ಗೋಲ್ಡನ್ ಸ್ಟಾರ್ ಗಣೇಶ್ 'ಮಂಜ'ನ ಹನಿ ಶೈಲೂ
ಮೋಟು ಬೀಡಿ; ಚೋಟು ಗಡ್ಡ. ಸೀದಾ ಸಾದಾ ಹೈದ. ನೋಡಲು ಥೇಟ್ ಲೋ ಕ್ಲಾಸ್ ಹಳ್ಳಿಗ. ಹಣೆಗೆ ಹೊದಿಗೆಯಾಗಿರುವ ಕೂದಲ ರಾಶಿ. ಸೊಂಟಕ್ಕೆ ಮೆತ್ತಿಕೊಂಡ ಪಂಚೆ. ಅದಕ್ಕೆ ತಗಲಾಕಿಕೊಂಡಿರುವ ಹಳೇ ಹರಕು ಅಂಗಿ! ಇದು ಗಣೇಶನ ಹೊಸ ಅವತಾರ. ಶೈಲೂ ಚಿತ್ರದಲ್ಲಿ ನಾವು ಗಣೇಶ್‌ನನ್ನು ಇದೇ ಮ್ಯಾನರಿಸಂನಲ್ಲಿ ನೋಡಬೇಕು. ನಾರಾಯಣ್ ಗಣೇಶ್ ಅವರನ್ನು ಹಾಗೆ ಬದಲಾಯಿಸಿದ್ದಾರೆ ಮತ್ತು ಗೆದ್ದಿದ್ದಾರೆ!
ಇಡೀ ಸಿನಿಮಾ ಕೂಲ್ ಎನಿಸುತ್ತದೆ. ಕಣ್ಣಿಗೆ ಹಸಿರ ರಾಶಿ ಮುತ್ತಿಡುತ್ತಾ ಹೋಗುತ್ತದೆ. ಬಹುಶಃ ಇತ್ತೀಚೆಗೆ ಇಂಥದ್ದೊಂದು ಸ್ಮೂತ್ ಎನಿಸುವ ಸಿನಿಮಾ ಬಂದಿಲ್ಲ. ಮೊದಲಾ ಸಲ ಚಿತ್ರದಲ್ಲಿ ಛಾಯಾಗ್ರಾಹಕ ವೇಣು ತೋರಿಸಿದ ಸೀನರಿ ಸಂಭ್ರವವನ್ನೇ ಕ್ಯಾಮರಾಮನ್ ವಾಲಿ ಮರುಪ್ರಸಾರ ಮಾಡಿದ್ದಾರೆ. ಬೆಳ್ಳಿ ಪರದೆಗೆ ಅದಕ್ಕಿಂತ ಹೆಚ್ಚು ಹಸಿರು ತೋರಣ ತೊಡಿಸಿದ್ದಾರೆ!
ಮೊದಲಾ ಸಲ ಚಿತ್ರದ ನಾಯಕಿ ಭಾಮಾ ಇಲ್ಲಿ ಶೈಲೂ... ಮಂಜನ ಮನದನ್ನೆ. ಕೊನೇ ಹಂತದವರೆಗೂ ಮಂಜ ಆಕೆಗಾಗಿ ಹೋರಾಡುತ್ತಾನೆ. ಜೈಲಿಂದ ಓಡಿಬಂದು ಅವಳ ಜೊತೆ ಬದುಕ ಬಯಸುತ್ತಾನೆ. ಆಕೆಯನ್ನು ಕಣ್ಣ ರೆಪ್ಪೆಯಂತೇ ನೋಡಿಕೊಳ್ಳುತ್ತಾನೆ. ಆಕೆಯ ಕಣ್ಣಲ್ಲಿ ನೀರು ಬಂದರೆ ಮಂಜನ ಹಾರ್ಟು ಮಂಜಿನಂತೇ ಕರಗಿ ಹೋಗುತ್ತದೆ. ಈ ಹಂತದಲ್ಲಿ ಪೊಲೀಸರಿಗೆ ಮಂಜನನ್ನು ಹಿಡಿಯುವುದು ದೊಡ್ಡ ಸವಾಲು. ಅವರು ಮಂಜನ ಹಳ್ಳಿಗೆ ಬರುತ್ತಾರೆ. ಕಾಡು-ಮೇಡು ಅಲೆಯುತ್ತಾರೆ. ಗುಡ್ಡ ಗವಿ ತಡಕಾಡುತ್ತಾರೆ. ಕೊನೆಗೂ ಜೈಲಿಂದ ತಪ್ಪಿಸಿಕೊಂಡುಬಂದ ಮಂಜನನ್ನು ತಲುಪುತ್ತಾರೆ!
ಕಥೆಗೆ ಇಲ್ಲಿ ತಿರುವು ಸಿಗುತ್ತದೆ. ಮಂಜ-ಶೈಲೂ ಪ್ರೀತಿ ಜೈಲು ಪಾಲಾಗುತ್ತದಾ? ಪ್ರೀತಿಗೆ ಜೈಲರ್ ಪರ್ಮಿಷನ್ ಕೊಡುತ್ತಾನಾ? ಈ ಎಲ್ಲ ಪ್ರಶ್ನೆಗಳಿಗೂ ಕೊನೆಗೂ ಉತ್ತರ ಸಿಗುವ ಹಂತದಲ್ಲಿ ಪ್ರೇಕ್ಷಕನ ಕಣ್ಣಲ್ಲಿ ಮಂಜನ ಹನಿ ಜಿನುಗತೊಡಗುತ್ತದೆ. ಹೃದಯ ಭಾರವೆನಿಸುತ್ತದೆ!


Click it and Unblock the Notifications











