»   » ಸ್ನೇಹಾಂಜಲಿ ದೆಸೆಯಿಂದ ಉದಯಿಸಿದ 'ಧ್ರುವ'ತಾರೆ!

ಸ್ನೇಹಾಂಜಲಿ ದೆಸೆಯಿಂದ ಉದಯಿಸಿದ 'ಧ್ರುವ'ತಾರೆ!

Posted By: ದೇವಶೆಟ್ಟಿ ಮಹೇಶ್
Subscribe to Filmibeat Kannada


ಈತನಿಗೆ ಕಿವಿ ಕೇಳಿಸುವುದಿಲ್ಲ. ಮಾತಾಡಲು ಬರುವುದಿಲ್ಲ. ಆದರೂ ಎಲ್ಲ ಸರಿ ಇದ್ದವರಿಗಿಂತ ಹತ್ತು ಪಟ್ಟು ಚೆನ್ನಾಗಿ ಕುಣಿಯಬಲ್ಲ, ಕಣ್ಣಿನಲ್ಲೇ ಭಾವನೆಗಳನ್ನು ಹೇಳಬಲ್ಲ. ಹೊಡೆದಾಟಕ್ಕೆ ನಿಂತರೆ ದಂಗು ಬಡಿಸಬಲ್ಲ, ತೆರೆಯ ಮೇಲೆ ಪಾದರಸದಂತೆ ನಟಿಸಬಲ್ಲ.. ಒಬ್ಬ ಕಲಾವಿದನಾಗಲು ಇನ್ನೇನು ಬೇಕು? ಹೀಗೆ ಮೊದಲ ಬಾರಿ ನಾಯಕನಾದ ಧ್ರುವ ನಿಮ್ಮ ಮನದಲ್ಲಿ ಮನೆ ಮಾಡಿ ನಗುವುದನ್ನು ನೋಡಲು ನೀವೊಮ್ಮೆ 'ಸ್ನೇಹಾಂಜಲಿ'ಚಿತ್ರವನ್ನು ನೋಡಬೇಕು.

ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದು ದಾಖಲೆ ನಿರ್ಮಿಸಿದ ಚಿತ್ರ. ಹಾಗೆಂದು ದಾಖಲೆ ಮಾಡಲು ಇದನ್ನು ಮಾಡಿಲ್ಲ. ಕಲೆಯ ಬಗ್ಗೆ ಪ್ರೀತಿ ಇಟ್ಟುಕೊಂಡ ಹುಡುಗನನ್ನು ಆತನ ಸಿನಿಮಾ ಪ್ರೀತಿಯನ್ನು ಅಷ್ಟೇ ನಿಯತ್ತಾಗಿ ತೋರಿಸಲು ಮಾಡಿದ ಶ್ರಮವಷ್ಟೇ ಇಲ್ಲಿ ಸತ್ಯಸ್ಯ ಸತ್ಯ. ಉಳಿದದ್ದು ಮಿಥ್ಯ.

ಚಿತ್ರದಲ್ಲಿ ವಿಕಲಚೇತನ ನಾಯಕನಟ ಧ್ರುವ ಅವರನ್ನು ಬಂಡವಾಳ ಮಾಡಿಕೊಳ್ಳಲು ನಿರ್ದೇಶಕ ಮತ್ತು ನಿರ್ಮಾಪಕರು ಪ್ರಯತ್ನಿಸಿಲ್ಲ. ನಿರ್ದೇಶಕ ಗಿರೀಶ್ ಕಂಪ್ಲಾಪುರ್ ಸುರಿಸಿದ ಬೆವರು ಪ್ರತಿ ಫ್ರೇಮ್ ನಲ್ಲೂ ಕಾಣುತ್ತದೆ. ಒಂದೇ ಒಂದು ಚಿಕ್ಕ ಶಾಟ್ ನಲ್ಲೂ ನಾಯಕನ ಅಂಗ ದೋಷ ಕಾಣಿಸುವುದಿಲ್ಲ. ಅದು ಧ್ರುವ ಮತ್ತು ಕಂಪ್ಲಾಪೂರ್ ಗೆ ಸಲ್ಲಬೇಕಾದ ಕ್ರೆಡಿಟ್ಟು.

ನಾಯಕನಿಗೆ ಡಬ್ಬಿಂಗ್ ಮಾಡಿದಾತ ಎಷ್ಟು ಅಚ್ಚುಕಟ್ಟಾಗಿ ಮಾಡಿದ್ದಾನೋ ಅದಕ್ಕೆ ತಕ್ಕಂತೆ ಧ್ರುವ ತುಟಿ ಚಲನೆಯನ್ನು ಹೊಂದಿಸಿದ್ದಾನೆ. ಜತೆಗೆ ಮುದ್ದುಮುದ್ದಾಗಿ ಕಾಣುತ್ತಾನೆ. ರಾಜೇಶ್ ರಾಮನಾಥ್ ಸಂಗೀತದಲ್ಲಿ ಮೂರು ಹಾಡುಗಳು ಕೇಳುವಂತಿವೆ. ವಿಷ್ಣು ಕ್ಯಾಮೆರಾ ಕಣ್ಣಿಗೆ ಮುದ ನೀಡುತ್ತದೆ. ಅಂಜೂ ವರ್ಮಾ ಪೌಷ್ಟಿಕ ಹುಡುಗಿಯಾಗಿ ಕಣ್ಣಿಗೆ ತಂಪಾಗುತ್ತಾಳೆ. ಚಿತ್ರದ ಕತೆ ಬಗ್ಗೆ ಸ್ವಲ್ಪ ಕೇಳಿ.

ಧ್ರುವ ಮತ್ತು ಅಂಜು ವರ್ಮಾ ಸ್ನೇಹಿತರು. ಇವರ ತಂದೆತಾಯಿ ಅದನ್ನು ಸಂಬಂಧವಾಗಿ ಪರಿವರ್ತಿಸಲು ಇಬ್ಬರಿಗೂ ಮದುವೆ ಮಾಡಲು ನಿರ್ಧರಿಸುತ್ತಾರೆ. ಆದರೆ ಇವರು ಸ್ನೇಹಿತರಾಗಿಯೇ ಇರಲು ಬಯಸುತ್ತಾರೆ. ಇದರಿಂದ ಅಪ್ಪಂದಿರು ಕೆರಳಿ ಕೆಂಡವಾಗುತ್ತಾರೆ. ಇದರಿಂದ ಬಚಾವಾಗಲು ಒಂದು ಉಪಾಯ ಮಾಡುತ್ತಾರೆ. ಅಪ್ಪಂದಿರ ನಡುವೆ ಜಗಳ ತಂದಿಟುತ್ತಾರೆ. ಆಗ ತಮ್ಮ ದಾರಿ ಸುಗಮವಾಗುತ್ತದೆ ಎಂಬುದು ಅವರ ನಂಬಿಕೆ. ಆದರೆ ಕೊನೆಗೆ ಇಬ್ಬರೂ ಪ್ರೇಮದಲ್ಲಿ ಮುಳುಗುತ್ತಾರೆ. ಇದು ಚಿತ್ರದ ಸಾಮಾನ್ಯ ಕತೆ. ಅದನ್ನು ನಿರ್ದೇಶಕರು ಬೋರ್ ಆಗದಂತೆ ಹೇಳಿದ್ದಾರೆ.

ಧ್ರುವನ ಬಗ್ಗೆ ಇನ್ನು ಹೇಳುವುದು ಬೇಕಾಗಿಲ್ಲ. ಒಂದು ಮಾತಂತೂ ನಿಜ. ಈ ಹುಡುಗ, ಕನ್ನಡದ ಎಷ್ಟೋ ಅನುಭವಿ ನಟರಿಗಿಂತ ಹತ್ತು ಹೆಜ್ಜೆ ಮುಂದಿದ್ದಾನೆ. ಆದರೆ ಎಲ್ಲೂ ತನ್ನ ವೈಕಲ್ಯವನ್ನು ರಿಯಾಯಿತಿ ಎಂದು ಪರಿಗಣಿಸದಂತೆ ಪರೋಕ್ಷವಾಗಿ ತಿಳಿಸಿದ್ದಾನೆ. ಈ ಹುಡುಗ ಇಲ್ಲೀವರೆಗೆ ಬಂದು ನಿಲ್ಲಲು ಆತನ ತಂದೆ ಡಾ.ಶರ್ಮಾ ಇಷ್ಟು ವರ್ಷ ಸುರಿಸಿದ ಬೆವರು ಕಾರಣ. ಆ ಬೆವರ ಹನಿಗಳು ಈಗ ಮುತ್ತಾಗುತ್ತಿದೆ. ಒಮ್ಮೆ ನೋಡ ಬನ್ನಿ, ಮನಸು ಧ್ರುವಾಂಜಲಿ ಸುರಿಸುತ್ತದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada