»   » ಅವಾಸ್ತವ ಸನ್ನಿವೇಶಗಳ ಪ್ರ‘ದರ್ಶನ’

ಅವಾಸ್ತವ ಸನ್ನಿವೇಶಗಳ ಪ್ರ‘ದರ್ಶನ’

Posted By:
Subscribe to Filmibeat Kannada
 • ರಮೇಶ್‌ ಕುಮಾರ್‌ ನಾಯಕ್‌
ಚಿತ್ರ : ದರ್ಶನ್‌ಸಂಭಾಷಣೆ-ನಿರ್ದೇಶನ : ರಮೇಶ್‌ ಕಿಟ್ಟಿನಿರ್ಮಾಣ : ಸೂಪರ್‌ ಶೈನ್‌ ಮೂವಿಸ್‌ಸಂಗೀತ : ಸಾಧು ಕೋಕಿಲಾತಾರಾಗಣ : ದರ್ಶನ್‌, ನವನೀತ್‌ ಕೌರ್‌, ಶ್ರೀನಾಥ್‌, ಚಿತ್ರಾ ಶೆಣೈ, ರೇಣುಕಮ್ಮ ಮುರಗೋಡು ಮುಂತಾದವರು.
 • ದೃಶ್ಯ 1- ಕಾಡಿನಲ್ಲಿ ಪಾಕ್‌ ಪ್ರೇರಿತ ಭಯೋತ್ಪಾದಕರ ಚಟುವಟಿಕೆ. ಅಲ್ಲಿಗೆ ಬರುವ ರಾಹುಲ್‌(ದರ್ಶನ್‌) ಭಯೋತ್ಪಾದಕರ ನಾಯಕಕನ್ನು ಉದ್ದೇಶಿಸಿ, ‘ ಅಪ್ಪಾಜಿ, ನಾನು ಉನ್ನತ ಶ್ರೇಣಿಯಲ್ಲಿ ಪಾಸಾಗಿರುವೆ ಎನ್ನುವನು.
 • ‘ನಿನ್ನ ಅಪ್ಪ ನಾನಲ್ಲ ಕಣೊ, ರಾಮಮೂರ್ತಿ(ಶ್ರೀನಾಥ್‌) ಎಂಬವನು ನಿನ್ನ ಅಪ್ಪ-ಅಮ್ಮನನ್ನು ಕೊಂದು ಬಿಟ್ಟಿದ್ದಾನೆ. ಅಂದಿನಿಂದ ನಿನ್ನನ್ನು ನಾನು ಸಾಕಿ ಸಲಹಿದ್ದೇನೆ. ಈಗಲೇ ಹೊರಡು, ಆ ಕುಟುಂಬದ ಸರ್ವನಾಶ ಮಾಡು ಎಂದು ಭಯೋತ್ಪಾದಕ ಉಪದೇಶಿಸುವನು.
ನಾಯಕನ ಮುಖಭಾವ-ಕ್ಲೋಸ್‌ ಅಪ್‌- ಫೇಡ್‌ ಔಟ್‌.
 • ದೃಶ್ಯ 2- ರಾಮಮೂರ್ತಿಯ ಹಿರಿಯ ಮಗಳನ್ನು ನೋಡಲು ಗಂಡಿನ ಕಡೆಯವರು ಬರುವರು. ನಾನು ಈ ಮನೆ ಬಿಟ್ಟು ಹೋಗಬೇಕಲ್ಲ ಎಂದು ಆಕೆ ಗೋಳೊ ಎಂದು ಅಳುವಳು. ‘ಬೇಜಾರು ಮಾಡಿಕೊಳ್ಳಬೇಡ ಮಗಳೇ ಎಂದು ತಾಯಿ(ಚಿತ್ರಾ ಶೆಣೈ) ಸಮಾಧಾನ ಮಾಡುವಳು.
(ಇಬ್ಬರೂ ಬಿಗಿದಪ್ಪಿಕೊಂಡು ಬಿಕ್ಕಳಿಸುವ ದೃಶ್ಯ- ಮೀಡಿಯ ಶಾಟ್‌ನಿಂದ ನಿಧಾನವಾಗಿ ಕ್ಲೋಸ್‌ ಅಪ್‌. ಬಳಿಕ ಫೇಡ್‌ ಔಟ್‌).
 • ದೃಶ್ಯ 3- ರಾಮಮೂರ್ತಿಯ ಪತ್ನಿ ಇಬ್ಬರು ಹೆಣ್ಣು ಮಕ್ಕಳ ಜತೆ ಕಾರಿನಲ್ಲಿ ಹೋಗುತ್ತಿರಲು ಟಯರ್‌ ಪಂಕ್ಚರ್‌. ಇದಕ್ಕೇ ಕಾದಿದ್ದವರಂತೆ ರೌಡಿಗಳ ಹಾಜರಿ. ಅವರು ಹೆಣ್ಣು ಮಕ್ಕಳ ಮಾನಭಂಗಕ್ಕೆ ಯತ್ನಿಸುತ್ತಿರಲು ಸಾಕ್ಷಾತ್‌ ಶ್ರೀಕೃಷ್ಣ ಪರಮಾತ್ಮನಂತೆ ರಾಹುಲ್‌ ಪ್ರತ್ಯಕ್ಷನಾಗುತ್ತಾನೆ. ಮಾನ-ಪ್ರಾಣ ಕಾಪಾಡುತ್ತಾನೆ. ‘ಆಪತ್ಕಾಲದಲ್ಲಿ ದೇವರಂತೆ ಬಂದು ಕಾಪಾಡಿದೆ. ನಿನ್ನ ಋಣ ತೀರಿಸಲಾಗದ್ದು ಕಣೊ ಎಂದು ಮೂರ್ತಿಯ ಪತ್ನಿ ಕೈ ಮುಗಿಯುವಳು. ‘ಬಾಡಿಗೆ ಮನೆ ಹುಡುಕುವುದೇಕೆ ನಮ್ಮ ಔಟ್‌ಹೌಸ್‌ನಲ್ಲೇ ಇದ್ದುಬಿಡು ಎಂದು ವಿನಮ್ರತೆಯಿಂದ ಕೋರುವಳು.
(ರೌಡಿಗಳು ಕಾಲಿಗೆ ಬುದ್ಧಿ ಹೇಳುವ ದೃಶ್ಯಕ್ಕೆ ಸ್ಪೆಷಲ್‌ ಎಫೆಕ್ಟ್‌)
 • ದೃಶ್ಯ 4- ರಾಹುಲ್‌ ಮತ್ತು ರಾಮಮೂರ್ತಿಯ 2ನೇ ಮಗಳು ನಂದಿನಿ(ನವನೀತ್‌ ಕೌರ್‌)ಯ ನಿಶ್ಚಿತಾರ್ಥ. ಇನ್ನೇನು ಉಂಗುರ ಬದಲಾಯಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ‘ಹ್ಯಾಂಡ್ಸ್‌ ಅಪ್‌. ಯು ಅರ್‌ ಅಂಡರ್‌ ಆರೆಸ್ಟ್‌ ಎಂದು ಮಫ್ತಿಯಲ್ಲಿರುವ ಎಸಿಪಿ ಅಬ್ಬರಿಸುವನು. ‘ಹೌದು, ನೀನು ಭಯೋತ್ಪಾದಕ. ನಿನ್ನನ್ನು ಬಂಧಿಸಲು ನಾನೇ ಪೊಲೀಸರನ್ನು ಕರೆಸಿದ್ದೆ ಎಂದು ನಂದಿನಿ ಘೋಷಿಸುವಳು. ಉಗ್ರರೊಂದಿಗಿನ ಆತನ ಸಂಬಂಧಕ್ಕೆ ಸಾಕ್ಷಿಯಾದ ಎಸ್‌ಎಮ್ಮೆಸ್‌ ಸಂದೇಶವಿರುವ ಮೊಬೈಲನ್ನು ಆಕೆ ರಾಹುಲ್‌ನ ಹಣೆಗೆ ಪಿಸ್ತೂಲಿನಂತೆ ಹಿಡಿಯುವಳು. ಬಳಿಕ ಅದನ್ನು ಕಣ್ಣಿಗೆ, ಮೂಗಿಗೆ, ತುಟಿಗೆ ಸವರಿ, ಆತನಿಗೆ ಒಂದು ಪ್ರದಕ್ಷಿಣೆ ಹಾಕುವಳು!
ಮಧ್ಯಂತರ- ಶಿಳ್ಳೆ ಹಾಕುತ್ತ, ಜೈಕಾರ ಕೂಗುತ್ತ ಥಿಯೆಟರ್‌ಗೆ ನುಗ್ಗಿದ್ದ ದರ್ಶನ್‌ ಅಭಿಮಾನಿಗಳು ಸೈಲೆಂಟಾಗಿ ಹೊರಬರುವರು. ಮಧ್ಯಂತರದ ಕೆಲಸವನ್ನು ಲಗುಬಗೆಯಿಂದ ಮುಗಿಸಿಕೊಂಡು ಐದಾಳೆತ್ತರದ ದರ್ಶನ್‌ ಕಟೌಟ್‌ ನೋಡುತ್ತ ನಿಲ್ಲುವರು.
 • ದೃಶ್ಯ 5- ಪೊಲೀಸ್‌ ಲಾಕಪ್‌ನಲ್ಲಿ ಥರ್ಡ್‌ ಡಿಗ್ರಿ ಪ್ರಯೋಗಿಸಿದರೂ ಬಾಯಿ ಬಿಡದ ರಾಹುಲ್‌ಗೆ ಎಸಿಪಿಯಿಂದ ಚಿಕನ್‌ ಬಿರಿಯಾನಿ ಮತ್ತು ‘ಮಲ್ಯ ಶರಬತ್‌ ಪೂರೈಕೆ. ಎನ್‌ಕೌಂಟರ್‌ನಲ್ಲಿ ರಾಹುಲ್‌ನನ್ನು ಮುಗಿಸುವ ನಿರ್ಧಾರ. ಆದರೆ ಶಾರ್ಪ್‌ ಶೂಟರ್‌ ಇನ್ಸ್‌ಪೆಕ್ಟರ್‌ ರಾಹುಲ್‌ಗೆ ಗುಂಡಿಕ್ಕುವ ಬದಲು ಎಸಿಪಿ ಬೆನ್ನಿಗೆ ಬುಲೆಟ್‌ ನುಗ್ಗಿಸುತ್ತಾನೆ!
ರಾಹುಲ್‌ ಪರಾರಿಯಾಗುವ ದೃಶ್ಯ ಮೀಡಿಯಂ ಶಾಟ್‌ನಿಂದ ನಿಧಾ...ನವಾಗಿ ಲಾಂಗ್‌ ಶಾಟ್‌ಗೆ.
 • ದೃಶ್ಯ 6- ಮನೆಯವರೆಲ್ಲ ಹೊರಗಿನಿಂದ ಬೀಗ ಹಾಕಿ ಹೋಗಿದ್ದರೂ ರಾಹುಲ್‌ ಇದ್ದಕ್ಕಿದ್ದಂತೆ ಮನೆಯಾಳಗೆ ಪ್ರತ್ಯಕ್ಷ. ಪಿಸ್ತೂಲಿನ ಪ್ರದರ್ಶನದಿಂದಲೇ ರಾಮಮೂರ್ತಿಯ ವೃದ್ಧ ತಾಯಿ(ರೇಣುಕಮ್ಮ ಮುರಗೋಡು) ಸಾಯುವಂತೆ ಮಾಡುತ್ತಾನೆ. ನಿರ್ಜೀವ ಅಜ್ಜಿ ಟೀವಿ ನೋಡುತ್ತಿರುವ ಭಂಗಿಯಲ್ಲೇ ಆರಾಮವಾಗಿ ಕೂತಿರುತ್ತಾಳೆ!
 • ದೃಶ್ಯ 7- ರೈಲ್ವೆ ಗೇಟ್‌ಮನ್‌ ರೂಪದಲ್ಲಿ ರಾಹುಲ್‌. ರಾಮಮೂರ್ತಿಯ ಕಾರಿಗೆ ದಿಗ್ಭಂಧನ. ರೈಲು ಡಿಕ್ಕಿ ಹೊಡೆದು ರಾಮಮೂರ್ತಿಯ ಭಯಾನಕ ಸಾವು.
 • ದೃಶ್ಯ 8- ಪವಿತ್ರ ನದಿ ತೀರದಲ್ಲಿ ರಾಮಮೂರ್ತಿಯ ಅಪರ ಕರ್ಮ ನಡೆಯುತ್ತಿರುತ್ತದೆ. ಪುರೋಹಿತನ ರೂಪದಲ್ಲಿ ಬರುವ ರಾಹುಲ್‌, ರಾಮಮೂರ್ತಿಯ ಪತ್ನಿಯನ್ನು ನೀರಿನಲ್ಲಿ ಮುಳುಗಿಸಿ ಸಾಯಿಸುತ್ತಾನೆ.
 • ದೃಶ್ಯ 9- ರಾವಮೂರ್ತಿ ಕುಟುಂಬ ಸಂಹಾರ ಮಾಡಿದ ಬಳಿಕ ಆತ ನಂದಿನಿ ಬಳಿ ಪ್ರೇಮ ಭಿಕ್ಷೆ ಬೇಡುತ್ತಾನೆ. ಆತನನ್ನು ತಿರಸ್ಕರಿಸುವ ನಂದಿನಿ, ಗುಂಡು ಹಾರಿಸುತ್ತಾಳೆ. ಈ ಮೊದಲಿನ ಮಾರಾಮಾರಿಗಳಲ್ಲಿ ನಾಲ್ಕೈದು ಗುಂಡಿನೇಟು ತಿಂದರೂ ‘ ನಾರ್ಮಲ್‌ ಆಗುಳಿದಿದ್ದ ರಾಹುಲ್‌, ಅಕೆಯ ಒಂದೇ ಒಂದು ಗುಂಡೇಟಿಗೆ ನೆಲಕ್ಕೊರಗುತ್ತಾನೆ.
(ಇಂಥ ಅತ್ಯದ್ಭುತ ದೃಶ್ಯಗಳ ನಡುವೆ ಅಲ್ಲಲ್ಲಿ ಫೈಟ್‌ ಮತ್ತು ಹಾಡುಗಳು ಮೂಡಿಬರುತ್ತದೆ.)
‘ ಪರದೆಯ ಮೇಲೆ- ಇದು ಎಂದಿಗೂ ಮುಗಿಯದ ಸಮರ, ರಾಹುಲ್‌ ಎಂದೆಂದಿಗೂ ಅಮರ ಎಂಬ ಸಂದೇಶ ಮೂಡಿಬರುತ್ತದೆ. ಶುಭಂ.
(ದರ್ಶನ್‌ ಅಭಿಮಾನಿಗಳು ಜೋಲು ಮೋರೆ ಹಾಕಿಕೊಂಡು ಹೊರಬರುವರು. ಕೆಲವರು ಮತ್ತೊಮ್ಮೆ ಕಟೌಟ್‌ ವೀಕ್ಷಿಸುತ್ತ ನಿಲ್ಲುವರು.)

ಇದು ದರ್ಶನ್‌ ಚಿತ್ರದ ಸಾರ. ಇದರ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿದವರು ರಮೇಶ್‌ ಕಿಟ್ಟಿ.

 • ಟಿಪ್ಪಣಿ: ಶ್ರೀನಾಥ್‌, ಚಿತ್ರಾ ಶೆಣೈ ಮತ್ತು ರೇಣುಕಮ್ಮ ಎಂದಿನಂತೆ ಲವಲವಿಕೆಯಿಂದ ನಟಿಸಿದ್ದಾರೆ. ದರ್ಶನ್‌ ಮತ್ತು ಆಮದು ನಾಯಕಿ ನವನೀತ್‌ ಕೌರ್‌ ಬಗ್ಗೆ ಹೇಳುವಂಥದ್ದೇನಿಲ್ಲ. ಆರ್‌. ಗಿರಿ ಛಾಯಾಗ್ರಹಣ ಮತ್ತು ಸಾಧು ಕೋಕಿಲಾ ಸಂಗೀತ ಸಾಧಾರಣ.
(ಸ್ನೇಹಸೇತು : ವಿಜಯ ಕರ್ನಾಟಕ)
Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada