»   » ವಿಮರ್ಶೆ: ಮಿಂಚಿನ 'ಸಂಚಾರ', ಸೋದರರ ಚೀತ್ಕಾರ

ವಿಮರ್ಶೆ: ಮಿಂಚಿನ 'ಸಂಚಾರ', ಸೋದರರ ಚೀತ್ಕಾರ

Posted By:
Subscribe to Filmibeat Kannada

ಇದು ಸೈನೈಡ್ ಎಂಬ ಕಲಾತ್ಮಕ ಚಿತ್ರ ಕೊಟ್ಟ ರಮೇಶ್ ನಿರ್ದೇಶನದ ಚಿತ್ರವಾ? ಸಿನಿಮಾ ಶುರುವಾದ ಹತ್ತೇ ಹತ್ತು ನಿಮಿಷದಲ್ಲಿ ಈ ಅನುಮಾನ ನಿಮ್ಮ ಹೆಗಲೇರದಿದ್ದರೆ ಹೇಳಿ! ಕಾರಣ ಕತೆಯಲ್ಲಿನ ಓಟ. ಕತೆ ಬಿಚ್ಚಿಕೊಳ್ಳುವ ಮೊದಲು ವಿಲನ್ ಬಂದು ಹೋಗುತ್ತಾನೆ. ಕಟ್ ಎನ್ನುವಷ್ಟರಲ್ಲಿ ರಸ್ತೆಮಧ್ಯ ತಲೆಯಿಂದ ರಕ್ತ ಜಿನುಗುತ್ತಿರುವ 'ಅನಾಮಿಕ' ಬಿದ್ದಿರುತ್ತಾನೆ. ಆತ ಯಾರಿರಬಹುದು? ಅವನ ಹಿನ್ನೆಲೆ ಏನು ಎಂಬ ಶಂಕೆ ಶುರುವಾಗುತ್ತದೆ. ಅಲ್ಲಿಗೆ ಆ ದೃಶ್ಯಕ್ಕೆ ಟೇಕ್ ಆಫ್ ಆಗಿರುತ್ತದೆ. ಆ ಶಂಕೆ ಶಮನವಾಗಲು ನೀವು ಮಧ್ಯಂತರ ವಿರಾಮದವರೆಗೆ ಕಾಯಲೇಬೇಕು!

*ವಿನಾಯಕರಾಮ್ ಕಲಗಾರು

ಅದಾದ ಮರುನಿಮಿಷದಲ್ಲಿ ಒಬ್ಬ ನಾಯಕ ವಿಜಯ್‌ನ ಎಂಟ್ರಿ. ಅವರ ಹಾವಭಾವ, ವ್ಯಕ್ತಿತ್ವದ ಪರಿಚಯ. ಜತೆಜತೆಗೆ ಕೊಡಚಾದ್ರಿಯ ರಮಣೀಯ ದೃಶ್ಯಗಳ ತಾಂಡವ ನೃತ್ಯ. 'ವಾಹ್... ಇದೇ ದೃಶ್ಯದಲ್ಲಿ ನಾಯಕಿಯನ್ನು ತೋರಿಸಬಹುದಿತ್ತು...' ಹಾಗೆ ಅಂದುಕೊಳ್ಳುವಷ್ಟರಲ್ಲಿ ಅವಳೂ ಹಾಜರ್. ಆಗೊಂದು 'ಮಿಂಚಂತೆ ಬಂದು ಮರೆಯಾದೆ...' ಎಂಬ ಹಾಡು.

ಆ ದೃಶ್ಯಕ್ಕೆ ಇತಿಶ್ರೀ ಹಾಡುವಷ್ಟರಲ್ಲಿ ಇನ್ನೊಬ್ಬ ನಾಯಕ ಭದ್ರನನ್ನು ಬರಮಾಡಿಕೊಳ್ಳಲಾಗುತ್ತದೆ . ಅವನಿಂದ 'ಭದ್ರ... ಕರೆಂಟು, ಮುಟ್ಟಿದ್ರೆ ಸುಟ್ಟೊಗ್ತಿಯಾ' ಎಂಬ ಪಂಚಿಂಗ್ ಡೈಲಾಗ್. ಅಲ್ಲೊಂದಿಷ್ಟು ಮಜಾ ಕೊಡುವ ಸಂಭಾಷಣೆಗಳು. ಅದರ ಹಿಂದೆಯೇ ಜಂಟಿ ನಾಯಕರ ಕೌಟುಂಬಿಕ ಹಿನ್ನೆಲೆಯ ಪರಿಚಯ. ಒಬ್ಬ ಶ್ರೀಮಂತರ ಕುಳ, ಇನ್ನೊಬ್ಬ ಸ್ಲಂ ಹುಡುಗ ಎಂಬ ಬಗ್ಗೆ ಸ್ಪಷ್ಟ ಮಾಹಿತಿ. ಭದ್ರ ಹಾಗೂ ವಿಜಿ ತಂಡಗಳ ನಡುವೆ ನಡೆಯುವ ಕಿತ್ತಾಟ. ಅದರಲ್ಲೇ ಒಂದಿಷ್ಟು ತಮಾಷೆ ಪ್ಲಸ್ ಆಕ್ಷನ್. ಎಲ್ಲ ಓಕೆ ಎನ್ನುವಷ್ಟರಲ್ಲಿ ಟೆನ್ನಿಸ್ ಬಳಗದಿಂದ ಒಂದಿಷ್ಟು ಕಾಮಿಡಿ. ಅದಾದನಂತರ ಸೆಂಟಿಮೆಂಟ್ ಟಚ್ ಕೊಡಲು ಬರುವ ರಂಗಾಯಣ ರಘು ಹಾಗೂ ಉಮಾಶ್ರಿ...!

ಹೀಗೆ ಯಾವ ಆಂಗಲ್‌ನಿಂದ ನೋಡಿದರೂ 'ಮಿಂಚಿನ ಓಟ ಪಕ್ಕಾ ಕಮರ್ಷಿಯಲ್ ಚಿತ್ರ' ಎನ್ನುವುದು ನಿಸ್ಸಂಶಯ. ರಮೇಶ್ ಕೂಡ ಆ ಬಗ್ಗೆ ಹೇಳಿಕೊಂಡಿದ್ದರು: 'ಕಲಾತ್ಮಕ ಸಿನಿಮಾ ನಿರ್ದೇಶಕನಿಗೆ ಕಮರ್ಷಿಯಲ್ ಚಿತ್ರ ಮಾಡೋಕೂ ಬರುತ್ತೆ ಎನ್ನುವುದನ್ನು ನಿರೂಪಿಸಲು ಮಿಂಚಿನ ಓಟ ಮಾಡಿದ್ದೇನೆ...'ಅವರು ಆಡಿದ ಮಾತಿನಲ್ಲಿ ಶೇ. 80ರಷ್ಟನ್ನು ಉಳಿಸಿಕೊಂಡಿದ್ದಾರೆ ಕೂಡ.

ಅದಕ್ಕೆ ಇನ್ನೊಂದು ತಾಜಾ ಉದಾಹರಣೆ ದ್ವಿತೀಯಾರ್ಧದಲ್ಲಿ ಬರುವ ಚೇಸಿಂಗ್. ನಾಯಕರಿಬ್ಬರೂ ಕಾರಿನಲ್ಲಿ ಮಂಗಳೂರಿಗೆ ಹೋಗುತ್ತಿರುತ್ತಾರೆ. ಒಂದು ದೈತ್ಯಾಕಾರದ ಟ್ರಕ್ ಅವರನ್ನು ಅಟ್ಟಿಸಿಕೊಂಡು ಬರುತ್ತದೆ. ಮುಂದೆ ರೈಲು ಪಾಸ್ ಆಗುತ್ತಿರುತ್ತದೆ. ರಸ್ತೆಯಲ್ಲಿ ನಿಂತ ಕಾರಿಗೆ ದುಷ್ಟ ಟ್ರಕ್ ಬಂದು ಗುದ್ದುತ್ತದೆ. ಅಲ್ಲಿ ಯಾವುದೇ ಡ್ಯೂಪ್‌ಗಳನ್ನೂ ಬಳಸಿಲ್ಲ. ಕೊನೆಗೆ ರೈಲಿಗೆ ಕಾರು ತಾಗಿ ಮುಂಭಾಗ ಪುಡಿಪುಡಿಯಾಗುತ್ತಿದ್ದರೆ ಟಾಕೀಸಿನಲ್ಲಿ ಕುಳಿತವರಿಗೆ ಮೈ ನಡುಕ ಶರುವಾಗುತ್ತದೆ.

ಆದರೆ ರಮೇಶ್ ಎಷ್ಟೇ ಹೆಣಗಾಡಿದರೂ ವಿಜಯ ರಾಘವೇಂದ್ರ ಹಾಗೂ ಮುರಳಿಯ ಮ್ಯಾನರಿಸಂ ಬದಲಾಯಿಸಲು ಆಗಿಲ್ಲ. ಜಂಟಿ ಬ್ರದರ್ಸ್ ಜಿದ್ದಿಗೆ ಬಿದ್ದು ಅಭಿನಯಿಸಿದ್ದರೆ ಕತೆಯ ಓಟದ ಪರಿಯೇ ಬೇರೆ ಇರುತ್ತಿತ್ತು. ವಿಜಯ ರಾಘವೇಂದ್ರ ಮೈತುಂಬ ಬಟ್ಟೆ ಹಾಕಿಕೊಂಡು ಮಾತಿನಲ್ಲೇ 'ಅಪಾರ್ಟ್‌ಮೆಂಟ್' ಕಟ್ಟುತ್ತಾರೆ. ಮುರಳಿ ಅಭಿನಯಕ್ಕಿಂತ ಆಕ್ಷನ್‌ಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. ದಷ್ಟಪುಷ್ಟ ಮೈಕಟ್ಟು ತೋರಿಸಲು ಅವರು ಬರಿ ಬನಿಯನ್‌ನಲ್ಲೇ 'ಬಳುಕು'ತ್ತಾರೆ!

ಅಣ್ಣ ಮಾತಿನಲ್ಲಿ ಮಜಾ ಕೊಟ್ಟರೆ ತಮ್ಮ ಫೈಟಿನಲ್ಲಿ ಮಾಂಜಾ ಕೊಡುತ್ತಾನೆ. ಆದರೆ ಇಬ್ಬರಿಗೂ ಒಂದೇ ಒಂದು ಪ್ರಶ್ನೆ: ತಾವಿಬ್ಬರೂ ಇಲ್ಲಿಯವರೆಗೆ ಲೆಕ್ಕವಿಲ್ಲದಷ್ಟು ಸಿನಿಮಾಗಳಲ್ಲಿ ಮಾಡಿದ್ದೀರಿ. ಆದರೆ ಅಭಿನಯ, ಹಾವಭಾವದಲ್ಲಿ ಎಷ್ಟು ಬದಲಾಗಿದ್ದೀರಿ? ಈ ಪ್ರಶ್ನೆಗೆ ಸಕಾರಾತ್ಮಕ ಉತ್ತರ ಅವರ ಮುಂದಿನ ಚಿತ್ರದಲ್ಲಾದರೂ ಸಿಗಲಿ!

ಇನ್ನು ನಾಯಕಿ ಲಕ್ಷ್ಮಿ ರೈ ಬಗ್ಗೆ ಹೇಳಲೇಬೇಕು. ಯಕ್ಷಗಾನ ವೇಷಧರಿಸಿ ಹೆಜ್ಜೆ ಹಾಕುವಾಗ, ಕೊಡಚಾದ್ರಿ ಬೆಟ್ಟದ ಸಾಲಿನಲ್ಲಿ ನಿಂತು ಚೆಂದವಾಗಿ ನಗುವಾಗ, ಅಣ್ಣನ ತೆಕ್ಕೆಯಿಂದ ತಪ್ಪಿಸಿಕೊಂಡು ಪ್ರೀತಿಯ ಪದಿ ತುಳಿಯಲು ಓಡಿಬರುವಾಗ ರೈ ಇಷ್ಟವಾಗುತ್ತಾಳೆ. ಅಭಿನಯವನ್ನು ಇನ್ನೊಂದಿಷ್ಟು ನೀಟಾಗಿ ಕರಗತ ಮಾಡಿಕೊಂಡರೆ ಈಕೆಗೆ ಉತ್ತಮ ಭವಿಷ್ಯವಿದೆ. ರಂಗಾಯಣ ರಘು ಹಾಗೂ ಉಮಾಶ್ರೀ ಪಾತ್ರಗಳ ಬಗ್ಗೆ ವಿಮರ್ಶೆ ಮಾಡಲು ಸಿನಿಮಾವನ್ನು ಇನ್ನೂ ಹತ್ತುಬಾರಿ ನೋಡಬೇಕು ಎಂದರೆ ಅದು ಅತಿಶಯೋಕ್ತಿಯಾಗಲಾರದು. 'ಆತ' ಕುಡಿದ ಅಮಲಿನಲ್ಲಿ, ಮಗನ ಮೇಲಿನ ಕೋಪಕ್ಕೆ 'ಈಕೆ'ಗೆ ಝಾಡಿಸಿ ಒದೆಯುವುದು, ಆಮೇಲೆ ತಪ್ಪಿನ ಅರಿವಾಗಿ ಈಕೆಯಲ್ಲಿ ಆತ ಕ್ಷಮೆ ಕೇಳುವುದು ಇತ್ಯಾದಿ ಇತ್ಯಾದಿ ಸೆಂಟಿಮೆಂಟ್ ದೃಶ್ಯಗಳು ಬಹುಕಾಲ ಮನಸ್ಸಿನಲ್ಲಿ ಉಳಿಯುತ್ತದೆ. 'ಸುಮನ್, ತಾವು ಖಳನಟನಾಗಲು ನಾಲಾಯಕ್ಕು' ಎಂದರೆ ಅವರು ಬೇಸರ ಮಾಡಿಕೊಳ್ಳಬಾರದು. ಅವರಿಗಿಂತ ರಾಹುಲ್ ದೇವ್ ವಾಸಿ ಎಂದರೆ ಇವರು ಬೀಗಬಾರದು. ರಮೇಶ್ ಮಿಂಚಿನವೇಗದ ಕಲ್ಪನೆಗೆ ಜೀವತುಂಬಿದವರು ಛಾಯಾಗ್ರಾಹಕ ಪಿ. ರಾಜನ್. ಚೇಸಿಂಗ್, ಫೈಟಿಂಗ್ ಎಲ್ಲ ಕಡೆ ರಾಜನ್ ರಾರಾಜಿಸುತ್ತಾರೆ. ಐಟಂ ಸಾಂಗ್‌ನಲ್ಲೂ ಅವರು 'ಐಸ್‌ಪೈಸ್ ಆಟ'ಗಳನ್ನು ತೋರಿಸಿಲ್ಲ. ವಿ. ಮನೋಹರ್ ಹಾಡುಗಳನ್ನು ಕೇಳುವುದಕ್ಕಿಂತ ದೃಶ್ಯಸಮೇತ ನೋಡಲು ಖುಷಿ ಕೊಡುತ್ತದೆ. 'ಆಕ್ಷನ್ ಸಿನಿಮಾದಲ್ಲಿ ಹಾಡುಗಳಿವೆ ಎಂದರೆ ಅದು ಗೆಲ್ಲುವುದಿಲ್ಲ' ಎಂಬ ಮಾತಿಗೆ ಮನೋಹರ್ ಅಪವಾದವಾಗಿದ್ದಾರೆ. ಚಿತ್ರದಲ್ಲಿ ಹತ್ತು ಹಾಡುಗಳಿವೆ! ಆದರೆ ಅವು ಯಾವ್ಯಾವಾಗ ಬಂದುಹೋಗುತ್ತವೆ ಎಂಬುದೇ ಗೊತ್ತಾಗುವುದಿಲ್ಲ. ಮಿಂಚಂತೆ ಬಂದು..., ಆ ಮೋಡ ಹನಿಯಾಯ್ತು... ಹಾಡುಗಳು ಕರ್ಣ ಮನೋಹರವಾಗಿವೆ.

ಚಿತ್ರ ಶೇ. 100ರಷ್ಟೂ ಚೆನ್ನಾಗಿದೆ ಎಂದುಬಿಟ್ಟರೆ ಅದು ವಿಮರ್ಶೆಯಾಗುವುದಿಲ್ಲ:
* ಚಿತ್ರಕತೆ, ನಿರೂಪಣೆ 'ಹಾಗಿದೆ, ಹೀಗಿದೆ"ಎಂದು ನಿರ್ದೇಶಕರು ಹೇಳಿಕೊಳ್ಳುವಷ್ಟು ಸರಾಗವಾಗಿ ಮೂಡಿಬಂದಿಲ್ಲ.
* ವಿಜಿ-ಲಕ್ಷ್ಮಿಯ ಪರಸ್ಪರ ಭೇಟಿಯ ದೃಶ್ಯ, ವಿಜಿ-ಭದ್ರ ಕಿತ್ತಾಡುವ ಪರಿ ಯಾವುದೋ ಒಂದು ಆಂಗಲ್‌ನಲ್ಲಿ ತುಸು ಅತಿಯಾಯ್ತು ಎಂದೆನಿಸುತ್ತದೆ.
* ನೀವು ಹಾಲಿವುಡ್ ಸಿನಿಮಾ 'ಡ್ಯೂಯಲ್' ನೋಡಿದ್ದರೆ, ಚೇಸಿಂಗ್ ಬೋರ್ ಎನಿಸಿದರೆ ಅದರಲ್ಲಿ ಆಶ್ಚರ್ಯ ಪಡಬೇಕಿಲ್ಲ.
* ದ್ವಿತೀಯಾರ್ಧದಲ್ಲಿ 40ನಿಮಿಷದ ಚೇಸಿಂಗ್‌ಅನ್ನು ಸ್ವಲ್ಪ ಕಡಿಮೆ ಮಾಡಿ, ಅಲ್ಲೊಂದಿಷ್ಟು ಕಾಮಿಡಿಯನ್ನೋ, ನಾಯಕಿಯ 'ನಾಟ್ಯ'ವನ್ನೋ ತೋರಿಸಬಹುದಿತ್ತು.
*ಸಂಕಲನಕಾರ ಆಂಟನಿ ಕೈಯಲ್ಲಿದ್ದ ಕತ್ತರಿ ಬಹುಶಃ ಕೊನೆಕೊನೆಗೆ ಕೈಕೊಟ್ಟಿರಬೇಕು...

ಈ ಎಲ್ಲ ಅಂಶಗಳನ್ನೂ ಪಕ್ಕಕ್ಕಿಟ್ಟು 'ಮಿಂಚಿನ ಓಟ'ವನ್ನು ನೋಡಿದರೆ ಕೊಟ್ಟ ಕಾಸಿಗಂತೂ ನಯಾ ಪೈಸೆ ಮೋಸವಿಲ್ಲ. ಹಾಗಂತ ಸೈನೈಡ್ ಸಿನಿಮಾದ ಹ್ಯಾಂಗೋವರ್ ತಲೆಯಲ್ಲಿಟ್ಟುಕೊಂಡು- 'ಈ ಲೆವೆಲ್ಲಿಗೆ ರಮೇಶ್ ಇಳಿಯೋದು ಸರೀನಾ? ಇವರಿಗೆ ಇಂಥವೆಲ್ಲ ಸರಿಹೊಂದುವುದಿಲ್ಲ ಬಿಡಿ...' ಇತ್ಯಾದಿ ಇತ್ಯಾದಿಗಳನ್ನು 'ಕುಂ'ತಲ್ಲೇ 'ತರ್ಕ' ಮಾಡುವುದು ಸರಿಯಲ್ಲ. ಏಕೆಂದರೆ ಸೈನೈಡೇ ಬೇರೆ ಮಿಂಚಿನ ಓಟ'ವೇ ಬೇರೆ.

ಅದೇನೇ ಇರಲಿ, 'ಇವರು ಇದೇ ರೀತಿ ಸಿನಿಮಾ ಮಾಡುವ ಮಂದಿ' ಎಂದು ಗಾಂಧಿನಗರದ ಮಂದಿ ಬ್ರ್ಯಾಂಡ್ ಮಾಡಬಾರದು ಎಂಬ ಉದ್ದೇಶದಿಂದ ರಮೇಶ್ 'ಮಿಂಚಿನ ಓಟ'ಮಾಡಿದ್ದಾರೆ; ಮಾಡಿ ಗೆದ್ದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada