»   » ಮೀಟರ್‌ ಇಲ್ಲದೆ ಓಡುವ ಆಟೋ

ಮೀಟರ್‌ ಇಲ್ಲದೆ ಓಡುವ ಆಟೋ

Posted By:
Subscribe to Filmibeat Kannada
  • ದೇವಶೆಟ್ಟಿ ಮಹೇಶ್‌
ಜನ ಬುದ್ಧಿವಂತರಾಗಿದ್ದಾರೆ. ಯಾವ ಚಿತ್ರವನ್ನು ಎಲ್ಲಿಡಬೇಕೋ ಅಲ್ಲಿಡುತ್ತಾರೆ. ಅಭಿಮಾನ ಅಂತ ಅಂಗೈಗೆ ಬ್ಲೇಡು ಹಾಕಿಕೊಳ್ಳುವ ಕಾಲ ಯಾವತ್ತೊ ಮಾಯವಾಗಿದೆ. ಆದರೆ ಇದನ್ನು ಚಿತ್ರ ತಂಡ ಮರೆತಿದೆ. ಶಂಕರ್‌ನಾಗ್‌ ದಶಕಗಳ ಹಿಂದೆ ಕಾಣಿಸಿಕೊಂಡಿದ್ದ ಆಟೋ ಡ್ರೆೃವರ್‌ ಪಾತ್ರಕ್ಕೆ ಮರುಜನ್ಮ ನೀಡಿ, ಅದರಲ್ಲಿ ಉಪ್ಪಿಯನ್ನು ಕೂರಿಸಿದ್ದಾರೆ. ಅವರು ‘ನಾ ಆಟೋ ಶಂಕರ್‌ ನಾ ಆಟೋ ಡ್ರೆೃವರ್‌’ ಅಂತ ಮನಸು ಬಂದತ್ತ ಗಾಡಿ ಓಡಿಸಿದ್ದಾರೆ. ಜನ ಮೀಟರ್‌ ಇಲ್ಲದ ಗಾಡಿ ಓಟ ನೋಡಿ ಕಂಗಾಲಾಗುತ್ತಾರೆ. ಅಡ್ವಾನ್ಸ್‌ ದುಡ್ಡು ಕೊಟ್ಟಿದ್ದಕ್ಕೆ ರೈಟ್‌ ರೈಟ್‌...
-ಇದು ‘ಆಟೋ ಶಂಕರ್‌’ ಚಿತ್ರದ ಒನ್‌ ಲೈನ್‌ ವಿಮರ್ಶೆ.

ಇದರ ನಿರ್ಮಾಪಕ ರಾಮು, ನಿರ್ದೇಶಕ ಡಿ.ರಾಜೇಂದ್ರಬಾಬು, ನಾಯಕ ಉಪೇಂದ್ರ, ನಾಯಕಿ ರಾಧಿಕಾ, ಖಳ ನಾಯಕಿ ಶಿಲ್ಪಾ ಶೆಟ್ಟಿ, ಸಂಗೀತ ಗುರು ಕಿರಣ್‌... ಇದೇನು ಟೈಟಲ್‌ ಕಾರ್ಡ್‌ ಇಲ್ಲ್ಯಾಕೆ ತೋರ್ಸಾಕತ್ಹೀರಿ ಅಂತ ರಾಂಗ್‌ ಆಗಬೇಡಿ. ಇಷ್ಟೆಲ್ಲ ಘಟಾನುಘಟಿಗಳು ಇದ್ದೂ ಆಟೋ ದಿಕ್ಕು ತಪ್ಪಿ ಓಡಿದೆ. ಕತೆಯಲ್ಲಿ ದಮ್ಮಿಲ್ಲ, ಮಾತಿನಲ್ಲಿ ಸೊಬಗಿಲ್ಲ, ಉಪೇಂದ್ರನಿಗೆ ಖದರ್‌ ಇಲ್ಲ, ಶಿಲ್ಪಾ ಶೆಟ್ಟರು ವರ್ಕ್‌ಔಟ್‌ ಆಗಿಲ್ಲ, ಹಾಡಿಗಾಗಿ ಬಂದು ಹೋಗುವ ರಾಧಿಕಾ ಮಾತ್ರ ಕೊಂಚ ರಾ...ರಾ...ಸರಸಕು..ರಾ..ರಾ. ನಾಯಕ ಸಹಜವಾಗಿ ಆಟೋ ಡ್ರೆೃವರ್‌.

ಆ ಊರಿನಲ್ಲಿ ಕಾಳಮ್ಮ ಎಂಬ ರಾಯಲಸೀವೆಯ ಬಡ್ಡಿ ಬಂಗಾರಮ್ಮ. ಅವಳಿಂದ ಸಾಲ ಪಡೆದವರಿಗೆ ನರಕಕ್ಕಾದರೂ ಹೋದೆನು, ಅವಳ ಕೈಗೆ ಸಿಗಲಾರೆ ಎನ್ನುವ ಸ್ಥಿತಿ. ಅವಳ ಮಗಳು ಶಿಲ್ಪಾ ಶೆಟ್ಟಿ. ಆಕೆ‘ನಂಜುಂಡಿ ಕಲ್ಯಾಣ’ದ ಮಾಲಾಶ್ರೀ. ಮೈ ತುಂಬ ಕೊಬ್ಬು. ಅವಳ ಈ ಕೊಬ್ಬನ್ನು ನಾಯಕ ಬಿಟ್ಟು ಬೇರಾರೂ ಇಳಿಸಲು ಸಾಧ್ಯ. ಅದಕ್ಕೆ ಬರ್ತಾನೆ ಶಂಕ್ರ. ಅವಳ ಮನೆಗೆ ಹೋಗಿ ‘ರೇಪ್‌ ಮಾಡಿಸಿಕೊಳ್ಳಲು ನೀನೂ ನಾಲಾಯಕ್ಕು’ ಅಂತ ಅಂಗಿ ತೊಡುತ್ತಾನೆ ಮತ್ತು....

ಅಲ್ಲಿಂದ ಇಬ್ಬರ ನಡುವೆ ಯಾರು ತಿಳಿಯರು ನಿನ್ನ ಭುಜ ಬಲದ ಪರಾಕ್ರಮ... ಅದೇ ಹೊತ್ತಿಗೆ ನಾಯಕನ ಅಪ್ಪ ಅದೇ ಕಾಳಮ್ಮನಿಂದ ಮಗನಿಗೆ ಗೊತ್ತಿಲ್ಲದೆ ಸಾಲ ಪಡೆದಿರುತ್ತಾನೆ. ಅವಳ ಹಿಡಿತಕ್ಕೆ ಆತ ಸಿಕ್ಕಿಬಿಟ್ಟ ಎನ್ನುವಾಗ ಶಿಲ್ಪಾ ಲೈಫ್‌ ಮೆ ಟ್ವಿಸ್ಟ್‌!

ಉಫ್‌... ಬಡ್ಡಿ ವ್ಯವಹಾರವನ್ನೇ ಮುಂದಿಟ್ಟುಕೊಂಡು 80ಬೈ 160 ಚಿತ್ರಕತೆ ಬರೆದಿದ್ದಾರೆ. ಅದನ್ನೇ ಎಳೆದೆಳೆದು ಸುಸ್ತು ಮಾಡುತ್ತಾರೆ. ಸಾಧು ಕೋಕಿಲಾ ರಾತ್ರಿ ಕುಡಿದು ಅಪ್ಪ ಅಮ್ಮನಿಗೆ ಹೊಡೆಯುವುದು, ಬೆಳಿಗ್ಗೆ ಸಾಕ್ಷಾತ್‌ ದೇವರೆಂದು ಅವರಿಗೆ ನಮಸ್ಕಾರ ಮಾಡುವುದು ಜೋಕ್‌ ಅಂತ ತಿಳಿದರೆ ನಿರ್ದೇಶಕರ ಅಭಿರುಚಿಗೆ ಸಲಾಂ ಹೇಳಿಬಿಡಿ. ಹಾಗೆಯೇ ಖಳನಾಯಕಿ ಎಂಬ ಕಾರಣಕ್ಕೆ ಅವಳನ್ನು ಆ ಮೂಲಕ ಹೆಣ್ಣನ್ನು ಕಂತ್ರಿ, ಕಜ್ಜಿ ನಾಯಿ, ಶೂರ್ಪನಖಿ, ಬಿಕನಾಸಿ ... ಎಂಬ ಶಬ್ದಗಳಿಂದ ಅಲಂಕಾರ ಮಾಡಿದ್ದನ್ನೂ ಕ್ಷಮಿಸಿಬಿಡಿ. ಸಂಭಾಷಣೆ ಬರೆದ ಬಿ.ಎಲ್‌. ವೇಣು ಅವರ ‘ಅಕ್ಷರ ಪ್ರೀತಿ’ಗೆ ಉಧೋ...ಉಧೋ...

ಇನ್ನು ಉಪ್ಪಿ ತಮ್ಮ ಪಾತ್ರವನ್ನು ನೀಟಾಗಿ ಮಾಡಿದ್ದಾರೆ. ಶ್ರೀನಿವಾಸ ಮೂರ್ತಿ, ಸುಮಿತ್ರಾ, ಸುಧಾರಾಣಿ, ಸಾಧು, ದೊಡ್ಡಣ್ಣ, ರಂಗಾಯಣ ರಘು ತಮ್ಮ ಕೆಲಸದಲ್ಲಿ ಅಚ್ಚುಕಟ್ಟು. ಗುರು ಕಿರಣ್‌ ಸಂಗೀತ ಕೊಂಚ ರಿಲ್ಯಾಕ್ಸ್‌ ಮಾಡುತ್ತೆ. ರಾಮು ನಾಲ್ಕು ಕೋಟಿ ಖರ್ಚು ಮಾಡಿದ್ದಾರಂತೆ. ಅದು ತೆರೆ ಮೇಲೆ ಕಾಣಿಸುವುದಿಲ್ಲ.

ಅದೇನೆ ಇರಲಿ, ಒಂದು ಕಾಲದಲ್ಲಿ ಶಂಕರ್‌ನಾಗ್‌ಗೆ ಸ್ಟಾರ್‌ ಗಿರಿ ತಂದುಕೊಟ್ಟ ‘ಆಟೋ’ ಕಾನ್ಸೆಪ್ಟ್‌ ಅನ್ನೂ ಸರಿಯಾಗಿ ಬಳಸಿಕೊಳ್ಳಲು ಈ ರಾಮು ತಂಡಕ್ಕೆ ಸಾಧ್ಯವಾಗಿಲ್ಲವಲ್ಲ...ಶೇಮ್‌ ಶೇಮ್‌...
(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada