗ ರೆಡಿಯಾಗಿ ತೆನಾಲಿರಾಮನ ದರ್ಶನಕ್ಕೆ ಹೋಗಿ. ಅಲ್ಲೇ ಎಲ್ಲಾ ಗೊತ್ತಾಗುತ್ತೆ...!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada