»   » ನಕ್ಕು ನಲಿಸಿ ಸುಸ್ತಾಗಿಸುತ್ತೆ ಮಸ್ತ್ ಮಜಾ ಮಾಡಿ

ನಕ್ಕು ನಲಿಸಿ ಸುಸ್ತಾಗಿಸುತ್ತೆ ಮಸ್ತ್ ಮಜಾ ಮಾಡಿ

Posted By: Super
Subscribe to Filmibeat Kannada

*ರಾಜೇಂದ್ರ ಚಿಂತಾಮಣಿ

'ಮಸ್ತ್ ಮಜಾ ಮಾಡಿ'ಚಿತ್ರದ ಹೆಸರೇ ಹೇಳುವಂತೆ ಇದೊಂದು ಪಕ್ಕಾ ಹಾಸ್ಯ ಪ್ರಧಾನ ಚಿತ್ರ. ಕೋಮಲ್, ವಿಜಯ ರಾಘವೇಂದ್ರ,ದಿಗಂತ್,ನಾಗಕಿರಣ್ ಕಾಮಿಡಿ ಪಂಚ್ ಗಳು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಚಿತ್ರದಲ್ಲಿ ಕೊಂಚ ಸೀರಿಯಸ್ ಪೊಲೀಸ್ ಅಧಿಕಾರಿಯಾಗಿಕಾಣಿಸುವ ಸುದೀಪ್ ಗೆ ಉಳಿದ ನಾಲ್ಕು ಮಂದಿ ಸಖತ್ ಚಳ್ಳೆಹಣ್ಣು ತಿನ್ನಿಸುತ್ತಾರೆ. ಲಾಂಗು, ಮಚ್ಚುಗಳಿಲ್ಲದೆ ಬರಿ ಡೈಲಾಗ್ ಡೆಲಿವರಿಯಲ್ಲೇ ಕೊಚ್ಚಿ ಹಾಕಿದ್ದಾರೆ.

ವಿನಿ ವಿಂಕ್ ಶಾಸ್ತ್ರಿ ತರಹ ಚಿತ್ರದಲ್ಲೊಬ್ಬ ಶಾಸ್ತ್ರಿ ಬರುತ್ತಾನೆ. ಕಾರನ್ನು ಯರ್ರಾ ಬಿರ್ರಿಯಾಗಿ ಓಡಿಸಿಕೊಂಡು ಬಂದ ಅವನು ಅಪಘಾತಕ್ಕೀಡಾಗುತ್ತಾನೆ. ಈ ದೃಶ್ಯವನ್ನು ಅಲ್ಲೇ ಇದ್ದ ಈ ನಾಲ್ವರು ನೋಡುತ್ತಾರೆ.ಶಾಸ್ತ್ರಿ ಕೊನೆಯುಸಿರೆಳೆಯುತ್ತಾ, ತಾನು ಜನಕ್ಕೆ ಮೋಸ ಮಾಡಿ ಗಳಿಸಿದ 20 ಕೋಟಿ ರು.ಗಳನ್ನು ಊಟಿ ಬೊಟಾನಿಕಲ್ ಪಾರ್ಕ್ ನಲ್ಲಿ ಬಚ್ಚಿಟ್ಟಿದ್ದೇನೆ. ಅದು ಪಾಪದ ಹಣ ಒಳ್ಳೆ ಕಾರ್ಯಗಳಿಗೆ ವಿನಿಯೋಗಿಸಿ ಎಂದು ಹೇಳಿ ಕಣ್ಮುಚ್ಚುತ್ತಾನೆ. ಮೊದಲೆ ಅಬ್ಬೇಪಾರಿಗಳಾಗಿದ್ದ ಇವರು ಕಣ್ಣು ಬಾಯಿ ಬಿಟ್ಟುಕೊಂಡು ಕೋಟ್ಯಾಂತರ ಹಣವನ್ನು ಸಮವಾಗಿ ಹಂಚಿಕೊಳ್ಳುವ ಬಗ್ಗೆ ಪ್ಲಾನ್ ಮಾಡುತ್ತಿರುತ್ತಾರೆ. ಅದೇ ಸಮಯಕ್ಕೆ ಪೊಲೀಸ್ ಅಧಿಕಾರಿ ಸುದೀಪ್ ಬಂದು ಇವರ ಪ್ಲಾನೆಲ್ಲಾ ಉಲ್ಟಾ ಆಗುತ್ತದೆ. ಇವರಿಗೆ ಅಷ್ಟೂ ದುಡ್ಡು ಸಿಗುತ್ತಾ? ಅಥವಾ ಪೊಲೀಸರ ಕೈಸೇರುತ್ತಾ? ಎಂಬ ಪ್ರಶ್ನೆಗಳಿಗಳಿಗೆ ಉತ್ತರವೇ 'ಮಸ್ತ್ ಮಜಾ ಮಾಡಿ.'

ಸುದೀಪ್ ಮೇಲಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಉಮಾಶ್ರೀ ಡೈಲಾಗ್ ಗಳು ಕಚಗುಳಿ ಇಡುತ್ತವೆ. ಆಕೆಯದು ಇದರಲ್ಲಿ ಉತ್ತರ ಕನ್ನಡ ಭಾಷೆ. ಕೋಮಲ್, ವಿಜಯ ರಾಘವೇಂದ್ರ, ನಾಗಕಿರಣ್ ನಟನೆ ಹರಳೆಣ್ಣೆ ಮೊಗದವರನ್ನು ಪಕ್ಕೆಗೆ ತಿವಿದು ನಗಿಸುತ್ತದೆ. ನಾಗಕಿರಣ್ ಮೂಕಾಭಿನಯಕ್ಕೆ ಗೆಳೆಯರ ಡಬ್ಬಿಂಗ್ ಚೆನ್ನಾಗಿದೆ. ಸ್ವಲ್ಪ ಸಪ್ಪೆ ಎನ್ನಿಸಿದರೂ ದಿಗಂತ್ ಪರ್ವಾಗಿಲ್ಲ. ದಿಗಂತ್ ಅಪ್ಪನ ಪಾತ್ರದಲ್ಲಿ ರಂಗಾಯಣ ರಘು ಸ್ವಲ್ಪ ವಿಭಿನ್ನವಾಗಿ ನಟಿಸಿದ್ದಾರೆ.ಮಗನನ್ನು ಅಪ್ಪ ಬೈಯ್ಯುವ ದೃಶ್ಯಗಳು ಮತ್ತೆ ಮತ್ತೆ ಚಪ್ಪರಿಸುವಂತಿವೆ. ಚಿತ್ರದಲ್ಲಿ ಸಾಧು ಕೋಕಿಲ ಇದ್ದರೆ ಬೇರೆ ಹೇಳಬೇಕಾಗಿಲ್ಲ. ವಿಮಾ ನ ನಿಲ್ದಾಣದ ಅಧಿಕಾರಿಯಾಗಿ ಕನ್ನಡದಲ್ಲಿ ಅವರು ಕೊಡುವ ಸೂಚನೆಗಳಿಗೆ ಪ್ರೇಕ್ಷಕ ಬಿದ್ದು ಬಿದ್ದು ನಗುತ್ತಾನೆ.

ಚಿತ್ರದ ಮೊದಲರ್ಧದಲ್ಲಿ ಬರುವ ಎರಡು ಹಾಡುಗಳು ಕಣ್ಣಿಗೆ ಹಿತ, ಕಿವಿಗೆ ಮಿತವಾಗಿವೆ.ಟೂ ಪೀಸ್ ನಲ್ಲಿ ಕುಣಿಯುವ ಸಹ ಕಲಾವಿದರ ನೃತ್ಯ ಪಡ್ಡೆಗಳನ್ನು ಹುಚ್ಚೆಬ್ಬಿಸುತ್ತದೆ. ಇನ್ನು ಬ್ಯಾಂಕಾಕ್ ನಲ್ಲಿ ತೆಗೆದ ಹಾಡು ಅಷ್ಟೆ ಕಣ್ಣುಗಳನ್ನು ತಂಪಾಗಿಸುತ್ತದೆ. ಹಾಡು ಯಾವ್ಯಾಗ ಬರುತ್ತದೆ ಎಂಬ ಸೂಚನೆ ಸಾಮಾನ್ಯವಾಗಿ ಪ್ರೇಕ್ಷಕರಿಗೆ ಸಿಕ್ಕೇ ಸಿಗುತ್ತದೆ. ಆದರೆ ಈ ಚಿತ್ರದಲ್ಲಿ ಬರುವ ಉಪೇಂದ್ರ ಹಾಡು ಯಾವುದೇ ಸುಳಿವು ಕೊಡದೆ ಪ್ರತ್ಯಕ್ಷವಾಗುತ್ತದೆ. ಉಪೇಂದ್ರ ಜೊತೆಗೆ ಲಕ್ಷ್ಮಿ ಗೋಪಾಲ ಸ್ವಾಮಿ, ಅಂದ್ರಿತಾ ರೇ, ಗೌರಿ ಮುಂಜಾಲ್ ಸೇರಿದಂತೆ 12 ಮಂದಿ ನಟಿಯರು ಕುಣಿದಿದ್ದಾರೆ. ಒಂದು ಹಾಡಿಗೆ ಇಷ್ಟೊಂದು ನಾಯಕಿಯರನ್ನು ಬಳಸಿಕೊಂಡ ಕುಣಿಸುವ ಅಗತ್ಯ ಏನಿತ್ತು ಎಂಬುದು ನಿರ್ದೇಶಕರಿಗೆ ಬಿಟ್ಟ ವಿಚಾರ. ಚಿತ್ರದಲ್ಲಿ ಜೆನ್ನಿಫರ್ ಕೊತ್ವಾಲ್ ಪಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ. ಬುಲೆಟ್ ಪ್ರಕಾಶ್, ಸಿಹಿಕಹಿ ಚಂದ್ರು ಹಾಸ್ಯರಸಾಯನಕ್ಕೆ ಒಂಚೂರು ಸಕ್ಕರೆ ಬೆರೆಸಿದ್ದಾರೆ.

ಹಾಡುಗಳ ಚಿತ್ರೀಕರಣಕ್ಕೆ, ಸಾಹಸ ದೃಶ್ಯಗಳಿಗೆ ನಿರ್ಮಾಪಕ ಸೌಂದರ್ಯ ಜಗದೀಶ್ ಧಾರಾಳವಾಗಿ ಖರ್ಚು ಮಾಡಿದ್ದಾರೆ.ಚುರುಕಾದ ಸಂಭಾಷಣೆ,ವೇಗವಾಗಿ ಸಾಗುವ ಕಥೆ ಪ್ರೇಕ್ಷಕರಿಗೆ ಎಲ್ಲೂ ಬೋರು ಹೊಡೆಸುವುದಿಲ್ಲ. ಕೊಟ್ಟ ಕಾಸಿಗೆ ಮೋಸ ಇಲ್ಲ.ಆಫೀಸಿನಲ್ಲಿ ಬಾಸ್ ಕೈಲಿ ಬೈಸಿಕೊಂಡು ಬಾಡಿ ಹೋದವರು ಸೇರಿದಂತೆ ಹಾಸ್ಯಕ್ಕಾಗಿ ಹಂಬಲಿಸುವವರು ಚಿತ್ರವನ್ನು ನೋಡಿ ಮಸ್ತ್ ಮಜಾ ಮಾಡಿ ಸುಸ್ತಾಗಬಹುದು.

ಜೆನ್ನಿಫರ್ ಕೊತ್ವಾಲ್ ವಾಲ್ ಪೇಪರ್

ಪೂರಕ ಓದಿಗೆ:

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada