ಕ್ಲೈಮ್ಯಾಕ್ಸೇ ಇಲ್ಲದ ಚಿತ್ರ ಪರಮಾತ್ಮ: ವಸ್ತುನಿಷ್ಠ ವಿಮರ್ಶೆ

By * ಜೋಗಿ
<ul id="pagination-digg"><li class="next"><a href="/reviews/12-movie-paramathma-entire-film-is-flashback-aid0052.html">Next »</a></li></ul>

Puneet in Paramathma
ಕನ್‌ಫ್ಯೂಷನ್ ಈಸ್ ಹ್ಯಾಪಿನೆಸ್. ಹಾಗಂತ ಬೌದ್ಧ ಸನ್ಯಾಸಿ ಉಪದೇಶ ನೀಡಿದ್ದು ಕಥಾನಾಯಕನಿಗೆ ಮಾತ್ರವಲ್ಲ, ನಮಗೂ ಅನ್ನೋದು ಅರ್ಥವಾಗುವ ಹೊತ್ತಿಗೆ, ಅದನ್ನೆಲ್ಲ ತಾರ್ಕಿಕ ನೆಲೆಗಟ್ಟಿಗೆ ತಂದುನಿಲ್ಲಿಸುವ ದೃಶ್ಯವೊಂದಕ್ಕಾಗಿ ಮನಸ್ಸು ಕಾಯತೊಡಗುತ್ತದೆ. ಕೊನೆಗೂ ಅಂಥ ದೃಶ್ಯವೊಂದನ್ನು ದಯಪಾಲಿಸುವ ಕೃಪೆ ಮಾಡುವುದಿಲ್ಲ ಭಟ್ಟರು. ಆ ಮಟ್ಟಿಗೆ ಅವರದ್ದು ದೇವರು ಕೊಟ್ಟರೂ ಪೂಜಾರಿ ಬಿಡ ಅನ್ನೋ ಪಾಲಿಸಿ. ಕೊನೆಗೆ ನಾವೇ ನಮಗಿಷ್ಟವಾಗುವ,ನಮ್ಮ ಊಹೆಗೆ ನಿಲುಕುವ, ನಮ್ಮ ಅನುಭವಕ್ಕೆ ಒಗ್ಗುವ ಕತೆಯೊಂದನ್ನು ಹೆಣೆಯುತ್ತಾ ಹೋಗುತ್ತೇವೆ. ಹಾಗೆ ಮಾಡುವುದೇ ನಿರ್ದೇಶಕರ ಉದ್ದೇಶವೂ ಆಗಿದ್ದರೆ ಅವರು ಯಶಸ್ವಿಯಾಗಿದ್ದಾರೆ.

ಜೊತೆಗಿರದ ಜೀವ ಎಂದಿಗಿಂತ ಜೀವಂತ ಅನ್ನುವ ಸಂದೇಶ ಕೊನೆಯಲ್ಲಿ ಕಾಣಿಸಿಕೊಳ್ಳುತ್ತದೆ. ಜೊತೆಗಿರದ ಜೀವ ಸದಾ ಜೊತೆಗೇ ಇರುವುದು ಹೇಗೆ ಅನ್ನುವ ಪ್ರಸ್ತಾಪ ಇಲ್ಲಿ ಬೇಡ. ಆದರೆ, ಒಂದೇ ಕತೆಯನ್ನು ಮತ್ತೆ ಮತ್ತೆ ತಿದ್ದಿ ಬರೆಯುವ ಭಟ್ಟರ ಧೈರ್ಯವನ್ನಂತೂ ಮೆಚ್ಚಬೇಕು. ಅವರ ಹಿಂದಿನ ಸಿನಿಮಾಗಳಲ್ಲಿ ಇರುವ ಹಾಗೆ ಇಲ್ಲೂ ತ್ರಿಕೋನ ಪ್ರೇಮವಿದೆ. ಯಾರು ಯಾರಿಗೆ ಒಲಿಯುತ್ತಾರೆ ಅನ್ನೋ ಕುತೂಹಲವಿದೆ. ಒಬ್ಬಳು ತರಲೆ ಹುಡುಗಿ ಇದ್ದಾಳೆ. ಈ ಜಗತ್ತಿನಲ್ಲಿದ್ದೂ ಅದರಾಚೆಗೆ ಧ್ಯಾನಿಸಬಲ್ಲ ಹುಡುಗನಿದ್ದಾನೆ. ತಾತ್ವಿಕತೆಯನ್ನು ಕಮರ್ಷಿಯಲ್ಲಾಗಿ ಹೇಳಬೇಕು ಎಂಬ ತುಡಿತವಿರುವ ಇಬ್ಬರು ನಿರ್ದೇಶಕರು ಕನ್ನಡದಲ್ಲಿದ್ದಾರೆ. ಉಪೇಂದ್ರರನ್ನು ಬಿಟ್ಟರೆ ಅಂಥದ್ದೊಂದು ಗ್ರಹಿಕೆಗೆ ಸಿಗದ ಸಂಗತಿಯನ್ನು ಹಿಡಿಯಲು ಯತ್ನಿಸುವವರು ಭಟ್ಟರು ಮಾತ್ರ.

ಹಾಗೆ ನೋಡಿದರೆ ಇದೊಂದು ಕ್ಲೈಮ್ಯಾಕ್ಸೇ ಇಲ್ಲದ ಸಿನಿಮಾ. ಕೊನೆಯಲ್ಲೊಂದು ಅನಿರೀಕ್ಷಿತ ಘಟನೆ ನಡೆದು ಇಡೀ ಪರಿಸ್ಥಿತಿಯನ್ನೇ ತಿರುವುಮುರುವು ಮಾಡುವುದು ರೂಢಿಯಾದ ನಮಗೆ ಈ ರೀತಿ ಹೊಸದು. ನದಿ ಹರಿದು ಸಮುದ್ರ ಸೇರಬೇಕು ನಿಜ. ಆದರೆ ನಡುವೆ ಒಂದಾದರೂ ಜಲಪಾತ ಬೇಕೆ ಬೇಕು. ನೀರು ಕುಟಿಲ ಜಟಿಲ ಪಥಗಳಲ್ಲಿ ಹರಿದು, ಧುಮ್ಮಕ್ಕಿ, ಮತ್ತೆ ಧೀರಗಂಭೀರವಾಗಿ ಸಾಗಬೇಕು. ಆಗಲೇ ನಮಗೆ ಖುಷಿ. ಆದರೆ ಇಲ್ಲಿ ಅಂಥದ್ದೇನೂ ನಡೆಯದೇ, ಸಿನಿಮಾ ನಿರುಮ್ಮಳವಾಗಿ ಮುಗಿಯುತ್ತದೆ. ಕೊನೆಯಲ್ಲಿ ಎದುರಾಗುವ ತಿರುವು ಕೂಡ ನಮಗೆ ಅನಿರೀಕ್ಷಿತ, ಪಾತ್ರಕ್ಕಲ್ಲ. ಹಳೆಯ ಗೆಳತಿಗೆ ಕತೆ ಹೇಳುವ ನಾಯಕನೊಂದಿಗೆ ನಾವೂ ಸಾಗುತ್ತಿರುತ್ತೇವೆ.

ಭಟ್ಟರ ಪಾತ್ರಗಳು ಮಾತಾಡುತ್ತಿದ್ದರೆ ಅವರೇ ಮಾತಾಡುತ್ತಿದ್ದಾರೆ ಅಂತ ಅನ್ನಿಸುವುದಿದೆ ನೋಡಿ. ಅದು ನಿರ್ದೇಶಕನ ಶಕ್ತಿಯೂ ಹೌದು ದೌರ್ಬಲ್ಯವೂ ಹೌದು. ಕೆಲವು ಕತೆಗೆ ಅದು ಹೊಂದಿಕೊಳ್ಳುತ್ತದೆ. ಕೆಲವೊಮ್ಮೆ ಅದಕ್ಕೆ ಸಿನಿಮಾ ಮಾಧ್ಯಮ ಬೇಕಾ ಅನ್ನುವ ಅನುಮಾನವೂ ಕಾಡುತ್ತದೆ. ಹಾಗೆ ನೋಡಿದರೆ ಒಂದು ಕೃತಿಯ ತಾತ್ವಿಕತೆ ನಿರ್ದೇಶಕನದ್ದೆ. ಪಾತ್ರಧಾರಿ ಅದನ್ನು ಜೀವಂತವಾಗಿ ನಮ್ಮ ಮುಂದಿರಿಸುತ್ತಾನೆ ಅಷ್ಟೇ. ಇಲ್ಲೂ ಅಷ್ಚೇ,ಭಟ್ಟರು ಹೇಳಹೊರಟಿರುವ ಸಂಗತಿ ಗಹನವಾದದ್ದು. ಅದನ್ನು ತೀರ ಸರಳೀಕರಿಸಿ ಹೇಳುವುದಕ್ಕೂ ಬರುತ್ತದೆ ಎನ್ನುವುದನ್ನು ಅವರು ಸಾಬೀತು ಮಾಡುವುದಕ್ಕೆ ಹೊರಟಿದ್ದಾರೆ. ಆದರೆ, ಕೊನೆಕೊನೆಗೆ ಅದು ಎಷ್ಟರ ಮಟ್ಟಿಗೆ ಚಿತ್ರವನ್ನು ಪ್ರಭಾವಿಸಿದೆ ಅಂದರೆ ತಮಾಷೆಯಲ್ಲೂ ಮತ್ತೇನನ್ನೋ ಹುಡುಕುವುದಕ್ಕೆ ಆರಂಭಿಸುತ್ತೇವೆ. ಅಂಥ ಹುಡುಕಾಟಕ್ಕೆ ಒಂದು ಚಿತ್ರ ಪ್ರೇರೇಪಿಸಿದರೆ ಅಷ್ಟು ಸಾಕು.

ಭಟ್ಟರ ಚಿತ್ರದಲ್ಲೊಂದು ಜರ್ನಿ ಇರಲೇಬೇಕು. ಅವರ ಬಹುತೇಕ ಚಿತ್ರಗಳು ಇದಕ್ಕೆ ಹೊರತಲ್ಲ. ಮುಂಗಾರುಮಳೆ,ಗಾಳಿಪಟ, ಪಂಚರಂಗಿ ಎಲ್ಲದರಲ್ಲೂ ಒಂದು ಪಯಣ ಇದ್ದೇ ಇದೆ. ಆ ಪಯಣದಲ್ಲಿ ನಾವು ಸಹಭಾಗಿಗಳಾಗುವಂತೆ ಮಾಡಬಲ್ಲ ಶಕ್ತಿಯೂ ಅವರಿಗಿದೆ. ನಮಗೆ ಬೋರಾಗದಂತೆ ಅವರು ವಿಚಿತ್ರ ಪಾತ್ರಗಳನ್ನು ಸೃಷ್ಟಿಸುತ್ತಾರೆ, ವಿಚಿತ್ರ ಜಾಗಗಳಿಗೆ ನಮ್ಮನ್ನು ಕರೆದೊಯ್ಯುತ್ತಾರೆ. ವಿಚಿತ್ರ ಪೋಷಾಕುಗಳಲ್ಲಿ ಪಾತ್ರಧಾರಿಗಳು ಕಾಣಿಸಿಕೊಳ್ಳುತ್ತಾರೆ.ಇದ್ದಕ್ಕಿದ್ದಂತೆ ಸಿನಿಮಾ ಶಿರಾಡಿ ಘಾಟಿಗೆ, ಕುಂದಾಪುರದ ಹಳ್ಳಿಗೆ ಜಾಗ ಬದಲಾಯಿಸಿಕೊಳ್ಳುತ್ತದೆ. ಮದುವೆಯಾಗದ, ಮದುವೆಯ ಆಶೆಬಿಟ್ಚ ರಂಗಾಯಣ ರಘು, ಎರಡು ಬಾಲಿಗೆ ಇಪ್ಪತ್ತು ರನ್ ಹೊಡೆಯುವ ಅವನ ಅಪ್ಪ, ವರ್ಷಕ್ಕೆ ಇಪ್ಪತ್ತರಂತೆ ಹುಟ್ಟಿಕೊಳ್ಳುವ ಅಣ್ಣಂದಿರು, ಅದ್ಯಾವುದೋ ದೇಶದಿಂದ ಬಂದ ಹುಡುಗಿ, ಅವಳು ಹುಟ್ಟಿಸಿದ ವಿರಹ, ಕರಡಿಯ ವೇಷ ಹಾಕಿಕೊಳ್ಳುವ ನಾಯಕ ತನ್ನ ಹೆಸರನ್ನು ಅನ್ವರ್ಥ ಮಾಡಿಕೊಳ್ಳುವುದು -ಇವೆಲ್ಲ ಚಿತ್ರಕ್ಕೆ ಪೂರಕವೂ ಹೌದು, ಅನಿರೀಕ್ಷಿತವೂ ಹೌದು.

<ul id="pagination-digg"><li class="next"><a href="/reviews/12-movie-paramathma-entire-film-is-flashback-aid0052.html">Next »</a></li></ul>

More from Filmibeat

English summary
Director Yogaraj Bhat's latest film Paramathma is a romantic comedy. The cinema features Puneet Rajkumar, Deepa Sannidhi and Aindrita Ray in the leads. Read Paramathma movie review, which has written by renowned Kannada journalist, writer Jogi and has been earlier published in Kannada daily Udayavani.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X