»   » ನವಿರು ಹಾಸ್ಯವೇ ಚಿತ್ರದ ಜೀವಾಳ. ಕೆಲವರು ನಟಿಸುತ್ತಲೇ ನಗಿಸುತ್ತಾರೆ. ಮತ್ತೆ ಕೆಲವರು ನಗಿಸಲೆಂದೇ ಬರುತ್ತಾರೆ. ಎರಡರಿಂದಲೂ ಲಾಭವಾಗುವುದು ಪ್ರೇಕ್ಷಕನಿಗೆ ತಾನೇ !

ನವಿರು ಹಾಸ್ಯವೇ ಚಿತ್ರದ ಜೀವಾಳ. ಕೆಲವರು ನಟಿಸುತ್ತಲೇ ನಗಿಸುತ್ತಾರೆ. ಮತ್ತೆ ಕೆಲವರು ನಗಿಸಲೆಂದೇ ಬರುತ್ತಾರೆ. ಎರಡರಿಂದಲೂ ಲಾಭವಾಗುವುದು ಪ್ರೇಕ್ಷಕನಿಗೆ ತಾನೇ !

Subscribe to Filmibeat Kannada

ಅಡ್ಡಡ್ಡ ಮಾತಾಡಿದರೆ ಉದ್ದುದ್ದು ಸೀಳುವುದು ಆತನ ಜಾಯಮಾನ. ಕರೆದು ಕೈಜೋಡಿಸಿದರೆ ಗೆಳೆತನ ಬೆಳೆಸುವುದು ಹುಟ್ಟುಗುಣ. ಅವನ ಸ್ನೇಹ ಬಯಸಿ ಬರುವಾಕೆಯೇ ಪ್ರಿಯಾಂಕಾ. ಸ್ನೇಹದ ಹೆಸರಲ್ಲಿ ಬೈಕು ಹತ್ತಿ ಊರೂರು ಸುತ್ತುವುದು ಅವರ ಹವ್ಯಾಸ. ಒಬ್ಬರಿಗೊಬ್ಬರು ಸುಖ ದುಃಖ ಹಂಚಿಕೊಳ್ಳುವುದು ವಿಶ್ವಾಸ. ಇಷ್ಟಕ್ಕೂ ಅವರಿಬ್ಬರ ನಡುವೆ ಪ್ರೇಮ ಚಿಗುರದಿದ್ದರೆ ಪ್ರೇಕ್ಷಕ ಮಹಾಪ್ರಭು ಬೇಜಾನ್‌ ಬೇಸರ ಮಾಡಿಕೊಳ್ಳದಿರುತ್ತಾನೇಯೇ ?

ಅವರ ಆಸೆ ಪೂರೈಸಲೆಂದೇ ನಾಯಕ ನಾಯಕಿಯ ಬೆವರಿದ ಸೊಂಟವನ್ನು ಕದ್ದು ಕದ್ದು ನೋಡುತ್ತಾನೆ. ಅದನ್ನೇ ಮಹಾಪರಾಧವೆಂದು ನಾಯಕಿ ತಿಳಿಯುತ್ತಾಳೆ. ಪ್ರೀತಿಸಿದ ಹುಡುಗಿಯ ಸೊಂಟ ನೋಡುವುದು ತಪ್ಪಲ್ಲವೆಂದು ನಾಯಕ ವಾದಿಸುತ್ತಾನೆ. ‘ಸೊಂಟ ಸೂಪರ್ರು, ಆದ್ರೆ ಭಾರೀ ಡೇಂಜರ್ರು...’ಎಂಬುದು ಅರಿವಾಗುವಷ್ಟರಲ್ಲಿ ಅವರಿಬ್ಬರ ನಡುವೆ ಟೆಂಪರರಿ ಬಿರುಕು ಬಿಟ್ಟಿರುತ್ತದೆ... ಎದೆಯಲ್ಲಿ ಎರಡೆಕರೆಯಷ್ಟು ಪ್ರೀತಿ ಇಟ್ಟುಕೊಂಡು ನಾನ್ಯಾಕೆ ಹೇಳಲಿ ಎನ್ನುವ ಹಠ ಆಕೆಗೆ. ಅದನ್ನಿಟ್ಟುಕೊಂಡೇ ಆಟವಾಡಿಸುವ ಚಟ ಆತನಿಗೆ. ಸೋತು ಗೆದ್ದವರು ಯಾರೆಂಬುದನ್ನು ನೋಡುಗರ ಅರ್ಜಂಟ್‌ ಅವಗಾಹನೆಗೆ ಬಿಟ್ಟಿದೆ.

ಕದ್ದು ತಂದ ತೆಲುಗಿನ ಹಳೇ ಟ್ರೆಂಡ್‌

ಹಿಡಿಯಷ್ಟು ಹೊಡೆದಾಟ, ಎರಡು ಚಮಚ ಸೆಂಟಿಮೆಂಟು, ರುಚಿಗೆ ತಕ್ಕಷ್ಟು ಹಾಸ್ಯ, ಒಂದು ಸೌಟು ಕುಣಿತ, ಮೂರು ತಾಜಾ ಹಾಡುಗಳನ್ನು ಅದ್ದೂರಿ ಪ್ರೇಮಪಾಕದಲ್ಲಿ ಸಮಪ್ರಮಾಣದಲ್ಲಿ ಬೆರೆಸಿದರೆ ಕೋಟ್ಯಂತರ ಜನ ಬಾಯಿ ತಪ್ಪರಿಸಿ ತಿನ್ನುವಂತಹ ‘ಚಂದು’ಚಿತ್ರ ತಯಾರಾಗುತ್ತದೆ. ತೆಲುಗಿನಲ್ಲಿ ಹಳೆಯದಾದ ಈ ಟ್ರೆಂಡ್‌ ಕನ್ನಡಕ್ಕೂ ಕಾಲಿಟ್ಟಿದೆ. ನಿರೂಪಣೆಯೇ ಹೊಸದಾದ ಇಲ್ಲಿ ಎಲ್ಲವೂ ಇದೆ. ಕಣ್ಣಿಗೆ ಹಬ್ಬ ತರುವ ರಂಗುರಂಗಿನ ಕಾಲೇಜಿದೆ. ಕಾಲೇಜು ಮೆಟ್ಟಿಲಲ್ಲೇ ಸಿಗರೇಟು ಸೇದುವ ಭಾರತದ ಭಾವೀ ಪ್ರಜೆಗಳಿದ್ದಾರೆ. ಕಾಲೇಜೆಂದರೆ ಹೀಗಿರುತ್ತಾ ಎನ್ನುವ ತರ್ಕ ಹುಡುಕಬೇಡಿ. ಹೀಗಿದ್ದರೆ ಚೆಂದ ಅಂತ ಕಳ್ಳ ಮನಸ್ಸಿನಿಂದಲೇ ಒಪ್ಪಿಕೊಳ್ಳಿ. ಇದೊಂದು ಬಣ್ಣಬಣ್ಣದ ಲೋಕ. ಕಾಲೇಜಿನ ಕ್ಯಾಂಪಸ್‌ ಇರಲಿ, ಮದುವೆ ಮಂಟಪವಿರಲಿ ನವಿರು ಹಾಸ್ಯವೇ ಅಲ್ಲಿಯ ಜೀವಾಳ. ಕೆಲವರು ನಟಿಸುತ್ತಲೇ ನಗಿಸುತ್ತಾರೆ. ಮತ್ತೆ ಕೆಲವರು ನಗಿಸಲೆಂದೇ ಬರುತ್ತಾರೆ. ಎರಡರಿಂದಲೂ ಲಾಭವಾಗುವುದು ಪ್ರೇಕ್ಷಕನಿಗೆ. ಪ್ರತಿ ಫ್ರೇಮ್‌ನಲ್ಲೂ ರಿಚ್‌ನೆಸ್‌ ತುಂಬಲು ನಿರ್ದೇಶಕ ಪಟ್ಟ ಶ್ರಮ ಕಣ್ಣಿಗೆ ಹೊಡೆಯುತ್ತದೆ. ಇದರ ಕ್ರೆಡಿಟ್‌ ಕಲಾ ನಿರ್ದೇಶಕ ಅರುಣ್‌ಸಾಗರ್‌ಗೂ ಸಲ್ಲಬೇಕು.

ಸೊಂಟದ ವಿಸ್ಯ...

ಇನ್ನು ಸುದೀಪ್‌ ಬಗ್ಗೆ ಏನು ಹೇಳುವುದು ? ಆ ಹುಡುಗ ಸಿಗರೇಟು ಸೇದುವುದನ್ನೇ ಭಕ್ತಿ ಭಾವದಿಂದ ನೋಡುವವರಿದ್ದಾರೆ. ಕುಣಿಯುವುದನ್ನು ನೋಡಿ ಊಟ ಮರೆತವರಿದ್ದಾರೆ. ‘ಪರಮಾತ್ಮ ’ ಒಳಗಿಳಿದಾಗ ಅವರ ಅಭಿನಯ ಕಂಡು ಕನ್ನಡದಲ್ಲಿ ಇದುವರೆಗೆ ಯಾರೂ ಹೀಗೆ ನಟಿಸಿದ್ದಿಲ್ಲ ಎಂದು ಹೆಮ್ಮೆ ಪಡುವವರಿದ್ದಾರೆ. ಯಾವುದೋ ಹಾಡು, ಮತ್ಯಾವುದೋ ದೃಶ್ಯ ಜನರನ್ನು ಸಿಗರೇಟು ಸೇದಲು ಪ್ರೇರೇಪಿಸುವಾಗಲೇ ಸುದೀಪ್‌ ಅವರನ್ನು ಒಂದೇ ಡೈಲಾಗ್‌ ಡೆಲಿವರಿಯಿಂದ ಕುರ್ಚಿಗೆ ಅಂಟಿ ಕೂಡಿಸುತ್ತಾರೆ. ಇದು ಸುದೀಪ್‌ ಯಾಕೆ ಇಷ್ಟವಾಗುತ್ತಾರೆ ಎಂಬುದಕ್ಕೆ ಕಾರಣ ನೀಡುತ್ತವೆ. ಕಣ್ಣಿನಲ್ಲೇ ಮಾತನಾಡುವ ಆಮದು ನಟಿ ಪ್ರಿಯಾಂಕ ಪರವಾಗಿಲ್ಲ. ಶ್ರೀನಾಥ್‌, ಸನಾ, ಚಿತ್ರಾ ಶೆಣೈ, ರಮೇಶ್‌ ಭಟ್‌, ಲೋಹಿತಾಶ್ವ, ಅರುಣ್‌ ಸಾಗರ್‌, ಸಾಧುಕೋಕಿಲ... ಎಲ್ಲರೂ ಊಟಕ್ಕೆ ಉಪ್ಪಿನಕಾಯಿ ಇದ್ದಂತೆ. ಗುರುಕಿರಣ್‌ ಸಂಗೀತದಲ್ಲಿ ಹಾಡುಗಳು ಕೇಳುವಂತಿವೆ. ‘ಸೊಂಟದ ವಿಸ್ಯ ಬೇಡವೋ ಸಿಸ್ಯಾ..’ ಹಾಡು ‘ ರಾಷ್ಟ್ರ ಗೀತೆ’ಯಾಗುವ ಅಪಾಯವೂ ಇದೆ. ಆದರೆ ಹಿಂದಿ ಮತ್ತು ಇಂಗ್ಲಿಷಿನಿಂದ ಟ್ಯೂನ್‌ ಕದಿಯುವುದನ್ನು ಗುರು ನಿಲ್ಲಿಸುವುದು ಅವರ ಭವಿಷ್ಯಕ್ಕೇ ಒಳ್ಳೆಯದು.

ಸೊಂಟದ ಪುರಾಣವನ್ನು ತೆಲುಗಿನ ‘ಖುಷಿ’ ಚಿತ್ರದಿಂದಲೂ, ಮದುವೆ ಮನೆ ದೃಶ್ಯಗಳನ್ನು ಹಿಂದಿಯ ‘ದಿಲ್‌ವಾಲೇ ದುಲ್ಹನಿಯಾ ಲೇ ಜಾಯೆಂಗೆ’ ಚಿತ್ರದಿಂದಲೂ ಎತ್ತಿಕೊಂಡು ಅಪ್ಪಟ ಸ್ವಮೇಕ್‌ ಚಿತ್ರವೆಂದು ನಿರ್ದೇಶಕ ಹೇಳುವುದನ್ನು ಕನ್ನಡ ಹೋರಾಟಗಾರ ಕಮ್‌ ನಿರ್ಮಾಪಕ ಸಾ.ರಾ. ಗೋವಿಂದು ನಂಬಬಾರದು. ಅದೇನೇ ಇರಲಿ, ಇದು ಸುದೀಪ್‌ ಒನ್‌ ಮ್ಯಾನ್‌ ಶೋ. ತಪ್ಪಿದ್ದಲ್ಲಿ ತಿದ್ದಿ, ಸರಿ ಇಲ್ಲದ್ದನ್ನು ಮರೆಸಿ ನಿಮ್ಮನ್ನು ತಮ್ಮ ಕಣ್ಣಿನ ಒಂದು ನೋಟದಲ್ಲೇ ಸುದೀಪ್‌ ಅಮಲು ತರಿಸುತ್ತಾರೆ. ಒಬ್ಬ ಸ್ಟಾರ್‌ ಇದಕ್ಕಿಂತ ಹೆಚ್ಚಿಗೆ ಇನ್ನೇನು ಮಾಡಬೇಕು ? ನಿಮ್ಮದರೆಡು ಅಕ್ಷತೆ ಕಾಳು ಚಂದು ತಲೆ ಮೇಲೆ ಹಾಕಿ ಹರಸಿ ಬನ್ನಿ...

(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada