»   » ಹೊಸಾ ಹೀರೋ, ಹಳೇ ರಾಗ ; ಅದ್ಭುತ!

ಹೊಸಾ ಹೀರೋ, ಹಳೇ ರಾಗ ; ಅದ್ಭುತ!

Subscribe to Filmibeat Kannada
  • ವಿನಾಯಕ ಭಟ್‌
ನಾಯಕ ವಿಕ್ರಂ ಕಾಲೇಜು ಕ್ರೀಡಾ ತಂಡಗಳ ಕಪ್ತಾನ. ಟೆನಿಸ್‌, ವಾಲಿಬಾಲ್‌, ಬ್ಯಾಂಡ್ಮಿಂಟನ್‌ ಎಲ್ಲಕ್ಕೂ ಇವನೊಬ್ಬನೇ ತಂದೆ. ಇವನ ಸ್ನೇಹಕ್ಕೆ ಹುಡುಗಿಯರು ಕಿತ್ತಾಡುತ್ತಾರೆ, ಮೇಡಮ್ಮು ಹಾತೊರೆಯುತ್ತಾರೆ.

ಇಂಟರ್‌ ಯುನಿವರ್ಸಿಟಿ ಕ್ರೀಡಾಕೂಟಕ್ಕೆಂದು ಹೊರಟ ಈ ಟೋಳಿಯನ್ನು ಹೊತ್ತ ‘ಗಂಗಾ-ಕಾವೇರಿ ಎಕ್ಸ್‌ಪ್ರೆಸ್‌’ ರೈಲು ವಾರಾಣಸಿಗೆ ಹೊರಡುವುದರೊಂದಿಗೆ ಚಿತ್ರ ಆರಂಭವಾಗುತ್ತದೆ. ನಾಯಕ ಅಂದಮೇಲೆ ರೈಲಿನಡಿ ಅಕಸ್ಮಾತ್‌ ಸಿಕ್ಕಿಬೀಳುತ್ತಿದ್ದ ಮಗುವನ್ನೂ ರಕ್ಷಿಸದಿದ್ದರೆ ಹೇಗೆ? ಅಂತೂ ಕಾಶಿ ತಲುಪಿ ಎಲ್ಲ ಕಪ್ಪುಗಳನ್ನೂ ಗೆದ್ದು , ಮನೆಬಿಟ್ಟು ಹೋದ ಅಜ್ಜನನ್ನೂ ಮರಳಿ ಪಡೆದು, ಇನ್ನೇನು ಗಂಗೆಯಲ್ಲಿ ಮುಳುಗು ಹಾಕಿ ಪಾಪ ತೊಳೆದುಕೊಳ್ಳುತ್ತಿರುವಾಗ ಅದೆಲ್ಲಿಂದಲೋ ನದಿಗೆ ಬೀಳುತ್ತಾಳೆ, ನಾಯಕಿ ಗಂಗಾ. ನದಿಗೆ ಅಂದರೆ ನದಿಯಲ್ಲಿ ನಿಂತು ನಮಾಜು ಮಾಡುವಂತೆ ಕೈ ಎತ್ತಿ ಗಾಯತ್ರಿ ಮಂತ್ರ ಪಠಿಸುತ್ತಿದ್ದ ನಾಯಕನ ಕೈಮೇಲೆಯೇ! ಅಬ್ಬಬ್ಬಾ ಎಂಥ ಮಿಲನ ಎಂದುಕೊಳ್ಳುತ್ತೀರಿ. ಆದರೆ ಆಕೆ ಬಿದ್ದಿದ್ದು ಏಕೆ ಎಂಬುದು ಚಿತ್ರ ಮುಗಿದ ಮೇಲೂ ಸಸ್ಪೆನ್ಸ್‌ .

ಆಕೆ ಸಾಮಾನ್ಯ ಹುಡುಗಿಯಲ್ಲ . ಅಪ್ಪ ದುಬೈನಲ್ಲಿ ಬನಾರಸ್‌ ಸೀರೆ ವ್ಯಾಪಾರಿ. ಕಾಶಿಯಲ್ಲಿ ಮನೆಯಿದೆ. ಬೆಂಗಳೂರಿನಿಂದ ಆಕೆ ಬಂದಿರುವುದು ಅಮ್ಮನ ಅಸ್ಥಿ ವಿಸರ್ಜನೆಗೆ. ಆದರೆ ಆಕೆಯ ಒಂದೊಂದು ಚಲನವಲನದ ಮೇಲೂ ಬೇರೊಬ್ಬರ ನಿಗಾ ಇದೆ. ದುಬೈಗೆ ಕ್ಷಣ ಕ್ಷಣ ವರದಿ ಹೋಗುತ್ತಿರುತ್ತದೆ.

ಇಂಥ ಗಂಗೆಯ ಅಂಥಾ ಮಿಲನದಿಂದ ವಿಕ್ರಮ್‌ ಪ್ರೇಮಪಾಶಕ್ಕೆ ಬೀಳದಿದ್ದರೆ, ‘ಲವ್‌’ ಹೆಸರಾದರೂ ಸಾರ್ಥಕ ಹೇಗಾದೀತು ? ಆಕೆಯದೂ ಅದೇ ಸ್ಥಿತಿ. ಕೊನೆಗೂ ಹೇಳಿಕೊಳ್ಳುತ್ತಾಳೆ, ವಿಕ್ರಮ್‌ ಗೋಳು ಹುಯ್ಕಾಳ್ತಾನೆ. ಬಾಯ್‌ಫ್ರೆಂಡ್‌ ಬಾಯಿಯಿಂದ ‘ಐ ಲವ್‌ ಯೂ’ ಹೇಳಿಸಲು ನಾಯಕಿ ಪ್ರಾಣಾಪಾಯವನ್ನೂ ಲೆಕ್ಕಿಸದೆ ಜೀಪನ್ನು ಯದ್ವಾತದ್ವಾ ಓಡಿಸಿ, ಡಿಕ್ಕಿ ಹೊಡೆದು, ಜಂಪ್‌ ಮಾಡಿಸಿ, ಕೊನೆಗೆ ಸೇತುವೆ ಮೇಲಿಂದ, ನೀರಿಗೆ ನಟ್ಟ ನಡುವೆ ಬಿದ್ದು ಗುಜರಿಯಾದಾಗ ಪ್ರೀತಿಯ ಕಮಲ ಪಕಳೆ ತೆರೆದುಕೊಳ್ಳುತ್ತದೆ.

ಈ ಹೊಸ ತಂತ್ರವನ್ನು ಯಾರಾದರೂ ಹುಡುಗಿಯರು ಪ್ರಯೋಗಿಸುವ ವಿಚಾರವಿದ್ದರೆ, ಮುನ್ನ ನಿರ್ದೇಶಕರನ್ನು ಸಂಪರ್ಕಿಸುವುದೊಳಿತು.

ಕೇಳುಗ ಮಹಾಶಯ, ದಯವಿಟ್ಟು ಕ್ಷಮಿಸು. ಮುಂದೆ, ಕಥೆ ಹೇಳಲಾಗುತ್ತಿಲ್ಲ . ಒಂಥರಾ ಗೊಂದಲ, ಗೋಜಲು. ಹಾಂ ! ಈ ನಡುವೆ ಕಲ್ಪನಾ ಎನ್ನುವ ಹುಡುಗಿಯಾಬ್ಬಳ ಎಂಟ್ರಿ ಇದೆ. ಆಕೆ ಮದುವೆ ಇಲ್ಲದೆ ಬಸುರಾಗಿ ಸಾಯಲು ನಿದ್ದೆ ಮಾತ್ರೆ ತಗೊಂಡಾಗ ನಾಯಕ ರಕ್ಷಿಸಿ, ಸಂತೈಸುತ್ತಾನೆ. ನಾಯಕ- ನಾಯಕಿ ನಡುವೆ ವಿರಸ ಹುಟ್ಟಲು ಇದಕ್ಕಿಂತ ಬೇರೆ ಸಂದರ್ಭ ಬೇಕೆ ? ಮುನಿಸುಗೊಂಡ ನಾಯಕಿ ದುಬೈಗೆ ಹೋಗುತ್ತಾಳೆ, ತಂದೆ ತೋರಿಸಿದ ವರನನ್ನು ವರಿಸಲು.

ಇಷ್ಟೊತ್ತೂ ಕಾಶಿಯಲ್ಲಿ ನಡೆಯುವುದು ಇನ್ನು ಮುಂದೆ ದುಬೈಗೆ ಶಿಫ್ಟಾಗುತ್ತದೆ. ಪ್ರೇಮಿಗಳಿಗೆ ನೆರವಾಗುವ ಟ್ಯಾಕ್ಸಿ ಡ್ರೆೃವರ್‌ ಆಗಿ ಮೋಹನ್‌ ಲಾಲ್‌, ಗಂಗಾಳನ್ನು ಮಗನಿಗೆ ತಂದುಕೊಂಡು ಆಸ್ತಿಯನ್ನೆಲ್ಲ ಪಡೆಯುವ ಹುನ್ನಾರದ ಖಳನಾಗಿ ಅಮರೀಶ್‌ಪುರಿ ಎಂಟ್ರಿ.

ಮಲಯಾಳಂ ಶೈಲಿಯ ಮೋಹನ್‌ಲಾಲ್‌ ಕನ್ನಡ, ಹಿಂದಿ ಶೈಲಿಯ ಅಮರೀಶ್‌ಪುರಿ ಕನ್ನಡ ಕೇಳಿದರೆ ಪುಳಕ. ಅವರವರಿಂದಲೇ ಧ್ವನಿ ಕೊಡಿಸಿರುವುದು ಒಂದು ಪ್ರಯೋಗಾತ್ಮಕ ಸಂದರ್ಭ ಎಂದುಕೊಳ್ಳಬಹುದು.

ದುಬೈ ದೃಶ್ಯಗಳಲ್ಲೆಲ್ಲ ಇವರಿಬ್ಬರೂ ಇದ್ದಾರೆ. ಲವ್‌ ಸ್ಟೋರಿಯಲ್ಲಿ ಖಳ ಏನು ಮಾಡಿಸುತ್ತಾನೋ, ಒಳ್ಳೆಯವ ಹೇಗೆ ನೆರವಾಗುತ್ತಾನೋ ಅದೆಲ್ಲ ಆಗುತ್ತದೆ. ಒಳ್ಳೆಯ ಕೆಲಸಕ್ಕೆ ಪಾಸ್‌ಪೋರ್ಟ್‌ ನಕಲಿ ಮಾಡಿಸಿದರೂ ತಪ್ಪಿಲ್ಲ ಎಂಬ ಸಂದೇಶವೂ ಇದೆ.

ಮೋಹನಲಾಲ್‌ರ ಅಗಲಿದ ಪ್ರೇಮಿ ‘ಪಾರುಕುಟ್ಟಿ’ಯಾಗಿ ಕಾಣಿಸಿಕೊಳ್ಳುವ ಸೌಂದರ್ಯ ಫೋಟೋ ತೆರೆಯ ಮೇಲೆ ಬಂದಾಗ ಪ್ರೇಕ್ಷಕರಲ್ಲಿ ಉಂಟಾಗುವ ಸಂಚಲನ, ಇಡೀ ಚಿತ್ರದಲ್ಲಿ ಮತ್ತೆಲ್ಲೂ ಆಗಿದ್ದು ಗೋಚರಿಸಲಿಲ್ಲ .

ಕೇಳುಗ ಮಹಾಶಯ, ಹೇಳುತ್ತ ಹೊರಟರೆ ಉಪಕಥೆಯೇ ಜಾಸ್ತಿ ಎಂದು ಗೊಣಗಬೇಡ. ಕೊಟ್ಟಕೊನೆಗೆ ಏನಾಗುತ್ತದೆ ಎಂದರೆ, ವಿಕ್ರಂ-ಗಂಗಾ ತಪ್ಪಿಸಿಕೊಂಡು ಬರುವಾಗ ಮತ್ತೆ ಬೇರಾಗುತ್ತಾರೆ. ಕೊನೆಗೆ ಒಂದಾಗಲೇಬೇಕಲ್ಲ , ವಿಲನ್‌ಗಳು ಕಾಶಿಯ ತೂಗು ಸೇತುವೆ ಮೇಲೆ ಅಟ್ಟಿಸಿಕೊಂಡು ಬರುವಾಗ ಬೇರೆ ದಾರಿ ಕಾಣದೆ ನದಿಗೆ ಹಾರುತ್ತಾಳೆ. ಇದೇ ಸಂದರ್ಭ ತಾತನ ಅಸ್ಥಿ ವಿಸರ್ಜನೆಗೆ ನದಿಗಿಳಿದಿದ್ದ ನಾಯಕ ಅಕಸ್ಮಾತ್‌ ಇದನ್ನು ಗಮನಿಸಿ ರಕ್ಷಿಸುತ್ತಾನೆ. ಪ್ರೇಮಿಗಳು ಒಂದಾಗಿ ಆಯ್ತಲ್ಲ , ಇನ್ನೇನು ನೋಡ್ತಿದ್ದೀರಿ.... ನಿಲ್ಲಿ , ಇನ್ನೂ ಕಥೆ ಮುಂದುವರಿಯುತ್ತದೆ. ತೆರೆಯ ಮೇಲೇ ನೋಡಿ ಆನಂದಿಸಿ.

ಇಡೀ ಚಿತ್ರದಲ್ಲಿ ಗಮನ ಸೆಳೆಯುವುದು ವಾರಾಣಸಿ ಮತ್ತು ದುಬೈ ದೃಶ್ಯಗ್ರಹಣ. ದುಬೈ ಮರಳುಗಾಡು ಚೇಸಿಂಗ್‌ ನೋಡುವುದು ಹೊಸ ಅನುಭವ. ನಾಯಕ ಆದಿತ್ಯ ಸಹಜ ಅಭಿನಯ, ನೃತ್ಯಗಳಿಂದ ಭರವಸೆ ಹುಟ್ಟಿಸುತ್ತಾರೆ. ನಾಯಕಿ ರಕ್ಷಿತಾ ಕೂಡ ನಟಿಸಿದ್ದಾರೆ. ಹಾಸ್ಯದಲ್ಲಿ ಕೋಮಲ್‌ ಮಿಂಚಿದರೆ ಮತ್ಯಾರಿಗೂ ಅವಕಾಶ ಕಡಿಮೆ.

ಸಂಗೀತದ ಬಗ್ಗೆ ಹೇಳದಿದ್ದರೆ ಕಥೆ ಅಪೂರ್ಣ. ಆರಂಭದಲ್ಲಿ ರೈಲ ಮೇಲೊಂದು ಹಾಡಿದೆ ; ಅದು ಚಂಯ್ಯಾ ಚಂಯ್ಯಾ ಅಲ್ಲ . ಹಾಗೆ ನೋಡಿದರೆ ಯುಗಳ ಗೀತೆಗಳು, ಜಗಳ ಗೀತೆಗಳು ಎಲ್ಲಿ ಎಷ್ಟೊತ್ತಿಗೆ ಹಾಜರಾಗುತ್ತವೆ ಎಂದು ಊಹಿಸದಷ್ಟು ಸಸ್ಪೆನ್ಸ್‌. ಚಿತ್ರದ ಹಲವಾರು ಖಳನಾಯಕರಲ್ಲಿ ಸಂಗೀತ ನೀಡಿದ ಅನು ಮಲ್ಲಿಕ್‌ ಗಮನಾರ್ಹ ಪಾತ್ರ ವಹಿಸಿದ್ದಾರೆ.

‘ಶತರಂಗ ಶತರಂಗ’ ಬಿಟ್ಟರೆ ಬಾಕಿ ಎಲ್ಲ ಅರಚೋದೆ ಹಾಡಾಗಿದೆ. ‘ಎಲ್‌ ಓ ವಿ ಇ ಗೆ ಜಾರಿದೆ...’ ಎಂದು ಗೊಗ್ಗರ ದನಿಯಲ್ಲಿ ಹಾಡಿದ್ದಕ್ಕೆ ಮಲ್ಲಿಕ್‌ಗೆ ಪ್ರಶಸ್ತಿ ಸಿಕ್ಕರೂ ಸಿಗಬಹುದು.

ಬಹು ತಾರಾಗಣದ, ಭಾರಿ ಬಜೆಟ್ಟಿನ ಈ ಚಿತ್ರದೊಂದಿಗೆ ದಿ.ಶಂಕರ್‌ಸಿಂಗ್‌ ವಂಶವೃಕ್ಷದ 3ನೇ ತಲೆಮಾರಿನ ಕುಡಿ ಆದಿತ್ಯ ಹೀರೋ ಆಗಿದ್ದಾನೆ. ಅಪ್ಪ ರಾಜೇಂದ್ರಸಿಂಗ್‌ ಬಾಬು, ಮಗನನ್ನು ಹೀರೋ ಆಗಿ ಲಾಂಚ್‌ ಮಾಡಲು ಸಾಕಷ್ಟು ದುಡ್ಡು , ಶ್ರಮ ಸುರಿದಿದ್ದಾರೆ. ಈ ಭರಾಟೆಯಲ್ಲಿ ಕಥೆ-ಚಿತ್ರಕಥೆ ಗಂಗೆಯ ಪಾಲಾಗಿದೆ. 50 ರುಪಾಯಿ ಬೆವರಿನ ಹಣ ಕೊಟ್ಟು ಚಿತ್ರ ನೋಡಿದವರನ್ನು ಕಾಶಿ ವಿಶ್ವನಾಥನೇ ಕಾಪಾಡಬೇಕು.

ಸಿನಿಮಾ ತೆರೆಮೇಲೆ ಯಾವ ಅನುಭವ ನೀಡುತ್ತದೆ ಎನ್ನುವುದೇ ಮುಖ್ಯ ಎಂಬ ಸರಳ ಅಂಶ ‘ಬಂಧನ, ಮುತ್ತಿನ ಹಾರ’ದಂಥಾ ಚಿತ್ರ ಮಾಡಿದ ರಾಜೇಂದ್ರಸಿಂಗ್‌ ಬಾಬು ಮರೆತರೆ ?

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada